ಕ್ರೀಡೆ

ನಿದಾಸ್‌ ಕಪ್‌ ಟ್ವೆಂಟಿ–20 ಕ್ರಿಕೆಟ್‌: ರೋಹಿತ್‌, ರೈನಾ ಅಬ್ಬರದ ಬ್ಯಾಟಿಂಗ್‌’ಗೆ ತಲೆಬಾಗಿದ ಬಾಂಗ್ಲಾದೇಶ; ಫೈನಲ್‌ ಪ್ರವೇಶಿಸಿದ ಭಾರತ

Pinterest LinkedIn Tumblr

ಕೊಲಂಬೊ: ನಾಯಕ ರೋಹಿತ್‌ ಶರ್ಮಾ (89; 61ಎ, 5ಬೌಂ, 5ಸಿ) ಮತ್ತು ಸುರೇಶ್‌ ರೈನಾ (47; 30ಎ, 5ಬೌಂ, 2ಸಿ) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ನಿದಾಸ್‌ ಕಪ್ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 17ರನ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿದೆ. ಇದರೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಪಡೆ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 176ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಭದ್ರ ಅಡಿಪಾಯ: ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ನಾಯಕ ರೋಹಿತ್‌ ಮತ್ತು ಶಿಖರ್‌ ಧವನ್‌ (35; 27ಎ, 5ಬೌಂ, 1ಸಿ) ಭದ್ರ ಅಡಿಪಾಯ ಹಾಕಿಕೊಟ್ಟರು.

ಬಾಂಗ್ಲಾ ಬೌಲರ್‌ಗಳನ್ನು ಮನ ಬಂದಂತೆ ದಂಡಿಸಿದ ಈ ಜೋಡಿ ಮೊದಲ ವಿಕೆಟ್‌ಗೆ 59 ಎಸೆತಗಳಲ್ಲಿ 70ರನ್‌ ಕಲೆಹಾಕಿತು.

10ನೇ ಓವರ್‌ನಲ್ಲಿ ಭಾರತ ಮೊದಲ ಆಘಾತ ಅನುಭವಿಸಿತು. ಅರ್ಧಶತಕದ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದ ಶಿಖರ್‌, ರುಬೆಲ್‌ ಹೊಸೇನ್‌ ಹಾಕಿದ ಐದನೇ ಎಸೆತದಲ್ಲಿ ಬೌಲ್ಡ್‌ ಆದರು.

ರೋಹಿತ್–ರೈನಾ ಮೋಡಿ: ಅನಂತರ ರೋಹಿತ್‌ ಮತ್ತು ರೈನಾ ಮೋಡಿ ಮಾಡಿದರು. ಸರಣಿಯ ಆರಂಭಿಕ ಪಂದ್ಯಗಳಲ್ಲಿ ವಿಫಲವಾಗಿದ್ದ ರೋಹಿತ್‌, ಆರ್‌.ಪ್ರೇಮದಾಸ ಕ್ರೀಡಾಂಗಣದಲ್ಲಿ ರನ್‌ ಮಳೆ ಸುರಿಸಿದರು. ರೋಹಿತ್ ತಾವೆದುರಿಸಿದ ಐದನೇ ಎಸೆತದಲ್ಲಿ ಒಂದು ರನ್‌ ಗಳಿಸಿ ಖಾತೆ ತೆರೆದರು. ನಜಮುಲ್‌ ಇಸ್ಲಾಂ ಬೌಲ್ ಮಾಡಿದ ಎರಡನೇ ಓವರ್‌ನ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದರು.

ರುಬೇಲ್‌ ಹೊಸೇನ್‌ ಹಾಕಿದ ಮೂರನೇ ಓವರ್‌ನ ಐದನೇ ಎಸೆತದಲ್ಲಿ ಸಿಕ್ಕ ಜೀವದಾನದ ಲಾಭ ಪಡೆದ ಅವರು ಅಂಗಳದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿದರು.

ಮೆಹದಿ ಹಸನ್‌ ಮಿರಾಜ್‌ ಮತ್ತು ಅಬು ಹೈದರ್‌ ಬೌಲಿಂಗ್‌ನಲ್ಲಿ ರೋಹಿತ್‌ ಬಾರಿಸಿದ ಸಿಕ್ಸರ್‌ ಮತ್ತು ಬೌಂಡರಿ ಮನ ಸೆಳೆದವು. 23 ಎಸೆತಗಳಲ್ಲಿ 26ರನ್‌ ಬಾರಿಸಿದ್ದ ಅವರು ಅಬು ಹೈದರ್‌ ಹಾಕಿದ 13ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಒಂದು ರನ್‌ ಗಳಿಸಿ ವೃತ್ತಿ ಬದುಕಿನ 13ನೇ ಟ್ವೆಂಟಿ–20 ಅರ್ಧಶತಕದ ಸಂಭ್ರಮ ಆಚರಿಸಿದರು.

ರೈನಾ ಕೂಡ ಗರ್ಜಿಸಿದರು. ರುಬೆಲ್‌ ಹೊಸೇನ್‌ ಬೌಲ್‌ ಮಾಡಿದ 15ನೇ ಓವರ್‌ನಲ್ಲಿ ಸತತ ಎರಡು ಬೌಂಡರಿ ಗಳಿಸಿ ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದ ಅವರು ಮಹಮ್ಮದುಲ್ಲಾ, ಮುಸ್ತಫಿಜುರ್‌ ರೆಹಮಾನ್‌ ಅವರನ್ನೂ ದಂಡಿಸಿದರು. ಅಬು ಹೈದರ್‌ ಹಾಕಿದ 18ನೇ ಓವರ್‌ನಲ್ಲಿ ರೈನಾ ಮತ್ತು ರೋಹಿತ್‌ ಒಟ್ಟು ಮೂರು ಸಿಕ್ಸರ್‌ ಸಿಡಿಸಿದರು.

20ನೇ ಓವರ್‌ ಬೌಲ್‌ ಮಾಡಿದ ರುಬೆಲ್‌ ಹೊಸೇನ್‌, ಮೊದಲ ಎಸೆತದಲ್ಲಿ ರೈನಾ ವಿಕೆಟ್‌ ಉರುಳಿಸಿದರು. ಇದರೊಂದಿಗೆ 102ರನ್‌ಗಳ ಎರಡನೇ ವಿಕೆಟ್‌ ಜೊತೆಯಾಟವೂ ಅಂತ್ಯವಾಯಿತು. ಇದರ ಬೆನ್ನಲ್ಲೇ ರೋಹಿತ್‌ ಕೂಡ ರನ್‌ಔಟ್‌ ಆದರು.

ಸಂಕಷ್ಟ: ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತು. ಲಿಟನ್‌ ದಾಸ್‌ (7) ಮತ್ತು ಸೌಮ್ಯ ಸರ್ಕಾರ್‌ (1) ಬೇಗನೆ ಪೆವಿಲಿಯನ್‌ ಸೇರಿಕೊಂಡರು. ವಿಕೆಟ್‌ ಕೀಪರ್‌ ಮುಷ್ಫಿಕರ್‌ ರಹೀಮ್‌ (ಔಟಾಗದೆ 72; 55ಎ, 8ಬೌಂ, 1ಸಿ) ಹೋರಾಟಕ್ಕೆ ಫಲ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಭಾರತ: 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 176 (ರೋಹಿತ್‌ ಶರ್ಮಾ 89, ಶಿಖರ್‌ ಧವನ್‌ 35, ಸುರೇಶ್‌ ರೈನಾ 47; ರುಬೆಲ್‌ ಹೊಸೇನ್‌ 27ಕ್ಕೆ2).

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 (ತಮಿಮ್ ಇಕ್ಬಾಲ್‌ 27, ಮುಷ್ಫಿಕರ್‌ ರಹೀಮ್‌ ಔಟಾಗದೆ 72, ಮಹಮ್ಮದುಲ್ಲಾ 11, ಶಬ್ಬೀರ್‌ ರಹಮಾನ್‌ 27; ಮಹಮ್ಮದ್‌ ಸಿರಾಜ್‌ 50ಕ್ಕೆ1, ವಾಷಿಂಗ್ಟನ್‌ ಸುಂದರ್‌ 22ಕ್ಕೆ3, ಶಾರ್ದೂಲ್ ಠಾಕೂರ್‌ 37ಕ್ಕೆ1, ಯಜುವೇಂದ್ರ ಚಾಹಲ್‌ 21ಕ್ಕೆ1).

ಫಲಿತಾಂಶ: ಭಾರತಕ್ಕೆ 17ರನ್‌ ಗೆಲುವು.

ಪಂದ್ಯ ಶ್ರೇಷ್ಠ: ರೋಹಿತ್‌ ಶರ್ಮಾ.

Comments are closed.