ಗಲ್ಫ್

ಇವು ಚಾಲಕರಹಿತ ಬಸ್ಸುಗಳು!

Pinterest LinkedIn Tumblr


ಅರರೇ ಆ ಬಸ್ಸು ತನಗೆ ತಾನೇ ಚಲಿಸುತ್ತಿದೆ. ಚಾಲಕ ಇನ್ನೂ ಹತ್ತೇ ಇಲ್ಲ, ಬಸ್ ಚಲಿಸಲಾರಂಭಿಸಿದೆ. ಅಯ್ಯೋ ಇನ್ನು ದೇವರೇ ಗತಿ.

ಸ್ವಲ್ಪ ಕೂಗಾಡಬೇಡಿ, ಸಮಾಧಾನಗೊಳ್ಳಿ. ಆ ಬಸ್ಸಿನಲ್ಲಿ ಚಾಲಕ ಇಲ್ಲ ನಿಜ. ಅದು ತನಗೆ ತಾನೇ ಸೂಚನೆ ನೀಡಿ ಚಾಲಕನ ಸಹಾಯವಿಲ್ಲದೆ ಚಲಿಸುವ ಬಸ್. ದುಬೈ ನಗರದಲ್ಲಿ ವಿದ್ಯುತ್ ಸಹಾಯದಿಂದ ಚಲಿಸುವ ಬಸ್ಸನ್ನು ಕಂಡು ಕೆಲವರು ಗಾಬರಿಗೊಂಡಿದ್ದು, ಇನ್ನೂ ಕೆಲವರು ಹೆದರಿದ್ದೂ ಉಂಟು. ಆದರೆ ವಾಸ್ತವ ತಿಳಿದ ಮೇಲೆ ನಿಟ್ಟುಸಿರುಬಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ ಮತ್ತು ಬಿ.ಎಂ.ಟಿ.ಸಿ. ಬಸ್ಸುಗಳು ಚಾಲಕ ಇಲ್ಲದೆ ಓಡಿದರೆ ಗ್ಯಾರಂಟಿ ಅಪಾಯ ಕಟ್ಟಿಟ್ಟ ಬುತ್ತಿ. ಆದರೆ ದುಬೈ ನಗರದಲ್ಲಿ ಚಾಲಕನಿಲ್ಲದ ಬಸ್ಸುಗಳು ಪ್ರಾಯೋಗಿಕವಾಗಿ ಓಡಾಡಲಾರಂಭಿಸಿವೆ.

ಫ್ರಾನ್ಸ್ ಮೂಲದ ಈಸಿ ಮೇಲ್ ಹಾಗೂ ದುಬೈ ಮೂಲದ ಒಮಿನಿಕ್ಸ್ ಕಂಪನಿಗಳು ಜಂಟಿಯಾಗಿ ಚಾಲಕನಿಲ್ಲದ ಬಸ್ಸನ್ನು ಸಂಶೋಧಿಸಿ, ಪ್ರಯಾಣಿಕರಲ್ಲಿ ಬೆರಗು ಮೂಡಿಸಿವೆ.

ಹತ್ತು ಆಸನ ಸಾಮರ್ಥ್ಯದ ವಿದ್ಯುತ್ ಆಧಾರಿತ ಬಸ್ ದುಬೈನ ರಸ್ತೆಗಳಲ್ಲಿ ಹೊಸ ಸಂಚಲನ ಮೂಡಿಸಿವೆ. ವಿದ್ಯುತ್‌ನಿಂದ ಸಂಚರಿಸುವ ಈ ಚಾಲಕರಹಿತ ಮಿನಿಬಸ್ ಗಂಟೆಗೆ ೪೦ ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ದುಬೈ ನಗರದ ಪ್ರಮುಖ ತಾಣಗಳಾದ ಬುರ್ಜ್ ಖಲೀಫಾ, ದುಬೈ ಮಾಲ್, ದುಬೈ ಒಪೇರಾ, ಪ್ರದೇಶಗಳನ್ನು ಸುತ್ತಾಡುವಂತೆ ಬಸ್ಸಿನಲ್ಲಿ ಕಂಪ್ಯೂಟರ್ ಪ್ರೋಗ್ರಾಂಮಿಂಗ್ ಮಾಡಲಾಗಿದೆ ಎಂದು ಎಮಿರೇಟ್ ರಸ್ತೆ ಸಾರಿಗೆ ಸಂಸ್ಥೆ ಹೆಮ್ಮೆಯಿಂದ ಹೇಳಿಕೊಂಡಿದೆ.

ರಸ್ತೆಯ ಪರಿಸ್ಥಿತಿಗೆ ತಕ್ಕಂತೆ ಈ ಚಾಲಕರಹಿತ ಬಸ್ ವೇಗವನ್ನು ಪಡೆದುಕೊಳ್ಳುತ್ತದೆ. ಮತ್ತೊಮ್ಮೆ ನಿಧಾನಗತಿಯಲ್ಲಿ ಸಾಗುತ್ತದೆ. ಬಸ್ಸಿಗೆ ಯಾರಾದರೂ ಅಡ್ಡಬಂದಲ್ಲಿ ಸೂಕ್ಷ್ಮ ಸಂದೇಶಗಳಿಂದ ಬಸ್ ಮುಂದಾಗುವ ಅಪಾಯವನ್ನು ನಿಯಂತ್ರಿಸುತ್ತದೆ. ಸದ್ಯಕ್ಕೆ ದುಬೈ ನಗರದಲ್ಲಿನ ರಸ್ತೆಗಳಲ್ಲಿ ಪ್ರೋಗ್ರಾಂ ಆಧಾರಿತ ಚಾಲಕನಿಲ್ಲದ ಬಸ್‌ಗಳನ್ನು ಪ್ರಾಯೋಗಿಕವಾಗಿ ಬಿಡಲಾಗಿದೆ.

ಇದು ಯಶಸ್ಸಾದಲ್ಲಿ ಮುಂದಿನ ಕೆಲವೇ ವರ್ಷಗಳಲ್ಲಿ ನೂರಾರು ಮಿನಿ ಬಸ್‌ಗಳು ರಸ್ತೆ ತುಂಬೆಲ್ಲಾ ಓಡಾಡುವುದರಲ್ಲಿ ಅನುಮಾನವೇ ಇಲ್ಲ.

Comments are closed.