ಗಲ್ಫ್

ವಿಳಂಬಗೊಂಡ ರಾಜ್ಯ ಎನ್‍ಆರ್‌ಐ ಸಮಿತಿಯ ಉಪಾಧ್ಯಕ್ಷರ ನೇಮಕಕ್ಕೆ ಲೀಲಾಧರ್ ಬೈಕಂಪಾಡಿ ಒತ್ತಾಯ

Pinterest LinkedIn Tumblr

ಮನಾಮ, ಬಹ್ರೈನ್: ವಿದೇಶದಲ್ಲಿರುವ ಅನಿವಾಸಿ ಭಾರತೀಯರ ಹಾಗೂ ಭಾರತೀಯ ಮೂಲದ ಪ್ರಜೆಗಳ ಹಿತರಕ್ಷಣೆಗಾಗಿ ಮತ್ತು ಅವರ ಸಮಸ್ಯೆಗಳಿಗೆ ಸ್ಪಂದಿಸುವ ಸದುದ್ದೇಶದ ಕರ್ನಾಟಕ ಎನ್‍ಆರ್‌ಐ ಫೋರಂ [ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ, ಬೆಂಗಳೂರು] ಎಂಬ ಸ್ವಾಯತ್ತ ಇಲಾಖೆಯು 2008-09 ರ ರಾಜ್ಯ ಬಜೆಟ್‍ನಲ್ಲಿ ಘೋಷಿತವಾಗಿ ಸರಿ ಸುಮಾರು 2017 ರಲ್ಲಿ ಅದು ತನ್ನ ಅನಿವಾಸಿ ನೀತಿಸಂಹಿತೆಯ ಮೂಲಕ ಪೂರ್ಣ ಪ್ರಮಾಣದ ಸೇವೆಯನ್ನು ಆರಂಭಿಸಿದೆ. ಸದ್ರಿ ಸಮಿತಿಗೆ ಸನ್ಮಾನ್ಯ ಮುಖ್ಯಮಂತ್ರಿಯವರು ಅಧ್ಯಕ್ಷರಾಗಿದ್ದು, ಸಮಿತಿಯ ಕಾರ್ಯಚಟುವಟಿಕೆಗಳ ಮೇಲುಸ್ತುವಾರಿಗಾಗಿ ಉಪಾಧ್ಯಕ್ಷರ ನೇಮಕಾತಿಯು ಆಡಳಿತಾರೂಢ ಸರಕಾರದಿಂದಲೇ ನಡೆಯುತ್ತದೆ. ಈ ನೇಮಕಾತಿಯೂ ಕೂಡಾ ರಾಜ್ಯದ ಇತರ ನಿಗಮ, ಮಂಡಳಿ, ಪ್ರಾಧಿಕಾರಗಳ ಮುಖ್ಯಸ್ಥರ ನೇಮಕಾತಿಯ ಸಂದರ್ಭದಲ್ಲೇ ನಡೆಯುವ ರೂಢಿಯೂ ಇದೆ.

ಆದರೆ ಗತ ಸರಕಾರದ ಅವಧಿಯವರೆಗೂ ಬಹಳ ಸುಸೂತ್ರವಾಗಿ ನಡೆಯುತ್ತಾ ಬಂದ ಈ ಎನ್‍ಆರ್‌ಐ ಫೋರಂ‍ನ ಉಪಾಧ್ಯಕ್ಷರ ನೇಮಕಾತಿಯ ಪ್ರಕ್ರಿಯೆಯು ಈ ಬಾರಿಯ ಸಮ್ಮಿಶ್ರ ಸರಕಾರ ಬಂದಾಗಿನಿಂದಲೂ ಒಂದು ವಿಚಿತ್ರವಾದ ವಿಳಂಬಸೂತ್ರಕ್ಕೆ ಬಲಿಯಾಗಿದೆ. ಮೇಲ್ನೋಟಕ್ಕೆ ಇದರ ಹಿಂದಿನ ನೈಜ ಕಾರಣವೇನೆಂದು ತಿಳಿದುಬರದಿದ್ದರೂ, ಮಾಧ್ಯಮಗಳಲ್ಲಿ ವರದಿಯಾಗುವಂತೆ ರಾಜ್ಯದಲ್ಲಿ ಜಂಟಿಯಾಗಿ ಆಡಳಿತ ಚುಕ್ಕಾಣಿಯನ್ನು ಹಿಡಿದಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವಿನ ಅಧಿಕಾರ ಹಂಚಿಕೆಯಲ್ಲಿನ ಗೊಂದಲ ಅಥವಾ ಬೇಡಿಕೆ ಸಂಬಂಧಿತ ಭಿನ್ನಾಭಿಪ್ರಾಯಗಳೇ ಈ ಉಪಾಧ್ಯಕ್ಷರ ನೇಮಕಾತಿಯ ಕಾರ್ಯಕ್ಕೆ ದೀರ್ಘಕಾಲೀನ ತಡೆಯನ್ನು ತಂದೊಡ್ಡಿದೆ ಎಂದು ಸಮಗ್ರ ಅನಿವಾಸಿ ಸಮುದಾಯವು ತಿಳಿದುಕೊಳ್ಳುವಂತಾಗಿದೆ. ಇದೊಂದು ತೀರಾ ಅಹಿತಕರ ವಿದ್ಯಮಾನವಾಗಿದ್ದು, ಇದು ಅನೇಕ ರೀತಿಯಲ್ಲಿ ರಾಜ್ಯ ಮತ್ತು ದೇಶಕ್ಕೆ ಒಂದು ದೊಡ್ಡ ಆಸ್ತಿಯಂತಿರುವ ಸಮಸ್ತ ಅನಿವಾಸಿ ಭಾರತೀಯರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮತ್ತು ಅವರ ಹಿತರಕ್ಷಣೆಯನ್ನು ಕಡೆಗಣಿಸುವ ರಾಜ್ಯ ಸರಕಾರದ ನಿಷ್ಕರುಣೆಯ ನಡೆಯಾಗಿದೆ ಎಂದು ಇಲಾಖೆಯ ಅಂಗೀಕಾರವಿರುವ ಬಹ್ರೈನ್‍ನ ಅನಿವಾಸಿ ಭಾರತೀಯ ಸಮಿತಿಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

.
ಒಂದು ಅಂದಾಜು ಲೆಕ್ಕಾಚಾರದ ಪ್ರಕಾರ ಸುಮಾರು 40,000 ದಷ್ಟು ಅನಿವಾಸಿ ಕನ್ನಡಿಗರು ಉದ್ಯೋಗ ಯಾ ಉದ್ಯಮದ ನಿಮಿತ್ತ ಬಹ್ರೈನ್‍ನಲ್ಲಿ ನೆಲೆಸಿದ್ದು, ಅವರಲ್ಲಿ ಅನೇಕರು 16 ವಿವಿಧ ಕನ್ನಡಪರ ಸಂಘಟನೆಗಳಲ್ಲಿ ತಮ್ಮನ್ನು ತಾವು ಸಕ್ರಿಯವಾಗಿರಿಸಿಕೊಂಡಿದ್ದಾರೆ. ಉಳಿದವರೆಲ್ಲಾ ಅನಿವಾರ್ಯ ಕಾರಣಗಳಿಗಾಗಿ ಅಥವಾ ಇತರ ಅನಾನುಕೂಲತೆಗಳಿಂದಾಗಿ ಅನಿವಾಸಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿದ್ದಾರೆ. ರಾಜ್ಯದ ಎನ್‍ಆರ್‌ಐ ಫೋರಂನ ನೋಂದಾವಣೆಯನ್ನು ಪಡೆದು, ಅದರ ನಿರ್ದೇಶನದಂತೆ ಕಳೆದ ವರ್ಷದಿಂದ ತನ್ನ ಸೇವಾಕಾರ್ಯಗಳನ್ನು ಆರಂಭಿಸಿರುವ ಬಹ್ರೈನ್‍ನ ಅನಿವಾಸಿ ಭಾರತೀಯ ಸಮಿತಿಯು ಇಲ್ಲಿನ ಸಮಸ್ತ ಅನಿವಾಸಿ ಕನ್ನಡಿಗರನ್ನು ಸಂಪರ್ಕಿಸಿ ಅವರೆಲ್ಲರನ್ನು ಸ್ಥಳೀಯ ಸಮಿತಿಯೊಂದಿಗೆ ಜೋಡಿಸುವ ಮಹತ್ವದ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಆ ನಿಟ್ಟಿನಲ್ಲಿ ಯಶಸ್ವಿ ಪ್ರಯತ್ನಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದು ಲೀಲಾಧರ್ ಬೈಕಂಪಾಡಿ ತಿಳಿಸಿದ್ದಾರೆ.

ರಾಜ್ಯದ ಅನಿವಾಸಿ ನೀತಿಸಂಹಿತೆಯನ್ವಯ ಸರಕಾರದ ಎನ್‍ಆರ್‌ಐ ಇಲಾಖೆಯು ವಿದೇಶದಲ್ಲಿರುವ ಪ್ರತಿಯೋರ್ವ ಅನಿವಾಸಿ ಕನ್ನಡಿಗನಿಗೂ ‘ಎನ್‍ಆರ್‌ಕೆ ಕಾರ್ಡ್’ನ್ನು ನೀಡಬೇಕಾಗಿದೆ. ಆದರೆ ಉಪಾಧ್ಯಕ್ಷರಿಲ್ಲದೆ ಸದ್ರಿ ಇಲಾಖೆಯು ಬಹುತೇಕ ನಿಷ್ಕ್ರಿಯವಾದಂತಿದ್ದು ಈ ಕಾರ್ಡ್ ನೀಡಿಕೆಯಲ್ಲೂ ವಿಳಂಬವಾಗಿದೆ. ಕಾರ್ಡ್ ಪಡೆಯುವುದಕ್ಕಾಗಿ ನೇರ ನೋಂದಾವಣೆಗಿರುವ ಇಲಾಖೆಯ ಅಂತರ್ಜಾಲ ವ್ಯವಸ್ಥೆಯಲ್ಲೂ ಒಂದಲ್ಲ ಒಂದು ರೀತಿಯ ನಿರಂತರವಾದ ತಾಂತ್ರಿಕ ತೊಂದರೆಗಳಿದ್ದು ಆ ಬಗ್ಗೆಯೂ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಳ್ಳುವವರಿಲ್ಲವಾಗಿದೆ. ವಿದೇಶಿ ನೆಲದಲ್ಲಿ ನಮ್ಮ ನಾಡು, ನುಡಿ, ಸಂಸ್ಕೃತಿಯ ಪೋತ್ಸಾಹ ಮತ್ತು ಪ್ರಚಾರಕ್ಕಾಗಿ ಉತ್ತಮ ತಥಾ ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ಸಂಯೋಜಿಸಿದರೂ ಕೂಡಾ ಅಲ್ಪ-ಸ್ವಲ್ಪ ಮಟ್ಟಿನ ಅನುದಾನಕ್ಕೂ ಇಲಾಖೆಯನ್ನು ಸಂಪರ್ಕಿಸಿ ಸುಸ್ತಾಗುವಂತಾಗಿದೆ. ಕೇರಳ, ಗೋವಾದಂತಹ ಇತರ ರಾಜ್ಯಗಳು ಅವರ ಅನಿವಾಸಿಯರಿಗೆ ನೀಡುತ್ತಿರುವ ಸೇವೆ ಮತ್ತು ಸೌಲಭ್ಯಗಳನ್ನು ತುಲನೆ ಮಾಡಿ ನೋಡಿದರೆ ನಮ್ಮ ರಾಜ್ಯವು ಇಲಾಖೆಯನ್ನು ಆರಂಭಿಸಿ ಇಷ್ಟು ವರ್ಷಗಳಾದರೂ ಕೂಡಾ ಅದಿನ್ನೂ ತೀರಾ ಪ್ರಾಥಮಿಕ ಹಂತದ ಸೇವೆಯನ್ನೇ ನೆಚ್ಚಿಕೊಂಡಿರುವುದು ಕಂಡುಬರುತ್ತಿದ್ದು ಈ ಬಗ್ಗೆ ಚರ್ಚಿಸಲು ಯಾ ಸಮಾಲೋಚಿಸಲೂ ಕೂಡಾ ಇಲಾಖೆಯಲ್ಲಿ ಉಪಾಧ್ಯಕ್ಷರೇ ಇಲ್ಲವಾಗಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ಬಹ್ರೈನ್‍ನ ಅನಿವಾಸಿ ಕನ್ನಡಿಗರು ನಿಜಕ್ಕೂ ಅತೀವ ಹತಾಶೆಗೊಳಗಾಗಿದ್ದಾರೆ. ಸರಕಾರವು ಅವರೆಲ್ಲರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಮತ್ತು ಅವರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಲೀಲಾಧರ್ ಬೈಕಂಪಾಡಿ ದೂರಿದ್ದಾರೆ.

ಎಲ್ಲಕ್ಕೂ ಮುಖ್ಯವಾಗಿ ಎಲ್ಲಾ ಕೊಲ್ಲಿ ರಾಷ್ಟ್ರಗಳು ಈಗಾಗಲೇ ಮೌಲ್ಯವರ್ಧಿತ ತೆರಿಗೆ ಪದ್ಧತಿಯನ್ನು [ಸರಕು ಮತ್ತು ಸೇವಾ ತೆರಿಗೆ] ಜಾರಿಗೆ ತಂದಿದ್ದು ಇದು ಬಹುತೇಕ ಅನಿವಾಸಿಯರ ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಯೂ ಇದೆ. ಉದ್ಯೋಗದಾತರಿಂದ ಅನಿವಾಸಿಯರ ಕೂಲಿ ಯಾ ವೇತನದಲ್ಲಿ ಅಗತ್ಯ ಪ್ರಮಾಣದ ಏರಿಕೆ ದೊರೆಯದಿದ್ದಲ್ಲಿ ಖಂಡಿತವಾಗಿಯೂ ಅವರೆಲ್ಲರ ಜೀವನವೆಚ್ಚದಲ್ಲಾಗುವ ಹೆಚ್ಚಳವನ್ನು ಸರಿದೂಗಿಸಲು ಅಸಾಧ್ಯವಾಗಬಹುದು. ಮತ್ತೊಂದೆಡೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಆರ್ಥಿಕ ಮುಗ್ಗಟ್ಟನ್ನೇ ಎದುರಿಸುತ್ತಿರುವ ಎಲ್ಲಾ ಕೊಲ್ಲಿ ರಾಷ್ಟ್ರಗಳಲ್ಲಿನ ಉದ್ಯೋಗ ಯಾ ಸೇವಾ ಸಂಸ್ಥೆಗಳು ಈ ನೂತನ ತೆರಿಗೆಯಿಂದಾಗಿಯೂ ತಮ್ಮ ವ್ಯವಹಾರದಲ್ಲಿ ಇಳಿಕೆಯನ್ನು ಕಂಡು ಮತ್ತಷ್ಟು ಆರ್ಥಿಕ ನಷ್ಟವನ್ನು ಹೊಂದುವ ನೆಲೆಯಲ್ಲಿ ತನ್ನೆಲ್ಲಾ ವೆಚ್ಚ ನಿಯಂತ್ರಣಕ್ಕಾಗಿ ಉದ್ಯೋಗಿಗಳ ವೇತನ ಇಳಿಕೆ ಅಥವಾ ಉದ್ಯೋಗ ಕಡಿತ ಕ್ರಮವನ್ನೂ ಕೈಗೊಳ್ಳಬಹುದು. ಸದ್ಯ ಎಲ್ಲಾ ಕೊಲ್ಲಿ ರಾಷ್ಟ್ರಗಳ ಅನಿವಾಸಿ ಭಾರತೀಯರಲ್ಲಿ ಇಂತಹ ಆತಂಕ ಮೂಡಿದ್ದು ಹಲವಾರು ಉದ್ಯೋಗಿಗಳು ದೂರಾಲೋಚನೆಯಿಂದ ತಮ್ಮೊಂದಿಗಿದ್ದ ಕುಟುಂಬವನ್ನು ಈಗಾಗಲೇ ತಾಯ್ನಾಡಿಗೆ ಕಳುಹಿಸಲು ಆರಂಭಿಸಿದ್ದಾರೆ. ಹೀಗಾಗಿ ಇಂತಹ ವಿಷಮ ಪರಿಸ್ಥಿತಿಯ ಕಾಲದಲ್ಲಿ ಗಲ್ಫ್ ಕನ್ನಡಿಗರಿಗೆ ಈ ಎನ್‍ಆರ್‌ಐ ಫೋರಂ‍ನ ಅಗತ್ಯ ಹಿಂದಿಗಿಂತಲೂ ಈಗ ಹೆಚ್ಚಿದೆ. ಅವರ ಮತ್ತು ಪರಿವಾರದ ಬದುಕು, ಉದ್ಯೋಗ, ಶಿಕ್ಷಣದಂತಹ ಮೂಲಭೂತ ಅಗತ್ಯಗಳ ಭದ್ರತೆಗಾಗಿ ಸರಕಾರದಿಂದ ಎಲ್ಲಾ ಬೆಂಬಲದ ಅಗತ್ಯವಿದೆ. ಇದಕ್ಕಾಗಿ ಎನ್‍ಆರ್‌ಕೆ ಕಾರ್ಡನ್ನು ಕೂಡಲೇ ಪಡೆಯಬೇಕಾದ ಜರೂರತೆಯೂ ಇದೆ. ಆದರೆ ಗಲ್ಫ್ ಅನಿವಾಸಿ ಕನ್ನಡಿಗರ ಬದುಕಿನ ಇದೇ ಪ್ರತಿಕೂಲ ಕಾಲಘಟ್ಟದಲ್ಲಿ ರಾಜ್ಯ ಸರಕಾರದ ಅನಿವಾಸಿ ಭಾರತೀಯ ಸಮಿತಿಯು ಮೇಲುಸ್ತುವಾರಿ ನಡೆಸುವ ಉಪಾಧ್ಯಕ್ಷರಿಲ್ಲದೆ ತಬ್ಬಲಿಯಾಗಿರುವುದು ನಿಜಕ್ಕೂ ಅತ್ಯಂತ ಹಾಸ್ಯಾಸ್ಪದ ವಿಚಾರ ಮತ್ತು ಅಷ್ಟೇ ಖೇದಕರ ವಿಷಯ.

ಸಮ್ಮಿಶ್ರ ಸರಕಾರದ ಕಾರಣಗಳೇನೇ ಇದ್ದರೂ ಕೂಡಾ, ಅನಿವಾಸಿ ಕನ್ನಡಿಗರ ಅಹವಾಲುಗಳಿಗೆ, ಬೇಕು-ಬೇಡಗಳಿಗೆ ಸ್ಪಂದಿಸಲಿರುವ ಸರಕಾರದ ಈ ಒಂದೇ ಒಂದು ಇಲಾಖೆಯ ಚಾಲಕಶಕ್ತಿಯಾಗಿರುವ ಉಪಾಧ್ಯಕ್ಷರನ್ನೇ ಗತ 8 ತಿಂಗಳುಗಳಿಂದ ನೇಮಕಗೊಳಿಸದಿರುವುದು ಅನಿವಾಸಿ ಕನ್ನಡಿಗರಿಗೆ ಈ ಸರಕಾರವು ಮಾಡಿದ ಮಹಾ ಅನ್ಯಾಯವಾಗಿದೆ. ತಮ್ಮ ರಾಜಕೀಯದ, ಅಧಿಕಾರದ ಹಗ್ಗಜಗ್ಗಾಟವನ್ನು ಬದಿಗಿಟ್ಟು ಅನಿವಾಸಿ ಕನ್ನಡಿಗರನ್ನು ಈ ರೀತಿಯಾಗಿ ಅಗೌರವಿಸುವುದನ್ನು ಮತ್ತು ನಿರ್ಲಕ್ಷಿಸುವುದನ್ನು ರಾಜ್ಯ ಸರಕಾರವು ಈ ಕೂಡಲೇ ನಿಲ್ಲಿಸಿ, ರಾಜ್ಯ ಎನ್‍ಆರ್‌ಐ ಸಮಿತಿಗೆ ಯೋಗ್ಯ ಉಪಾಧ್ಯಕ್ಷರನ್ನು ಸಹಮತದ ಮೂಲಕ ತಕ್ಷಣ ನೇಮಿಸಿ, ಸಮಿತಿಯನ್ನು ಮತ್ತೆ ಎಂದಿಗಿಂತ ಹೆಚ್ಚು ಕ್ರಿಯಾಶೀಲಗೊಳಿಸುವಂತೆ ಲೀಲಾಧರ್ ಬೈಕಂಪಾಡಿ ಆಗ್ರಹಿಸಿದ್ದಾರೆ.

Comments are closed.