ದುಬೈ: ಬಾಲಿವುಡ್ ನಟಿ ಶ್ರೀದೇವಿ ಸಾವಿನ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದಿದೆ. ಸಾವಿನ ಕುರಿತಾಗಿ ಅನುಮಾನ ವ್ಯಕ್ತಪಡಿಸಿರುವ ದುಬೈ ಪೊಲಿಸರು. ಶ್ರೀದೇವಿ ಪತಿ ಬೋನಿ ಕಪೂರ್ ಅವರನ್ನ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಮರಣೋತ್ತರ ಪರೀಕ್ಷಾ ವರದಿಯಿಂದ ತೃಪ್ತರಾಗದ ಪಬ್ಲಿಕ್ ಪ್ರಾಸಿಕ್ಯೂಟರ್ ವಿಚಾರಣೆಗೆ ನಡೆಸಿದ್ದಾರೆ. ವಿಚಾರಣೆ ವೇಳೆ ಬೋನಿ ಕಪೂರ್ ನೀಡಿದ್ದ ಉತ್ತರದಿಂದ ತೃಪ್ತರಾಗದ ಪೊಲೀಸರು ಮತ್ತಷ್ಟು ವಿಚಾರಣೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇದೇವೇಳೆ, ದುಬೈನಲ್ಲಿ ಶ್ರೀದೇವಿ ಪತಿ ಜೊತೆ ಉಳಿದುಕೊಂಡಿದ್ದ ಹೋಟೆಲಿನ ಸಿಬ್ಬಂದಿಯನ್ನೂ ಪೊಲಿಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸಿಸಿಟಿವಿ ವಿಡಿಯೋಗಳನ್ನೂ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.
ನಿನ್ನೆ ದುಬೈನ ಹೋಟೆಲಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆನ್ನಲಾದ ನಟಿ ಶ್ರೀದೇವಿ ಅವರ ಮರಣೋತ್ತರ ವರದಿ ಮಧ್ಯಾಹ್ನ ಹೊರಬಿದ್ದಿತ್ತು. ಆಕಸ್ಮಿಕವಾಗಿ ಬಾತ್ ಟಬ್ನಲ್ಲಿ ಬಿದ್ದು ಶ್ರೀದೇವಿ ಮೃತಪಟ್ಟಿರುವುದಾಗಿ ಉಲ್ಲೇಖಿಸಲಾಗಿತ್ತು. ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಸಹ ಪತ್ತೆಯಾಗಿತ್ತು. ಹೀಗಾಗಿ, ಆಲ್ಕೋಹಾಲ್ ಸೇವಿಸಿದ್ದ ಶ್ರೀದೇವಿ ಬಾತ್ ರೂಮ್ನಲ್ಲಿ ಆಯತಪ್ಪಿ ಬಿದ್ದು, ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವಿವರಿಸಲಾಗಿತ್ತು.