ಗಲ್ಫ್

ಬಹರೈನ್: “ನೈಸ್ ಸ್ಪೈಸ್” ಮಡಿಲಿಗೆ ಪ್ರತಿಷ್ಠಿತ “ಕನ್ನಡ ಸಂಘ ಚಾಂಪಿಯನ್ಸ್ ಕ್ರಿಕೆಟ್ ಟ್ರೋಫಿ”

Pinterest LinkedIn Tumblr

ಬಹರೈನ್:ಸ್ಥಳೀಯ ಇಂಡಿಯನ್ ಕ್ಲಬ್ಬಿನ ಕ್ರೀಡಾಂಗಣದಲ್ಲಿ ಇತ್ತೀಚಿಗೆ ಜರುಗಿದ ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಸಂಘ ದ್ವೀಪದ ಅನಿವಾಸಿ ಭಾರತೀಯ ಕ್ರಿಕೆಟ್ ಪಟುಗಳಿಗಾಗಿ ಆಯೋಜಿಸಿದ್ದ ಮ್ರದು ಚೆಂಡಿನ ಹೊನಲು ಬೆಳಕು ಪಂದ್ಯಾಟದ ಸೆಮಿ ಫೈನಲ್ ಹಾಗು ಅಂತಿಮ ಹಂತದ ಪಂದ್ಯಾಟಗಳು ನಡೆದು ಸುಮಾರು ಒಂದು ತಿಂಗಳ ಕಾಲ ದ್ವೀಪದ ಕ್ರಿಕೆಟ್ ಪ್ರೇಮಿಗಳನ್ನು ರಂಜಿಸಿದ ಕ್ರಿಕೆಟ್ ಜಾತ್ರೆ ವರ್ಣರಂಜಿತ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯ ಕಂಡಿತು .

ಅಂತಿಮ ಪಂದ್ಯಾಟದಲ್ಲಿ ನೈಸ್ ಸ್ಪೈಸ್ ತಂಡವು ವಂಶ್ ಸಿ ಸಿ ತಂಡವನ್ನು ತಮ್ಮ ಕರಾರುವಕ್ಕಾದ ಎಸೆತಗಳಿಂದ ಸುಲಭವಾಗಿ ಮಣಿಸಿ ಪ್ರತಿಷ್ಠಿತ ಕನ್ನಡ ಸಂಘ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮಡಿಲಿಗೆ ಹಾಕಿಕೊಂಡಿತು .

ಅಂತಿಮ ಹಂತದ ಪಂದ್ಯಾಟದಲ್ಲಿ ನಾಣ್ಯ ಚಿಮ್ಮುವಿಕೆಯನ್ನು ಗೆದ್ದುಕೊಂಡ “ವಂಶ್ ಸಿ ಸಿ ” ತಂಡ ಬ್ಯಾಟಿಂಗನ್ನು ಆಯ್ದುಕೊಂಡು ನಿಗದಿತ 6 ಓವರುಗಳಲ್ಲಿ ಕೇವಲ 28 ಓಟಗಳನ್ನು ಪೇರಿಸಲಷ್ಟೇ ಶಕ್ತವಾಯಿತು . ಇದಕುತ್ತರವಾಗಿ ಬಿರುಸಿನ ಆಟ ಆರಂಭಿಸಿದ “ನೈಸ್ ಸ್ಪೈಸ್ ” ತಂಡವು ಆರಂಭಿಕ ದಾಂಡಿಗರಾದ ಪ್ರಶಾಂತ್ ಹಾಗು ನಜೀಶ್ ರವರ ಜವಾಬ್ದಾರಿಯುತ ಆಟದಿಂದಾಗಿ ಕೇವಲ 4.2 ಓವರುಗಳಲ್ಲಿಯೇ ಯಾವುದೇ ಉದ್ದರಿಯನ್ನು ಕಳೆದುಕೊಳ್ಳದೆ ನಿರಾಯಾಸವಾಗಿ ಜಯ ದಾಖಲಿಸಿತು .

ಈ ಹಿಂದೆ ಜರುಗಿದ ಸೆಮಿ ಫೈನಲ್ ಹಂತದ ಪಂದ್ಯಾಟದಲ್ಲಿ ನೈಸ್ ಸ್ಪೈಸ್ ತಂಡವು ತಂಡವು ಬಲಿಷ್ಠ ಸೆಂಟ್ರಲ್ ಕೆಫೆ ತಂಡವನ್ನು ಮಣಿಸಿ ಅಂತಿಮ ಹಂತಕ್ಕೆರಿದರೆ ,ವಂಶ್ ಸಿ ಸಿ ತಂಡವು ಕುಡ್ಲ ಚಾಲೆಂಜರ್ಸ್ ತಂಡವನ್ನು ಸೋಲಿಸಿ ಅಂತಿಮ ಹಂತದ ಪಂದ್ಯಾಟಕ್ಕೆ ತೇರ್ಗಡೆಗೊಂಡಿತ್ತು.

ಸುಮಾರು ಒಂದು ತಿಂಗಳಿಂದ ಜರುಗುತ್ತಿರುವ ಈ ಕ್ರಿಕೆಟ್ ಪಂದ್ಯಾಟದಲ್ಲಿ 2 ಬಣಗಳಲ್ಲಿ ದ್ವೀಪದ ಒಟ್ಟು 20ಬಲಿಷ್ಠ ತಂಡಗಳು ಪಾಲ್ಗೊಂಡಿದ್ದು ದ್ವೀಪದ ಕ್ರಿಕೆಟ್ ಪ್ರೇಮಿಗಳಿಗೆ ಹಬ್ಬವನ್ನುಂಟು ಮಾಡಿತ್ತು.

ಪಂದ್ಯಾಟದುದ್ದಕ್ಕೂ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಂಶ್ ಸಿ ಸಿ ತಂಡದ ಗುರುಪ್ರಸಾದ್ ಶೆಟ್ಟಿಯವರು ಸರಣಿ ಶ್ರೇಷ್ಠ ,ಅತ್ಯುತ್ತಮ ಎಸೆತಗಾರ ನೈಸ್ ಸ್ಪೈಸ್ ತಂಡದ ಕಿರಣ್ ,ಅತ್ಯುತ್ತಮ ದಾಂಡಿಗ ನೈಸ್ ಸ್ಪೈಸ್ ತಂಡದ ಪ್ರಶಾಂತ್ ಪ್ರಶಸ್ತಿಗಳಿಗೆ ಭಾಜನರಾದರೆ ,ಪಂದ್ಯಾಟದಲ್ಲಿ ಒಟ್ಟು 11ಸಿಕ್ಸರುಗಳನ್ನು ಬಾರಿಸಿದ ಕನ್ಸಾರ 11 ತಂಡದ ಜಿಗ್ನೇಶ್ ರವರು ಅತೀ ಹೆಚ್ಚು ಸಿಕ್ಸರುಗಳನ್ನು ಧಾಖಲಿಸಿದ ಪ್ರಶಸ್ತಿ ,ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಟೆಲಿ ಕಿಂಗ್ಸ್ ತಂಡದ ರಾಯೀಸ್ , ಅತ್ಯುತ್ತಮ ಕ್ರೀಡಾಕ್ಷಮತೆಯನ್ನು ಪ್ರದರ್ಶಿಸಿದ ತಂಡ “ಬಸವ ಸಮಿತಿ ” ಹಾಗು ಅತ್ಯುತ್ತಮ ಸಮವಸ್ತ್ರ ಹೊಂದಿರುವ ತಂಡವಾಗಿ ಕನ್ಸಾರ 11 ತಂಡವು ಪ್ರಶಸ್ತಿಗಳನ್ನು ಪಡೆದುಕೊಂಡಿತು .

ಅಂತಿಮ ಹಂತದ ಪಂದ್ಯಾಟದ ನಂತರ ಜರುಗಿದ ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಮುಖ್ಯ ಪ್ರಯೋಜಕ ಸಂಸ್ಥೆಯಾದ ಅಲ ರಫೀಕ್ ಟವರ್ ನ ಸೆಲ್ವರಾಜ್ ,ಅರ್ಜುನ್ ದೀಪ್ ಕಂಸ್ಟ್ರಕ್ಷನ್ ನ ಆಡಳಿತ ನಿರ್ದೇಶಕ ಅಮರನಾಥ್ ರೈ ,ಪ್ರುಡೆನ್ಷಿಯಲ್ ಮ್ಯಾನೇಜ್ಮೆಂಟ್ ಸಂಸ್ಥೆಯ ಆಡಳಿತ ನಿರ್ದೇಶಕ ಸುಧಾಕರ್ ಶೆಟ್ಟಿ ,ಎಕ್ಸಲೊನ್ ಸಂಸ್ಥೆಯ ಆಡಳಿತ ನಿರ್ದೇಶಕ ಮೊಹಮ್ಮದ್ ಮನ್ಸೂರ್ ,ಬಿನ್ ಹಿಂದಿ ಸಂಸ್ಥೆಯ ಸಂತೋಷ್ ಕರ್ಕೇರ , ಪ್ಯಾಪಿಲಾನ್ ರೆಸ್ಟೋರೆಂಟಿನ ಆಡಳಿತ ನಿರ್ದೇಶಕ ಸವಿನ್ ಶೆಟ್ಟಿ ,ಗಲ್ಫ್ ಡೈಲಿ ನ್ಯೂಸ್ ನ ಕ್ರೀಡಾ ವರದಿಗಾರ ವಿಜಯ್ ಮೃತ್ಯುಂಜಯ ಇಲ್ಲಿನ ಭಾರತೀಯ ಮೂಲದ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇಂಡಿಯನ್ ಕ್ಲಬ್ಬಿನ ಆಡಳಿತ ಮಂಡಳಿಯ ಪಧಾದಿಕಾರಿಗಳು ಹಾಗು ವಿವಿಧ ಉಪಸ್ಥಿತರಿದ್ದು ಬಹುಮಾನಗಳನ್ನು ವಿತರಿಸಿದರು . ಸಂಘದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ಹಾಗು ಕ್ರೀಡಾ ಕಾರ್ಯದರ್ಶಿ ಶ್ರೀ ಮಹೇಶ್ ಕುಮಾರ್ ರವರು ಮಾತನಾಡಿ ಕ್ರೀಡಾಪಟುಗಳ ಕ್ರೀಡಾ ಕ್ಷಮತೆಯನ್ನು ಬಹುವಾಗಿ ಶ್ಲಾಘಿಸಿ ಪಂದ್ಯಾಟ ಯಶಸ್ವಿಯಾಗಿ ಜರುಗಲು ಶ್ರಮಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸಿದರು . ಪ್ರಧಾನ ಕಾರ್ಯದರ್ಶಿ ಕಿರಣ್ ಉಪಾಧ್ಯಾಯ ಹಾಗು ಉಪಾಧ್ಯಾಕ್ಷರಾದ ಡಿ ರಮೇಶ್ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು .

ಚಿತ್ರ-ವರದಿ-ಕಮಲಾಕ್ಷ ಅಮೀನ್.

Comments are closed.