ಗಲ್ಫ್

ಮನಸ್ಸಿಗೆ ಮುದ ನೀಡಿದ ಮಸ್ಕತ್ತಿನ “ಸ್ಪಂದನ ” ಆಯೋಜಿಸಿದ್ದ ‘ಹಾಡು ಸಂತೋಷಕ್ಕೆ (SING FOR JOY)’ ಕಾರ್ಯಕ್ರಮ

Pinterest LinkedIn Tumblr

ಮಸ್ಕತ್ತಿನ “ಸ್ಪಂದನ ” ಆಯೋಜಿಸಿದ ಹಾಡು ಸಂತೋಷಕ್ಕೆ (SING FOR JOY) ಕಾರ್ಯಕ್ರಮವು ಶುಕ್ರವಾರ, ದಿನಾಂಕ 5 ರಂದು ಇಲ್ಲಿನ ಕ್ರಿಸ್ಟಲ್ ಸೂಟ್ಸ ಹೋಟೆಲ್ಲಿನ ಸಭಾಂಗಣದಲ್ಲಿ ಸುಂದರವಾಗಿ ಮೂಡಿಬಂತು.

 

ಕೋಣಿ ಪ್ರಕಾಶ ನಾಯ್ಕ್ ಅವರು ಹಾಗು ಕೆಲವು ಸಂಗೀತ ಪ್ರೇಮಿ ಗೆಳೆಯರು ಕೂಡಿ 2011 ರಲ್ಲಿ ಹುಟ್ಟುಹಾಕಿದ “ಸ್ಪಂದನವು” ಕಳೆದ ಏಳು ವರ್ಷಗಳಿಂದ ಹಲವು ಸಾಂಸ್ಕ್ರತಿಕ ಮತ್ತು ಸಮಾಜ ಮುಖಿ ಯಶಸ್ವಿಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಇವರು ಭಾರತ, ಪ್ರಮುಖವಾಗಿ ಕರಾವಳಿ ಕರ್ನಾಟಕದ ತೆರೆಮರೆಯಲ್ಲಿದ್ದ, ಸುಮಾರು 30 ರಿಂದ 35 ಪ್ರತಿಭಾನ್ವಿತ ಕಲಾವಿದರಿಗೆ ಅಂತಾರಾಷ್ಟ್ರೀಯ ವೇದಿಕೆಯನ್ನೊದಗಿಸಿದ್ದಾರೆ. ಅವರಲ್ಲಿ ಎಷ್ಟೋ ಪ್ರತಿಭೆಗಳು ಈಗಾಗಲೇ ಹಿನ್ನೆಲೆ ಗಾಯಕರಾಗಿದ್ದಾರೆ, ಮಾತ್ರವಲ್ಲದೆ ಮುಸ್ಕತ್ ನಲ್ಲಿ ನೆಲೆಸಿರುವ ಭಾರತೀಯ ಕಲಾವಿದರ ಪ್ರತಿಭೆಯನ್ನುಗುರುತಿಸಿ ಅವರ ಕಲೆಯನ್ನು ಪ್ರದರ್ಶಿಸುವ ನಿಟ್ಟೆಯಲ್ಲಿ ಕಳೆದ ಮೂರು ದಶಕಗಳಿಂದ ಮಾಡುತ್ತಾ ಬಂದ ಇವರ ನಿರಂತರ ಶ್ರಮ ಹಾಗು ಯೋಗದಾನ ನಿಜಕ್ಕೂ ಶ್ಲಾಘನೀಯ .

ಇಂದಿನ ಕಾರ್ಯಕ್ರಮವು ಪ್ರಕಾಶ್ ನಾಯಕರ ಸ್ವಾಗತ ಭಾಷಣದ ಮೂಲಕ ಆರಂಭವಾಯಿತು. ಪ್ರಪ್ರಥಮವಾಗಿ ಒಮಾನಿನ ಮಹಾರಾಜರಿಗೆ ಗೌರವವನ್ನ ಸಲ್ಲಿಸುತ್ತಾ, ಕೃತಜ್ಞತೆಗಳನ್ನು ಅರ್ಪಿಸುತ್ತ ಹಾಗೇನೇ ಈ ಕಾರ್ಯಕ್ರಮಕ್ಕೆ ಸಹಾಯ ಮಾಡಿದ ಎಲ್ಲ ಪ್ರಾಯೋಜಕರಿಗೆ ಧನ್ಯವಾದಗಳನ್ನು ಹೇಳುತ್ತಾ, ನೆರೆದಿರುವ ಸಭಿಕರೆಲ್ಲರಿಗೂ ಆತ್ಮೀಯ ಸ್ವಾಗತವನ್ನು ಬಯಸಿದರು.

ಶ್ರೀಮತಿ ಪದ್ಮಾವತಿ, ಶ್ರೀಮತಿ ದಿವ್ಯಾ ಶೆಟ್ಟಿ, ಶ್ರೀಮತಿ ನೀತಾ ವಿಜಯ್ ಸಾಲಿಯಾನ್, ಶ್ರೀಮತಿ ಡಾ.ಸೀಮಾ ರಂಜನ್ ಹಾಗು ಶ್ರೀಮತಿ ಕವಿತಾ ಸನಿಲ್- ಈ ಐದು ಮಹಿಳೆಯರು ಜ್ಯೋತಿ ಬೆಳಗಿಸಿ, ಸಂಗೀತ ಸಂಜೆಗೆ ಶುಭ ಹಾರೈಸಿ ಕಾರ್ಯಕ್ರಮ ಆರಂಭಿಸಿದರು.”ಜೊತೆ ಕಳೆದ ಆ ದಿನಗಳು ಕಂಗೊಳಿಸಿ ನಿಂತಿದೆ……………ಸ್ಪಂದನ ಸ್ಪಂದನ ಜನುಮದ ಅನುಬಂಧನ, ಕನುಸಗಳ ಬೆಸೆಯುವ ಮನಸುಗಳ ಹೂಬನ ಎಂಬ “ಶೀರ್ಷಿಕೆ ಗೀತೆಯೊಂದಿಗೆ ಸಂಗೀತ ಲೋಕಕ್ಕೆ ಕಾರ್ಯಕ್ರಮ ಕಾಲಿಟ್ಟಿತು. ಶರತ್ ಅವರ ಸಂಗೀತ ಸಂಯೋಜನೆ, ಪ್ರಕಾಶ್ ನಾಯ್ಕ್ ಅವರ ಸಾಹಿತ್ಯದ ಈ ಗೀತೆಯು ರಿಯಾ ಶರತ್ ಕಂಠದಲ್ಲಿ ಇಂಪಾಗಿ ಮೂಡಿಬಂತು. ನಂತರ ವಾದ್ಯ ಸ0ಗೀತದೊಂದಿಗೆ ಕಾರ್ಯಕ್ರಮ ಮುಂದುವರಿಯಿತು. ಕೀಬೋರ್ಡ್ ನಲ್ಲಿ ಸತೀಶ್, ರಿದಂ ಪ್ಯಾಡ್ ನಲ್ಲಿ ಜಮೋನ್ , ಗಿಟಾರಿನಲ್ಲಿ ಶರತ್ ಮತ್ತು ಕೊಳಲಿನಲ್ಲಿ ರಾಜೇಶ್ ಅವರ ವಾದ್ಯ ಸಂಗೀತಗೋಷ್ಠಿ ಕಿವಿಗೆ ಹಿತವಾಗಿ ಮನಸ್ಸಿಗೆ ಮುದವಾಗಿತ್ತು. ಹಿಂದೊಳ, ಹಂಸಧ್ವನಿ, ಮಧ್ಯಮಾವತಿ ಮುಂತಾದ ಭಾರತೀಯ ಶಾಸ್ತ್ರೀಯ ರಾಗಗಳನ್ನು ಆಧರಿಸಿದ ಸಂಗೀತ ಸಮ್ಮಿಲನ (ಫ್ಯೂಶನ್ ಮ್ಯೂಸಿಕ್) ಪ್ರೇಕ್ಷಕರ ಮನಸ್ಸಿಗೆ ನಿಜವಾಗಿ ಉಲ್ಲಾಸವನ್ನು ತರಿಸಿ ಸಂಗೀತ ಮನಸ್ಸಿನ ತಲ್ಲಣಗಳನ್ನು ಕಳೆಯುತ್ತದೆ ಎಂಬದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿತು.

ಅನುರಾಧ ಚಂದ್ರೇಶ್ , ರಿಯಾ ಶರತ್, ಕಿಶನ್ ಉದ್ಯಾವರ್ , ಅನುಪಮ ಮತ್ತು ಅನನ್ಯ ಪ್ರಸಾದ್ (ತಾಯಿಮಗಳ ಜೋಡಿ) , ಚೈತ್ರಾ ಕೋಟ್ಯಾನ್, ದೀಪಕ್ ಹಾಗು ಅವರ ಮಗ ರಾಹುಲ್, ರಿಯಾ ವಿಜಯ್, ಪ್ರಕಾಶ್ ನಾಯ್ಕ್, ಲಕ್ಷ್ಮಿವೆಂಕಟೇಶ್, ಸಂದೀಪ್ ಮತ್ತು ಅವರ ಪತ್ನಿ ಕಾಂಚನ್, ವಿಜಯ್ ಸಾಲಿಯಾನ್ , ರಾಜ್ ಸನಿಲ್ ಮುಂತಾದ ಗಾಯಕರು ತಮ್ಮ ಸುಂದರ ಗಾಯನದೊಂದಿಗೆ ಕಾರ್ಯಕ್ರಮದ ರಂಗೇರಿಸಿ ಪ್ರೇಕ್ಷಕರ ಮನಸೂರೆಗೊಂಡರು.

ಸುಧೀಕ್ಷ ಶೆಣೈ ಮತ್ತು ಮಿಥಿಲ್ ಕಾಂಚನ್ ರ ಮೇಡ್ಲೇ ನೃತ್ಯ ಪ್ರೇಕ್ಷಕರನ್ನು ಮಂತ್ರ ಮುಗ್ದರನ್ನಾಗಿಸಿದ್ದಲ್ಲದೇ ಕಾರ್ಯಕ್ರಮದಲ್ಲಿ ವೈವಿಧ್ಯತೆಯನ್ನು ತಂದಿತು.

ಕಾರ್ಯಕ್ರಮದ ಪ್ರಾಯೋಜಕರಾದ ಬ್ಯಾಂಕ್ ಮಸ್ಕತ್ ನ ಜಿ.ವಿ.ರಾಮಕೃಷ್ಣ, ಮಲ್ಟಿ ಟೆಕ್ ಕಂಪನಿಯ ದಿವಾಕರ್ ಶೆಟ್ಟಿ, ಒಮಾನ್ ಹೈಜಿನ್ ನ ನಾಗೇಶ್ ಶೆಟ್ಟಿ, ಬದ್ರ್ ಅಲ್ ಸಮಾ ಹಾಸ್ಪಿಟಲ್ ಗ್ರೂಪ್ ನ ಡಾ. ರಂಜನ್ ಬಾಬು, ಎಸ್ ಟಿ ಎಸ್ ನ ಗಣೇಶ್ ಶೆಟ್ಟಿ, ಖಿಮ್ಜಿ ರಾಮದಾಸ್ ನ ಚೆಂಗಪ್ಪ, ಸೂಪರ್ ಮ್ಯಾಕ್ಸ್ ಕಂಪನಿಯ ವಿಜಯ್ ಸಾಲಿಯಾನ್, ಒಮಾನ್ ಇಂಟರ್ನ್ಯಾಷನಲ್ ಗ್ರೂಪ್ ನ ಶಶಿಧರ್, ವರ್ಲ್ಡ್ ವೈಡ್ ಬಿಸಿನೆಸ್ ಹೌಸ್ ನ ಡಾ. ಅಂಚನ್ ಸಿ.ಕೆ, ಅಲ್ ಖಾಫ್ ಟ್ರೇಡಿಂಗ್ ನ ರಾಜ್ ಸನಿಲ್, ಲುಲು ಹೈಪರ್ ಮಾರ್ಕೆಟ್ ನ ಅನಂತ್ ಏ. ವಿ, ಮುಂತಾದ ಗಣ್ಯ ವ್ಯಕ್ತಿಗಳಿಗೆ ಹಾರ ಹಾಕಿ ಸ್ಮರಣಿಕೆ ನೀಡಿ ಧನ್ಯವಾದಗಳನ್ನು ಅರ್ಪಿಸಲಾಯಿತು.

ಕಾರ್ಯಕ್ರಮದ ನಿರೂಪಕ (ಒಚಿsಣeಡಿ oಜಿ ಅeಡಿemoಟಿಥಿ) ವಾಲ್ಟ್ಟರ್ ಮೆಂಡೋನ್ಸಾರವರು ಬಹಳ ಚತುರತೆಯಿಂದ ತಮ್ಮ ವಾಕ್ ಚಾತುರ್ಯವನ್ನು ತೋರಿಸಿ ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿ ಜನ ಮೆಚ್ಚುಗೆ ಪಡೆದರು. ಸಂಗೀತ ರಸದೌತಣದೊಂದಿಗೆ, ನ್ರತ್ಯಗಳ ಸುರಿಮಳೆ, ಅದ್ದೂರಿ ಭೋಜನ, ಸ್ಥಳೀಯ ಪ್ರತಿಭೆಗಳ ಅದ್ಭುತ ವಾದ್ಯಗೋಷ್ಠಿಯೊಂದಿಗೆ ಸುಂದರವಾಗಿ ಮೂಡಿಬಂದ ಈ ಕಾರ್ಯಕ್ರಮ ಬಹುಕಾಲ ಎಲ್ಲರ ಮನಸ್ಸಿನಲ್ಲಿರುವುದು ಖಚಿತ.

ವರದಿ: ಸುಧಾ ಶಶಿಕಾಂತ್, ಕುಂದಾಪುರ
Pictures by: Zubair Khazi

Comments are closed.