ಗಲ್ಫ್

ಇನ್ನುಮುಂದೆ ಯುಎಇಯಲ್ಲಿ ಉದ್ಯೋಗ ವೀಸಾ ಪಡೆಯಲು ಈ ದಾಖಲೆ ಕಡ್ಡಾಯ !

Pinterest LinkedIn Tumblr

ದುಬೈ: ಯುಎಇನಲ್ಲಿ ಉದ್ಯೋಗದ ವೀಸಾವನ್ನು ಪಡೆಯಲು ಅಪೇಕ್ಷಿಸುವವರು ತಮ್ಮ ತಾಯ್ನಾಡಿನಿಂದ ‘ಸನ್ನಡತೆಯ ಪ್ರಮಾಣ ಪತ್ರ’ವನ್ನು ಸಲ್ಲಿಸುವ ನಿಯಮವನ್ನು ರವಿವಾರದಿಂದ ಕಡ್ಡಾಯಗೊಳಿಸಲಾಗಿದೆ. ಮನೆಗೆಲಸ ಸೇರಿದಂತೆ,ಎಲ್ಲಾ ರೀತಿಯ ಉದ್ಯೋಗಗಳಿಗೂ ತಮ್ಮ ದೇಶದಿಂದ ಸನ್ನಡತೆಯ ಪ್ರಮಾಣಪತ್ರವನ್ನು ಹಾಜರುಪಡಿಸಬೇಕಾಗಿದೆಯೆಂದು ಸಂಪುಟ ನಿರ್ಣಯ ಅನುಷ್ಟಾನ ಕುರಿತ ಸಮನ್ವಯ ಸಮಿತಿಯ ಪ್ರಕಟಣೆ ತಿಳಿಸಿದೆ.

  ಉದ್ಯೋಗಾಪೇಕ್ಷಿಯು ತನ್ನ ತಾಯ್ನಾಡಿನಿಂದ ನೀಡಲಾದ ಪ್ರಮಾಣಪತ್ರವನ್ನು ಹಾಜರುಪಡಿಸಬೇಕಾಗುತ್ತದೆ. ಒಂದು ವೇಳೆ ಆತ/ ಆಕೆ ಕಳೆದ ಐದು ವರ್ಷಗಳಿಂದ ಬೇರೆ ದೇಶದಲ್ಲಿ ಇದ್ದಲ್ಲಿ ಪ್ರಮಾಣಪತ್ರವನ್ನು ಅಲ್ಲಿಂದ ಪಡೆದುಕೊಳ್ಳಬೇಕಾಗುತ್ತದೆಯೆಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸನ್ನಡತೆಯ ಪ್ರಮಾಣಪತ್ರವನ್ನು ವಿದೇಶದಲ್ಲಿರುವ ಯುಎಇ ರಾಯಭಾರಿ ಕಚೇರಿಗಳು ಅಥವಾ ವಿದೇಶಾಂಗ ವ್ಯವಹಾರಗಳು ಅಥವಾ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯದ ಗ್ರಾಹಕ ಸಂತೃಪ್ತಿ ಕೇಂದ್ರಗಳು ದೃಢೀಕರಿಸಬೇಕಾಗುತ್ತದೆಯೆಂದು ಹೇಳಿಕೆಯು ತಿಳಿಸಿದೆ. ಆದರೆ ಪ್ರಸ್ತುತ ಯುಎಇನಲ್ಲಿ ಉದ್ಯೋಗ ಹೊಂದಿರುವವರು ಸನ್ನಡತೆಯ ಪ್ರಮಾಣವನ್ನು ಸಲ್ಲಿಸುವ ಅಗತ್ಯವಿಲ್ಲವೆಂದು ಅದು ಹೇಳಿದೆ.

ಅತ್ಯಂತ ಸುಭದ್ರವಾದ ಸಮಾಜವನ್ನು ಸೃಷ್ಟಿಸುವ ಉದ್ದೇಶದಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆಯೆಂದು ಸಮಿತಿಯು ತಿಳಿಸಿದೆ.

ಆದರೆ ಪ್ರವಾಸಕ್ಕಾಗಿ ಆಗಮಿಸುವವರಿಗೆ ಮತ್ತು ಉದ್ಯೋಗದ ವೀಸಾ ಹೊಂದಿರುವವರ ಕುಟುಂಬಿಕರಿಗೆ ಈ ಸನ್ನಡತೆಯ ಪ್ರಮಾಣಪತ್ರದ ಅಗತ್ಯವಿರುವುದಿಲ್ಲವೆಂದು ಅದು ಸ್ಪಷ್ಟಪಡಿಸಿದೆ.

Comments are closed.