ಗಲ್ಫ್

ದುಬೈಯ ಬಸವ ಜಯಂತಿ : ಪದ್ಮಶ್ರೀ ಬಿ. ಜಯಶ್ರೀ ಮುಡಿಗೇರಿದ ‘ಬಸವಭೂಷಣ’ ಪ್ರಶಸ್ತಿ

Pinterest LinkedIn Tumblr

ನೀನೊಲಿದರೆ ಕೊರಡು ಕೊನರುವುದಯ್ಯ , ನೀನೊಲಿದರೆ ಬರಡು ಹಯನಹುದಯ್ಯ, ನೀನೊಲಿದರೆ ವಿಷವು ಅಮೃತವಹುದಯ್ಯ ನೀನೊಲಿದರೆ ಸಕಲ ಪಡಿಪದಾರ್ಥಗಳು ಇದಿರಲಿರ್ಪವು ಕೂಡಲಸಂಗಮದೇವಾ ಅಂದರು ಬಸವಣ್ಣನವರು . ಭಗವಂತನ ಅನುಗ್ರಹದಿಂದ ಕೂಡಿದ ಸಕಲ ಕಲಾ ವಿಧ್ವಾನರಿಂದ , ಪ್ರತಿಭಾನ್ವಿತ ಕಲಾವಿದರ ಕಲೆಯ ಪ್ರದರ್ಶನಗಳಿಂದ ಮೇ 4 ರ ಶುಕ್ರವಾರ ಸಂಜೆ ಬಸವ ಸಮಿತಿ ದುಬೈಯವರ 12 ನೇ ವರ್ಷದ ಬಸವ ಜಯಂತಿಯ ಆಚರಣೆ ಹಾಗು ‘ ಬಸವ ಭೂಷಣ ‘ ಪ್ರಶಸ್ತಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರಗಿತು.

ಬಸವಣ್ಣನವರ ತೊಟ್ಟಿಲು ಪೂಜೆ , ನಾಮಕರಣ , ಮುತೈದೆಯರಿಂದ ಉಡಿ ತುಂಬುವುದು ಇಂತಹ ಸಾಂಪ್ರದಾಯಿಕ ಆಚರಣೆಗಳು ಶಾಸ್ತ್ರೋಕ್ತವಾಗಿ ನೆರವೇರಿದರೆ , ಪೂರ್ಣಕುಂಭ ಕಲಶ ಮತ್ತು ಚೆಂಡೆ ವಾದನಗಳೊಂದಿಗೆ ಮೆರವಣಿಗೆಯಲ್ಲಿ ಅತಿಥಿಗಳಾದ ಪಟ್ಟದ ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಗಳು , ಪೂಜ್ಯ ಶ್ರೀ ಶಿವಶಾಂತವೀರ ಶರಣರು ಚಿಕ್ಕೇನಕೊಪ್ಪ ಬಳಗಾನೂರ ಮಠ , ಶ್ರೀ ಇಬ್ರಾಹಿಂ ಸುತಾರ್ , ಶ್ರೀಮತಿ ಬಿ. ಜಯಶ್ರೀ , ಶ್ರೀಮತಿ ಪ್ರೀತಿ ನಾಗರಾಜ್ ಹಾಗು ಗಣ್ಯರನ್ನು ಕರೆದು ತರಲಾಯಿತು .

ಸಂಕೀರ್ಣ ನೃತ್ಯಶಾಲೆಯ ವಿದ್ಯಾರ್ಥಿನಿಯರು ಪುಷ್ಪಾoಜಲಿ ನೃತ್ಯದ ಮೂಲಕ ವಿಘ್ನರಾಜನನ್ನು ಪ್ರಾರ್ಥಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಅತಿಥಿಗಳು ಹಾಗು ಬಸವ ಸಮಿತಿಯ ಸಲಹಾ ಮಂಡಳಿ ಸದಸ್ಯರು ಬಸವಣ್ಣಗೆ ನಮನ ಸಲ್ಲಿಸಿ , ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು ,ತಮ್ಮ ಪ್ರಾಥನೆಯ ಹಾಡಿನ ಮೂಲಕ ಉದಯ್ ನಂಜಪ್ಪ ಹಾಗು ರಮ್ಯಾ ಜಾಗೀರ್ದಾರ್ ಬಸವ ಬೆಳಗನ್ನು ಎಲ್ಲೆಡೆ ಪಸರಿಸಿದರು .

ಸಭಾ ಕಾರ್ಯಕ್ರಮ ದಲ್ಲಿ ಬಸವ ಸಮಿತಿಯ ಪರವಾಗಿ ಶ್ರೀ ಸಂಗಮೇಶ್ ಬಿಸರಳ್ಳಿಯವರು ಎಲ್ಲಾ ಅಥಿತಿಗಳಿಗೆ ಹಾಗು ಗಣ್ಯರಿಗೆ ಸ್ವಾಗತ ಕೋರಿದರು . ಚಿಕ್ಕೇನಕೊಪ್ಪ ಶರಣರು ಮಾತನಾಡುತ್ತ ಬಸವಣ್ಣನವರ ಕಲ್ಯಾಣ ರಾಜ್ಯದ ಕನಸನ್ನು ನನಸು ಮಾಡಲು ಅನುಸರಿಸಬೇಕಾದ ಜೀವನ ಸೂತ್ರಗಳನ್ನು ವಚನ ಸಾಹಿತ್ಯದ ಆಧಾರಗಳ ಮೂಲಕ ಚೆನ್ನಾಗಿ ಮನವರಿಕೆ ಮಾಡಿದರು . ಕಾಯಕದ ನಡುವೆ ಕಳೆದು ಹೋಗದೆ ತಮ್ಮ ಸಂಪ್ರದಾಯ , ಆಚರಣೆಗಳನ್ನು ನಡೆಸಿಕೊಂಡು ಬರುತ್ತಿರುವ ದುಬೈ ಯ ಬಸವ ಅನುಯಾಯಿಗಳನ್ನು ಕೊಂಡಾಡಿದರು.

ಕಳೆದ ತಿಂಗಳಷ್ಟೇ ಭಾರತದ ನಾಲ್ಕನೇ ಸರ್ವೋಚ್ಚ ನಾಗರೀಕ ಪ್ರಶಸ್ತಿಯಾದ ‘ ಪದ್ಮಶ್ರೀ ‘ ಇಂದ ಪುರಸ್ಕೃತರಾದ ಭಾವೈಕ್ಯತೆಯ ಸಾಕಾರ ಮೂರ್ತಿ ಶ್ರೀ ಇಬ್ರಾಹಿಂ ಸುತಾರರವರು 45 ನಿಮಿಷಗಳ ಕಾಲ ತಮ್ಮ ಮಾತಿನಿಂದ ಇಡೀ ಸಭಾಂಗಣವನ್ನು ಸಮ್ಮೋಹನಗೊಳಿಸಿದರು . ಓದಿದ್ದು ಕೇವಲ 3 ನೇ ತರಗತಿಯ ವರೆಗಾದರು , ಸಜ್ಜನರ ಸತ್ಸಂಗಿಗಳ , ಸ್ವಾಮಿಗಳ ,ಪಂಡಿತರ ಸಂಗದಿಂದ ಸ್ವಪರಿಶ್ರಮ ದಿಂದ ನಿರಂತರ ಅಭ್ಯಾಸವೆಂಬ ತಪಸ್ಸಿನಿಂದ , ವೇದಗಳ , ವಚನಗಳ , ಪುರಾಣ ಗ್ರಂಥಗಳ ವಿವಿಧ ಧರ್ಮಗಳ ಗ್ರಂಥಗಳ , ಸಿದ್ದಾಂತ ಶಿಖಾಮಣಿಯ ಕುರಾನ್ ನಿನ ಆಳವಾದ ಅಧ್ಯಯನ ಮಾಡಿದ ಕನ್ನಡದ ಕಬೀರ , ಅಭಿನವ ಶರೀಫ ಭಾವೈಕ್ಯತೆಯ ದಾಸ .

ಲಿಂಗವ ನೆರೆನಂಬಿದಾತ , ಜಂಗಮಕೆ ಧನವ ಸವೆಸುವಾತ ಜವನ ಬಾಯಲು ಬಾಲವ ಕೊಯ್ದು ಹೋದಾತ ಆತ ಜಾಣನು ಎಂದು ವಚನವನ್ನು ಅರ್ಥೈಸಿ ಜಾಣರಾಗಲು ಮಾರ್ಗವನ್ನು ತಿಳಿಸಿದರು. ಹಾಗೆಯೇ ‘ಏಕಂ ಸತ್ ವಿಪ್ರಾ: ಬಾಹುವಿದಾ : ವದಂತಿ ‘ ಎಂದು ದೇವರೊಬ್ಬನೇ ನಾಮ ಹಲವು ಎನ್ನುವ ವಾದವನ್ನು ವೇದ ,ಗೀತೆ ಹಾಗು ಕುರಾನ್ ಗಳ ಉಲ್ಲೇಖ ಮಾಡಿ ನೆರೆದವರಿಗೆ ಮನದಟ್ಟು ಮಾಡಿದರು . ದೇವರು ಸರವಂತರ್ಯಾಮಿ , ವಿಶ್ವವ್ಯಾಪಿ ಎಂದು ಬಸವಣ್ಣನವರ , ಅಲ್ಲಮ ಪ್ರಭುಗಳ ಅಕ್ಕನವಚನಗಳ ಮೂಲಕ ಸಾಮ್ಯತೆಯನ್ನು ತಿಳಿಸಿದರು . ಸುಶ್ರಾವ್ಯವಾಗಿ ದಸರಾ ಪದವನ್ನು ಹಾಡಿದರು , ಕ್ರಮಬದ್ಧವಾಗಿ ಸ್ಪಷ್ಟ ಉಚ್ಚಾರದಿಂದ ಸಂಸ್ಕೃತದ ವೇದಗಳ ಸೂಕ್ತಗಳನ್ನು , ಮಂತ್ರಗಳನ್ನುಚ್ಛರಿಸಿದರು . ಕುರಾನ್ ಪಠಿಸಿದ ಶ್ರೀ ಇಬ್ರಾಹಿಂ ಸುತಾರರವರು .ವೇದಿಕೆಯ ಮೇಲೆ ಅಖಂಡ ಭಾರತದ ಪ್ರತಿರೂಪರಾದರು .

ಪದ್ಮಶ್ರೀ ಬಿ. ಜಯಶ್ರೀಯವರಿಗೆ ಬಸವ ಭೂಷಣ ಪ್ರಶಸ್ತಿ

ವೇದಿಕೆಯಲ್ಲಿದ್ದ ಅಥಿತಿಗಳು , ಬಸವ ಸಮಿತಿಯ ಸದಸ್ಯರು ಹಾಗು ನೆರೆದಿದ್ದ ಗಣ್ಯರ ಅಭಿಮಾನಿಗಳ ಮತ್ತು ಪ್ರೇಕ್ಷಕರ ಮುಂದೆ ‘ ಬಸವ ಭೂಷಣ ಪ್ರಶಸ್ತಿಯನ್ನು ಶ್ರೀಮತಿ ‘ ಜಯಶ್ರೀ ಯವರಿಗೆ ಪ್ರದಾನಿಸಲಾಯಿತು . ನಂತರ ಮಾತನಾಡಿದ ಜಯಶ್ರೀ ಯವರು ನಾನು ಪೂರ್ಣ ಮನಸ್ಸಿನಿಂದ , ಖುಷಿಯಾಗಿ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇವೆ ಎಂದು ನುಡಿದರು. ಈ ಸಂಧರ್ಭದಲ್ಲಿ ಅವರ ಜೊತೆ ಅವರ ಆತ್ಮ ಚರಿತ್ರೆ ‘ಕಣ್ಣಾಮುಚ್ಛೇ ಕಾಡೇ ಗೂಡೆ’ ಯನ್ನು ನಿರೂಪಿಸಿದ ಪತ್ರಕರ್ತೆ ಪ್ರೀತಿನಾಗರಾಜ್ ರವರು ಇದ್ದರು. ಪ್ರೀತಿಯವರು ಪುಸ್ತಕದ ಕೆಲವು ಉದಾಹರಣೆಗಳನ್ನು, ನಿದರ್ಶನಗಳನ್ನು ವಿವರಿಸಿದರೆ ಜಯಶ್ರೀಯವರು ತಮ್ಮ ನೆನಪಿನ ಬುಟ್ಟಿಯನ್ನು ಬಿಚ್ಚಿ ಅನುಭವವನ್ನುತಿಳಿಸಿದರು . ರಂಗ ಗೀತೆ , ವಚನ ಹಾಡುವುದರ ಮೂಲಕ ಪ್ರೇಕ್ಷಕರ ಮನಸೂರೆಗೊಂಡರೆ ಅವರು ಕೊನೆಯದಾಗಿ ಹಾಡಿದ ರಂಗದ ಚರಮಗೀತೆ ‘ ಸಾವಿರದ ಶರಣವ್ವ ಕರಿಮಾ ಯೇ ತಾಯೇ ‘ ಹಾಡು ಇಡೀ ಸಭಾಂಗಣದಲ್ಲಿ ವಿದ್ಯುತ್ ಸಂಚಾರವನ್ನುಂಟು ಮಾಡಿತು .

ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿದ್ದ ಸ್ವಾಮೀಜಿಗಳವರು ಸಾಧ್ಯವಾದಷ್ಟು ಬಸವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕರೆ ನೀಡಿದರು . ಹೊರದೇಶದಲ್ಲಿದ್ದರು ಬಸವ ಆದರ್ಶಗಳನ್ನು ಎತ್ತಿ ಹಿಡಿಯುತ್ತಿರುವ ಬಸವ ಸಮಿತಿ ದುಬೈ ಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

ಸ್ಥಳೀಯ ಕಲಾವಿದರಿಂದ ಹಾಗು ತಾಯ್ನಾಡಿನಿಂದ ಆಗಮಿಸಿದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು . ಖ್ಯಾತ ಹಿನ್ನೆಲೆ ಗಾಯಕ , ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಮತ್ತು ಕನ್ನಡ ಚಲನ ಚಿತ್ರ ಹಿನ್ನೆಲೆ ಗಾಯಕಿ ಅರ್ಪಿತಾ ವೇಣು ಅವರ ಸಂಗೀತ ರಸಮಂಜರಿ ನೆರೆದವರನ್ನು ಹುಚ್ಛೆದ್ದುಕುಣಿಸಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಪೋಷಕರನ್ನು, ಅಥಿತಿಗಳನ್ನುಹಾಗೂ ಕಲಾವಿದರನ್ನು ಗೌರವಿಸಲಾಯಿತು . ಬಸವ ಸಲಹಾಸಮಿತಿಯ ಸದಸ್ಯರುಗಳಾದ ಸಂಗಮೇಶ್ ಬಿಸರಳ್ಳಿ , ಚಂದ್ರ ಶೇಖರ್ ಲಿಂಗದಳ್ಳಿ , ಸತೀಶ್ ಹಿಂಡೇರ,ಮುರುಗೇಶ್ ಗಾಜರೆ , ಡಾ. ಶಿವಕುಮಾರ್ , ರುದ್ರಯ್ಯ ನವಲಿ ಹಿರೇಮಠ್ , ಜಗದೀಶ್ ಲಾಲಿ , ಡಾ .ಮಮತಾ ರೆಡ್ಡೇರ ರವರುಗಳುಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ್ದರು . ಶ್ರೀಮತಿ ನೀಮಾ ಹಾಗು ಸುರೇಶ ಚನ್ನಣ್ಣನವರ್ ತಯಾರಿಸಿದ ರುಚಿಕರ ದಾಸೋಹ ಎಲ್ಲರನ್ನೂ ಸಂತೃಪ್ತಗೊಳಿಸಿತು

ಉದಯ ಲಕ್ಷ್ಮಿ ಮತ್ತು ರಶ್ಮಿ ನಾಗಟನ್ ರವರು ಕಾರ್ಯಕ್ರಮವನ್ನು ಸಹ ನಿರೂಪಣೆ ಮಾಡಿದರು ,ಮಂಜುಳಾ ಪರದೆಯ ಹಿಂದೆ ಸಹಕರಿಸಿದರು.ಆರತಿ ಅಡಿಗರವರು ಕಾರ್ಯಕ್ರಮವನ್ನು ನಿರೂಪಿಸಿ ವಂದನಾರ್ಪಣೆಗೈದರು .
ವರದಿ : – ಅಡಿಗ ಕೆ .ವಿ , ದುಬೈ.

Comments are closed.