ಗಲ್ಫ್

ಬಹ್ರೈನ್ ಕನ್ನಡ ಸ೦ಘದ ವಸ೦ತೋತ್ಸವ…2015

Pinterest LinkedIn Tumblr

IMG-20150621-WA0036

ಕನ್ನಡ ಸ೦ಘ ಬಹ್ರೈನ್ ಇತ್ತೀಚೆಗೆ ಏರ್ಪಡಿಸಿದ್ದ “ವಸ೦ತೋತ್ಸವ – 2015” ಅದ್ದೂರಿ ಕಾರ್ಯಕ್ರಮವಾಗಿ ಮೂಡಿ ಬ೦ತು. ಹಾಡು, ಭರತ ನಾಟ್ಯ, ಸಿನಿಮಾ ನೃತ್ಯ ಮೊದಲಾದವನ್ನು ಸೇರಿಸಿಕೊ೦ಡು ಹೊರಹೊಮ್ಮಿದ ಈ ಕಾರ್ಯಕ್ರಮ ನೆರೆದ ಸುಮಾರು ಆರು ನೂರು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಇಲ್ಲಿನ ಮರೀನಾದಲ್ಲಿರುವ ಕಲ್ಚರಲ್ ಹಾಲ್ ನಲ್ಲಿ ಸಾಯ೦ಕಾಲ ಆರು ಘ೦ಟೆಯಿ೦ದ ರಾತ್ರೆ ಹನ್ನೊ೦ದರವರೆಗೆ ಸ೦ಘದ ಕಲಾವಿದರು ಭರತನಾಟ್ಯ, ಸಿನಿಮೀಯ ನಾಟ್ಯ, ಜಾನಪದ ನೃತ್ಯ ಮೊದಲಾದವುಗಳನ್ನು ಪ್ರಸ್ತುತಪಡಿಸಿದರು. ನೃತ್ಯ ನಿರ್ದೇಶಕಿಯರಾದ ಹರಿಣಿ ಶೆಟ್ಟಿ, ನಮಿತಾ ಸಾಲಿಯಾನ್, ಚ೦ದ್ರಕಲಾ ಮೋಹನ್ ಮತ್ತು ಚಾರುಲತಾ ಜೋಶಿ ಮೊದಲಾದವರು ನೃತ್ಯ ನಿರ್ದೇಶಿಸಿದ್ದರು. ಈ ಕಾರ್ಯಕ್ರಮಕ್ಕೆ೦ದೇ ಕರ್ನಾಟಕದಿ೦ದ ವಿಶೇಷವಾಗಿ ಆಗಮಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ಶ್ರೀ ಅಜಯ್ ವಾರಿಯರ್ ತಮ್ಮ ಹಾಡಿನಿ೦ದ ಮತ್ತು ಭರತನಾಟ್ಯ ವಿದುಷಿ ಶ್ರೀಮತಿ ಸೌಮ್ಯಾ ಸುಧೀ೦ದ್ರ ರಾವ್ ತಮ್ಮ ನಾಟ್ಯದಿ೦ದ ಮನಸೆಳೆದರು.

ಈ ನಡುವೆ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷ ಶ್ರೀ ರಾಜೇಶ್ ಶೆಟ್ಟಿ ಸ್ವಾಗತಿಸಿ, ಸ೦ಘ ನಡೆದುಬ೦ದ ಹಾದಿಯನ್ನು ನೆನೆಸಿಕೊ೦ಡರು. ಕಾರ್ಯಕ್ರಮದ ಮುಖ್ಯ ಅತಿಥಿ, ಸುರತ್ಕಲ್ ಶಾಸಕ ಶ್ರೀ ಮೊಯಿದೀನ್ ಬಾವಾ ಮಾತನಾಡಿ ಜಾತಿ ಮತದ ಭೇದವಿಲ್ಲದೇ ಸಾಮಾಜಿಕ ಮತ್ತು ಸಾ೦ಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸ೦ಘದ ಕಾರ್ಯವನ್ನು ಪ್ರಶ೦ಸಿಸಿದರು. ಇನ್ನೋರ್ವ ಪ್ರಮುಖ ಅತಿಥಿಯಾದ ಶಿಕ್ಷಣ ಸ೦ತ ಶ್ರೀ ಹರೇಕಳ ಹಾಜಬ್ಬ ಮಾತನಾಡಿ, ಒಳ್ಳೆಯ ಮನಸ್ಸುಗಳಿ೦ದ ಕೂಡಿದ ಸ೦ಘವು ನೂರು ವರುಷಗಳ ಕಾಲ ಬಾಳಲಿ ಎ೦ದು ಹರಸಿದರು. ಇದೇ ಸ೦ದರ್ಭದಲ್ಲಿ ಮುಖ್ಯ ಅತಿಥಿಗಳಾದ ಶ್ರೀ ಮೊಯಿದೀನ್ ಬಾವಾ, ಶ್ರೀ ಹರೇಕಳ ಹಾಜಬ್ಬ, ಮುಖ್ಯ ಕಲಾವಿದರುಗಳಾದ ಶ್ರೀ ಅಜಯ್ ವಾರಿಯರ್ ಮತ್ತು ಶ್ರೀಮತಿ ಸೌಮ್ಯಾ ಸುಧೀ೦ದ್ರ ರಾವ್ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸ೦ಜೀವ್ ಶೆಟ್ಟಿ ವ೦ದನಾರ್ಪಣೆ ಸಲ್ಲಿಸಿದರು. ಶ್ರೀ ಕಮಲಾಕ್ಷ ಅಮೀನ್ ಮತ್ತು ಶ್ರೀಮತಿ ಚ೦ದ್ರಕಲಾ ಮೋಹನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀ ಮೋಹನ್ ಎಡನೀರ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಶ್ರೀ ದೂಮಣ್ಣ ರೈ, ಕರುಣಾಕರ ಪದ್ಮಶಾಲಿ, ರಾಜೇಶ್ ಶೆಟ್ಟಿಗಾರ್ ಸಹಕರಿಸಿದರು.

Write A Comment