ಗಲ್ಫ್

ಓಮನ್: ಇಂಡಿಯನ್ ಪ್ರವಾಸಿ ಫೋರಂ ಒಮಾನ್ ನಿಂದ ಪೈಗಾಂ- ಎ- ರಸೂಲ್ ಕಾರ್ಯಕ್ರಮ

Pinterest LinkedIn Tumblr

ಇಂಡಿಯನ್ ಪ್ರವಾಸಿ ಫೋರಂ ಒಮಾನ್ ಇದರ ವತಿಯಿಂದ ಇತ್ತೀಚೆಗೆ ಮಸ್ಕತ್, ಸೊಹಾರ್ ಮತ್ತು ಸಲಾಲಾದಲ್ಲಿ ‘ಪೈಗಾಮ್-ಎ-ರಸೂಲ್’ – ಪ್ರವಾದಿ ಸಂದೇಶ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್’ನ ಸದಸ್ಯ ಮೌಲಾನಾ ಮುಅಝ್ಝಿಂ ಸಿದ್ದೀಕಿ ಮಾತನಾಡಿ “ಪ್ರವಾದಿಯವರನ್ನು ಕೇವಲ ಆಧ್ಯಾತ್ಮಿಕ ರೂಪಕ್ಕೆ ಮಾತ್ರ ಸೀಮಿತವಾಗಿಸದೆ ಅವರ ಸಾಮಾಜಿಕ ಕಳಕಳಿಯ ಜೀವನ ಸಂದೇಶವನ್ನು ಎತ್ತಿ ಹಿಡಿಯುವಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು. ಸಮುದಾಯದ ಕುಂದು ಕೊರತೆ, ಸಂಕಷ್ಟ, ಸಮಸ್ಯೆಗಳಿಗೆ ನಾವೆಷ್ಟು ಸ್ಪಂದಿಸುತ್ತಿದ್ದೇವೆ ಎಂಬುವುದನ್ನು ಸ್ವತಃ ಮೆಲುಕು ಹಾಕಿ ಅವಲೋಕನ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

‘ನಾ ಝಲ್ಮ್ ಕರೋ ನಾ ಝಲ್ಮ್ ಕೀ ಹವಾಲೇ ಕರೋ’ ಎಂಬುವುದು ಪ್ರವಾದಿವರ್ಯರ ಮಾತು. ಆದರೆ ಕಣ್ಣ ಮಂದೆಯೇ ಅನ್ಯಾಯ, ಅಕ್ರಮ ನಡೆಯುತ್ತಿರುವಾಗ ಮೌನ ತಾಳುವುದು ಮುಸ್ಲಿಮನ ಲಕ್ಷಣವಲ್ಲ. ಮಾನವನ ಹಕ್ಕು, ಸಾಮಾಜಿಕ ನ್ಯಾಯಕ್ಕಾಗಿ ಕಾರ್ಯೋನ್ಮುಖರಾಗುವುದು ಪ್ರವಾದಿ ಚರ್ಯೆಯಾಗಿದೆ ಎಂದು ಮೌಲಾನ ವಿವರಿಸಿದರು.

ಇಂಡಿಯನ್ ಪ್ರವಾಸಿ ಫೋರಂನ ಅಧ್ಯಕ್ಷರಾದ ಮುಹಮ್ಮದ್ ಅನ್ವರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ಇಂದು ನಮ್ಮ ದೇಶದಲ್ಲಿ ಪ್ರವಾದಿಯವರ ಉಮ್ಮತ್ತಿಯಾಗಿ ಜೀವಿಸಲು ಭಯಪಡುವಂತಹ ಸಮಯದಲ್ಲಿ ಇಸ್ಲಾಮ್ ನಮಗೆ ಕಲಿಸಿದ ಈಮಾನ್, ಧೈರ್ಯ, ಸ್ಥೈರ್ಯ ಮತ್ತು ಎದೆಗಾರಿಕೆಯನ್ನು ತೋರಿಸುತ್ತಾ ತಲೆಯೆತ್ತಿ ಘನತೆಯಿಂದ ನಾನೋರ್ವ ಪ್ರವಾದಿ ಅನುಯಾಯಿ, ನಾನೊಬ್ಬ ಮುಸ್ಲಿಂ ಎಂದು ಭಯವಿಲ್ಲದೆ ಹೇಳಿಕೊಳ್ಳುವಂತಾಗಬೇಕು ಎಂದರು.

ಕಿರಾಅತ್, ನಾತ್, ಭಾಷಣ, ಆಟೋಟ ಸ್ಪರ್ದೆಯೊಂದಿಗೆ ಅನಿವಾಸಿ ಭಾರತೀಯ ಮಕ್ಕಳಲ್ಲಿ ನವಚೇತನ ಉತ್ಸಾಹವನ್ನು ಚಿಮ್ಮಿಸುವುದರ ಜೊತೆಗೆ ರಕ್ಷಕ ಪ್ರೇಕ್ಷಕರ ಮನಕ್ಕೆ ಮುದ ನೀಡುವಲ್ಲಿ ಇಂಡಿಯನ್ ಪ್ರವಾಸಿ ಫೋರಂ ಓಮನ್ ಯಶಸ್ವಿಯಾಯಿತು. ಅಲ್ಲದೆ ಮಹಿಳೆಯರಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ಮಸ್ಕತ್’ನ ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಪಾಣೆಮಂಗಳೂರು ನೆರವೇರಿಸಿದರೆ, ಸೊಹಾರ್ ‘ ಕಾರ್ಯಕ್ರಮವನ್ನು ಆಸಿಫ್ ಕಾರಾಜೆ, ಮೊಹಿದಿನ್, ಸಲಾಲದಲ್ಲಿ ಮುಹಮ್ಮದ್ ಫೈರೋಝ್, ಅನ್ವರ್ ಮಜೂರ್ ಕಾಪು ನಿರೂಪಿಸಿದರು. ವಿವಿಧ ಸ್ಪರ್ಧಾಕೂಟದ ಎಲ್ಲಾ ಮಕ್ಕಳಿಗೂ ನೂರ್ ಪಡುಬಿದ್ರಿ ಬಹುಮಾನ ವಿತರಿಸಿದರು. ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮದ ಉಸ್ತುವಾರಿ ವಹಿಸಿದರೆ ಆಸೀಫ್ ಬೈಲೂರ್ ಸಹಕರಿಸಿದ್ದರು. ಶಹಾಬುದ್ದೀನ್ ಕಾಟಿಪಳ್ಳ ಸ್ವಾಗತಿಸಿ, ಹಕೀಂ ಕಾಟಿಪಳ್ಳ ವಂದಿಸಿದರು.
ವರದಿ : ಅಬ್ದುಲ್ ಮುಬಾರಕ್ ಕಾರಾಜೆ

Comments are closed.