ಅಂತರಾಷ್ಟ್ರೀಯ

ಅಂತಿಮಘಟ್ಟ ತಲುಪಿದ ಹಜ್ ಯಾತ್ರೆ

Pinterest LinkedIn Tumblr

Macca___ವೌಂಟ್ ಅರಫಾ, ಸೆ.23: 20 ಲಕ್ಷಕ್ಕೂ ಅಧಿಕ ಹಜ್ ಯಾತ್ರಿಕರು ಬುಧವಾರ ಮಿನಾದಿಂದ ಅರಫಾ ಪರ್ವತ ಹಾಗೂ ಅದರ ಸುತ್ತಮುತ್ತಲಿನ ಮೈದಾನದಲ್ಲಿ ಪ್ರಾರ್ಥನೆಗಾಗಿ ತೆರಳಲು ಪ್ರಾರಂಭಿಸುವುದರೊಂದಿಗೆ ವರ್ಷಾವಧಿಯ ಪವಿತ್ರ ಹಜ್ ಯಾತ್ರೆಯು ಅಂತಿಮಘಟ್ಟವನ್ನು ತಲುಪಿತು.
ಪ್ರವಾದಿ ಮುಹಮ್ಮದ್(ಸ.ಅ) ಅವರು ಸುಮಾರು 1400 ವರ್ಷಗಳ ಹಿಂದೆ ಅಂತಿಮ ಹಜ್ ಪ್ರವಚನವನ್ನು ನೀಡಿದ್ದ ಅರಫಾ ಪರ್ವತದೆಡೆಗೆ ಶುಭ್ರವಾದ ಶ್ವೇತವಸ್ತ್ರಧರಿಸಿದ ಹಜ್ ಯಾತ್ರಿಕರು, ಇಂದು ಬೆಳಗ್ಗಿನಿಂದ ತೆರಳಲಾರಂಭಿಸಿದ್ದಾರೆ.
ಹಜ್ ಯಾತ್ರೆು ವೇಳೆ, ಹಜ್ ಯಾತ್ರಿಕರು, ಪರಿಶುದ್ಧತೆಯನ್ನು ಸಾಂಕೇತಿಸುವ ಅಂಚು ಹೊಲಿದಿರದ ಶುಭ್ರವಾದ ಎರಡು ತುಂಡು ಬಿಳಿಬಟ್ಟೆಯನ್ನು ಧರಿಸುತ್ತಾರೆ. ಮಹಿಳೆಯರು ಕೂಡಾ ತಮ್ಮ ಮುಖ ಹಾಗೂ ಕೈಗಳನ್ನು ಹೊರತುಪಡಿಸಿ, ಇಡೀ ದೇಹವನ್ನು ಮುಚ್ಚುವ ಬಿಳಿ ಬಣ್ಣದ ಉಡುಪನ್ನು ಧರಿಸುತ್ತಾರೆ. ಈ ಸಲದ ಪವಿತ್ರ ಹಜ್ ಯಾತ್ರೆಯಲ್ಲಿ 1.5 ಲಕ್ಷ ಭಾರತೀಯರು ಪಾಲ್ಗೊಂಡಿದ್ದಾರೆ.
ಅರಫಾ ಬೆಟ್ಟವನ್ನು ತಲುಪುತ್ತಿದ್ದಂತೆಯೇ, ಅನೇಕ ಯಾತ್ರಾರ್ಥಿಗಳು ಭಕ್ತಿಪರವಶರಾಗಿ, ಕಣ್ಣೀರು ಸುರಿಸುತ್ತಿದ್ದರು. ಪವಿತ್ರವಾದ ಹಜ್ ಯಾತ್ರೆಯು ಸಫಲವಾಗುವಂತೆ ಮಾಡಿದ್ದಕ್ಕಾಗಿ ಸರ್ವಶಕ್ತ ಅಲ್ಲಾಹುವಿಗೆ ಕೃತಜ್ಞತೆಯನ್ನು ಅರ್ಪಿಸುತ್ತಿದ್ದರು.
ಸಹಸ್ರಾರು ಯಾತ್ರಿಕರು ಗುಂಪುಗುಂಪುಗಳಾಗಿ ಅರಫಾ ಪರ್ವತದ ಮೇಲೆ ಜಮಾಯಿಸಿದ್ದರು ಹಾಗೂ ಅದರ ಸುತ್ತಲೂ ಇರುವ ವಿಶಾಲವಾದ ಮೈದಾನದಲ್ಲಿ ಅವರು ಸೂರ್ಯಾಸ್ತದವರೆಗೂ ಪ್ರಾರ್ಥನೆಯನ್ನು ಸಲ್ಲಿಸಿದ್ದರು.
ಅರಫಾದಲ್ಲಿರುವ ನಮೀರಾ ಮಸೀದಿಯ ಆವರಣದಲ್ಲಿ ಮುಂಜಾನೆಯ ವೇಳೆ ಮೂರು ಲಕ್ಷಕ್ಕೂ ಅಧಿಕ ಯಾತ್ರಿಕರು ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು. ‘ಲಬ್ಬೈಕ್ ಅಲ್ಲಾಹುಮ್ಮಾ ಲಬ್ಬೈಕ್’ (ಹಾಜರಿದ್ದೇನೆ ಅಲ್ಲಾಹನೇ ನಾನು ಹಾಜರಿದ್ದೇನೆ) ಎಂಬ ಸ್ತ್ರೋತ್ರಗಳನ್ನು ಅವರು ಪಠಿಸುತ್ತಿದ್ದರು. ಅರಫಾದಲ್ಲಿ ಪ್ರಾರ್ಥನೆಗಳನ್ನು ಸಲ್ಲಿಸಿದ ಬಳಿಕ ಯಾತ್ರಿಕರು ಸಮೀಪದ ಮುಝ್‌ದಲಿಫಾ ಪ್ರದೇಶಕ್ಕೆ ತೆರಳಲಿದ್ದು, ಮಿನಾ ಕಣಿವೆಯಲ್ಲಿ ತಾವು ನೆರವೇರಿಸಲಿರುವ ಧಾರ್ಮಿಕ ವಿಧಿಯ ಆಚರಣೆಗಾಗಿ ಕಲ್ಲುಗಳನ್ನು ಸಂಗ್ರಹಿಸಲಿದ್ದಾರೆ. ನಾಳೆ ಮಿನಾ ಕಣಿವೆಯಲ್ಲಿ ಸಾಂಕೇತಿಕವಾದ ಕಲ್ಲೆಸೆಯುವ ವಿಧಿಯನ್ನು ಅವರು ನೆರವೇರಿಸಲಿದ್ದಾರೆ.
ಬಳಿಕ ಯಾತ್ರಾರ್ಥಿಗಳು ಪ್ರಾಣಿಗಳನ್ನು ಬಲಿಕೊಡುವ ವಿಧಿಯನ್ನು ನೆರವೇರಿಸಲಿದ್ದಾರೆ. ಪ್ರವಾದಿ ಇಬ್ರಾಹೀಮ್ ಅವರು ತನ್ನ ಏಕೈಕ ಪುತ್ರ ಇಸ್ಮಾಯೀಲ್ ಅವರನ್ನು ಭಗವಂತನಿಗೆ ಬಲಿಯಾಗಿ ಅರ್ಪಿಸಲು ನಿರ್ಧರಿಸಿದ ನೆನಪಿಗಾಗಿ ಈ ವಿಧಿಯನ್ನು ಆಚರಿಸಲಾಗು ತ್ತಿದೆ. ಈದುಲ್ ಅಝ್‌ಹಾ ಆಚರಣೆಯೊಂದಿಗೆ ವರ್ಷದ ಹಜ್ ಯಾತ್ರೆಯು ಸಮಾರೋಪಗೊಳ್ಳಲಿದೆ.
ಹಜ್ ಯಾತ್ರೆಯು ನಿರಾತಂಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯುವಂತೆ ಮಾಡುವ ಉದ್ದೇಶದಿಂದ ಸೌದಿ ಸರಕಾರವು ಮಕ್ಕಾ ಹಾಗೂ ಸುತ್ತಮುತ್ತಲಿನ ಪವಿತ್ರ ತಾಣಗಳಲ್ಲಿ 1 ಲಕ್ಷಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದೆ. ಈ ವರ್ಷದ ಹಜ್ ಯಾತ್ರೆಗೆ ಒಟ್ಟು 13,74, 206 ಮಂದಿ ವಿದೇಶಿ ಯಾತ್ರಿಕರು ಆಗಮಿಸಿರುವುದಾಗಿ ಸೌದಿ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ಲಾಮ್‌ನ ಐದು ಆಧಾರಸ್ತಂಭಗಳಲ್ಲಿ ಒಂದಾಗಿರುವ ಪವಿತ್ರ ಹಜ್ ಯಾತ್ರೆಯನ್ನು ಆರ್ಥಿಕವಾಗಿ ಹಾಗೂ ದೈಹಿಕವಾಗಿ ಸಶಕ್ತನಾದ ಪ್ರತಿಯೊಬ್ಬ ಮುಸ್ಲಿಮನು ತನ್ನ ಜೀವಮಾನದಲ್ಲಿ ಒಮ್ಮೆ ನೆರವೇರಿಸಬೇಕಾಗಿದೆ. 164 ದೇಶಗಳಿಂದ 13 ಲಕ್ಷಕ್ಕೂ ಅಧಿಕ ಯಾತ್ರಿಕರ ಯಶಸ್ವಿ ಆಗಮನಕ್ಕಾಗಿ, ಹಜ್‌ನ ಪರಮೋಚ್ಚ ಸಮಿತಿಯ ಅಧ್ಯಕ್ಷರಾದ ಸೌದಿಯ ಯುವರಾಜ ಮುಹಮ್ಮದ್ ಬಿನ್ ನಯೀಫ್ ಅವರು ದೊರೆ ಸಲ್ಮಾನ್ ಅವರನ್ನು ಅಭಿನಂದಿಸಿದ್ದಾರೆ.
ಮಕ್ಕಾದಿಂದ ಮಿನಾದೆಡೆಗೆ ಹಜ್ ಯಾತ್ರಿಕರ ಪಯಣವು ಅತ್ಯಂತ ಶಿಸ್ತುಬದ್ಧವಾಗಿತ್ತು ಹಾಗೂ ಸುವ್ಯವಸ್ಥಿತವಾಗಿತ್ತೆಂದು ಸೌದಿಯ ಗೃಹ ಸಚಿವಾಲಯದ ವಕ್ತಾರ ಮೇ.ಜ.ಮನ್ಸೂರ್ ಅಲ್-ತುರ್ಕಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Write A Comment