ಅಂತರಾಷ್ಟ್ರೀಯ

ಭಾರತೀಯ ಹಿಂದೂ-ಮುಸ್ಲಿಂ ದಂಪತಿಯ ಮಗುವಿಗಾಗಿ ಕಾನೂನು ಬದಿಗೊತ್ತಿದ ಯುಎಇ..!

Pinterest LinkedIn Tumblr


ದುಬೈ: ಯುಎಇ ಭಾರತೀಯ ದಂಪತಿಗಾಗಿ ತನ್ನ ಕಾನೂನನ್ನೂ ಬದಿಗೊತ್ತಿ ಅವರ ಮಗುವಿಗೆ ಜನನ ಪ್ರಮಾಣ ಪತ್ರವನ್ನ ನೀಡಿದೆ. ಯುಎಇಯಲ್ಲಿ ಈ ವರ್ಷವನ್ನ ಇಯರ್ ಆಫ್ ಟಾಲರೆನ್ಸ್ ಅಂದ್ರೆ ಸಹಿಷ್ಣು ವರ್ಷ ಅಂತ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಮ್ಮ ಕಾನೂನನ್ನ ಬದಿಗೊತ್ತಿ, 9 ತಿಂಗಳ ಹೆಣ್ಣು ಮಗುವಿಗೆ ಜನನ ಪ್ರಮಾಣ ಪತ್ರ ನೀಡಲಾಗಿದೆ.
ಯುಎಇ ಕಾನೂನಿನ ಪ್ರಕಾರ, ಮುಸ್ಲಿಮ್ ಧರ್ಮದ ಪುರುಷ ಮತ್ತೊಂದು ಧರ್ಮದ ಮಹಿಳೆಯನ್ನ ವಿವಾಹ ಆಗಬಹುದು. ಆದ್ರೆ, ಮುಸ್ಲಿಮ್ ಮಹಿಳೆ, ಬೇರೆ ಧರ್ಮದ ಪುರುಷನನ್ನ ಮದುವೆಯಾಗುವಂತಿಲ್ಲ. ಆದ್ರೆ, ಭಾರತೀಯ ಮೂಲದ ದಂಪತಿ ಪೈಕಿ ಗಂಡ ಹಿಂದೂ ಆಗಿದ್ದು, ಪತ್ನಿ ಮುಸ್ಲಿಮ್ ಧರ್ಮದವರು. 2016ರಲ್ಲಿ ಕೇರಳದಲ್ಲಿ ಮದುವೆಯಾಗಿದ್ದ ಕಿರಣ್ ಬಾಬು ಹಾಗೂ ಸನಮ್ ಸಾಬೂ ಸಿದ್ದಿಕಿ ಸದ್ಯ ಶಾರ್ಜಾದಲ್ಲಿ ನೆಲೆಸಿದ್ದಾರೆ. ಜುಲೈ 2018ರಲ್ಲಿ ಈ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ತಮಗೆ ಅಬುದಾಬಿ ವೀಸಾ ಇರೋದ್ರಿಂದ ಕಿರಣ್ ತಮ್ಮ ಪತ್ನಿಯನ್ನ ಎಮಿರೇಟ್​ನ ಮೆಡಿಯಾರ್ ಆಸ್ಪತ್ರೆಗೆ ದಾಖಲಿಸಿದ್ರು. ಅಲ್ಲೇ ಸನಮ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದ್ರೆ, ಯುಎಇಯ ಕಾನೂನಿನ ಪ್ರಕಾರ ಕಿರಣ್ ಹಿಂದೂ ಆಗಿದ್ದರಿಂದ ಮಗುವಿಗೆ ಜನನ ಪ್ರಮಾಣ ಪತ್ರ ನೀಡಲು ನಿರಾಕರಿಸಲಾಗಿತ್ತು.
ತಮ್ಮ ಮಗುವಿಗೆ ಯಾವುದೇ ಅಧಿಕೃತ ದಾಖಲೆ ಇಲ್ಲದ್ದರಿಂದ ಕಿರಣ್ ಬಾಬು ಕೋರ್ಟ್ ಮೆಟ್ಟಿಲೂ ಏರಿದ್ರು. ಆದ್ರೆ, ಮೊದಲ ಬಾರಿಗೆ ಅವರ ಕೇಸ್ ಅನ್ನ ರಿಜೆಕ್ಟ್ ಮಾಡಲಾಗಿತ್ತು. ಇದಾದ ಮೇಲೆ ಮತ್ತೆ ಅಲ್ಲಿನ ಕಾನೂನು ಇಲಾಖೆ ಇವರ ಪ್ರಕರಣವನ್ನ ವಿಶೇಷವಾಗಿ ಪರಿಗಣಿಸಿ, ಸೂಕ್ತ ಸಲಹೆಗಳನ್ನ ನೀಡಿತ್ತು. ಇದಾದ ಮೇಲೆ ಮತ್ತೆ ಕೋರ್ಟ್​ಗೆ ಹೋಗಿ, ತಮ್ಮ ಮಗುವಿನ ಜನನ ಪ್ರಮಾಣ ಪತ್ರ ಪಡೆಯುವಲ್ಲಿ ಈ ದಂಪತಿ ಯಶಸ್ವಿಯಾಗಿದ್ದಾರೆ.

Comments are closed.