ಅಂತರಾಷ್ಟ್ರೀಯ

ಭಾರತೀಯನಿಗೆ ಯುಎಇ ಲಾಟರಿ ಜಾಕ್‌ಪಾಟ್‌: 21 ಕೋಟಿ ರೂ ಗೆದ್ದ ಜಾನ್ ವರ್ಗೀಸ್

Pinterest LinkedIn Tumblr


ದುಬೈ: ದುಬೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿರುವ ಭಾರತೀಯ ಪ್ರಜೆ ಜಾನ್ ವರ್ಗೀಸ್‌ 1.2 ಕೋಟಿ ದಿರ್‌ಹಂ (21.21 ಕೋಟಿ ರೂ) ಮೌಲ್ಯದ ಲಾಟರಿ ಬಹುಮಾನ ಗೆದ್ದಿದ್ದಾರೆ.

ಕೇರಳದಿಂದ ದುಬೈಗೆ ಉದ್ಯೋಗ ಅರಸಿ ಬಂದಿದ್ದ ವರ್ಗೀಸ್‌ ಲಾಟರಿ ಖರೀದಿಸುವ ಅಭ್ಯಾಸ ಹೊಂದಿದ್ದರು. ಅಬುಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ನಡೆದ ಡ್ರಾದಲ್ಲಿ ಅವರಿಗೆ ಈ ಭಾರೀ ಮೊತ್ತದ ಬಹುಮಾನ ಬಂದಿದೆ.

‘ನನಗೆ ಅದೃಷ್ಟ ಒಲಿಯಬಹುದು ಎಂದು ನಿರೀಕ್ಷಿಸಿರಲಿಲ್ಲ. ನನ್ನ ಸ್ನೇಹಿತರು ಈ ವಿಷಯ ತಿಳಿಸಿದಾಗ ಅವರು ‘ಏಪ್ರಿಲ್‌ ಫೂಲ್‌’ ಮಾಡುತ್ತಿದ್ದಾರೆ ಎನಿಸಿತು. ಇದೊಂದು ಸುಳ್ಳು ಕರೆ ಇರಬಹುದು ಎಂದು ಭಾವಿಸಿದ್ದೆ’ ಎಂದು ವರ್ಗೀಸ್‌ ತಿಳಿಸಿದರು.

‘ಬಳಿಕ ಬಹುಮಾನ ಗೆದ್ದಿರುವುದು ಖಚಿತವಾದರೂ ಮನೆಯವರಿಗೆ ತಿಳಿಸುವಾಗ ಮತ್ತೆ ಅನುಮಾನ ಬಂತು. ನಿಜವಾಗಿಯೂ ಲಾಟರಿ ಹೊಡೆದಿರುವುದು ಖಚಿತವಾದಾಗ ಭಾರೀ ಖುಷಿಯೆನಿಸಿತು’ ಎಂದು ಅವರು ಖಲೀಜ್ ಟೈಮ್ಸ್‌ಗೆ ತಿಳಿಸಿದರು.

ಲಾಟರಿ ಹಣವನ್ನು ನಾಲ್ವರು ಸ್ನೇಹಿತರ ಜತೆ ಹಂಚಿಕೊಳ್ಳುವುದಾಗಿ ಹೇಳಿದ ಅವರು, ಎಲ್ಲಕ್ಕಿಂತ ಮೊದಲು ಹೊಸ ಸ್ಮಾರ್ಟ್‌ ಫೋನ್ ಖರೀದಿಸುವುದಾಗಿ ನುಡಿದರು.

‘ಪತ್ನಿ ಮತ್ತು ಇಬ್ಬರು ಮಕ್ಕಳಿರುವ ಸಣ್ಣ ಕುಟುಂಬ ನನ್ನದು. ಲಾಟರಿ ಹಣವನ್ನು ಭವಿಷ್ಯದ ಭದ್ರತೆಗಾಗಿ ಹೂಡಿಕೆ ಮಾಡುವೆ. ಮಕ್ಕಳ ಶಿಕ್ಷಣಕ್ಕಾಗಿ ಬಳಸುವೆ’ ಎಂದು ಅವರು ನುಡಿದರು.

ಮೂರು ತಿಂಗಳ ಹಿಂದೆ ಜನವರಿಯಲ್ಲಿ ನಡೆದ ಯುಎಇ ಲಾಟರಿ ಡ್ರಾದಲ್ಲೂ ಇನ್ನೊಬ್ಬ ಕೇರಳೀಯನಿಗೆ 1.2 ಕೋಟಿ ದಿರ್‌ಹಂ ಬಹುಮಾನ ಬಂದಿತ್ತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆದ ಡ್ರಾದಲ್ಲಿ 10 ಲಕ್ಷ ದಿರ್‌ಹಂ ಬಹುಮಾನ ಗೆದ್ದ 10 ಮಂದಿಯಲ್ಲಿ 8 ಮಂದಿ ಭಾರತೀಯರಾಗಿದ್ದರು.

Comments are closed.