ಕನ್ನಡ ವಾರ್ತೆಗಳು

ಪ್ಯಾಸೆಂಜರ್ ರೈಲಿನಲ್ಲಿ ನಕಲಿ ‘ಹಿಜಡಾಗಳ’ ಅಸಭ್ಯ ವರ್ತನೆ :ಪ್ರಯಾಣಿಕರಿಗೆ ಮುಜುಗರ

Pinterest LinkedIn Tumblr

hij

ಮಂಗಳೂರು, ಮೇ. 20: ಕೊಂಕಣ ರೈಲ್ವೇ ಮಾರ್ಗದಲ್ಲಿ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಹಾಗೂ ಕಾರವಾರ-ಯಶವಂತಪುರ ಪ್ಯಾಸೆಂಜರ್ ರೈಲಿನಲ್ಲಿ ‘ನಕಲಿ’ ಹಿಜಡಾಗಳ ಹಾವಳಿ ವಿಪರೀತವಾಗಿದೆ. ಹಣಕ್ಕಾಗಿ ಪ್ರಯಾಣಿಕರ ಮೈಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸುವ ಇವರಿಂದಾಗಿ ಸಭ್ಯ ಪ್ರಯಾಣಿಕರು ರೈಲು ಪ್ರಯಾಣದ ವೇಳೆ ಮುಜಗರ ಕ್ಕೀಡಾಗುವುದು ಸಾಮಾನ್ಯವಾಗಿದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ರೈಲ್ವೇ ಇಲಾಖೆಯಲ್ಲಿ ದೂರಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ರೈಲು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಾರವಾರದಿಂದ ಸಂಜೆ ನಗರಕ್ಕೆ ಬರುವ ಬೆಂಗಳೂರು ಪ್ಯಾಸೆಂಜರ್ ರೈಲಿನಲ್ಲಿ ಬೈಂದೂರು ಸ್ಟೇಷನ್‌ನಿಂದ ಹತ್ತಿ ಪ್ರಯಾಣಿಸುವ ನಕಲಿ ಹಿಜಡಾಗಳು ಪ್ರಯಾಣಿಕರಿಗೆ ಕೊಡುವ ಕಾಟ ಅಷ್ಟಿಷ್ಟಲ್ಲ. ಪುರುಷ ಪ್ರಯಾಣಿಕರ ಸೊಂಟಕ್ಕೆ ಚಿವುಟಿ ಹಣ ಕೇಳುವುದು, ಮುತ್ತು ಕೊಡಲು ಬರುವುದು, ಲೈಂಗಿಕಾಂಗಗಳನ್ನು ಸ್ಪರ್ಶಿಸುವ ಇವರು ಮಹಿಳಾ ಪ್ರಯಾಣಿಕರ ಮುಂದೆಯೇ ಅಸಭ್ಯ ವರ್ತನೆ ಪ್ರದರ್ಶಿಸುತ್ತಾರೆ. ‘ಏಯ್ ಹತ್ತು ರೂಪಾಯಿ ಕೊಡೋ’ ಎಂದು ಜೋರು ಮಾಡಿ ಹಣ ಕೇಳುವ ಇವರು ಒಂದೊಮ್ಮೆ ಹಣ ಕೊಡಲು ಹಿಂದೇಟು ಹಾಕಿದರೆ ಅಸಭ್ಯವಾಗಿ ಬೈಯುವುದಲ್ಲದೆ ಮೈಮೇಲಿರೋ ಬೆಲೆಬಾಳುವ ಕೂಲಿಂಗ್ ಗ್ಲಾಸ್, ಕೈಯಲ್ಲಿ ಹಿಡಿದಿರೋ ಮೊಬೈಲ್ ಎಳೆಯಲು ಮುಂದಾಗುತ್ತಾರೆ. ಇಷ್ಟೇ ಅಲ್ಲದೆ ಪ್ರಯಾಣಿಕರು ಧರಿಸಿರುವ ಚಿನ್ನದ ಸರ, ಉಂಗುರವನ್ನೂ ಎಳೆಯಲು ಮುಂದಾಗುವುದು ಆಘಾತಕಾರಿ ಅಂಶ ಅನ್ನುತ್ತಾರೆ ನಿತ್ಯ ಪ್ರಯಾಣಿಕರು.

ಕೆಲದಿನಗಳ ಹಿಂದೆ ಇದೇ ರೀತಿ ಬೈಂದೂರಿನಿಂದ ನಗರಕ್ಕೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರಿಗೆ ಸೊಂಟ ಚಿವುಟಿ ಹಣ ಕೇಳಿದ್ದು ಅಲ್ಲದೆ ಹಣ ಕೊಡದಿದ್ದಾಗ ಮೊಬೈಲ್ ಎಳೆಯಲು ಯತ್ನಿಸಿದ ಘಟನೆಯೂ ನಡೆದಿದೆ. ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಬಳಿ ಬೆಲೆಬಾಳುವ ಸೊತ್ತುಗಳು ಇರುತ್ತವೆ. ಹೀಗಿರುವಾಗ ಟಿಕೆಟ್ ಇಲ್ಲದೆ ರೈಲು ಪ್ರಯಾಣಿಸುವ ಇಂಥವರು ಕೊಡುವ ಕಾಟ ಅಷ್ಟಿಷ್ಟಲ್ಲ. ಕೈಯ ಬೆರಳಿನ ಮಧ್ಯೆ ನೋಟನ್ನು ಮಡಚಿ ಇಟ್ಟುಕೊಂಡು ರೈಲು ಬೋಗಿಯಲ್ಲಿ ಗೂಂಡಾಗಿರಿ ಪ್ರದರ್ಶಿಸುವ ಇವರ ಮೇಲೆ ರೈಲ್ವೇ ಪೊಲೀಸರೂ ಕ್ರಮ ಕೈಗೊಳ್ಳಲು ಮುಂದಾಗದೇ ಇರುವುದು ದುರಾದೃಷ್ಟವೇ ಸರಿ. ರೈಲಿನಲ್ಲಿ ದರೋಡೆ, ಹಲ್ಲೆ ಪ್ರಕರಣಗಳು ನಡೆಯುವ ಮುನ್ನ ಇನ್ನಾದರೂ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕಾಗಿದೆ ಅನ್ನೋದು ರೈಲು ಪ್ರಯಾಣಿಕರ ಆಗ್ರಹವಾಗಿದೆ.

‘ಅಸಲಿ’ಗಳು ಗಮನಿಸಬೇಕು
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜನರಿಗೆ ಕಾಟ ಕೊಟ್ಟು, ಅಸಭ್ಯವಾಗಿ ವರ್ತಿಸಿ ಹಣ ಕೇಳುವವರು, ಕೊಡದಿದ್ದರೆ ಹಲ್ಲೆಗೂ ಮುಂದಾಗುವವರು ‘ಅಸಲಿ’ ಮಂಗಳಮುಖಿಯರಲ್ಲ. ಇವರು ಸೀರೆ ಉಟ್ಟು, ಲಿಪ್‌ಸ್ಟಿಕ್ ಬಳಿದುಕೊಂಡು ಕಮಾಯಿಗಿಳಿದಿರೋ ಬಳ್ಳಾರಿ ಇಲ್ಲವೇ ಇನ್ನಿತರ ಜಿಲ್ಲೆಗಳಿಂದ ಬಂದಿರೋ ‘ನಕಲಿ’ಯರು. ಜಿಲ್ಲೆಯಲ್ಲಿ ಈ ಹಿಂದೆಯೂ ಕಲೆಕ್ಷನ್‌ಗಿಳಿದಿದ್ದ ಇವರನ್ನು ಅಸಲಿ ಮಂಗಳಮುಖಿಯರೇ ಹಿಡಿದು ಥಳಿಸಿರೋ ಘಟನೆಗಳು ನಡೆದಿವೆ.

ಜನರನ್ನು ಯಾಮಾರಿಸಿ ಹಣ, ಮೊಬೈಲ್ ದೋಚಿ ಪರಾರಿಯಾದ ಅದೆಷ್ಟೋ ಉದಾಹರಣೆಗಳಿವೆ. ಇಂಥ ಪ್ರಕರಣಗಳಿಂದ ಅಸಲಿ ಮಂಗಳಮುಖಿಯರನ್ನೂ ಜನರು ಸಂಶಯದಿಂದ ನೋಡುವ ಪರಿಸ್ಥಿತಿ ಎದುರಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಮಂಗಳಮುಖಿಯರ ಸಂಘಟನೆ, ನಾಯಕರು ಈ ಬಗ್ಗೆ ಗಮನಿಸಬೇಕಾದ ತುರ್ತು ಅಗತ್ಯವಿದೆ.

Comments are closed.