ಗಲ್ಫ್

ನಟ ಅನಂತ್ ನಾಗ್ ಹಾಡಿಗೆ ತಲೆದೂಗಿದ ಯುಎಇ ಕನ್ನಡಿಗರು ! ಶಾರ್ಜಾ ಕರ್ನಾಟಕ ಸಂಘದ ರಾಜ್ಯೋತ್ಸವದಲ್ಲಿ ಎಲ್ಲರೊಂದಿಗೆ ಬೆರೆತು ಸರಳತೆ ಮೆರೆದ ಹಿರಿಯ ನಟ

Pinterest LinkedIn Tumblr

ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ Belman

ದುಬೈ: ‘ಭಾಗ್ಯದ ಲಕ್ಷ್ಮಿ ಬಾರಮ್ಮ… ನಮ್ಮಮ್ಮಾ ನೀ ಸೌಭಾಗ್ಯದ ಲಕ್ಷ್ಮಿ ಬಾರಮ್ಮಾ…’ ಈ ಜನಪ್ರಿಯ ಕೀರ್ತನೆ ಹಾಡನ್ನು ಕನ್ನಡದ ಹಿರಿಯ ನಟ ಅನಂತ್ ನಾಗ್ ತನ್ನ ಕಂಠಸಿರಿಯ ಮೂಲಕ ಬಹಳ ಸೊಗಸಾಗಿ ಹಾಡಿ ನೆರೆದ ಕನ್ನಡಿಗರನ್ನೆಲ್ಲ ಮಂತ್ರಮುಗ್ಧರನ್ನಾಗಿದರು.

ಮೈಕಲ್ ಡಿಸೋಜರಿಗೆ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು

ಶಾರ್ಜಾದ ಇಂಡಿಯನ್ ಅಸೋಸಿಯೇಷನ್ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಾರ್ಜಾ ಕರ್ನಾಟಕ ಸಂಘದ 16ನೇ ವಾರ್ಷಿಕೋತ್ಸವ-ಪ್ರತಿಷ್ಠಿತ ಮಯೂರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಆರಂಭದಿಂದ ಕೊನೆಯವರೆಗೆ ಇದ್ದು, ಕನ್ನಡಿಗರೊಂದಿಗೆ ಬೆರೆತು, ಹಾಡುವ ಮೂಲಕ ಅನಂತ್ ನಾಗ್ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದುಬಿಟ್ಟರು.

ದುಬೈಯ ಖ್ಯಾತ ಉದ್ಯಮಿ, ಸಿನೆಮಾ ನಿರ್ಮಾಪಕ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಹಾಗು ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್ ಅವರ ಪ್ರೀತಿ, ಆತ್ಮೀಯತೆಗೆ ಹೋಗೊಟ್ಟು, ಹಲವು ಒತ್ತಡಗಳನ್ನು ಬದಿಗೊತ್ತಿ, ಚಿತ್ರೀಕರಣವನ್ನು ಕೈಬಿಟ್ಟು ಅನಂತ್ ನಾಗ್ ಹಾಗು ಅವರ ಧರ್ಮಪತ್ನಿ, ಹಿರಿಯ ನಟಿ ಗಾಯತ್ರಿ ಅನಂತ್ ನಾಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅನಂತ್ ನಾಗ್’ರನ್ನೇ ನೋಡಿ ಕಣ್ತುಂಬಿಸಿಕೊಳ್ಳಲು ಬಂದಿದ್ದ ಜನ ಅವರ ಹಾಡು, ಸರಳತೆ, ಪ್ರೀತಿಗೆ ಮಾರು ಹೋಗಿ, ಸಣ್ಣ ಮಕ್ಕಳಿಂದ ದೊಡ್ಡವರವರೆಗೆ ಸೆಲ್ಫಿ ತೆಗೆದುಕೊಂಡು ತಮ್ಮ ಅಚ್ಚುಮೆಚ್ಚಿನ ನಟನಿಗೆ ಪ್ರೀತಿಯ ಸವಿಯನ್ನು ಉಣಬಡಿಸಿದರು.

ಕನ್ನಡ ಸಿನೆಮಾರಂಗದ ಆರಂಭದಿಂದ ಇಂದಿನವರೆಗೂ ಅತ್ಯಂತ ಬೇಡಿಕೆಯ ನಟರ ಸಾಲಿನಲ್ಲಿ ನಿಲ್ಲುವ ಅನಂತ್ ನಾಗ್ ಕಾರ್ಯಕ್ರಮದ ಉದ್ದಕ್ಕೂ ತೋರಿಸಿದ ಸರಳತೆ, ನಡೆದುಕೊಂಡ ರೀತಿ, ಮಾತುಗಳನ್ನು ಕಂಡು-ಕೇಳಿದ ಪ್ರೇಕ್ಷಕರು ಮಂತ್ರಮುಗ್ಧರಾಗುವ ಜೊತೆಗೆ ಆರಂಭದಿಂದ ಕಾರ್ಯಕ್ರಮದ ಕೊನೆಯವರೆಗೆ ಆಸನ ಬಿಟ್ಟು ಅತ್ತಿತ್ತ ಕದಲಲಿಲ್ಲ.

‘ಭಾಗ್ಯದ ಲಕ್ಷ್ಮಿ ಬಾರಮ್ಮ ನಮ್ಮಮ್ಮಾ ನೀ…’ ಹಾಡಿನ ನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ ‘ತಪ್ಪು ನೋಡದೆ ಬಂದೆಯಾ ಎನ್ನಯ್ಯ ತಂದೆ’ ಹಾಡನ್ನು ಹಾಡುತ್ತಿದ್ದಂತೆ ಪ್ರೇಕ್ಷಕರ ಕರತಾಡನ ಮುಗಿಲುಮುಟ್ಟಿತ್ತು.

ಅಗಲಿದ ಶಂಕರ್ ನಾಗ್’ನನ್ನು ಹರೀಶ್ ಶೇರಿಗಾರ್’ರಲ್ಲಿ ಕಂಡೆ

ಶಂಕರ್ ನಾಗ್ ಹಾಗು ತಾನು ಬಾಲ್ಯದಿಂದಲೂ ಸ್ನೇಹಿತರಂತೆ ಬೆಳೆದವರು. ಶಂಕರ್ ಅಕಾಲಿಕ ಮರಣ ನಂತರ ತಾನು ಏಕಾಂಗಿಯಾಗಿದ್ದೆ. ಬಳಿಕ ಹರೀಶ್ ಶೇರಿಗಾರ್ ‘ಮಾರ್ಚ್ 22 ‘ ಸಿನೆಮಾ ಮಾಡಿದಾಗ ಅವರ ಪರಿಚಯವಾಯಿತು. ಅನಂತರ ಅವರ ಕುಟುಂಬದೊಂದಿಗಿನ ಸ್ನೇಹ ಸಂಬಂಧ ಗಟ್ಟಿಯಾಯಿತು. ಈ ವೇಳೆ ಶಂಕರ್’ನನ್ನು ಕಳೆದುಕೊಂಡು ಅನಾಥವಾಗಿದ್ದ ತನಗೆ ಆ ಸ್ಥಾನವನ್ನು ಹರೀಶ ಶೇರಿಗಾರ್ ತುಂಬಿದ್ದಾರೆ. ಅವರು ತೋರಿಸುತ್ತಿರುವ ಪ್ರೀತಿ ಕಂಡು ತಾನು ಅವರಲ್ಲಿ ಅಗಲಿದ ಶಂಕರ್ ನಾಗ್’ನನ್ನು ಕಾಣುತ್ತಿದ್ದೇನೆ ಎಂದು ಬಾವುಕರಾದರು.

ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ತನ್ನೊಂದಿಗೆ ಹಾಗು ಗಾಯತ್ರಿಯೊಂದಿಗೆ ತೋರುತ್ತಿರುವ ಪ್ರೀತಿ-ವಿಶ್ವಾಸ ಕಂಡು ನಾವು ಅವರಿಗೆ ಸದಾ ರಿಣಿಯಾಗಿದ್ದೇವೆ. ಇದೇ ಕಾರಣದಿಂದ ತಾವಿಂದು ಈ ಸಮಾರಂಭದಲ್ಲಿ ಭಾಗವಹಿಸಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದರು.

ದೂರದ ಈ ದೇಶದಲ್ಲಿ ಬಂದು ಇಲ್ಲಿ ಉದ್ಯಮ, ಇನ್ನಿತರ ಕೆಲಸ ಕಾರ್ಯಗಳನ್ನು ಮಾಡುವ ಜೊತೆಗೆ ಕನ್ನಡಪರ ಸಂಘಟನೆ ಕಟ್ಟಿ ಬೆಳೆಸಿರುವುದು ಬಹು ದೊಡ್ಡ ಸಾಧನೆಯೇ ಸರಿ. ಕನ್ನಡ ಭಾಷೆ ಮೇಲಿನ ಪ್ರೀತಿಯನ್ನು ಈ ದೇಶದಲ್ಲಿ ಕಂಡು ನಾನು ತುಂಬಾ ಸಂತೋಷಗೊಂಡಿದ್ದೇನೆ ಎಂದರು.

ಮೈಕಲ್ ಡಿಸೋಜರಿಗೆ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ಪ್ರದಾನ

ಯುಎಇಯ ಹೆಸರಾಂತ ಉದ್ಯಮಿ, ದಾನಿ, ಐವರಿ ಗ್ರ್ಯಾಂಡ್ ಹೋಟೆಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮೈಕಲ್ ಡಿಸೋಜ ಅವರಿಗೆ ಶಾರ್ಜಾ ಕರ್ನಾಟಕ ಸಂಘ ಕೊಡಮಾಡುವ ಪ್ರತಿಷ್ಠಿತ ‘ಮಯೂರ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮೈಕಲ್ ಡಿಸೋಜ, ನಾವು ಗಳಿಸುವ ಹಣವನ್ನು ಅಶಕ್ತರಿಗೆ ದಾನ ಮಾಡುವುದರಿಂದ ಸಿಗುವ ತೃಪ್ತಿ ಅಪಾರ. ನಾವು ನೀಡುವ ದಾನ ನಮಗೆ ಇನ್ನೊಂದು ಮೂಲದಲ್ಲಿ ಸಿಕ್ಕೇ ಸಿಗುತ್ತದೆ. ಅದಕ್ಕೆ ಸಾಕ್ಷಿ ನಾನೇ. ನಾನು ಎಷ್ಟೇ ದಾನ ಮಾಡಿದ್ದರೂ ಅದರ ದುಪ್ಪಟ್ಟು ಹಣ ಬೇರೆ ರೂಪದಿಂದ ನನಗೆ ಸಿಕ್ಕಿದೆ. ಇದು ಬೇರೆಯವರಿಗೂ ಪ್ರೇರಣೆ ಆಗಲಿ ಎಂದರು.

ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ

ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ನಟ ಅನಂತ್ ನಾಗ್, ಯುಎಇಯ ಹೆಸರಾಂತ ಉದ್ಯಮಿ ಹರೀಶ್ ಶೇರಿಗಾರ್, ರೊನಾಲ್ಡ್ ಕುಲಾಸೋ, ರಾಮ ಚಂದ್ರ ಹೆಗಡೆ, ಮಾರ್ಕ್ ಡೆನ್ನಿಸ್, ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷ ಆನಂದ್ ಬೈಲೂರು, ನೋಯೆಲ್ ಅಲ್ಮೇಡಾ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲೇಖಕ ಗಣೇಶ ರೈ, ನವೀನ್ ಕೊಪ್ಪ, ರಾಜೇಶ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ…ಸನ್ಮಾನ…ಸನ್ಮಾನ….

 

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಅನಂತ್ ನಾಗ್ ಹಾಗು ಪತ್ನಿ ಗಾಯತ್ರಿ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು.

ಶಾರ್ಜಾ ಕರ್ನಾಟಕ ಸಂಘ ಪ್ರತಿ ವರ್ಷ ಸಂಘದ ಒಳಿತಿಗಾಗಿ ಶ್ರಮಿಸುವವವರಿಗೆ ನೀಡುವ ಪ್ರಶಸ್ತಿಯನ್ನು ಉದ್ಯಮಿ ಸತೀಶ್ ಪೂಜಾರಿ ಹಾಗು ಅವರ ಧರ್ಮಪತ್ನಿ ಸುವರ್ಣ ಸತೀಶ್ ಅವರಿಗೆ ಗಣ್ಯರು ನೀಡಿ ಸನ್ಮಾನಿಸಿದರು.

ದುಬೈಯಲ್ಲಿ ಕನ್ನಡ ಪಾಠ ಶಾಲೆ ನಡೆಸುತ್ತಿರುವ ಶಶಿಧರ್ ನಾಗರಾಜಪ್ಪ ಹಾಗು ಅವರ ಧರ್ಮಪತ್ನಿಗೂ ಈ ವೇಳೆ ಸನ್ಮಾನಿಸಿ ಅಭಿನಂದಿಸಿದರು.

ಕಾರ್ಯಕ್ರಮಕ್ಕೆ ಮೆರುಗು ನೀಡಿದ ಸಂಗೀತ ರಸಮಂಜರಿ

ಉದ್ಯಮಿ, ಗಾಯಕರು ಆಗಿರುವ ಹರೀಶ್ ಶೇರಿಗಾರ್ ಅವರ ಸಾರಥ್ಯದಲ್ಲಿ ನಡೆದ ರಸಮಂಜರಿ ಕಾರ್ಯಕ್ರಮವನ್ನು ನೋಡಿ ಪ್ರೇಕ್ಷಕರು ಕುಣಿದುಕುಪ್ಪಳಿಸಿದರು.

ಹರೀಶ್ ಶೇರಿಗಾರ್ ಅವರು ಅನಂತ್ ನಾಗ್ ನಟನೆಯ ಸಿನೆಮಾದ ಸೂಪರ್ ಹಿಟ್ ಹಾಡುಗಳನ್ನು ಗಾಯಕಿಯರಾದ ರಮ್ಯಾ ಹಾಗು ಅಕ್ಷತರೊಂದಿಗೆ ಸೇರಿ ಹಾಡಿದ್ದು, ಹಳೆಯ ಹಾಡುಗಳನ್ನು ಮತ್ತೆ ಕಣ್ಣಮುಂದೆ ತರುವಂತೆ ಮಾಡಿತು.

ಗಾಯಕ-ಗಾಯಕಿಯರಾದ ಕೃಷ್ಣ ಪ್ರಸಾದ್, ಅನಿತಾ, ಉದಯ್ ನಂಜಪ್ಪ, ಸಾಯಿ ಮಲ್ಲಿಕಾ, ನವೀನ್ ಕೊಪ್ಪ, ನವೀದ್,  ಮಧುರ, ರವಿರಾಜ್ ತಂತ್ರಿ, ರಾಮಚಂದ್ರ, ಸುಕನ್ಯಾ ಕನ್ನಡದ ಸುಮಧುರ ಗೀತೆಗಳನ್ನು ಹಾಡಿ ಸಂಗೀತ ಸುಧೆ ಹರಿಸಿದರು. ಮಂಗಳೂರಿನ ಖ್ಯಾತ ಸಂಗೀತ ನಿರ್ದೇಶಕ ರಾಜ್ ಗೋಪಾಲ್ ಮತ್ತು ಅವರ ತಂಡ ಸಂಗೀತ ನೀಡಿದರು.

ಮನರಂಜನಾ ಕಾರ್ಯಕ್ರಮದ ಭಾಗವಾಗಿ ವಿವಿಧ ನೃತ್ಯ ತಂಡಗಳಿಂದ ನೃತ್ಯ, ಯಕ್ಷಗಾನ, ದೇಶ ಭಕ್ತಿಯ ರೂಪಕಗಳು ಪ್ರದರ್ಶನಗೊಂಡಿತು.

Comments are closed.