ಅಬೂಧಾಬಿ : ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF ) ಯುಎಇ ಯು ಯೂನಿವರ್ಸಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಒಂದು ತಿಂಗಳುಗಳ ಕಾಲ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಆಯೋಜಿಸಿದೆ. ಯೂನಿವರ್ಸಲ್ ಆಸ್ಪತ್ರೆಯ ” Touching a Million Hearts ” ಎಂಬ ಕ್ಯಾಂಪೈನ್ ನೊಂದಿಗೆ ಕೈ ಜೋಡಿಸಿದ KCF ಯುಎಇ ಯು ಜನರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಸಲುವಾಗಿ ಈ ಮಹತ್ತರ ಹೆಜ್ಜೆಯನ್ನು ಮುಂದಿಟ್ಟಿದೆ.
ಹ್ರದ್ರೋಗಿಗಳು, ಕಿಡ್ನಿ ವೈಫಲ್ಯ ರೋಗಿಗಳು ವ್ರದ್ಧಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ರೋಗಗಳನ್ನು ತಡೆಗಟ್ಟುವ ಮುನ್ನೆಚ್ಚರಿಕಾ ಕ್ರಮಗಳನ್ನು ವಿವರಿಸುವ ಸೆಮಿನಾರ್ ಗಳು, ಉಚಿತ ಹ್ರದಯ ಹಾಗೂ ಕಿಡ್ನಿ ತಪಾಸಣೆಗಳು, ರೋಗ ನಿರೋಧಕ ಶಕ್ತಿಗಳ ಬಳಕೆಗಳ ಕುರಿತ ಉಪಯುಕ್ತ ಮಾಹಿತಿಗಳು ಪ್ರಸ್ತುತ ಕ್ಯಾಂಪೈನ್ ನ ವಿವಿಧ ಭಾಗಗಳಾಗಿವೆ.
ಪತ್ರಿಕಾಗೋಷ್ಠಿಯಲ್ಲಿ ಯೂನಿವರ್ಸಲ್ ಆಸ್ಪತ್ರೆ CEO ಹಾಗೂ ಕಾರ್ಡಿಯೋಲಜಿಸ್ಟ್ ಡಾ. ಜಾರ್ಜ್ ಕೋಶಿ ಮಾತನಾಡಿ, ಯೂನಿವರ್ಸಲ್ ಆಸ್ಪತ್ರೆ ಸಹಭಾಗಿತ್ವದಲ್ಲಿ KCF ನಡೆಸುವ ಪ್ರಸ್ತುತ ಕ್ಯಾಂಪೈನಿಗೆ ಸಂಪೂರ್ಣ ಸಹಾಯ ಸಹಕಾರ ನೀಡಿ ರೋಗಿಗಳಿಗೆ ಅನಿವಾರ್ಯವಾದ ಎಲ್ಲಾ ಚಿಕಿತ್ಸೆಗಳಿಗೂ ಸ್ಪಂದಿಸಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಭರವಸೆ ನೀಡಿದರು. ಯೂರೋಲಜಿಸ್ಟ್ ಡಾ. ಇಷ್ತಿಹಾಕ್ ಮಂಗಳೂರು ರವರು ಕಿಡ್ನಿ ರೋಗಗಳ ಹ್ರಸ್ವ ಪರಿಚಯ ಮಾಡಿ ಕ್ಯಾಂಪೈನ್ ನಲ್ಲಿ ಸಂಪೂರ್ಣವಾಗಿ ಭಾಗಿಯಾಗಿ ಅನಿವಾರ್ಯವಾದ ಮಾಹಿತಿಗಳನ್ನೂ, ಚಿಕಿತ್ಸೆಗಳನ್ನೂ ನೀಡುವುದಾಗಿ ತಿಳಿಸಿದರು.
ನಂತರ ಮಾತನಾಡಿದ KCF ಯುಎಇ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ರವರು, ಪ್ರಸ್ತುತ ಕ್ಯಾಂಪೈನ್ KCF ಹಮ್ಮಿಕೊಂಡ ಚೊಚ್ಚಲ ಆರೋಗ್ಯ ಮಾಹಿತಿ ಹಾಗೂ ತಪಾಸಣಾ ಶಿಬಿರವಾಗಿದೆ ಎಂದರು. KCF ಕೇವಲ ಧಾರ್ಮಿಕ ಚಟುವಟಿಕೆಗಳನ್ನು ಮಾತ್ರ ಲಕ್ಷ್ಯವಿಡದೆ ವಿದ್ಯಾಭ್ಯಾಸ, ಆರೋಗ್ಯ, ಜೀವಕಾರುಣ್ಯ ಮೊದಲಾದುವುಗಳಿಗೂ ಸಮಾನ ಸ್ಥಾನಮಾನವನ್ನು ನೀಡುತ್ತಿದೆ ಮಾತ್ರವಲ್ಲದೆ ಅವುಗಳನ್ನು ಪ್ರಾಯೋಗಿಕವಾಗಿಯೂ ತೋರಿಸಿ ಕೊಡುತ್ತಿದೆ ಎಂದರು. ಭವಿಷ್ಯದ ದಿನಗಳಲ್ಲಿ KCF ತನ್ನ ಕಾರ್ಯಾಚರಣೆಯನ್ನು ಚುರುಕುಗೊಳಿಸಿ ಯುಎಇ ಯ ಎಲ್ಲಾ ಎಮಿರೇಟ್ಸ್ ಗಳಲ್ಲೂ ವಿವಿಧ ಆಸ್ಪತ್ರೆಗಳ ಪ್ರಾಯೋಜಕತ್ವದಲ್ಲಿ ವೈದ್ಯಕೀಯ ಶಿಬಿರ, ವೈದ್ಯಕೀಯ ತಪಾಸಣಾ ಶಿಬಿರ, ವ್ಯಕ್ತಿತ್ವ ವಿಕಸನ ಕ್ಯಾಂಪ್ ಹಾಗೂ ಇನ್ನಿತರ ಕ್ಯಾಂಪೈನ್ ಗಳನ್ನು ಹಮ್ಮಿಕೊಳ್ಳುವ ಯೋಜನೆಗಳನ್ನು ಹೊಂದಿದ್ದು ಪ್ರವಾಸಿಗರ ಜೀವನ ಗುಣ ಮಟ್ಟವನ್ನು ಸುಧಾರಿಸಲು ಅತಿ ಪ್ರಾಮುಖ್ಯತೆ ನೀಡಲಿದೆ ಎಂದು ಅವರು ತಿಳಿಸಿದರು. ಯುಎಇ ಯಾದ್ಯಂತ ಮೂರು ಸಾವಿರಕ್ಕಿಂತಲೂ ಅಧಿಕ ಸದಸ್ಯರನ್ನು ಪಡೆದುಕೊಂಡು ದೈನಂದಿನ ಅಭಿವ್ರದ್ದಿಯತ್ತ ಸಂಚರಿಸುತ್ತಿರುವ KCF, ಪ್ರವಾಸಿ ಕನ್ನಡಿಗರ ಏಕೈಕ ಸಂಘಟನೆಯಾಗಿ ಮಾರ್ಪಾಟಾಗಿದೆ ಎಂದು ಅವರು ಹರ್ಷ ವ್ಯಕ್ತ ಪಡಿಸಿದರು. ಸರ್ವರೂ ಪ್ರಸ್ತುತ ಕ್ಯಾಂಪೈನ್ ನ್ನು ಸದುಪಯೋಗಪಡಿಸಿಕೊಳ್ಳಲು ಅವರು ಕರೆ ನೀಡಿದರು.
ಆಸ್ಪತ್ರೆಯ ಕಾರ್ಪೊರೇಟ್ ಕೋ ಆರ್ಡಿನೇಟರ್ ಡಾ. ರಾಜೀವ್, KCF ಅಬೂಧಾಬಿ ಪ್ರಧಾನ ಕಾರ್ಯದರ್ಶಿ ಹಸೈನಾರ್ ಅಮಾನಿ ಅಜ್ಜಾವರ, KCF ಯುಎಇ ರಾಷ್ಟ್ರೀಯ ಸಮಿತಿ ಸದಸ್ಯ ದಾವೂದು ಮಾಸ್ತರ್ ಸುಳ್ಯ, ಹಕೀಮ್ ತುರ್ಕಳಿಕೆ, KH ಮುಹಮ್ಮದ್ ಸಖಾಫಿ ಈಶ್ವರಮಂಗಿಲ, ಕಬೀರ್ ಬಾಯಂಬಾಡಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ಉದ್ಘಾಟನೆ
ಕರ್ನಾಟಕ ಕಲ್ಚರಲ್ ಫೌಂಡೇಶನ್ (KCF ) ಹೆಚ್ಚಿನ ಯೂನಿವರ್ಸಲ್ ಆಸ್ಪತ್ರೆ ಸಹಬಾಗಿತ್ವದಲ್ಲಿ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭವು ದಿನಾಂಕ 20/2/2015 ರಂದು ಶುಕ್ರವಾರ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಯೂನಿವರ್ಸಲ್ ಆಸ್ಪತ್ರೆಯು ಹಮ್ಮಿಕೊಂಡ ” Touching a Million Hearts ” ಎಂಬ ಕ್ಯಾಂಪೈನ್ ನೊಂದಿಗೆ ಕೈ ಜೋಡಿಸಿದ KCF ಯುಎಇ ಯು ಮಹತ್ವಪೂರ್ಣ ಹೆಜ್ಜೆಯನ್ನು ಮುಂದಿಟ್ಟಿದೆ. ಪ್ರವಾಸಿ ಕನ್ನಡಿಗರಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ KCF ಕೈಗೊಂಡ ಈ ಮಹತ್ವಪೂರ್ಣ ಹೆಜ್ಜೆ ಸಂಘಟನೆಯ ಜೀವಕಾರುಣ್ಯದ ಇನ್ನೊಂದು ಮುಖವಾಗಿದೆ.
ಯೂನಿವರ್ಸಲ್ ಆಸ್ಪತ್ರೆ CEO ಹಾಗೂ ಕಾರ್ಡಿಯೋಲಜಿಸ್ಟ್ ಡಾ. ಜಾರ್ಜ್ ಕೋಶಿ, ಯೂರೋಲಜಿಸ್ಟ್ ಡಾ. ಇಷ್ತಿಹಾಕ್ ಮಂಗಳೂರು, ಡಾ. ರಾಜೀವ್ ಮೊದಲಾದ ವೈದ್ಯರ ತಂಡದಿಂದ ತಪಾಸಣೆಗೆ ಚಾಲನೆ ನೀಡಲಿದ್ದು ದೀರ್ಘ ಒಂದು ತಿಂಗಳುಗಳ ಕಾಲ ಶಿಬಿರವು ಚಾಲ್ತಿಯಲ್ಲಿರಲಿದೆ ಎಂದು KCF ಯುಎಇ ಪ್ರಧಾನ ಕಾರ್ಯದರ್ಶಿ ಹಾಜಿ ಶೈಖ್ ಬಾವ ಮಂಗಳೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹ್ರದಯ ಹಾಗೂ ಕಿಡ್ನಿ ತಪಾಸಣೆಗೆ ಪ್ರತ್ಯೇಕ ವೈದ್ಯರ ತಂಡವನ್ನು ಆಯೋಜಿಸಲಾಗಿದ್ದು ಪ್ರಥಮ ದಿವಸದಂದು ಈಗಾಗಲೇ 50 ಸದಸ್ಯರು ಹೆಸರು ನೋಂದಾಯಿಸಿದ್ದು ಶಿಬಿರದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು. ಶಿಬಿರದ ಮುಖ್ಯ ರುವಾರಿ KCF ಮುಖಾಂತರ ಹೆಸರು ನೋಂದಾಯಿಸಿ ತಮ್ಮ ನೋಂದಾವನಾ ಸಂಖ್ಯೆಯನ್ನು ಕಾತರೀ ಪಡಿಸಿದ ಬಳಿಕವೇ ಈ ಸೌಲಭ್ಯ ದೊರಕಲು ಸಾಧ್ಯ ಎಂದು KCF ಪಧಾದಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.