ಗಲ್ಫ್

ಕ್ರೀಡಾಸಂಚಯ ಮತ್ತು ಹೋಳಿ ಆಚರಿಸಿದ ಕುವೈತ್ ಕನ್ನಡ ಕೂಟ

Pinterest LinkedIn Tumblr

ಕುವೈತ್ ಕನ್ನಡ ಕೂಟದ ವರ್ಷದ ಎರಡನೇ ಕಾರ್ಯಕ್ರಮವಾಗಿ ಹೊರಾಂಗಣ ವಿಹಾರ, ಆಟೋಟ ಮತ್ತು ಹೋಳಿಯ ಸಂಭ್ರಮದ ಆಚರಣೆ “ಕ್ರೀಡಾಸಂಚಯ”ದಹೆಸರಿನಲ್ಲಿ ಕುವೈತ್ ಹೊರವಲಯದ ವಾಫ್ರ ತೋಟದ ಮನೆಯಂಗಳದಲ್ಲಿ ಇದೇ ಮಾರ್ಚ್ 22 ರಂದು ಸಂಪನ್ನಗೊಂಡಿತು. ಸಾಲ್ಮಿಯಾ ಮತ್ತು ಮಂಗಾಫ್ ಗಳಿಂದಎರಡು ಬಸ್ ಮತ್ತು ತಮ್ಮದೇ ಖಾಸಗಿ ವಾಹನಗಳಲ್ಲಿ ಸವಾರಿ ಹೊರಟ ಕೂಟದ ಸದಸ್ಯರು ಮತ್ತು ಅವರ ಪರಿವಾರದ ಸಂಭ್ರಮದ ಆಚರಣೆ ಪ್ರಾರಂಭವಾಗಿ ರಾತ್ರಿ ಮತ್ತೆತಮ್ಮ ತಮ್ಮ ಗೂಡು ಸೇರುವವರೆಗೂ ನಡೆದೇ ಇತ್ತು. ಕ್ರೀಡಾಸಂಚಯಕ್ಕೆ ಉತ್ತಮ ಪ್ರಚಾರಕೊಟ್ಟ ಶ್ರೀಮತಿ ಜಯಲಕ್ಷ್ಮಿ ಕಾರ್ಕಳರ ಮುಂದಾಳತ್ವದ ಸಾರ್ವಜನಿಕಸಂಪರ್ಕ ಮತ್ತು ಮಾಧ್ಯಮ ಸಮಿತಿಯ ವೀಡಿಯೋ-ಆಹ್ವಾನ “ಕ್ರೀಡಾಸಂಚಯ”ದ ಬಗ್ಗೆ ಎಲ್ಲರನ್ನೂ ಮತ್ತೆ ಮತ್ತೆ ನೆನಪಿಸಿತ್ತು.

ವಾಫ್ರಾ ತೋಟದಮನೆಯಂಗಳ ವಿಶಾಲ ಆಟದ ಮೈದಾನಗಳನ್ನೂ “ಸಾಲೆಹ್” ಅಥವಾ ಸಭಾಂಗಣವನ್ನೂ ಹೊಂದಿದ್ದು ದಿನದ ಕಾರ್ಯಕ್ರಮಗಳಿಗೆ ಒಳ್ಳೆಯತಾಣವಾಗಿತ್ತು. ತಲುಪಿದೊಡನೆ ಉಪಾಹಾರ ಮತ್ತು ಚಹಾ/ಕಾಫಿ ಪೇಯಗಳು ವಿತರಿತವಾದರೆ, ಅಲ್-ಮುಲ್ಲಾ ಎಕ್ಸ ಚೇಂಜ್ ರವರ ಕೊಡುಗೆಯಾದ ಪ್ರಾಯೋಜಿತ ಕ್ರೀಡಾ ಟೊಪ್ಪಿ ಎಲ್ಲರ ತಲೆಯನ್ನಲಂಕರಿಸಿ ಕ್ರೀಡಾಕೂಟಕ್ಕೆ ವಿಶೇಷ ಮೆರಗನ್ನು ನೀಡಿತು. ಮಕ್ಕಳಿಂದ ಸ್ವಾಗತ ಗೀತ-ನೃತ್ಯ ಎಲ್ಲರ ಮನೋಲ್ಲಾಸಕ್ಕೆ ಉತ್ತಮ ಪ್ರಾರಂಭನೀಡಿದರೆ, ಕ್ರೀಡಾ ಸಮಿತಿಯ ಮತ್ತು ಕ್ರೀಡಾ ಗೃಹನಾಯಕಿಯರ ಮುಂದಾಳತ್ವ ಕೂಟದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಡಾ ಶಶಿಕಿರಣ್ ಪ್ರಭು, ಉಪಾಧ್ಯಕ್ಷರಾದಶ್ರೀ ಪ್ರಭು ಆಚಾರ್, ಕಾರ್ಯದರ್ಶಿಗಳಾದ ಶ್ರೀ ರವಿ ಕಿರಣ್ ಮತ್ತು ಖಜಾಂಚಿಗಳಾದ ಶ್ರೀ ರಮೇಶ್ ನಾಯಕ್ ರವರನ್ನು ಕ್ರೀಡಾ ಜ್ಯೋತಿಯನ್ನು ಬೆಳಗುವಂತೆ ಆಹ್ವಾನಿಸಿತು. ಜ್ಯೋತಿ ಬೆಳಗಿ ಮಾತನಾಡಿದ ಡಾ ಶಶಿಕಿರಣ್ ಕನ್ನಡ ಕೂಟ ಸದಾಸಕ್ರಿಯ ಮತ್ತು ಪ್ರತಿಭಾಪೂರ್ಣ ಚೈತನ್ಯ ಚಿಲುಮೆ ಎಂದರು. ವರ್ಣರಂಜಿತ ಕ್ರೀಡಾವಸ್ತ್ರ ಧರಿಸಿ ಕ್ರೀಡಾರಂಗದಲ್ಲಿ ಸೆಣಸಾಡಲು ಸ್ನೇಹಮಯ ಪೈಪೋಟಿಗೆ ಸನ್ನದರಾಗಿರುವುದು ಎಲ್ಲರನ್ನೂ ಉಲ್ಲಸಿತರಾಗಿಸುತ್ತದೆ ಎಂದರು. ವಿವಿಧ ಕ್ರೀಡಾ ಸ್ಪರ್ಧೆಗಳ ಸ್ಥೂಲ ಪರಿಚಯವನ್ನು ಕ್ರೀಡಾ ಸಮಿತಿಯ ಸಂಚಾಲಕ ಶ್ರೀ ಗಿರೀಶ್ ಶೆಣೈಮಾಡಿಕೊಟ್ಟರು, ಆಟೋಟಗಳನ್ನು ಸಮಿತಿಯ ಸದಾ ಹಸನ್ಮುಖಿ ಸಕ್ರಿಯ ಸದಸ್ಯರಾದ ಶ್ರೀಅನಿಲ್ ಪ್ರಭು, ಶ್ರೀ ಹರೀಶ್ ನಾಯಕ್, ಶ್ರೀ ಕಾರ್ತಿಕ್ ಗೌಡ, ಶ್ರೀ ಸುರೇಶ್ ಕುಂದರ್, ಶ್ರೀ ಚಂದ್ರಶೇಖರ್, ಶ್ರೀ ಪ್ರಮೋದ್ ರಾವ್ ಅಚ್ಚು ಕಟ್ಟಾಗಿ ನಿರ್ವಹಿಸಿದರೆ ಕ್ರೀಡಾ ಮತ್ತು ಚಟುವಟಿಕೆಗಳ ಗೃಹನಾಯಕಿಯರಾದ ಡಾ, ಪ್ರೀತಿಶೆಟ್ಟಿ, ಶ್ರೀಮತಿ ಶೈಲಜಾ ಹೊಂಬಾಳೆ, ಶ್ರೀಮತಿ ಸೌರಭ ವಿಕ್ರಂ ಹಾಗೂ ಶ್ರೀಮತಿ ಜ್ಯೋತಿ ಮಿಟ್ಟಪಲ್ಲಿ ತಮ್ಮ ತಮ್ಮ ತಂಡವನ್ನು ಹುರಿದುಂಬಿಸುತ್ತಾ ಕ್ರೀಡಾ ಭಾವವನ್ನು ಮೆರೆದರು.

ದಿನದ ಕಾರ್ಯಕ್ರಮಗಳ, ಕ್ರೀಡೆಗಳ ಮಧ್ಯೆ ಗೀತ ನೃತ್ಯ ಕಾರ್ಯಕ್ರಮಗಳ ಆಯೋಜನೆಗೆ ಕಾರಣರಾದ ಕೂಟದ ಸಾಂಸ್ಕೃತಿಕ ಪ್ರತಿಭೆಗಳಾದ ಶ್ರೀಮತಿ ಡಾ, ಪ್ರೀತಿಶೆಟ್ಟಿ , ಶ್ರೀಮತಿ ನಯನ ಶಣೈ ಶ್ರೀಮತಿ ಸೌರಭ ವಿಕ್ರಮ್ ,ಶ್ರೀಮತಿ ಸಂಧ್ಯಾ ಅರುಣ್ ಕುಮಾರ್ , ಶ್ರೀಮತಿ ಸ್ಫೂರ್ತಿ ಕಾಮತ್, ಮುಂತಾದವರು “ಕ್ರೀಡಾಸಂಚಯ”ದಲ್ಲಿ ವಿವಿಧತೆಯನ್ನು ಮೆರೆದರು. ಮಕ್ಕಳ ಆಟೋಟಗಳು, ಹಿರಿಯರ ಹಗ್ಗ-ಜಗ್ಗಾಟ, ಫುಟ್ಬಾಲ್, ಮಹಿಳೆಯರ ಥ್ರೋಬಾಲ್, ಚಿಣ್ಣರ ಚೀಲದ ಜಿಗಿಯೋಟ (ಸ್ಯಾಕ್ ರೇಸ್), ಬಲೂನ್ ಗೆ ಗುರಿಯಿಡುವುದು, ತಂಡಗಳ ನಾಯಿ ಮತ್ತು ಮೂಳೆ ಪಂದ್ಯ ನೋಡುಗರಲ್ಲಿ ನಲಿವನ್ನುಮೂಡಿಸಿದವು.

ಊಟದ ನಂತರ ಪಂದ್ಯಗಳ ಅಂತಿಮ ಸುತ್ತು ಮತ್ತು ಹೋಳಿ ಆಚರಣೆ ಎಲ್ಲರೂ ಬಣ್ಣಗಳಲ್ಲಿ ಬೆರೆತುಹೋದರು…ಕೆಲವರಂತೂ ಬಣ್ಣದ ನೀರಲ್ಲಿ ಮಿಂದು ತೃಪ್ತರಾದರು, ಗುರುತಿಸಲೂ ಆಗದಷ್ಟು ಬಣ್ಣಗಳ ಓಕುಳಿಯಾದರೂ ಕೇವಲ ಸ್ವಾಬಾವಿಕ ಬಣ್ಣಗಳನ್ನು ಬಳಸಿದ್ದು (ಹಾಗೆಯೇ ಆಗಬೇಕೆಂದು ಕಾರ್ಯಕಾರಿ ಸಮಿತಿ ಮೊದಲೇ ಸೂಚಿಸಿತ್ತು) ಮತ್ತು ನೀರಿನಿಂದ ಸುಲಭವಾಗಿ ತೊಳೆಯುವಂತಿದ್ದುದು ಕೂಟದ ಸದಸ್ಯರ ಪರಿಸರ ಮತ್ತು ಆರೋಗ್ಯ ಕಾಳಜಿಯನ್ನು ಸೂಚಿಸಿತು.

ನಂತರ ಚಹಾ/ಕಾಫಿ ಪೇಯಗಳೊಂದಿಗೆ ದಣಿವಾರಿಸಿಕೊಂಡ ಸದಸ್ಯರು ಬುದ್ಧಿಯ ಓಟಕೆ ಅಣಿಯಾದರು, ಕನ್ನಡ ಚಿತ್ರಗೀತೆಗಳ ಅಂತ್ಯಾಕ್ಷರಿ (ಶ್ರೀ ಗಿರ್ರೀಶ್ ಶೆಣೈ ಮತ್ತುಶ್ರೀ ಪ್ರಭು ಆಚಾರ್ ನಿರ್ವಹಣೆ) ಮತ್ತು ಕರ್ನಾಟಕ ಕುರಿತ ಸಾಮಾನ್ಯ ಜ್ಞಾನದ ರಸಪ್ರಶ್ನೆ ಶ್ರೀ ಅನಿಲ್ ಪ್ರಭು ನಡೆಸಿದ) ಸ್ಪರ್ಧೆಗಳು ಪ್ರಾರಂಭವಾದವು. ಚಿತ್ರಗೀತೆಗಳ ಆಧಾರಿತ ಸ್ಪರ್ಧೆಯಲ್ಲಿ ನಾಲ್ಕೂ ತಂಡಗಳ ತೀವ್ರ ಸ್ಪರ್ಧೆಯಲ್ಲಿ ಮೂರು ತಂಡಗಳು (ಕಾವೇರಿ, ನೇತ್ರಾವತಿ ಮತ್ತು ಹೇಮಾವತಿ) ಮೊದಲ ಸ್ಥಾನ ಹಂಚಿಕೊಂಡರೆ ಒಂದುಪ್ರಶ್ನೆಯಲ್ಲಿ ಎಡವಿದ ಶರಾವತಿ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಆ ಕೊರತೆಯನ್ನು ಶರಾವತಿ ತಂಡ ಕರ್ನಾಟಕ ಕುರಿತ ಸಾಮಾನ್ಯಜ್ಞಾನ ಸ್ಪರ್ಧೆಯಲ್ಲಿ ನೇತ್ರಾವತಿಯೊಂದಿಗೆ ಜಂಟಿ ವಿಜೇತ ತಂಡವಾಗುವ ಮೂಲಕ ನೀಗಿಸಿಕೊಂಡಿತು. ಕೂಟದ ಕಾರ್ಯಕಾರಿ ಸಮಿತಿ ಬಹುಮಾನ ವಿತರಣೆ ಮಾಡಿತು, ವಿತರಣೆಯನ್ನು ಕೂಟದ ಉಪಾಧ್ಯಕ್ಷರ ಮಾತೃಶ್ರೀಯವರು ಮತ್ತು ಕೂಟದ ಮತ್ತೊಬ್ಬ ಸದಸ್ಯರ ತಾಯಿಯವರು ನಡೆಸಿಕೊಟ್ಟದ್ದು ವಿಶೇಷ. ದಿನದ ತುಂಬು ಚಟುವಟಿಕೆಗಳ“ಕ್ರೀಡಾಸಂಚಯ”ದ ಪ್ರಾಯೋಜಕರಾದ ಅಲ್-ಮುಲ್ಲ ಎಕ್ಸ್ ಚೇಂಜ್, ಆರೆಮೆನ್ಕೋ, ಬಾರ್ಕೋಡ್ ಮತ್ತು ಆಯುರ್ಯೋಗ ಸಂಸ್ಥೆಗಳಿಗೆ ಕೂಟದ ವತಿಯಿಂದ ಉಪಾಧ್ಯಕ್ಷಶ್ರೀ ಪ್ರಭು ಆಚಾರ್ ಧನ್ಯವಾದ ಸಲ್ಲಿಸಿದರು, ಇಡೀ ದಿನದ ಉಪಾಹಾರ ಊಟಾದಿಗಳಿಂದ ಚಹಾ/ಕಾಫಿ/ ತಿಂಡಿಗಳನ್ನು ರುಚಿಕಟ್ಟಾಗಿ ಉಣಬಡಿಸಿದ ಶ್ರೇಯ ಓರಿಯಂಟಲ್ ರೆಸ್ಟಾರೆಂಟ್ ನವರದ್ದಾಗಿತ್ತು. ಖಜಾಂಚಿ ಶ್ರೀ ರಮೇಶ್ ನಾಯಕ್ ಕೂಟದ ಎಲ್ಲ ಸ್ವಯಂಸೇವಕ ಮಿತ್ರರಿಗೂ ಸಮಿತಿಗಳ ಎಲ್ಲಾ ಸದಸ್ಯರಿಗೂ ಕಾರ್ಯಕ್ರಮದ ಯಶಸ್ವೀ ಆಯೋಜನೆಗೆ ಸಹಕರಿಸಿದ್ದಕ್ಕಾಗಿ ಧನ್ಯವಾದ ಸೂಚಿಸಿದರು. ರಾತ್ರಿಯ ಊಟದೊಂದಿಗೆ ಕೂಟದ ಸದಸ್ಯರನ್ನು ಹೊತ್ತ ಬಸ್ ಮತ್ತಿತರ ವಾಹನಗಳು ತಮ್ಮ ಗಮ್ಯದತ್ತ ಹೊರಡುವುದರೊಂದಿಗೆ “ಕ್ರೀಡಾಸಂಚಯ” ಮುಕ್ತಾಯಗೊಂಡಿತು.

Comments are closed.