ಗಲ್ಫ್

ಭಾರತದ ಗಣರಾಜ್ಯೋತ್ಸವದ ಹಿನ್ನೆಲೆ; ಧ್ವಜದ ತ್ರಿವರ್ಣ ಬಣ್ಣಗಳಿಂದ ಕಂಗೊಳಿಸುತ್ತಿದೆ ದುಬೈಯ ಬುರ್ಜ್ ಖಲೀಫಾ !

Pinterest LinkedIn Tumblr

ದುಬೈ,ಜ.25: ಭಾರತದ 68ನೇ ಗಣರಾಜ್ಯೋತ್ಸವದ ಅಂಗವಾಗಿ ವಿಶ್ವದಲ್ಲಿಯೇ ಅತ್ಯಂತ ಎತ್ತರದ ಕಟ್ಟಡವಾಗಿರುವ ಇಲ್ಲಿಯ ಬುರ್ಜ್ ಖಲೀಫಾ ಬುಧವಾರ ರಾತ್ರಿಯಿಂದಲೇ ಭಾರತೀಯ ರಾಷ್ಟ್ರ ಧ್ವಜದ ತ್ರಿವರ್ಣ ಬಣ್ಣಗಳಾದ ಕೇಸರಿ,ಬಿಳಿ ಮತ್ತು ಹಸಿರು ಬಣ್ಣಗಳ ವಿದ್ಯುದ್ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿದೆ.

68ನೇ ಗಣರಾಜ್ಯೋತ್ಸವಕ್ಕೆ ಗೌರವ ಸಲ್ಲಿಸುದಕ್ಕಾಗಿ ಇದನ್ನು ಮಾಡಲಾಗಿದ್ದು, ಜೊತೆಗೆ ದುಬೈ ಕಾರಂಜಿ ಪ್ರದರ್ಶನವನ್ನು ಬುಧವಾರ ಮತ್ತು ಗುರುವಾರ ಆಯೋಜಿಸಲಾಗಿದೆ.

ಎಲ್ ಇಡಿ ದೀಪಗಳಿಂದ ಭಾರತದ ರಾಷ್ಟ್ರಧ್ವಜವನ್ನು ಬೆಳಗಿಸುವ ಮೂಲಕ ನಾವು 68ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ಬುರ್ಜ್ ಖಲೀಫಾ ಆಂಗ್ಲ ಮತ್ತು ಅರಬಿಕ್ ಎರಡೂ ಭಾಷೆಗಳಲ್ಲಿ ಟ್ವೀಟ್ ಮಾಡಿದೆ. ದೆಹಲಿಯಲ್ಲಿ ನಾಳೆ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ನಲ್ಲಿ ಅಬು ಧಬಿ ಯುವರಾಜ ಶೇಖ್ ಮೊಹಮ್ಮದ್ ಬಿನ್ ಝಾಯೇದ್ ಅಲ್ ನಹ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ.

823 ಮೀಟರ್ ಎತ್ತರಕ್ಕೆ ತಲೆಯೆತ್ತಿ ನಿಂತಿರುವ ಬುರ್ಜ್ ಖಲೀಫಾಕ್ಕೆ ಅಬುಧಾಬಿಯ ಆಡಳಿತಗಾರ ಹಾಗೂ ಸಂಯುಕ್ತ ಅರಬ್ ಗಣರಾಜ್ಯಗಳ(ಯುಎಇ) ಅಧ್ಯಕ್ಷ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರ ಗೌರವಾರ್ಥ ಅವರ ಹೆಸರನ್ನಿಡ ಲಾಗಿದೆ. ಯುಎಇಯ ಏಳು ಗಣರಾಜ್ಯಗಳಲ್ಲಿ ದುಬೈ ಒಂದಾಗಿದೆ.

ಅಬುಧಾಬಿಯ ಯುವರಾಜ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಗುರುವಾರ ದಿಲ್ಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

Comments are closed.