ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ ಸಮಿತಿ – ಕರ್ನಾಟಕ ಆಯೋಜಿಸಿರುವ 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ, ಶಾರ್ಜಾ ಕರ್ನಾಟಕ ಸಂಘ ಮತ್ತು ಹೃದಯ ವಾಹಿನಿ. ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ 2015 ನವೆಂಬರ್ 19 ಮತ್ತು 20 ರಂದು ಶಾರ್ಜಾ ವಾಂಡರರ್ಸ್ ಕ್ಲಬ್ ಕ್ರೀಡಾಂಗಣದ ಬಳಿಯಿರುವ ಅಲ್ ಬೂಮ್ ಟೂರಿಸ್ಟ್ ವಿಲೇಜ್ ಆವರಣದಲ್ಲಿರುವ ಬೃಹತ್ ಸುಸಜ್ಜಿತ ಸಭಾಂಗಣದಲ್ಲಿ ಸಮ್ಮೇಳನ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಸಮಾವೇಶ ಗೊಳ್ಳಲಿದ್ದಾರೆ.
ಕರ್ನಾಟಕದಿಂದ ಕಲಾವಿದರು, ಸಂಗೀತಗಾರರು, ಸಾಹಿತಿಗಳು, ಗಣ್ಯರ ತಂಡ ಶಾರ್ಜಾದಲ್ಲಿ ನಡೆಯುವ ಸಮ್ಮೇಳನ್ದಲ್ಲಿ ಭಾಗವಹಿಸಲಿದ್ದಾರೆ. ಹೃದಯವಾಹಿನಿ ಕರ್ನಾಟಕ ಮುಖ್ಯಸ್ಥರಾದ ಶ್ರೀ ಕೆ. ಪಿ. ಮಂಜುನಾಥ್ ಸಾಗರ್ ತಂಡದ ಸಾರಥ್ಯ ವಹಿಸಲಿದ್ದಾರೆ.
ಕರ್ನಾಟಕ ಸಂಘ ಶಾರ್ಜಾದ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಅಧ್ಯಕ್ಷರಾದ ಶ್ರೀ ಸತೀಶ್ ವೆಂಕಟರಮಣರವರು ಸಮ್ಮೇಳನದ ಬಗ್ಗೆ ಪೂರ್ಣ ಮಾಹಿತಿಯನ್ನು ನೀಡಿ ನವಂಬರ್ ತಿಂಗಳಿನಲ್ಲಿ ಕರ್ನಾಟಕ ರಾಜ್ಯೋತ್ಸವ ಮತ್ತು 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಕರ್ನಾಟಕ ಸಂಘದ ಪ್ರತಿಷ್ಠಿತ “ಮಯೂರ ಪ್ರಶಸ್ತಿ ಸಮಾರಂಭ” ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದ ಸಮಾರಂಭದಲ್ಲಿ ನಡೆಯಲಿದ್ದು ಹೆಚ್ಚಿನ ಶೋಭೆ ತರಲಿದೆ. ಹಲವಾರು ಅತ್ಯುತ್ತಮ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಿರುವ ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ ನಡೆಯಲಿರುವ ಕನ್ನಡಿಗರ ಸಮಾವೇಶ ದಾಖಲೆಯಾಗಲಿದೆ.