ಗಲ್ಫ್

ರಂಗಕ್ರಾಂತಿಗೆ ನಾಂದಿಯಾಗುವ ಬಹ್ರೈನ್ ಕನ್ನಡಿಗರ ಪ್ರಪ್ರಥಮ ನಾಡಹಬ್ಬ ‘ಕನ್ನಡ ಡಿಂಡಿಮ’

Pinterest LinkedIn Tumblr

ಮನಾಮ, ಬಹ್ರೈನ್: ಕರ್ನಾಟಕ ಸರಕಾರದ ‘ಅನಿವಾಸಿ ಭಾರತೀಯ ಸಮಿತಿ’ಯ ಮಾರ್ಗದರ್ಶನದಂತೆ ಮುತ್ತಿನ ನಗರಿ ಬಹ್ರೈನ್‍ನಲ್ಲಿ ಅನಿವಾಸಿ ಕನ್ನಡಿಗರ ಕಲ್ಯಾಣ ಮತ್ತು ಹಿತರಕ್ಷಣೆಗಾಗಿ ಸೇವೆ ಸಲ್ಲಿಸಲಿರುವ ನೂತನ ಸಂಸ್ಥೆ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ ಇದರ ಚೊಚ್ಚಲ ಆಯೋಜನೆಯ ಹಾಗೂ ಸ್ಥಳೀಯವಾಗಿ ಕನ್ನಡದ ರಂಗಕ್ರಾಂತಿಗೆ ನಾಂದಿ ಹಾಡಬಲ್ಲ ‘ಕನ್ನಡ ಡಿಂಡಿಮ’ ಎಂಬ ಬೃಹತ್ ರಂಗೋತ್ಸವವು ಅಕ್ಟೋಬರ್ ತಿಂಗಳ 12 ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಅತಿ ಅದ್ದೂರಿಯಿಂದ ಜರಗಲಿದೆ.

ಅಪರಾಹ್ನ 3 ಗಂಟೆಯಿಂದ ಶಾಲಾ ಮಕ್ಕಳಿಗಾಗಿ ಆಯೋಜಿತವಾದ ‘ಕಲಾ ಪ್ರದರ್ಶನ’ದಿಂದ ಆರಂಭಗೊಳ್ಳುವ ಈ ಮಹಾ ಸಾಂಸ್ಕೃತಿಕ ಉತ್ಸವವು ಕನ್ನಡದ ನಾಡು – ನುಡಿ, ಕಲೆ – ಸಾಹಿತ್ಯ, ಸಂಸ್ಕೃತಿ – ಪರಂಪರೆಯ ಭವ್ಯತೆಗೆ ಕುಂದಣವಿಕ್ಕುವ ಒಂದು ಅಚ್ಚ ಕನ್ನಡದ ಉಚ್ಚ ಕಾರ್ಯಕ್ರಮವಾಗಿದೆ.

ಸುಮಾರು 20 ರಷ್ಟು ತಾಯ್ನಾಡಿನ ಆಹ್ವಾನಿತ ಕಲಾವಿದರು ಮತ್ತು ಬಹ್ರೈನ್‍ನ ಸ್ಥಳೀಯ ಕಲಾವಿದರ ಕೂಡುವಿಕೆಯಲ್ಲಿ ಸಂಪನ್ನಗೊಳ್ಳಲಿರುವ ಹಾಡು, ಸಂಗೀತ, ಕಲೆ, ನೃತ್ಯ, ಹಾಸ್ಯ, ಮ್ಯಾಜಿಕ್, ಮಿಮಿಕ್ರಿ, ಕಾವ್ಯ – ಕುಂಚ ಸಹಿತವಾದ ಬಹು ವೈವಿಧ್ಯದ ಈ ಅಪರೂಪದ ಅಮೋಘ ಕಾರ್ಯಕ್ರಮವು ಬಹ್ರೈನ್ ಕನ್ನಡಿಗರ ಪಾಲಿನ ಪ್ರಪ್ರಥಮ ನಾಡಹಬ್ಬವಾಗಿದೆ.

 

ಅತ್ಯುತ್ಕೃಷ್ಟ ಮಟ್ಟದ ಮನೋರಂಜನಾ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಲಿರುವ ಈ ಅತ್ಯದ್ಭುತ ರಂಗೋತ್ಸವದ ಉದ್ಘಾಟಕರಾಗಿ ಖ್ಯಾತ ನಟ ತಥಾ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪೂರ್ವಾಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು ಹಾಗೂ ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯದ ವಸತಿ ಮತ್ತು ನಗರಾಭಿವೃದ್ಧಿ ಸಚಿವರಾದ ಯು. ಟಿ. ಖಾದರ್ ಅವರು ಭಾಗವಹಿಸಲಿದ್ದಾರೆ. ಅಂತೆಯೇ ಸ್ಥಳೀಯ ಕನ್ನಡಿಗರ ಪ್ರತಿನಿಧಿಯಾಗಿ ದಿಯಾರ್ ವಾಣಿಜ್ಯ ಸಂಸ್ಥೆಯ ವಿತ್ತ ಪ್ರಬಂಧಕರಾದ ಸುಭಾಸ್ ಚಂದ್ರ ಅವರು ಉಪಸ್ಥಿತರಿರುತ್ತಾರೆ.

ಅದೇ ರೀತಿಯಲ್ಲಿ ತಾಯ್ನಾಡಿನ ಆಹ್ವಾನಿತ ಕಲಾವಿದರ ತಂಡದಲ್ಲಿ ಪ್ರಮುಖವಾಗಿ ಮಿಮಿಕ್ರಿ ಗೋಪಿ, ಗಣೇಶ್ ಕುದ್ರೋಳಿ, ತೋನ್ಸೆ ಪುಷ್ಕಲ್ ಕುಮಾರ್, ಗೋನಾ ಸ್ವಾಮಿ, ಪುಷ್ಪಾ ಆರಾಧ್ಯ, ಕೋಟೆಗದ್ದೆ ರವಿ, ನಿರೂಪಕಿ ಅನುಷಾ, ವಿದುಷಿ ಸತ್ಯವತಿ ಕೆ. ಆರ್. ಮತ್ತು ತಂಡ ಹಾಗೂ ತೀರ್ಥಶ್ರೀ ದಾಮೋದರ್ ಮತ್ತು ತಂಡ ಇವರೆಲ್ಲಾ ಭಾಗವಹಿಸಿ ತಮ್ಮ ಅತ್ಯುಚ್ಚ ಮಟ್ಟದ ಪ್ರತಿಭೆ, ಕಲಾ ಪ್ರದರ್ಶನದ ಮೂಲಕ ಅಲ್ಲಿ ನೆರೆಯಲಿರುವ ಅಸಂಖ್ಯ ಕಲಾರಸಿಕರಿಗೆ ಒಂದು ವೈವಿಧ್ಯಪೂರ್ಣ ಮನರಂಜನೆಯ ರಸದೌತಣವನ್ನು ನೀಡಲಿದ್ದಾರೆ.

ಅದೇ ತೆರನಾಗಿ, ಸ್ಥಳೀಯ ಶಾಲಾ ಮಕ್ಕಳ ತಂಡದಿಂದ ಸ್ವಾಗತ ಕವಾಯತು, ಅನಿವಾಸಿ ಕನ್ನಡಿಗರ ತಂಡದಿಂದ ನಾಡಗೀತೆಗಳು ಹಾಗೂ ವಿವಿಧ ಸಂಘ – ಸಂಸ್ಥೆಗಳಿಂದ ನೃತ್ಯ ವೈಭವವೂ ಪ್ರದರ್ಶನಗೊಳ್ಳಲಿದ್ದು, ಇದು ಬಹ್ರೈನ್ ಅನಿವಾಸಿ ಕನ್ನಡಿಗರೆಲ್ಲರನ್ನು ಒಂದಾಗಿಸಿ ಅವರ ಮನಸೂರೆಗಳ್ಳಲಿರುವ ಒಂದು ಅನನ್ಯ ಉತ್ಸವವಾಗಲಿದೆ.

“ಬಹ್ರೈನ್‍ನಾದ್ಯಂತ ಚದುರಿ ಹೋಗಿರುವ ಸಮಸ್ತ ಕನ್ನಡಿಗರನ್ನು ಸಂಘಟಿಸಿ, ಅವರು ಈ ತಾಯ್ನಾಡಿನ ಸಾಂಸ್ಕೃತಿಕ ಉತ್ಸವದಲ್ಲಿ ಪಾಲ್ಗೊಂಡು ಸಂತೃಪ್ತಿ ಹೊಂದುವಂತೆ ಮಾಡುವುದೇ ಅಲ್ಲದೆ, ಅವರಿಗೆ ಕರ್ನಾಟಕ ಸರಕಾರದ ಅನಿವಾಸಿ ಸಂಬಂಧಿತ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವುದೂ ಈ ನಾಡಹಬ್ಬದ ಮೂಲ ಉದ್ದೇಶವಾಗಿದೆ” ಎಂದು ಈ ಸಂದರ್ಭದಲ್ಲಿ ಪ್ರಕಟಣೆಯಲ್ಲಿ ತಿಳಿಸಿರುವ ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು, “ನಾಡು – ನುಡಿ – ಸಂಸ್ಕೃತಿಗೆ ಉತ್ತೇಜನವೀಯುವ ಈ ಕಾರ್ಯಕ್ರಮದಲ್ಲಿ ನಮ್ಮ ನೂತನ ಸಂಸ್ಥೆಯ ಪ್ರಥಮ ಆಡಳಿತ ಸಮಿತಿಯ ಪರಿಚಯ ತಥಾ ಪದಗ್ರಹಣ ಕಾರ್ಯವೂ ನಡೆಯಲಿದೆ” ಎಂದು ಮಾಹಿತಿಯನ್ನಿತ್ತಿದ್ದಾರೆ.

“ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಬಹಳಷ್ಟು ವಿಶೇಷಗಳಿಗೆ ನಾಂದಿ ಹಾಡಲಿರುವ ಈ ‘ಕನ್ನಡ ಡಿಂಡಿಮ’ ನಾಡಹಬ್ಬವು ‘ಆದಿಕವಿ ಪಂಪ ಮಹಾದ್ವಾರ’, ‘ಸಂತ ಶಿಶುನಾಳ ಶರೀಫ ಸ್ವಾಗತ ಪಥ’, ‘ರೆ. ಫರ್ಡಿನ್ಯಾಂಡ್ ಕಿಟ್ಟೆಲ್ ಉತ್ಸವ ಮಂದಿರ’, ‘ವೀರರಾಣಿ ಅಬ್ಬಕ್ಕ ಉತ್ಸವ ವೇದಿಕೆ’ ಮತ್ತು ‘ಸಿರಿಗಂಧ ರಂಗಮಂಚ’ ಎಂಬಿತ್ಯಾದಿ ನಾಮ ಗೌರವ ಸಮರ್ಪಣೆಯನ್ನೂ ಹೊಂದಿದ್ದು, ಇದು ಬಹು ನಿರೀಕ್ಷೆಯಲ್ಲಿರುವ ಸಹಸ್ರ ಸಂಖ್ಯೆಯ ಬಹ್ರೈನ್ ಕನ್ನಡಿಗರ ಬಹು ಕಾಲದ ಉತ್ಕೃಷ್ಟ ಉತ್ಸವದ ಕನಸೊಂದನ್ನೂ ತಪ್ಪದೆ ನನಸಾಗಿಸಲಿದೆ” ಎಂದೂ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ತಿಳಿಸಿರುತ್ತಾರೆ.

ಅನಿವಾಸಿ ಭಾರತೀಯ ಮೂಲದ ಸಂಘಟನೆಗಳ ಮಾತೃ ಸಂಸ್ಥೆಯೆನಿಸುವ ‘ಇಂಡಿಯನ್ ಕ್ಲಬ್’ನ ಆಶ್ರಯದಲ್ಲಿ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ ವತಿಯಿಂದ ಸಾದರಗೊಳ್ಳುತ್ತಿರುವ ಈ ವೈಭವದ ನಾಡಹಬ್ಬಕ್ಕೆ ಶೀರ್ಷಿಕೆ ಪ್ರಾಯೋಜನೆಯನ್ನು ಸ್ಥಳೀಯ ಡ್ರ್ಯಾಗನ್ ಸಿಟಿ ಸಂಸ್ಥೆಯವರು, ಪ್ಲಾಟಿನಂ ಪ್ರಾಯೋಜನೆಯನ್ನು ಕೀ-ಪಾಯಿಂಟ್ ಸಂಸ್ಥೆಯವರು ಹಾಗೂ ಇನ್ನುಳಿದ ಪ್ರಾಯೋಜನೆಯನ್ನು ಇನ್ನಿತರ ಸಂಸ್ಥೆಯವರೂ ನೀಡಿ ಸಂಪೂರ್ಣವಾಗಿ ಬೆಂಬಲಿಸಿರುತ್ತಾರೆ.

Comments are closed.