ದುಬೈ, ಮಾ.21: ಶನೈಶ್ಚರ ಸೇವಾ ಸಮಿತಿ ದುಬೈ ಇವರ ನೇತೃತ್ವದಲ್ಲಿ ಐದನೆ ವರ್ಷದ ಸಾಮೂಹಿಕ ‘ಶ್ರೀ ಶನೈಶ್ಚರ ಪೂಜೆ’ಯನ್ನು ಎಪ್ರಿಲ್ 10ರಂದು ದುಬೈಯ ಶೇಖ್ ಝಾಯಿದ್ ರಸ್ತೆಯ ಜೆಎಸ್‌ಎಸ್ ಸ್ಕೂಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಎ.10ರಂದು ಮಧ್ಯಾಹ್ನ 3ರಿಂದ 8ರ ವರೆಗೆ ನಡೆಯಲಿರುವ ‘ಶ್ರೀ ಶನೈಶ್ಚರ ಪೂಜೆ’ಯ ಪ್ರತಿಷ್ಠಾಪನೆ, ಪ್ರವಚನ, ಮಹಾಮಂಗಳಾರತಿ ಹಾಗೂ ಮಹಾ ಪ್ರಸಾದ ವಿತರಣೆಯ ಕುರಿತು ಶುಕ್ರವಾರದಂದು ದುಬೈ ಕರಾಮದಲ್ಲಿರುವ ದಾಸ್‌ಪ್ರಕಾಶ್ ಹೊಟೇಲ್‌ನಲ್ಲಿ ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು.
ಪೂರ್ವಭಾವಿ ಸಭೆಯ ಬಳಿಕ ಕಾರ್ಯಕ್ರಮದ ಕುರಿತು ವಿವರಣೆ ನೀಡಿದ ಶ್ರೀ ಶನೈಶ್ಚರ ಪೂಜೆಯ ಪ್ರಧಾನ ಸಂಘಟಕ ವಿಠಲ್ ಶೆಟ್ಟಿ, ಏಪ್ರಿಲ್ 10 ರಂದು ಪೂಜಾ ಕಾರ್ಯಕ್ರಮದ ಅಂಗವಾಗಿ ಅಪರಾಹ್ನ 3 ಗಂಟೆಗೆ ಸರಿಯಾಗಿ ಯುಎಇಯ ವಿವಿಧ ಭಜನಾ ಸಂಘದ ಸದಸ್ಯರಿಂದ ಭಜನೆ, ಸಂಜೆ 4 ಗಂಟೆಗೆ ಸರಿಯಾಗಿ ಕಳೆದ 22 ವರ್ಷದಿಂದ ದೇಶದಾದ್ಯಂತ ಶನಿ ಕಥಾ ಯಕ್ಷಗಾನ ತಾಳ ಮದ್ದಳೆ ಸೇವೆಯನ್ನು ಮಾಡುತ್ತಿರುವ ಪಕ್ಷಿಕೆರೆ ಶನೈಶ್ಚರ ಸಮಿತಿಯಾ ಕಲಾ ತಂಡದಿಂದ ದುಬೈಯಲ್ಲಿ ಪ್ರಥಮ ಬಾರಿಗೆ ‘ಶ್ರೀ ಶನಿ ಕಥಾ’ ಕಥಾಪ್ರಸಂಗವನ್ನು ನಡೆಸಿಕೊಡಲಿದ್ದಾರೆ ಎಂದರು.
ಬಳಿಕ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ ಖಾದರ್ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಗಮಿಸಲಿರುವ ಕಾರ್ಕಳ ಬಲ್ಯೊಟ್ಟು ಮಠದ ಶ್ರೀ ವಿಖ್ಯಾತನಂದ ಸ್ವಾಮಿಜಿ, ನಮ್ಮ ಕುಡ್ಲ ಟಿವಿ ಚಾನೆಲ್ ವ್ಯವಸ್ಥಾಪಕ ನಿರ್ದೇಶಕ ಲೀಲಾಕ್ಷ ಕರ್ಕೆರ, ಸೌಮ್ಯ ಲೀಲಾಕ್ಷ ಕರ್ಕೆರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರದೀಪ್ ಆಳ್ವ, ಕೆ.ಪಿ.ಸಿ.ಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷ ಕೆ.ಎಸ್ ಅಮೀರ್ ಅಹ್ಮದ್ ತುಂಬೆ, ಹಳೆಕೋಟೆ ಶ್ರೀ ಮಾರಿಯಮ್ಮ ದೇವಸ್ಥಾನದ ಆಡಳಿತ ಮುಕ್ತೇಸರ ತಾರನಾಥ ಶೆಟ್ಟಿ, ಮಂಗಳೂರು ವಿಜಯ ಬ್ಯಾಂಕ್ ಅಧಿಕಾರಿಗಳ ಯೂನಿಯನ್ ಅಧ್ಯಕ್ಷ ಕರುಣಾಕರ ಶೆಟ್ಟಿ, ನಮ್ಮ ಕುಡ್ಲ ಚೇರ್ಮನ್ ಶ್ರೀಕಾಂತ್ ರಾವ್, ನಮ್ಮ ಕುಡ್ಲ ಪ್ರಧಾನ ಸಂಪಾದಕ ಜಯರಾಜ್ ದೇವಾಡಿಗ ಮುಂತಾದವರನ್ನು ಪೂರ್ಣ ಕುಂಭ ಸ್ವಾಗತ ಹಾಗೂ ಕೇರಳದ ಪಂಚವಾಧ್ಯ ಚೆಂಡೆಯೊಂದಿಗೆ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆ ತರಲಾಗುವುದು ಎಂದರು.
‘ಶ್ರೀ ಶನಿ ಕಥಾ’ ಕಥಾಪ್ರಸಂಗ ಮುಗಿದ ಬಳಿಕ ಸಚಿವರಾದ ಯು.ಟಿ.ಖಾದರ್‌ರಿಗೆ ಶ್ರೀ ಶನೈಶ್ಚರ ಸೇವಾ ಸಮಿತಿ ವತಿಯಿಂದ ಸರ್ವ ಬಂಧು ಬಾಂಧವರ ಪರವಾಗಿ ಗೌರವಾರ್ಪಣೆ ನಡೆಯಲಿದೆ. ಜೊತೆಗೆ ತಾಯ್ನಡಿನಿಂದ ಆಗಮಿಸಲಿರುವ ಅತಿಥಿಗಳಿಗೆ ಹಾಗೂ ಶ್ರೀ ಶನಿ ಕಥಾ ಕಲಾ ತಂಡದವರಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಕೊನೆಯಲ್ಲಿ ಶ್ರೀ ವಿಖ್ಯಾತನಂದ ಸ್ವಾಮೀಜಿಯವರಿಂದ ನೆರದ ಭಕ್ತ ವೃಂದಕ್ಕೆ ಧಾರ್ಮಿಕ ಪ್ರವಚನ, ಮಹಾ ಮಂಗಳಾರತಿ ಹಾಗೂ ಮಹಾ ಪ್ರಸಾದ ವಿತರಣೆ ಮಾಡಲಿದ್ದಾರೆ.
ಪೂಜಾ ಕಾರ್ಯಕ್ರಮದಲ್ಲಿ ಯುಎಇಯಲ್ಲಿರುವ ಸುಮಾರು 1500 ರಷ್ಟು ಮಂದಿ ಭಕ್ತಾಧಿಗಳು ಭಾಗವಹಿಸುವ ನೀರಿಕ್ಷೆಯಿದೆ. ಈ ಎಲ್ಲಾ ಕಾರ್ಯಕ್ರಮಗಳ ನೇರ ಪ್ರಸಾರದ ಉಸ್ತುವಾರಿಯನ್ನು ಮಂಗಳೂರಿನ ನಮ್ಮ ಕುಡ್ಲ ತುಳು ಚಾನೆಲ್ ವಹಿಸಿಕೊಂಡಿದೆ.
ಎಪ್ರಿಲ್ 11ರಂದು ಶನಿವಾರ ಸಂಜೆ 5ರಿಂದ 8ರ ವರೆಗೆ ಅಬುಧಾಬಿಯ ಫುಡ್‌ಲ್ಯಾಂಡ್ ಬಾಂಕ್ವೆಟ್‌ಹಾಲ್‌ನಲ್ಲಿ ‘ಶ್ರೀ ಶನೈಶ್ಚರ ಪೂಜೆ’ ನಡೆಯಲಿದೆ.
ಪೂರ್ವಭಾವಿ ಸಭೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಸಂಘಟಕರಾದ ಸುಧಾಕರ್ ತುಂಬೆ, ವಿಶ್ವನಾಥ ಶೆಟ್ಟಿ, ಪ್ರಭಾಕರ ಶಿವಣ್ಣ, ಲಕ್ಷ್ಮ್ಮಣ್ ಶೆಟ್ಟಿ, ಆನಂದ್, ಜಯಂತ್ ಶೆಟ್ಟಿ, ಪ್ರಭಾಕರ ಪೂಜಾರಿ, ದಯಾ ಕಿರೋಡಿಯನ್, ಬಾಲಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ ಬೈಲೂರು, ಹರೀಶ್ ಕೋಡಿ, ರಿತೇಶ್ ಪೂಜಾರಿ, ತುಳು ಕೂಟದ ಕೃಷ್ಣಾ ರಾಜ್ ತಂತ್ರಿ ಸೇರಿದಂತೆ ಹಲವರು ಹಾಜರಿದ್ದರು.



