ಗಲ್ಫ್

ದುಬೈಯಲ್ಲಿ ಕಂದಾವರ ಸತೀಶ್ ಶೆಟ್ಟಿಗೆ ಇನೊಕ್ ‘ಎನರ್ಜಿ ಅವಾರ್ಡ್’ ಪ್ರದಾನ

Pinterest LinkedIn Tumblr

ದುಬೈ: ದುಬೈಯ ಇನೊಕ್ (ENOC -ಎಮಿರೇಟ್ಸ್ ನೇಷನಲ್ ಆಯಿಲ್ ಕಂಪೆನಿ) ಕೊಡಮಾಡುವ “ಎನರ್ಜಿ ಅವಾರ್ಡ್’ ನ್ನು ದುಬೈಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಕುಂದಾಪುರ ಮೂಲದ ಕಂದಾವರ ಸತೀಶ್ ಶೆಟ್ಟಿಯವರಿಗೆ ನೀಡಲಾಗಿದೆ.

ದುಬೈಯ ಹಯಾತ್ ರೆಜೆನ್ಸಿಯಲ್ಲಿ ಅಕ್ಟೊಬರ್ 17 ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ಗಣ್ಯರಿಂದ ಈ ಪ್ರಶಸ್ತಿಯನ್ನು ಕಂದಾವರ ಸತೀಶ್ ಶೆಟ್ಟಿಯವರು ಪಡೆದುಕೊಂಡರು.

ದುಬೈ ಸರ್ಕಾರದ ಇನೊಕ್ ನಲ್ಲಿ 2011 ರಿಂದ ಹಿರಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಸತೀಶ್ ಶೆಟ್ಟಿ, ದುಬೈ ಕ್ಯಾಂಪಸ್ನ ಹೆರಿಯಟ್ ವ್ಯಾಟ್ (Heriot Watt University) ವಿಶ್ವವಿದ್ಯಾನಿಲಯದಲ್ಲಿ ಶಕ್ತಿ ವಿಭಾಗದಲ್ಲಿ ವಿಜ್ಞಾನದ ಸ್ನಾತಕೋತ್ತರ (ಎಂಎಸ್ಸಿ) ಪದವಿ ಕೂಡ ಪಡೆದಿದ್ದಾರೆ.

ಕಂದಾವರ ಸತೀಶ ಶೆಟ್ಟಿಯವರು ತೈಲ ಮತ್ತು ಅನಿಲ, ವಾಣಿಜ್ಯ ಆವರಣಗಳು ಮತ್ತು ಗಗನಚುಂಬಿ ಹಾಗೂ ಕೈಗಾರಿಕಾ ಸೌಲಭ್ಯಗಳ 40 ಅಂತಸ್ತುಗಳ ವರೆಗಿನ ಮಿಶ್ರ-ಬಳಕೆಯ ಕಟ್ಟಡಗಳಲ್ಲಿನ ತಾಪನ, ಪವನ ಮತ್ತು ವಾತಾನುಕೂಲ (ಹೀಟಿಂಗ್, ವೆಂಟಿಲೇಶನ್ ಮತ್ತು ಏರ್ ಕಂಡೀಷನಿಂಗ್ – HVAC) ತಜ್ಞರಾಗಿದ್ದಾರೆ. ಮೆಕ್ಯಾನಿಕಲ್ ವಿಷಯದಲ್ಲಿ 15 ವರ್ಷಗಳಿಗಿಂತಲೂ ಹೆಚ್ಚಿನ ಅನುಭವದೊಂದಿಗೆ, ಸತೀಶ ಅವರು ಪರಿಕಲ್ಪನೆಯ ಅಭಿವೃದ್ಧಿ, ಫೀಡ್ (FEED – Front End Engineering Design), ಸವಿವರ ವಿನ್ಯಾಸ, ಟೆಂಡರ್ ಪ್ಯಾಕೇಜ್ಗಳು, ಎಂಜಿನಿಯರಿಂಗ್ ವೆಚ್ಚದ ಅಂದಾಜುಗಳು, ಬಿಡ್ಡಿಂಗ್, ಪ್ರಾಜೆಕ್ಟ್ ವೆಚ್ಚ ನಿಯಂತ್ರಣ, ಟೆಂಡರ್ನ ತಾಂತ್ರಿಕ ಮೌಲ್ಯಮಾಪನಗಳು ಮತ್ತು ಶಿಫಾರಸುಗಳು, ಯೋಜನಾ ನಿರ್ವಹಣೆ ಹಾಗೂ ಯೋಜನಾ ಲೆಕ್ಕಪತ್ರ ನಿರ್ವಹಣೆ ಸೇರಿದಂತೆ ವೈವಿಧ್ಯಮಯ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ಇವರು ಕುಂದಾಪುರದ ಬಳ್ಲ್ಕೂರು ಗ್ರಾಮದ ಬಂಟ ನಾಡವ ಕುಟುಂಬವಾಗಿರುವ “ಕಂದಾವರ ಕೆಳಮನೆ” ಯವರಾಗಿದ್ದು, ತಂದೆ ಮೊಳಹಳ್ಳಿ ಗೋಪಾಲಕೃಷ್ಣ ಶೆಟ್ಟಿ ಹಾಗು ತಾಯಿ ಕಂದಾವರ ದೇವಕಿ ಶೆಟ್ಟಿಯವರ ನಾಲ್ಕನೇ ಮಗನಾಗಿರುತ್ತಾರೆ. ಕುಂದಾಪುರದ ಯುವ ಬಂಟರ ಸಂಘದ ಆರಂಭಿಕ ಮಹಾಪೊಸಕರಾಗಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿದ್ದಾರೆ.

Comments are closed.