ದುಬೈ: ನಟ ರಜನಿಕಾಂತ್ ಅಭಿನಯದ ಬರೋಬ್ಬರಿ 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ‘2.0‘ ಚಿತ್ರದ ಆಡಿಯೋ ಬಿಡುಗಡೆಯ ಅದ್ದೂರಿ ಕಾರ್ಯಕ್ರಮ ಶುಕ್ರವಾರ ದುಬೈಯ ಬೃಹತ್ ವೇದಿಕೆಯಲ್ಲಿ ನಡೆಯಿತು.
ದುಬೈಯ ಬುರ್ಜ್ ಅಲ್ ಅರಬ್ ಹೋಟೆಲಿನಲ್ಲಿ ಹಾಕಲಾದ ಅದ್ದೂರಿ ವೇದಿಕೆಯಲ್ಲಿ ಬರೋಬ್ಬರಿ 12 ಕೋಟಿ ರೂ. ವೆಚ್ಚದಲ್ಲಿ ಆಡಿಯೋ ಸಿಡಿ ಬಿಡುಗಡೆಯನ್ನು ಮಾಡಲಾಯಿತು.
ಈ ಅದ್ದೂರಿ ಕಾರ್ಯಕ್ರಮದಲ್ಲಿ ನಟರಾದ ರಜನಿಕಾಂತ್, ಅಕ್ಷಯ್ ಕುಮಾರ್, ಧನುಷ್, ಬಹುಭಾಷಾ ನಟಿ ಆಮಿ ಜಾಕ್ಸನ್, ಚಿತ್ರದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ನಿರ್ದೇಶಕ ಶಂಕರ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಭಾರತೀಯ ಚಿತ್ರ ರಂಗದಲ್ಲಿ ಈ ವರೆಗೆ ಈ ರೀತಿಯ ಅದ್ದೂರಿ ವೇದಿಕೆಯಲ್ಲಿ ಆಡಿಯೋ ಬಿಡುಗಡೆಯಾಗಿಲ್ಲ. ಭಾರತ ಸೇರಿದಂತೆ ಜಗತ್ತಿನ ವಿವಿಧ ದೇಶಗಳಲ್ಲಿರುವ ರಜನಿ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2010ರಲ್ಲಿ ‘ಎಂದಿರನ್‘ ಚಿತ್ರ ತೆರೆಕಂಡಿತ್ತು. ಕಲೆಕ್ಷನ್ ವಿಚಾರದಲ್ಲೂ ಹೈಪ್ ಕ್ರಿಯೇಟ್ ಮಾಡಿತ್ತು. ಆ ಚಿತ್ರಕ್ಕೂ 2.0 ಚಿತ್ರಕ್ಕೂ ಯಾವುದೆ ಸಂಬಂಧವಿಲ್ಲವಂತೆ. ನೋಡಲು ಎಂದಿರನ್ ರೀತಿ ಕಾಣಿಸುವುದರಿಂದ ಸೀಕ್ವೆಲ್ ಎಂದು ಎಲ್ಲೆಡೆ ಸುದ್ದಿಹರಡಿದೆಯಂತೆ. ‘ಇದೊಂದು ಬೇರೆ ರೀತಿಯ ಸಿನಿಮಾ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಹ ಚಿತ್ರವಿದು. ಮಾಮೂಲಿ ಆಕ್ಷನ್ ಸಿನಿಮಾ ಇದಲ್ಲ‘ ಎಂದಿದ್ದಾರೆ ನಿರ್ದೇಶಕ ಶಂಕರ್.