ಗಲ್ಫ್

ಬ್ಯುಟಿಪಾರ್ಲರ್ ಕೆಲಸ ಕೊಡುದಾಗಿ ಹೇಳಿ ಟಾಯ್ಲೆಟ್ ಕ್ಲೀನ್ ಮಾಡಿಸುತ್ತಿದ್ದಾರೆ …ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರವಾರದ ಮಹಿಳೆಯ ಅಳಲು ! ಏನಿದು ಘಟನೆ ಮುಂದಿದೆ ಓದಿ…

Pinterest LinkedIn Tumblr

poornima

ಕಾರವಾರ: ಕೈ ತುಂಬಾ ಸಂಬಳದ ಆಸೆಗಾಗಿ ದುಬೈಗೆ ಹೋಗಿರುವ ಶಿರವಾಡದ ಮಹಿಳೆಯೊಬ್ಬಳು ಸಂಕಷ್ಟಕ್ಕೆ ಸಿಲುಕಿದ್ದು, ಊರಿಗೆ ಬರಲು ಆಗದೆ ಪಡಬಾರದ ಕಷ್ಟ ಅನುಭವಿಸುತ್ತಿದ್ದು, ಸ್ವದೇಶಕ್ಕೆ ಮರಳಲು ಸಹಾಯ ಮಾಡುವಂತೆ ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.

‘ನಾನು ನಿಮ್ಮ ಕಾಲಿಗೆ ಬೀಳುತ್ತೀನಿ, ನನ್ನನ್ನು ಇಲ್ಲಿಂದ ಕಾಪಾಡಿ . ಇಲ್ಲಿ ನನಗೆ ಒಂದೊಂದು ದಿನವೂ ನರಕವಾಗುತ್ತಿದೆ . ಪ್ಲೀಸ್ ಸರ್, ನನ್ನನ್ನು ಇಲ್ಲಿದ್ದ ಕಾಪಾಡಿ. ಪ್ಲೀಸ್ ನನಗೆ ಸಹಾಯ ಮಾಡಿ’ ಹೀಗೆ ಕಾರವಾರದ ಶಿರವಾಡ ಗಾಂವ್ಕರ್ ವಾಡಾದ ನಿವಾಸಿ ಪೂರ್ಣಿಮಾ ರಾಜೇಂದ್ರ ಬಾಂದೇಕರ ಎಂಬಾಕೆ ತನ್ನ ನೋವನ್ನು ವಾಟ್ಸಪ್ ಮೂಲಕ ದುಬೈನಿಂದ ಕಳುಹಿಸಿದ್ದಾರೆ. ದುಬೈನಲ್ಲಿ ಬ್ಯೂಟಿಷಿಯನ್ ಕೆಲಸಕ್ಕೆಂದು ಹೋದ ಪೂರ್ಣಿಮಾ ಈಗ ಅಲ್ಲಿ ನರಕಯಾತನೆ ಅನುಭವಿಸುತ್ತಿದ್ದಾಳೆ.

ಹೋಗಿದ್ದು ಬ್ಯೂಟಿಷಿಯನ್ ಕೆಲಸಕ್ಕೆ ..ಮಾಡುತ್ತಿರುವುದು ಬಾತ್ರೂಂ ಕ್ಲೀನಿಂಗ್…
ಕೆಲಸದ ಕನಸು ಕಂಡು ಪತಿ-ಮಕ್ಕಳನ್ನು ಬಿಟ್ಟು ದುಬೈಗೆ ಹೋಗಿದ್ದ ಪೂರ್ಣಿಮಾಗೆ ನರಕದರ್ಶನವಾಗಿದೆ. ಅಲ್ಲಿನ ಮಾಲೀಕರು ಪೂರ್ಣಿಮಾ ಕೈಯಲ್ಲಿ ಬಾತ್ರೂಂ ಕ್ಲೀನಿಂಗ್ ಮಾಡಿಸುತ್ತಿದ್ದಾರೆ. ತಾನು ಬ್ಯೂಟಿಷಿಯನ್ ಕೆಲಸಕ್ಕೆಂದು ಬಂದಿದ್ದೀನಿ ಎಂದು ಎಷ್ಟು ಬಾರಿ ಹೇಳಿದ್ರು ಕೇಳದೆ ಅಮಾನವೀಯವಾಗಿ ದುಡಿಸಿಕೊಳ್ಳುತ್ತಿದ್ದಾರೆ. ಅಲ್ಲಿಂದ ಪಾರಾಗಲು ಸಾಧ್ಯವಾಗದೆ ಕಾರವಾರ ಜಿಲ್ಲಾಧಿಕಾರಿಗೆ ವಾಟ್ಸಪ್ ಮೂಲಕ ತನ್ನನ್ನು ರಕ್ಷಿಸುವಂತೆ ಪೂರ್ಣಿಮಾ ಮನವಿ ಮಾಡಿದ್ದಾರೆ.

ಅಷ್ಟಕ್ಕೂ ಪೂರ್ಣಿಮಾರನ್ನು ದುಬೈನಲ್ಲಿ ಕೆಲಸಕ್ಕೆ ಕಳುಹಿಸಿದ್ದು ಮುಂಬೈನ ಏಜೆಂಟ್ ಸಮೀರ್ ಎಂಬಾತ. ಮೇ ತಿಂಗಳಲ್ಲಿ ದೆಹಲಿಗೆ ಕರೆಸಿಕೊಂಡ ಏಜೆಂಟ್, ಅಲ್ಲಿಂದ ಬ್ಯೂಟಿಷನ್ ಕೆಲಸಕ್ಕಾಗಿ ಪೂರ್ಣಿಮಾರನ್ನು ದುಬೈಗೆ ಕಳಹಿಸಿದ್ದ. ಪೂರ್ಣಿಮಾರನ್ನು ಕರೆಸಿಕೊಂಡ ಮಾಲೀಕರು ಆಕೆಯನ್ನು ಮನೆಗೆಲಸಕ್ಕಿಟ್ಟುಕೊಂಡಿದ್ದಾರೆ. ವಿಚಲಿತರಾದ ಪೂರ್ಣಿಮಾ ಏಜೆಂಟ್ ಸಮೀರನನ್ನು ಸಂಪರ್ಕಿಸಲು ಯತ್ನಿಸಿದರೆ ಆತ ಕರೆಯನ್ನೇ ಸ್ವೀಕರಿಸುತ್ತಿಲ್ಲವಂತೆ. ಪತ್ನಿಯ ಪರಿಸ್ಥಿತಿ ಕಂಡು ಪೂರ್ಣಿಮಾಳ ಪತಿ ಕಣ್ಣೀರು ಹಾಕುತ್ತಿದ್ದಾರೆ.

ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪೂರ್ಣಿಮಾ ಮನವಿಗೆ ಸ್ಪಂದಿಸಿರುವ ಕಾರವಾರದ ಜಿಲ್ಲಾಧಿಕಾರಿ ನಕುಲ್ ದುಬೈ ಭಾರತೀಯ ರಾಯಭಾರಿಯವರನ್ನು ಪೋನ್ ಮೂಲಕ ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಪೂರ್ಣಿಮಾರನ್ನು ರಕ್ಷಿಸಿ ಭಾರತಕ್ಕೆ ಕರೆತರಲು ಯತ್ನಿಸುತ್ತಿದ್ದಾರೆ.

ಹಿಂದೆಮುಂದೆ ನೋಡದೇ ಕೆಲಸಕ್ಕಾಗಿ ದುಬೈಗೆ ಹೊರಡು ಮಹಿಳೆಯರು ಅಲ್ಲಿ ಅನುಭವಿಸಬಹುದಾದ ಸಂಕಷ್ಟಕ್ಕೆ ಸ್ಪಷ್ಟ ನಿದರ್ಶನ ಇದು. ಇನ್ನಾದ್ರೂ ದುಬೈ ವಿಮಾನ ಏರುವವರು ಎಚ್ಚರಿಕೆಯಿಂದ ಇರಬೇಕು. ಇನ್ನು ಚಿತ್ರಹಿಂಸೆ ಅನುಭವಿಸುತ್ತಿರುವ ಪೂರ್ಣಿಮಾ ಆದಷ್ಟು ಬೇಗ ಸುರಕ್ಷಿತವಾಗಿ ಭಾರತ ತಲುಪಲಿ.

Comments are closed.