ಗಲ್ಫ್

ಒಮಾನ್ ಬಂಟರ 30ನೇ ವರ್ಷದ ತ್ರಿಶಂತಿ ಮಹೋತ್ಸವ; ಗ್ರಾಮೀಣ ಕ್ರೀಡಾಕೂಟ

Pinterest LinkedIn Tumblr

ಆಧುನೀಕತೆಯ ಭರಾಟೆಯಲ್ಲಿ ಪದ್ಧತಿ,ಆಚಾರ ವಿಚಾರ,ಬಂಧುತ್ವ ಕಳಚಿಕೊಳ್ಳುತ್ತಿರುವ ಈ ದಿನಗಳಲ್ಲಿ ಎಲ್ಲಾ ಬಂಟ ಬಂಧುಗಳನ್ನು ಭಾಂಧವ್ಯ ವೆಂಬ ಒಂದೇ ಎಳೆಯಲ್ಲಿ ಪೋಣಿಸಿ ಒಂದೇ ಸೂರಿನಡಿ ಸೇರಿಸಿ ವಾರ್ಷಿಕ ಹಾಗೂ ಮಧ್ಯಂತರ ಕೂಡುಕಟ್ಟುಗಳನ್ನು ನಡೆಸುವುದರೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸುತ್ತಾ ಭಾವೈಕ್ಯತೆ ಮೆರೆಯುವ ಒಮಾನ್ ಬಂಟರ ಅವಿರತ ಶ್ರಮ ಪ್ರಸಂಶನೀಯ.

ಸತತ 29 ವಾರ್ಷಿಕ ಕೂಡುಕಟ್ಟನ್ನು ಪೂರೈಸಿ ತನ್ನ 30ನೇ ವರ್ಷದ ‘ತ್ರಿಶಂತಿ ಮಹೋತ್ಸವ’ವನ್ನು ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿರುವ ಈ ಸಂಧರ್ಭದಲ್ಲಿ ಆಚರಣೆಯ ಅಂಗವಾಗಿ ಮೊದಲ ಹಂತದ ಒಣ ಮೈದಾನದ ಕ್ರೀಡಾಕೂಟಗಳು(ಕ್ರಿಕೆಟ್,ವಾಲಿಬಾಲ್ ಇತ್ಯಾದಿ) ತಾರೀಕು 13-10-2017ರಂದು ಯಶಸ್ವಿಯಾಗಿ ನಡೆದು , ಮುಂದುವರಿದ ಭಾಗವಾಗಿ ಕೃಷಿಯಾಧಾರಿತ ಹಿನ್ನೆಲೆಯಿರುವ ಜನಾಂಗದ ಪುರಾತನ ಸಂಸ್ಕೃತಿ , ಕೌಟುಂಬಿಕ ಮೌಲ್ಯ , ಸಂಪ್ರದಾಯಗಳ ಪ್ರಾಮುಖ್ಯತೆ ಹಾಗೂ ಆಧುನಿಕ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಔನ್ನತ್ಯದ ಬಗ್ಗೆ ಯುವಪೀಳಿಗೆಗೆ ಪ್ರಜ್ಞೆ ಮೂಡಿಸುವ ಉದ್ದೇಶವನ್ನಿಟ್ಟುಕೊಂಡು ನಡೆಸಲಾದ ಎರಡನೇ ಹಂತದ ಗ್ರಾಮೀಣ ಕ್ರೀಡಾಕೂಟ ‘ಕೆಸರು ಗದ್ದೆ’ ತಾರೀಕು 27-11-2017 ರಂದು ಅದ್ಧೂರಿಯಾಗಿ ನಡೆಯಿತು .

ಮಸ್ಕತ್ ನ್ ಪಕ್ಕದ ಪಟ್ಟಣ ‘ಬರ್ಕ’ ಎಂಬಲ್ಲಿಯ ವಿಶಾಲ ಬಂಜರು ಭೂಮಿಯನ್ನು ಹಗಲು ರಾತ್ರಿ ಪರಿಶ್ರಮದಿಂದ ಹಚ್ಚ ಹಸಿರಿನೊಂದಿಗೆ ಮೈ ತುಂಬಿ ನಳನಳಿಸುತ್ತಿರುವ ಬರ್ಕ ಗ್ರಾಮವಾಗಿ ಮಾರ್ಪಡಿಸಿ, ಮಧ್ಯೆ ಬಂಟರ ಗುತ್ತಿನ ಗತ್ತಿನ ಸಾಂಪ್ರದಾಯಿಕ ಮನೆ “ಬರ್ಕ ಗುತ್ತು”, ಕೃಷಿ ಕಾರ್ಯಗಳಿಗೆ ಅನುಕೂಲಕರ ವಿಶಾಲವಾದ ಅಂಗಳ, ಅಂಗಳಕ್ಕೆ ಮುಕುಟವೆಂಬಂತೆ ಬಲಬದಿಗೆ ತುಳಸಿಕಟ್ಟೆ ಹಾಗೂ ಭತ್ತದ ಕಣಜವನ್ನು ಒಡಲಲ್ಲಿ ತುಂಬಿಕೊಂಡು ಬೀಗುತ್ತಾ ನಿಂತಿರುವ ಭತ್ತದ ಸಿರಿ ತುಪ್ಪೆ,ಪಡಿ ಮಂಚವು ,ಅಂಗಳದ ಮೂಲೆಗಳಲ್ಲಿ ಗೂಟಕ್ಕೆ ಕಟ್ಟಿರುವ ಕಟ್ಟಡ ಕೋಳಿಗಳು , ಎಡಕ್ಕೆ ತಿಳಿ ಒಸರಿನೊಂದಿಗೆ ನೀರು ಮಡುಗಟ್ಟಿ ತುಂಬಿ ತುಳುಕ್ಕುತ್ತಿರುವ ಸಾಂಪ್ರದಾಯಿಕ ಭಾವಿ ಕಟ್ಟೆ , ಅಂಗಳದ ಮೂಲೆಗೆ ತಾಗಿಕೊಂಡು ವಿಶಾಲವಾಗಿ ತೆರೆದುಕೊಂಡು ಚೆನ್ನಾಗಿ ಉತ್ತು ಹದಗೊಳಿಸಿ ನೀರು ಕಟ್ಟಿದ್ದು, ಗಾಳಿಯ ನಯವಾದ ಸ್ಪರ್ಶದ ಕಲರವದೊಂದಿಗೆ ಲಕ ಲಕ ಕಂಗೊಳಿಸುತ್ತಿರುವ ಬಾಕ್ಯಾರು ಗದ್ದೆ, ಗದ್ದೆಯ ಎರಡು ಪಕ್ಕಗಳಲ್ಲಿ ಕಟ್ಟಪುಣಿ ಹಾಗೂ ತೆಂಗಿನ ಮರದ ಸಾಲು, ಗುತ್ತಿನ ಮನೆಯ ಆಗ್ನೇಯಕ್ಕೆ ಅಂಗಳದ ಅಂಚಿಗೆ ತಾಗಿಕೊಂಡು ಪಾಕಶಾಲೆ ,ಸಾವಿರಾರು ತೆಂಗಿನ ಗರಿಗಳನ್ನು ಹೆಣೆದು ಚಪ್ಪರ ಹಾಕಿ ಸಜ್ಜುಗೊಳಿಸಿದ ಭೋಜನಶಾಲೆ ,ಹಟ್ಟಿ, ದನ ಕರು ,ಬಸಳೆ ದೊಂಪ ,ಬಚ್ಚಲು ಮನೆ ,ಮಹಿಳೆಯರು ಭಾವಿಯಿಂದ ಸೇದಿ ನೀರು ತುಂಬಿಸಲು ಬೃಹತ್ ಗಾತ್ರದ ಹಿತ್ತಾಳೆ ಹಂಡೆ,…ಅಬ್ಬಬ್ಬಾ ವರ್ಣಿಸಲಸಾಧ್ಯ ,ಪ್ರತಿಯೊಂದು ಕೋನದಲ್ಲಿಯೂ ಗ್ರಾಮೀಣತೆಯ ಸೊಗಡು ಮೇಳೈಸುತ್ತಿತ್ತು , ಹೇಳಿದಷ್ಟೂ ಮುಗಿಯದು.

ಬಂಟ ಪರಂಪರೆಯ ತರವಾಡು ಹಾಗೂ ತಾಯಿ ನಾಡಿನ ಪ್ರಕೃತಿಯ ಸೊಬಗನ್ನು ಬರಡು ಭೂಮಿ ದ್ವೀಪ ರಾಷ್ಟ್ರದಲ್ಲಿ ಮರುಸೃಷ್ಟಿಸಿ , ತನ್ನ ಯೋಜನೆ ಹಾಗೂ ಪರಿಕಲ್ಪನೆಯನ್ನು ಸಾಕ್ಷಾತ್ಕಾರಗೊಳಿಸಿ ವಿಸ್ತೃತ ದರ್ಶನ ಪಡಿಸಿರುವುದರ ಹಿಂದಿರುವ ಅದ್ಭುತ ಶಿಲ್ಪಿ ಮಲ್ಟಿಟೆಕ್ ಕಂ.ಲಿಮಿಟೆಡ್ ನ ಆಡಳಿತ ನಿರ್ದೇಶಕ ಶ್ರೀಮಾನ್ ದಿವಾಕರ್ ಶೆಟ್ಟಿ ಕಾಪು ಮಲ್ಹಾರ್.ಅದರಂತೆಯೇ ಗುತ್ತಿನ ಮನೆಯ ತುಳಸಿ ಕಟ್ಟೆ,ದೇವರ ಕೋಣೆ,ಚಪ್ಪರಗಳನ್ನು ಹಿಂಗಾರ,ಅಡಕೆ ,ಸಿಹಾಳ ಹಾಗೂ ಮಾವಿನ ಎಲೆಗಳ ತಳಿರು ತೋರಣ ಕಟ್ಟಿ ಸಿಂಗರಿಸಿದ್ದು ಹಾಗೂ ತುಳಸಿ ಕಟ್ಟೆ, ಮತ್ತು ಮೊಗಂಟೆಗಳನ್ನು ಬೆಳಗ್ಗೆ ರಂಗೋಲಿಯಿಂದ ಸಿಂಗರಿಸಿದ್ದು ಸೂರ್ಯಾಸ್ತವಾಗುತ್ತಿದ್ದಂತೆ ಮೊಗಂಟೆ,ಪಡಸಾಲೆ ತುಳಸಿ ಕಟ್ಟೆ ಹಾಗೂ ದೇವರ ಕೋಣೆಗೆ ದೀಪ ಹೊತ್ತಿಸಿ ಸಂಸ್ಕಾರ ಪಾಲಿಸಿದವರು ಸಮಿತಿಯ ಮಹಿಳಾ ಸದಸ್ಯರಾದ ಸರೋಜಾ ಶೆಟ್ಟಿ ,ಮಲ್ಲಿಕಾ ಶೆಟ್ಟಿ ,ಸುಧೀರ ಶೆಟ್ಟಿ , ವಾಣಿಶ್ರೀ ಶೆಟ್ಟಿ, ಸುರೇಖಾ ರೈ ಹಾಗೂ ಶೈನಾ ಶೆಟ್ಟಿ .

ಸರಿಸುಮಾರು ಬೆಳಗ್ಗಿನ ಜಾವ 8 ಘಂಟೆಗೆ ಸಮಿತಿಯ ಸಂಚಾಲಕ ಶಶಿಧರ್ ಶೆಟ್ಟಿ ಕಾಪು ಮಲ್ಲಾರ್ ಹಾಗೂ ಕಲ್ಲಾಡಿ ಶಂಕರ್ ಶೆಟ್ಟಿಯವರು ವಿಘ್ನನಾಶಕನನ್ನು ಮನವರಿಕೆ ಮಾಡಿಕೊಂಡು ತೆಂಗಿನ ಕಾಯಿ ಒಡೆದು ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು ಅದೇ ರೀತಿ ಸಂಘಟನಾ ಸಮಿತಿಯ ಸದಸ್ಯರು ಆವಾಹನಾ ಪ್ರಾರ್ಥನೆಯನ್ನು ನೆರವೇರಿಸುತ್ತಾ ಅತಿಥಿಗಳನ್ನು ಹಾಗೂ ಸಮುದಾಯ ಸದಸ್ಯರನ್ನು ಆದರದಿಂದ ಬರಮಾಡಿಕೊಂಡು ಸಾಂಪ್ರದಾಯಿಕ ಉಡುಪಿ ಮಂಗಳೂರು ಮಾದರಿಯ ಬೆಳಗ್ಗಿನ ಉಪಹಾರವನ್ನು ಬಡಿಸುವುದರ ವ್ಯವಸ್ಥೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟು ನಿರಾಸಾಯವಾಗಿ ನಡೆಸಿಕೊಂಡು ಹೋಗುವತ್ತ ಗಮನಹರಿಸಿ ಜವಾಬ್ದಾರಿ ವಹಿಸಿರುವರು. ಕಲ್ಲಾಡಿ ಶಂಕರ್ ಶೆಟ್ಟಿಯವರು ಕಾರ್ಯಕ್ರಮದ ಕಿರುಪರಿಚಯಗಳನ್ನು ವಿವರಿಸಿದರೆ, ಶಶಿಧರ್ ಶೆಟ್ಟಿಯವರು ಸ್ವಾಗತ ಭಾಷಣ ಮಾಡುವುದರೊಂದಿಗೆ ಗ್ರಾಮೀಣ ಕ್ರೀಡೆಗಳು, ಜಾನಪದ ಕ್ರೀಡೆಗೂ ಬಂಟರಿಗೂ ಇರುವ ನಂಟು, ಉಡುಗೆ ತೊಡುಗೆ ಬಂಟರ ಸಂಸ್ಕೃತಿ ಸಂಪ್ರದಾಯದ ಬಗ್ಗೆ ಮಾತನಾಡುತ್ತಾ ‘ನಮ್ಮ ಊರು ಬದಲಾಂಡಲಾ, ರೂಪ ಹಾವ ಭಾವ ಬದಲಾಂಡಲಾ, ಅಪ್ಪೆ ಬಲಸಿದಿನ ಮಣ್ಣ್ ದ ಕರತ ಗಂಜಿದ ರುಚಿನ್ ಲಾ ನಮ್ಮ ಮಣ್ಣ್ ದ ಕಮ್ಮೆನೆನ್ಲಾ, ನಮ್ಮ ಸಂಸ್ಕೃತಿನ್ಲಾ ಮದಪರೆ ಬಲ್ಲಿ ‘ ಎಂದು ಮಾರ್ಮಿಕವಾಗಿ ನುಡಿಯುತ್ತಾ ಕಾರ್ಯಕ್ರಮ ಮುಂದುವರಿಸಲು ಅನುವು ಮಾಡಿಕೊಟ್ಟರು .

ಅಂತೆಯೇ ಕಾರ್ಯಕ್ರಮದುದ್ದಕ್ಕೂ ಎಲ್ಲರ ಭಾಷಣ , ಕ್ರೀಡಾ ವೀಕ್ಷಕ ವಿವರಣೆ ಹಾಗೂ ಮನರಂಜನೆಗಳನ್ನೂ ಕುಳಿತಲ್ಲಿಂದಲೇ ಆಲಿಸುವಂತೆ ಅತ್ಯಾಧುನಿಕ ಧ್ವನಿವರ್ಧಕಗಳ ಜೋಡಣೆಗಳನ್ನು ಒದಗಿಸುವುದರೊಂದಿಗೆ ಸುದಿನ್ ಶೆಟ್ಟಿಯವರು ಸಮರ್ಥವಾಗಿ ನಿಭಾಯಿಸಿರುವರು .

ಕೆಸರು ಗದ್ದೆ ಆಟೋಟ
ಕಡಬ ಸತ್ಯಪ್ರಸಾದ್ ರೈಯವರು ಮುತುವರ್ಜಿವಹಿಸಿ ಗಣೇಶ್.ವಿ. ಶೆಟ್ಟಿಯವರ ಸಹಭಾಗಿತ್ವದೊಂದಿಗೆ ಬೆಳಗ್ಗಿನಿಂದ ರಾತ್ರಿ ೮ ಗಂಟೆಯವರೆಗೂ ಮಕ್ಕಳಿಗೆ , ಮಹಿಳೆಯರಿಗೆ ಹಾಗೂ ಪುರುಷರಿಗೆ ವಿವಿಧ ಆಟಗಳಾದ ಚಿನ್ನದ ನಿಧಿ ಶೋಧನೆ ,ಹ್ಯಾಂಡ್ ಬಾಲ್ ,ಟಗ್ ಆಫ್ ವಾರ್,ಅತೀ ವೇಗದ ಓಟ ಹಾಗೂ ಸ್ಪರ್ಧಾತ್ಮಕ ಮೊಸರು ಕುಡಿಕೆ,ಮಡಿಕೆ ಹೊಡೆಯುವಂತಹ ಅನೇಕ ಆಟೋಟ ಸ್ಪರ್ಧೆಗಳನ್ನುಒಂದರ ಮೇಲೊಂದರಂತೆ ಎಡೆಬಿಡದೆ ನಿರಂತರ ನಿರ್ವಹಿಸಿಕೊಟ್ಟರು.ಈ ಎಲ್ಲಾ ಆಟ ,ಸ್ಪರ್ಧೆಗಳಲ್ಲಿ ಮಹಿಳೆಯರು,ಪುರುಷರೂ ಮಕ್ಕಳಾದಿಯಾಗಿ ಭಾಗವಹಿಸಿ ಆಡಿ ,ನಲಿದು ಸಂಭ್ರಮಿಸಿದರು. ಈ ಮಧ್ಯೆ ಸೋಹಾರ್ ಗುತ್ತುನವರು ಓಬೇಲೆ ಹಾಡು ಹಾಡುತ್ತಾ ನೇಜಿ ನಾಟಿ ಸಾಗುವಳಿ ಮಾಡುವುದರೊಂದಿಗೆ ಕೃಷಿಕನ ಜೀವನ ಕ್ರಮವನ್ನು ತೋರಿಸಿ ಕೊಟ್ಟರೆ, ಕೃಷಿಯೇ ನಮ್ಮ ಜೀವಾಳ ಕೃಷಿಯಲ್ಲೇ ನಮ್ಮ ಬದುಕು ಎಂದು ಸುಗ್ಗಿಯ ಹಿಗ್ಗಿನ ಹಾಡಿಗೆ ಹೆಜ್ಜೆ ಹಾಕಿ ಮನರಂಜಿಸಿದವರು ಸುದೀನ್ ಶೆಟ್ಟಿ ಬಳಗ .

ಕಂಬಳ
ದಿನದ ಆಟದ ಪ್ರಮುಖ ಆಕರ್ಷಣೆಗಳಲ್ಲಿ ಒಂದು ಕರಾವಳಿ ಕರ್ನಾಟಕದ ರೈತಾಪಿ ವರ್ಗದ ವೀರ ಜಾನಪದ ಕ್ರೀಡೆ ಕಂಬಳ, ಊರಿನ ಯಾವುದೇ ಕಂಬಳಕ್ಕೆ ನಾವೇನೂ ಕಮ್ಮಿಯಲ್ಲ ಎನ್ನುವ ಹುರುಪು ಯುವಕರಲ್ಲಿ , ಅದೇ ಪೌರುಷ ,ಅದೇ ಛಾಪು ಆ ಹೆಮ್ಮೆಯಿಂದ ಎಂಟೆದೆಯ ಭಂಟರು,ಕಚ್ಚೆ ಕಟ್ಟಿಕೊಂಡು ಮುಂದಡಿ ಇಡುತ್ತಾ,ಪ್ರೀತಿಯಿಂದ ಮಕ್ಕಳಂತೆ ಸಾಕಿದ ಕಂಬಳದ ಪಳಗಿದ ಕೋಣಗಳನ್ನು ಡೋಲು,ತಾಳ,ಕೊಂಬು ಕೊಳಲು ಕರತಾಡನಗಳೊಂದಿಗೆ ರಾಜಗಾಂಭಿರ್ಯದಿ ಯುವರಾಜನ ಆಗಮನವೆಂಬಂತೆ ಕರೆದುಕೊಂಡು ಗುತ್ತಿನ ಮನೆಯ ಮೊಗಂಟೆಯ ಮುಂದೆ ಬಂದು ಕೋಣದ ಮಾಲಕ ಸಹವರ್ತಿಗಳೊಡಗೂಡಿ ಕೋಣ ಸಮೇತ ಮೊಣಕಾಲೂರಿ ನಮಸ್ಕರಿಸುವುದನ್ನು ನೋಡುವಾಗ ಸಂಸ್ಕೃತಿ ಹಾಗೂ ಕಲೆಯ ಮೇಲೆ ಯುವಕರಿಗಿರುವ ಕಾಳಜಿ ಅಭಿಮಾನ ಕಂಡು ಎದೆತುಂಬಿಬರುವಂತಾಗುತ್ತಿತ್ತು.ಈ ವರ್ಷ ಒಟ್ಟು ನಾಲ್ಕು ಜೊತೆ ಕೋಣಗಳು ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.ಈ ಮೊದಲು ಒಮಾನ್ನಲ್ಲಿ ಕಂಬಳ ನಡೆಸಿದ್ದು ಇಸವಿ 2012ರ ಬೆಳ್ಳಿ ಹಬ್ಬ ಒಮಾನ್ ಬಂಟೋತ್ಸವ ಸಂಧರ್ಭದಲ್ಲಿ. ಅಂದಿಗೆ ಹೋಲಿಸಿದರೆ ಈ ವರ್ಷ ಕೋಣಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ , ಕೋಣದ ಮಾಲಕರ ಪಟ್ಟಿ ಈ ರೀತಿ :1)ಕಾಪು ಮಲ್ಲಾರ್ ಸಹೋದರರ ಒಂದನೇ ನಂಬರ್ ನ ಹಗ್ಗದ ಹಿರಿಯ ಪ್ರತಿನಿಧಿಸಿದವರು ನಾಗೇಶ್ ಶೆಟ್ಟಿ ಕಿನ್ನಿಗೋಳಿ. 2)ಎಸ್ .ಟಿ .ಎಸ್ ಸೋಹಾರ್ ಗುತ್ತು ನೇಗಿಲು ಹಿರಿಯ ಪ್ರತಿನಿದಿಸಿದವರು ಅಶೋಕ್ ಶೆಟ್ಟಿ ಸುರತ್ಕಲ್ 3)ಗೊಬ್ರಾ ಗುತ್ತು ಸುರೇಂದ್ರ ಶೆಟ್ಟಿ ಹಾಗೂ ರೂವಿ ಗುತ್ತು ಜಯರಾಜ್ ಶೆಟ್ಟಿಯವರು ಇನೆ ಹಾಕಿ ಕೊಂಡಿರುವುದು ,ಅಡ್ಡ ಹಲಗೆ . 4) ಓಮನ್ ತುಳುವೆರೆ ಬೂಡು ಒಂದನೇ ನಂಬರ್ ಕನೆ ಹಲಗೆ, ಪ್ರತಿನಿದಿಸಿದವರು ರಮಾನಂದ್ ಶೆಟ್ಟಿ ಬಳಗ. ಕೋಣಗಳಿಗೆ ಯಾವುದೇ ರೀತಿಯ ಹಿಂಸೆಗೆ ಅವಕಾಶ ಕೊಡದೇ ಸಮರ್ಪಕವಾಗಿ ಕಂಬಳವನ್ನು ನಿರ್ವಹಿಸಿ ಕೊಟ್ಟವರು ಮುಲ್ಕಿ ಸೀಮೆಯ ಚಂದ್ರಹಾಸ್ ಶೆಟ್ಟಿ ಕೊಲ್ನಾಡ್(ಸೀಕೆ) ಹಾಗೂ ನಾಗೇಶ್ ಶೆಟ್ಟಿ ಕಿನ್ನಿಗೋಳಿ.

ಮಹಿಳೆಯರು,ಮಕ್ಕಳಿಗೆ ಕಂಬಳ ಹತ್ತಿರದಿಂದ ನೋಡುವ ಅವಕಾಶ ಕಡಿಮೆಯೇ , ಹಾಗೆಯೇ ಕೆಲವು ಗಂಡಸರು ಊರಿನಲ್ಲಿ ಕಂಬಳ ನೋಡಲು ಹೋಗಿದ್ದರೂ ಸಹ ಪರದೆಯಲ್ಲಿ ಅಥವಾ ಫರ್ಲಾಂಗ್ ದೂರದಿಂದ ವೀಕ್ಷಿಸಬಹುದಾಗಿದೆ ,ಆದರೆ ಇಲ್ಲಿ ಕಂಬಳ ಕ್ರೀಡೆಯ ಹಂತ ಹಂತವನ್ನು ಎಳೆ ಎಳೆಯಾಗಿ ಕಣ್ಣಳತೆ ದೂರದಿಂದಲೇ ವೀಕ್ಷಿಸಿ ಆನಂದಿಸಿದ ಪರಿ ಹಾಗೂ ಧನ್ಯತಾ ಭಾವದೊಂದಿಗೆ ಒಬ್ಬರಿಗೊಬ್ಬರು ಪಿಸುಗುಡುತ್ತಿದ್ದುದು ಗಮನಾರ್ಹ ..

ಕೋಣಗಳು ಓಡಿ ಮಂಜೊಟ್ಟೆ ಹತ್ತುತ್ತಲೇ ಹುರಿದುಂಬಿಸುತ್ತಾ ದೋಲು ಕುಣಿತದ ತಾಳಕ್ಕೆ ನರ್ತಿಸಿ ಸಂಭ್ರಮಿಸಿ ಕೋಣದ ಹಿಂಬಾಲಕರನ್ನು ಹಾಗೂ ನೆರೆದಿದ್ದ ಪ್ರೇಕ್ಷಕವರ್ಗವನ್ನು ತಮ್ಮ ತಳಕು ಬಳಕು ನ್ರತ್ಯದಿಂದಲೇ ಮನರಂಜಿಸಿ ವಿಜಯದ ಖುಷಿಯ ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದ ಚಿಯರ್ ಲೀಡರ್ಸ್ ಗಳ(ಐಸಿರಿ ಜೋಕುಲು) ಕೊಡುಗೆ ಅಪಾರ.ಐಸಿರಿ ಮಕ್ಕಳಾದ ದಿಶಾ ಚಂದ್ರಹಾಸ್ ,ಅನ್ವಿತಾ ರಮಾನಂದ್ ,ಸ್ಟಿವಿತಾ ಸುಕುಮಾರ್ ,ಪಾವನ, ಅನುಷಾ ಚಂದ್ರಹಾಸ್ ,ಅನನ್ಯ ರಾಜ್,ಪೂರ್ವಿಕಾ ಪ್ರದೀಪ್ ,ನೈಸಾ ವಿಶು ಹಾಗೂ ವೈದೇಹಿ ಮುರಳಿ ಬಾಕ್ಯಾರಿಗೆ ಒಂದು ರೀತಿಯಲ್ಲಿ ಮೆರುಗನ್ನು ನೀಡಿ ಕಂಬಳಕ್ಕೆ ಜೀವಕಳೆ ತಂದು ಕೊಟ್ಟವರು. ಅದಕ್ಕೆ ಪೂರಕವಾಗಿ ದೋಲು ತೆಂಬರೆ ಕುಣಿತ ಕೊರಗರ ಕೊಳಲು ನಾದಕ್ಕೆ ಪಾಶ್ಚಾತ್ಯ ನ್ರತ್ಯ ಲೇಪಿಸಿ ಸಂಯೋಜನೆ ಮಾಡಿ ತೆರೆಯ ಮರೆಯಲ್ಲಿಯೇ ಈ ಮಕ್ಕಳನ್ನು ಐಸಿರ ಪಡಿಸಿದ ಕೀರ್ತಿ ಶ್ರೀಮತಿ ವಾಣಿಶ್ರೀ ಶೆಟ್ಟಿಯವರದ್ದು.

ಮಧ್ಯಾಹ್ನದ ಸೂರ್ಯ ನೆತ್ತಿಗೇರುತ್ತಲೇ ಪಾಕಶಾಲೆಯ ಕಡೆಯಿಂದ ನಳಪಾಕದ ಘಮಘಮ, ಶಶಿಧರ್ ಶೆಟ್ಟಿ ಮಲ್ಲಾರ್ ರವರ ಸಮರ್ಥ ಮಾರ್ಗದರ್ಶನದಲ್ಲಿ ಅವರ ತಂಡದಿಂದ ಬೆಳಗ್ಗಿನ ಉಪಹಾರದಿಂದ ಹಿಡಿದು ರಾತ್ರಿಯವರೆಗಿನ ಬಂಟ್ಸ್ ಸಾಂಪ್ರದಾಯಿಕ ಸ್ವಾದಿಷ್ಟಕರ ತಿನಿಸುಗಳ ತಯಾರಿಕೆಯ ಕಾರ್ಖಾನೆಯೇ ನಡೆಯುತ್ತಿದ್ದಂತಿತ್ತು , ಮಧ್ಯಾಹ್ನದ ಊಟಕ್ಕೆ ರುಚಿಕರವಾದ ಕೋರಿ ಸುಕ್ಕ ,ಕೋರಿ ರೊಟ್ಟಿ,ಸೇಮೆದಡ್ಡೆ ,ಮೂಡೆ ,ಬಂಗುಡೆ ಫ್ರೈ ,ತೆತ್ತಿ ಫ್ರೈ ,ಬಸಳೆ ಕಜಿಪು ,ಕುಡ್ತ ಸಾರ್,ತೆಕ್ಕರೆ ತಲ್ಲಿ ,ಅಲೆ ,ಉಪ್ಪಾಡ್ ಇತ್ಯಾದಿ ತಾಯ್ನಾಡಿನ ಸ್ವಾದಿಷ್ಟ ತಿನಿಸುಗಳು ಕೆಸರು ಗದ್ದೆ ,ಕಂಬಳ ಹಾಗೂ ವಿವಿಧ ಆಟೋಟಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡು ಬಳಲಿದ್ದ ಜೀವಗಳಿಗೆ ಬಾಳೆಯ ಎಲೆಯ ಭರ್ಜರಿ ಊಟ ಸವಿಯುವುದರೊಂದಿಗೆ,ಮುಂದಿನ ಕಾರ್ಯಕ್ರಮಗಳಿಗೆ ಸಜ್ಜಾಗಲು ಭೀಮಬಲ ತಂದು ಕೊಟ್ಟಂತಾಗಿತ್ತು .

ಭೋಜನ ಕಾರ್ಯ ಮುಕ್ತಾಯದ ಹಂತ ತಲುಪುತ್ತಿದ್ದಂತೆ ಒಂದರೆ ಕ್ಷಣ ವಿರಾಮದ ನಂತರ ಶ್ರೀಮತಿ ಸರೋಜಾ. ಎಸ್ .ಶೆಟ್ಟಿ ,ಮಲ್ಲಿಕಾ .ಎಸ್ .ಶೆಟ್ಟಿ ,ಸುಧೀರ .ಡಿ .ಶೆಟ್ಟಿ ,ವಾಣಿಶ್ರೀ.ಎನ್.ಶೆಟ್ಟಿ ,ಶೈನಾ .ಜಿ .ಶೆಟ್ಟಿ ಹಾಗೂ ಸುರೇಖಾ .ಎಸ್ .ರೈಯವರು ಮಕ್ಕಳ ಛದ್ಮವೇಷ ಸ್ಪರ್ಧೆ ,ಮಹಿಳೆಯರಿಗೆ ಅಬ್ಬಗ ದಾರಗ ಚೆನ್ನೆಮಣೆ ಆಟ,ಮಡಲ್ ಮುಡೆಯುವುದು,ಬಚ್ಚಲ ಮನೆಯ ಹಂಡೆಗೆ ನೀರು ತುಂಬಿಸುವ ಸ್ಪರ್ಧೆ ಇತ್ಯಾದಿ ಮನರಂಜನೆಯ ಆಟಗಳನ್ನು ಸಾಯಂಕಾಲದವರೆಗೂ ಅತ್ಯುತ್ತಮವಾಗಿ ನಿರ್ವಹಿಸಿಕೊಟ್ಟರು , ಇನ್ನೊಂದು ಕಡೆ ಚಂದ್ರಹಾಸ್ ಶೆಟ್ಟಿ ಹಾಗೂ ಅಶೋಕ್ ಶೆಟ್ಟಿಯವರು ಕೋಳಿಗಳನ್ನು ಯಾವುದೇ ಹಿಂಸೆಗೊಳಪಡಿಸದೆ ಕೋಳಿಗಳ ನಿರಾಯುಧ ಹೋರಾಟ ನಡೆಯಿಸಿ ಯಾವುದೇ ಪ್ರಾಣ ಹಾನಿ ಪಡಿಸದೆ ಸೋಲು ಗೆಲುವುಗಳ ಆಧಾರದ ಮೇಲೆ ಖಡಕ್ ತೀರ್ಪು ಕೊಟ್ಟು ಕೋರ್ದಟ್ಟವನ್ನು ಯಶಸ್ವಿ ಗೊಳಿಸಿದರು, ಸುಮಾರು ಇಪ್ಪತ್ತಕ್ಕೂ ಹೆಚ್ಚು ಅಂಕದ ಕೋಳಿಗಳು ಕಟ್ಟಕ್ಕೆ ಬಂದಿದ್ದು , ಇದೊಂದು ಗಲ್ಫ್ ರಾಷ್ಟ್ರದಲ್ಲಿ ಹಿಂದೆಂದೂ ನಡೆಯದ ಅಭೂತಪೂರ್ವ ಪ್ರಯತ್ನವೆಂಬ ಹಿರಿಮೆಗೂ ಪಾತ್ರವಾಯಿತು.ಕೋಳಿಕಟ್ಟದಲ್ಲಿ ಒಮಾನ್ ತುಳುವೆರೆ ಬೂಡು ಹಾಗೂ ಸೋಹಾರ್ ಗುತ್ತು ಕೋಳಿಗಳು ವಿಜಯಶಾಲಿಗಳಾದರೆ,ನಾಗೇಶ್ ಶೆಟ್ಟಿ ಹಾಗೂ ದಿವಾಕರ್ ಶೆಟ್ಟಿಯವರಂತಹ ಕೆಲವು ದಿಗ್ಗಜರು ತಮ್ಮ ಕೋಳಿಗೆ ಸೂಕ್ತ ಪತಿಯಾಗದೆ ನಿರಾಸೆ ಪಡುವಂತಾಯ್ತು ,ಹಾಗೆಯೇ ಇನ್ನುಳಿದ ಕೆಲವರು ಕೋಳಿಯನ್ನು ಕಟ್ಟಿದ್ದ ಹಗ್ಗವನ್ನು ಮಾತ್ರ ಮನೆಗೆ ಕೊಂಡುಹೋಗುವುದರೊಂದಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯ್ತು . ಕೋಳಿ ಕಟ್ಟದ ಪಕ್ಕದ ಬೊಟ್ಟು ಗದ್ದೆಯಲ್ಲಿ ನಾಗೇಶ್ ಶೆಟ್ಟಿಯವರು ಶಕ್ತಿ ಕಲ್ಲು ಎತ್ತುವ ಸ್ಪರ್ಧೆಯನ್ನು ಏರ್ಪಡಿಸಿದ್ದು ಇನ್ನೊಂದು ಪ್ರಮುಖ ಆಕರ್ಷಣೆ ,ಕಂಬಳದಲ್ಲಿ ಜಯಶಾಲಿಗಳಾಗಿ ಬೀಗುತ್ತಿದ್ದ ಎಂಟೆದೆ ಭಂಟರು ಕಲ್ಲನ್ನು ಎತ್ತಿ ಕೆಸರು ಮೆತ್ತಿದ ತಮ್ಮ ತೊಡೆ ,ಎದೆ ಭುಜಗಳೊಂದಿಗೆ ಹೊರಳಾಡಿಸಿ ಶಕ್ತಿ ಪ್ರದರ್ಶಿದರೆ ,ಈ ಕಡೆ ಕೋಳಿ ಕಳಕೊಂಡವರು ಕಲ್ಲನ್ನು ಎತ್ತಿ ಐದೈದು ನಿಮಿಷ ಭುಜದ ಮೇಲಿಟ್ಟೆ ತಮ್ಮ ತಾಕತ್ತು ತೋರಿಸಿ ಎಲ್ಲರನ್ನು ಮನರಂಜಿಸಿದರು.

ಹಾಗೆಯೇ ಅತ್ತ ನೇಸರನು ವಿರಮಿಸಲು ಅಣಿಯಾಗುತ್ತಿದ್ದಂತೆ ಇತ್ತ ಸರೋಜಾ ಶೆಟ್ಟಿ ಹಾಗೂ ಪಾವನಾ ,ತುಳಸಿ ಹಾಗೂ ಗುತ್ತಿನ ಮನೆಯ ಮೊಗಂಟೆಯ ಸುತ್ತ ನೂರಾರು ತಿಪಿಲಗಳಲ್ಲಿ ದೀಪ ಹಚ್ಚಿ ಹೊತ್ತು ಕಂತಿದ್ದನ್ನು ಎಲ್ಲರಿಗೂ ಜ್ಞಾಪಿಸಿ ಕೊಟ್ಟರು, ಆನಂತರ ಕಲಾತ್ಮಕವಾಗಿ ಶೃಂಗರಿಸಲ್ಪಟ್ಟ ತುಳಸಿ ಬೃಂದಾವನಕ್ಕೆ ತುಳಸಿ ಪೂಜೆ ,ರಮಾನಂದ್ ಶೆಟ್ಟಿ ಬಳಗದ ನಲಿಕೆ ಭಜನೆಯೊಂದಿಗೆ ನಡೆಯಿತು.ಅದೇ ಪ್ರಕಾರ ಬಾಲ್ಯದ ಸವಿನೆನಪುಗಳು ಹಾಗೂ ಕೃಷಿಕ ಕುಟುಂಬದ ಗತವೈಭವದ ಪ್ರತೀಕವಾಗಿ ಸಾಂಕೇತಿಕ ಬಲೀಂದ್ರ ಪೂಜೆಯನ್ನು ಮಾಡಿ ಕಂಬಳದ ಬಾಕ್ಯಾರಿಗೆ ನಿನೆ ದೊಂದಿ ದೀಪ ಇಟ್ಟು ಬಲಿ ಚಕ್ರವರ್ತಿಯನ್ನು ಜೋರಾಗಿ ಕೂಗಿ ಕರೆಯುವ ಪದ್ಧತಿಯನ್ನೂ ನೆರವೇರಿಸಿ ದೀಪಾವಳಿ ನೈಜ ಸನ್ನಿವೇಶವನ್ನು ಸೃಷ್ಟಿಸಿ ಹಬ್ಬವನ್ನು ಆಚರಿಸಿಕೊಳ್ಳಲಾಯ್ತು. ಇದರ ಮಧ್ಯೆ ಸುದಿನ್ ಶೆಟ್ಟಿ ಬಳಗವು ಕಂಗೀಲು ನೃತ್ಯ ಮಾಡುವ ಮೂಲಕ ಎಲ್ಲರನ್ನೂ ಉತ್ತೇಜಿಸಿ ಮನರಂಜಿಸಿದರು.

ಅಂತಿಮವಾಗಿ,ನಾಗೇಶ್ ಶೆಟ್ಟಿ ಹಾಗೂ ಬಳಗ, ತಾಯ್ನಾಡಿನಲ್ಲಿ ನಮ್ಮ ದೈವ ನಂಬಿಕೆ ಹಾಗೂ ಆಚರಣೆಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತೋರಿಸಿಕೊಟ್ಟು ಪ್ರಭುಧ್ಧರನ್ನಾಗಿಸುವ ದೃಷ್ಟಿಯಿಂದ ದೈವಕ್ಕೆ ಮಧು ಹೇಳುವುದು ಹಾಗೂ ಭೂತ ಕೋಲ ಕಾರ್ಯಕ್ರಮ ನಡೆಯಿತು. ದೈವದ ಕಟ್ಟ್ ಕಟ್ಟಲೆ ಹಾಗೂ ಭೂತಕೋಲದ ಎಲ್ಲಾ ಹಂದರಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸಿ, ನೆರವೇರಿಸಿ “ಯಾಕೇ ಈ ನಂಬಿಕೇ ” ಎನ್ನುವುದನ್ನು ಯುವಪೀಳಿಗೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಯ್ತು.. ಇದೊಂದು ಅಭೂತ ಪೂರ್ವ ಪ್ರಯೋಗ ಹಾಗೂ ನೈಜ ಪ್ರದರ್ಶನವಾಗಿ ಮೂಡಿ ಬಂದು ನೆರೆದಿದ್ದವರು ಮೂಕ ವಿಸ್ಮಿತರಾಗಿ ಮಂತ್ರಮಗ್ನರಾದಂತೆ ತಮ್ಮ ಇರುವಿಕೆಯನ್ನೇ ಮರೆತುಬಿಟ್ಟಿದ್ದರು. ಒಂದು ಗಂಟೆಯ ಕಾಲ ನಾವು ನಮ್ಮ ಕುಟುಂಬ ಸಮೇತ ಊರಿನಲ್ಲಿ ಹಿರಿಯರೊಂದಿಗೆ ನಮ್ಮ ಮನೆ ದೈವಗಳ ಸೇವೆ ಮಾಡಿ ಬಂದಂತಾಯ್ತು ಎನ್ನುವ ಅನೇಕರ ಅಭಿಪ್ರಾಯಗಳು ಒಂದೇ ರೀತಿದ್ದಾಗಿದ್ದವು.

ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೈವದ ಭರವಸೆಯ ಅಭಯಗಳನ್ನು ಪಡೆದುಕೊಂಡು ಪ್ರಸನ್ನರಾಗಿ ಎಲ್ಲರೂ ಬಂದು ಕುಳಿತದ್ದು ಭೋಜನ ಶಾಲೆಯ ಬೆಂಚುಗಳಲ್ಲಿ ಯಾಕೆ.. ಅಂದ್ರೆ ? ರಾತ್ರಿಯ ಬಿಸಿ ಬಿಸಿ ಉರ್ಪೆಲರಿತ ಗಂಜಿ,ಮುಡಿಕುಕ್ಕುದುಪ್ಪಾಡ್,ಬಲ್ಯಾರ್ ಚಟ್ನಿ,ಮಂಜೊಲ್ದಿರೆತ ಗಟ್ಟಿ ,ಪುಂಡಿ,ಪೊಡಿಯೆಟ್ಟಿ ಭಜ್ಜಿ ಎಲ್ಲರ ಹೊಟ್ಟೆಯನ್ನೂ ಸಂತುಷ್ಟಪಡಿಸಲು ಕಾಯುತ್ತಿತ್ತು .

ಆನಂತರ ಕಲ್ಲಾಡಿ ಶಂಕರ್ ಶೆಟ್ಟಿಯವರು ಸಭಾಕಾರ್ಯಕ್ರಮ ಪ್ರಾರಂಭಿಸಿ ಅತಿಥಿಗಳನ್ನು ಸ್ವಾಗತಿಸಿದರೆ ಕಾರ್ಯಕ್ರಮಕ್ಕೆ ಮುಖ್ಯ ಗೌರವ ಅತಿಥಿಯಾಗಿ ಪೆರ್ಲ ಸುಧೀರ್ ಶೆಟ್ಟಿ ಸುಧೀರ್ಘವಾಗಿ ಮಾತನಾಡಿ ಸಂಸ್ಕೃತಿ ಹಾಗೂ ನಮ್ಮ ಜಾನಪದ ಕ್ರೀಡೆಗಳನ್ನು ಉಳಿಸಿ ಬೆಳೆಸಲು ಒಮಾನ್ ಬಂಟ್ಸ್ ನಡೆಸುತ್ತಿರುವ ಶ್ರಮ ಶ್ಲಾಘನೀಯ ಅಲ್ಲದೇ ಬಂಟ್ಸ್ ಸದಸ್ಯರ ಈ ಪರಿಯ ಉತ್ತೇಜನ ಹಾಗೂ ಲವಲವಿಕೆ ಭಾರತದಿಂದ ಹೊರಗೆ ಬೇರೆ ಯಾವ ದೇಶದಲ್ಲೂ ನಾನು ನೋಡಿಲ್ಲಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು .

ಶಶಿಧರ್ ಶೆಟ್ಟಿ ಮಲ್ಲಾರ್ ಮಾತನಾಡಿ ಅತಿಥಿಗಳನ್ನು, ದಾನಿಗಳನ್ನು,ದಿನದುದ್ದಕ್ಕೂ ಸ್ವಯಂಸೇವಕರಾಗಿ ತಮ್ಮನ್ನು ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗಾಗಿ ದುಡಿದವರಿಗೂ ಹಾಗೂ ಸರ್ವ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು .

ಒಟ್ಟಿಗೆ ಹೇಳುವುದಾದರೆ, ಒಮಾನ್ ಬಂಟ್ಸ್ ಮಹೋತ್ಸವ ಸಮಿತಿಯ ಸದಸ್ಯ /ಸಂಚಾಲಕ ಶಶಿಧರ್ ಶೆಟ್ಟಿ ಮಲ್ಲಾರ್ ರವರ ದಕ್ಷ ಮುಂದಾಳತ್ವದಲ್ಲಿ ಸದಸ್ಯರಾದ ಸರೋಜಾ ಶೆಟ್ಟಿ ಮತ್ತು ಶಶಿಧರ್ ಶೆಟ್ಟಿ ಮಲ್ಲಾರ್,ಮಲ್ಲಿಕಾ ಶೆಟ್ಟಿ ಹಾಗೂ ಶಂಕರ್ ಶೆಟ್ಟಿ ಕಲ್ಲಾಡಿ,ಸುಧೀರ ಶೆಟ್ಟಿ ಹಾಗೂ ದಿವಾಕರ್ .ಕೆ ಶೆಟ್ಟಿ ಮಲ್ಲಾರ್, ವಾಣಿಶ್ರೀ ಎನ್ ಶೆಟ್ಟಿ ಮತ್ತು ನಾಗೇಶ್ ಶೆಟ್ಟಿ ಕಿನ್ನಿಗೋಳಿ ,ಶೈನಾ.ಶೆಟ್ಟಿ ಹಾಗೂ ಗಣೇಶ್. ವಿ ಶೆಟ್ಟಿ, ಸುರೇಖಾ ರೈ ಮತ್ತು ಸತ್ಯಪ್ರಸಾದ್ ರೈಯವರು ಎದೆಗುಂದದೇ ಕಾರ್ಯಕ್ರಮದುದ್ದಕ್ಕೂ ಕೂಲಂಕುಷವಾಗಿ ನಿರ್ವಹಿಸುತ್ತಾ ತಮ್ಮನ್ನು ಏಕನಿಷ್ಠೆಯಿಂದ ತೊಡಗಿಸಿಕೊಂಡು ಕಾಯ ವಾಚಾ ಮನಸಾ ಶ್ರಮಿಸಿರುವುದು ಈ ಮಟ್ಟದ ಯಶಸ್ಸಿಗೆ ಕಾರಣ ಎನ್ನಲಾಗಿದೆ.

Comments are closed.