ಕ್ರೀಡೆ

ವಿರಾಟ್ ಕೊಹ್ಲಿ ಟೀo ಇಂಡಿಯಾ ನಾಯಕ ಆಯ್ಕೆ ಸಾಧ್ಯತೆ

Pinterest LinkedIn Tumblr


ನವದೆಹಲಿ, ಜ 5- ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕ ಮಹೇಂದ್ರಸಿಂಗ್ ಧೋನಿ ಏಕದಿನ ಹಾಗೂ ಟಿ-20 ಕ್ರಿಕೆಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಅವರ ಸ್ಥಾನಕ್ಕೆ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮುಂದಿನ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.
ಟೀo ಇಂಡಿಯಾದಲ್ಲಿ ಇನ್ನು ಮುಂದೆ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮುಂದುವರಿಯುವುದಾಗಿ ಧೋನಿ ಅವರು ತಿಳಿಸಿದ್ದು, ತಂಡವನ್ನು ಸಮರ್ಥವಾಗಿ ನಿಭಾಯಿಸಲು ಕೊಹ್ಲಿ ಅವರು ಸರಿಯಾದ ವ್ಯಕ್ತಿ ಎಂದು ಹೇಳಲಾಗುತ್ತಿದೆ. 2014ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೆಸ್ಟ್ ನಾಯಕತ್ವಕ್ಕೆ ವಿದಾಯ ಹೇಳಿದ್ದ ಧೋನಿ, ಟೆಸ್ಟ್ ಕ್ರಿಕೆಟ್‍ಗೂ ಗುಡ್ ಬೈ ಹೇಳಿದ್ದರು. ಅವರಿಂದ ತೆರವಾಗಿದ್ದ ಟೆಸ್ಟ್ ತಂಡದ ನಾಯಕತ್ವವನ್ನು ವಿರಾಟ್ ಕೊಹ್ಲಿ ಸಮರ್ಥವಾಗಿ ಮುನ್ನಡೆಸುತ್ತಿದ್ದು, ಏಕದಿನ ಹಾಗೂ ಟಿ-20 ನಾಯಕತ್ವದ ಜವಾಬ್ದಾರಿಯೂ ಸಹ ಕೊಹ್ಲಿ ಹೆಗಲಿಗೆ ಬೀಳುವ ಸಾಧ್ಯತೆಯಿದೆ.
ಈಗಾಗಲೇ ಟೆಸ್ಟ್ ನಾಯಕನಾಗಿ ಗಮನಾರ್ಹ ಆಟ ಪ್ರದರ್ಶಿಸುತ್ತಿರುವ ಕೊಹ್ಲಿ ಟೀಂ ಇಂಡಿಯಾದ ನಾಯಕನಾಗುವ ಎಲ್ಲಾ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಕ್ರಿಕೆಟ್ ದಿಗ್ಗಜರು ಹೇಳುತ್ತಿದ್ದರು. ಅಲ್ಲದೇ ಐಸಿಸಿ ಹಾಗೂ ಬಿಸಿಸಿಐನಲ್ಲಿ ಅಗ್ರ ಸ್ಥಾನ ಉಳಿಸಿಕೊಂಡ ಕೊಹ್ಲಿ ಅವರನ್ನು ಇತ್ತೀಚೆಗೆ ಪ್ರಕಟವಾಗಿದ್ದ ಕ್ರಿಕೆಟ್ ಆಸ್ಟ್ರೇಲಿಯಾ ವರ್ಷದ ಏಕದಿನ ತಂಡಕ್ಕೆ ತನ್ನದೇ ದೇಶದ ಸ್ಟೀವ್ ಸ್ಮಿತ್ ರನ್ನು ಕಡೆಗಣಿಸಿ ನಾಯಕನಾಗಿ ಮಾಡಿತ್ತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮ್ಯಾನ್ ಆಗಿರುವ ಕೊಹ್ಲಿ ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ 2008ರಲ್ಲಿ ಮಲೇಶಿಯಾದಲ್ಲಿ ನಡೆದ 19 ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದು ಗಮನ ಸೆಳೆದಿದ್ದರು. ಹಾಗೂ ಐಪಿಎಲ್, ರಣಜಿ ಪಂದ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ಧೋನಿ ಸಾಧನೆ
ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ತಂಡ 2011ರ ಏಕದಿನ ವಿಶ್ವಕಪ್, 2007ರ ಟಿ-20 ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ನಂತರ 2013ರಲ್ಲಿ ಐಸಿಸಿ ಚಾಂಪಿಯನ್ ಟ್ರೋಫಿ ಗೆದ್ದಿದೆ. ಇವರ ನಾಯಕತ್ವದಲ್ಲಿ ಟೀಂ ಇಂಡಿಯಾ ನಂಬರ್ 1ಪಟ್ಟ ಅಲಂಕರಿಸಿತ್ತು. ಧೋನಿ ಕಳೆದ ವರ್ಷ ಭಾರತದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತವನ್ನು ಕೊನೆಯ ಬಾರಿ ನಾಯಕನಾಗಿ ಮುನ್ನಡೆಸಿದ್ದರು. ಆ ಸರಣಿಯಲ್ಲಿ ಭಾರತ 3-2 ಅಂತರದ ಗೆಲುವು ಸಾಧಿಸಿತ್ತು.
2007 ರಿಂದ 2016ರ ಅವಧಿಯಲ್ಲಿ ಧೋನಿ ನಾಯಕರಾಗಿ ಆಡಿದ 191 ಪಂದ್ಯಗಳಲ್ಲಿ ಭಾರತ ತಂಡವು 104 ಪಂದ್ಯಗಳಲ್ಲಿ ಜಯಿಸಿದ್ದು, 72 ಪಂದ್ಯಗಳಲ್ಲಿ ಪರಾಭವಗೊಂಡಿದೆ. 4 ಟೈ ಆಗಿದ್ದು, 11 ರಲ್ಲಿ ಫಲಿತಾಂಶ ಬಂದಿಲ್ಲ. ಅದೇ ರೀತಿ 62 ಟಿ-20 ಪಂದ್ಯಗಳಲ್ಲಿ 36 ಗೆಲುವು, 24 ಸೋಲು, ಒಂದು ಟೈ ಹಾಗೂ ಒಂದರಲ್ಲಿ ಯಾವುದೇ ಫಲಿತಾಂಶ ಬಂದಿಲ್ಲ. ವಿಕೆಟ್ ಕೀಪಿಂಗ್ ಜವಾಬ್ದಾರಿಯ ಜತೆಗೆ ಅಂಗಣದಲ್ಲಿ ಪ್ರಯೋಗ ಕೂಡ ನಡೆಸುತ್ತಿದ್ದರು. ಇದರಿಂದ ಎದುರಾಳಿ ತಂಡಕ್ಕೆ ಮಹಿಯ ಗೇಮ್ ಪ್ಲಾನ್‍ಗಳನ್ನು ಅರ್ಥ ಮಾಡ್ಕೊಳ್ಳುವುದು ತುಸು ಕಷ್ಟವಾಗ್ತಿತ್ತು. ವಿಶ್ವಕಪ್ ಪಂದ್ಯದಲ್ಲಿ ಧೋನಿ ಮಾಡಿದ ಕೊನೆಯ ರನೌಟ್‍ನಲ್ಲಿ ಅವರು ಸ್ಟಂಪ್‍ನತ್ತ ಅದೆಷ್ಟು ವೇಗವಾಗಿ ಓಡಿದ್ದರೆಂದರೆ 15 ಯಾರ್ಡ್ ದೂರದ ಓಟ ಕೆಲ ಸೆಂಕೆಂಡ್‍ನಲ್ಲಿ ಕ್ರಮಿಸಿದ್ದರು. ರನೌಟ್ ಮಾಡುವುದರಲ್ಲಿಯೂ ಧೋನಿ ನಿಸ್ಸೀಮರಾಗಿದ್ದರು.

Comments are closed.