ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿಯೂ ದಿನದ 24 ಗಂಟೆ ವಿದ್ಯುತ್‌ಗೆ ಚಿಂತನೆ :ಮೆಸ್ಕಾಂ ಭವನ ಉದ್ಘಾಟಿಸಿ ಸಚಿವ ಡಿಕೆಶಿ

Pinterest LinkedIn Tumblr

Mescom_opnig_photo_1

ಮಂಗಳೂರು.ಮೆ.20: ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ)ನ ನೂತನ ಆಡಳಿತ ಕಚೇರಿ ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿಯಲ್ಲಿ 25 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡ್ಡಿದ್ದು 61ಸಾವಿರ ಚದರ ಅಡಿ ವಿಸ್ತೀರ್ಣವದಲ್ಲಿ 8 ಅಂತಸ್ತುಗಳನ್ನು ಹೊಂದಿರುವ ಸ್ವಂತ ಕಟ್ಟಡ ‘ಮೆಸ್ಕಾಂ ಭವನ’ದ ಉದ್ಘಾಟನ ಸಮಾರಂಭ ಗುರುವಾರ ನಡೆಯಿತು.

ರಾಜ್ಯ ಇಂಧನ ಸಚಿವ ಡಿ.ಕೆ.ಶಿವ ಕುಮಾರ್ ಅವರು ನೂತನ ‘ಮೆಸ್ಕಾಂ ಭವನ’ವನ್ನು ಉದ್ಘಾಟಿಸಿದರು. ಬಳಿಕ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉಡುಪಿಯಂತೆ ಮಂಗಳೂರಿನಲ್ಲಿಯೂ ದಿನದ 24 ಗಂಟೆ ವಿದ್ಯುತ್ ನೀಡಬೇಕೆಂಬ ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಸರಕಾರ ಪ್ರಯತ್ನ ಮಾಡುತ್ತಿದೆ. ಈ ಬೇಡಿಕೆಯನ್ನು ಈಡೇರಿಸಲು ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಹೇಳಿದರು.

Mescom_opnig_photo_2 Mescom_opnig_photo_3

ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಸರಬರಾಜು ನೀಡುವ ನಿಟ್ಟಿನಲ್ಲಿ ಸರಕಾರ ಯೋಜನೆಯನ್ನು ಹಾಕಿಕೊಂಡಿದೆ.2018ರಲ್ಲಿ ರಾಜ್ಯದ ಎಲ್ಲಾ ರೈತರಿಗೂ ಹಗಲು ಹೊತ್ತಿನಲ್ಲಿ 5 ಗಂಟೆ ವಿದ್ಯುತ್ ನೀಡುವ ಯೋಜನೆಯ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆ.ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರಕಾರ ಒತ್ತು ನೀಡುತ್ತಿದ್ದು ಎಲ್ಲಾ ಕಡೆಯೂ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರಕಾರ ಬೆಂಬಲಿಸುತ್ತದೆ. ರಾಜ್ಯದಲ್ಲಿ 2018ರೊಳಗಡೆ 5 ಸಾವಿರ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ದಿನಂಪ್ರತಿ ಹತ್ತು ಸಾವಿರ ಮೆ.ವ್ಯಾ ವಿದ್ಯುತ್ ಬೇಡಿಕೆಯಿದೆ. ಇದನ್ನು ಪೂರೈಸಲು ಸರಕಾರ ಬದ್ಧವಾಗಿದೆ. ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ಚಿಂತಿಸುವ ಅಗತ್ಯವಿದೆ ಎಂದು ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಇಲಾಖೆಯಲ್ಲಿ 25 ಸಾವಿರ ಉದ್ಯೋಗ ಭರ್ತಿ ಮಾಡುವ ಅಗತ್ಯವಿತ್ತು. ಅದರಲ್ಲಿ ಈಗಾಗಲೆ 12,500 ನೇಮಕಾತಿ ಮಾಡಲಾಗಿದ್ದು ಉಳಿದ 12,500 ನೇಮಕಾತಿಯನ್ನು ಮುಂದಿನ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಸಚಿವ ಡಿಕೆಶಿ ಹೇಳಿದರು.

Mescom_opnig_photo_4 Mescom_opnig_photo_5

 

ದ.ಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಥಿತಿಗಳಾಗಿದ್ದರು. ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಸ್ವಾಗತಿಸಿ, ಪ್ರಸ್ತಾವನೆಗೈದ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಚಿಕ್ಕ ನಂಜಪ್ಪ ಅವರು, ಮೆಸ್ಕಾಂ ಗ್ರಾಹಕರ ದೂರು ಸ್ವೀಕಾರಕ್ಕೆ ಜುಲೈ 1ರೊಳಗೆ ನೂತನ ಸರ್ವಿಸ್ ಸ್ಟೇಷನ್,ಸಹಾಯವಾಣಿ ಆರಂಭ :-ಮೆಸ್ಕಾಂಗ್ರಾಹಕರ ದೂರುಗಳನ್ನು ಒಂದು ಕಡೆ ಸ್ವೀಕರಿಸಿ ಕ್ಲಪ್ತ ಸಮಯದಲ್ಲಿ ಪರಿಹಾರ ನೀಡಲು ಜೂನ್ 15ರಿಂದ ಜುಲೈ 1ರೊಳಗೆ ಕದ್ರಿಯಲ್ಲಿ ಸೆಂಟ್ರಲ್ ಸರ್ವಿಸ್ ಸ್ಟೇಷನ್ ಹಾಗೂ 1912 ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಮೆಸ್ಕಾಂ ವತಿಯಿಂದ 6 ಹೊಸ ಸಬ್ ಸ್ಟೇಶನ್‌ಗಳನ್ನು ಆರಂಭಿಸಲಾಗುವುದು.ಮೆಸ್ಕಾಂನ ವಿವಿಧ ವಿಭಾಗದಲ್ಲಿ ಕೊರತೆ ಇದ್ದ ಖಾಯಂ ನೌಕರರ ಸಂಖ್ಯೆಯನ್ನು ಹೆಚ್ಚಿಸಲಾಗುವುದು.ಈಗಾಗಲೆ 500 ವಿವಿಧ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ ಶೀಘ್ರದಲ್ಲಿ ಈ ಹುದ್ದೆಗಳನ್ನು ತುಂಬಲಾಗುವುದು.ಲೈನ್ ಮೆನ್‌ಗಳ ಕೊರತೆಯನ್ನು ತುಂಬಲು ಹೊಸ ನೇಮಕಾತಿ ನಡೆದಿದೆ.ನೀರಾವರಿಗೆ 7000ಐಪಿ ಸೆಟ್‌ಗಳನ್ನು ಸಕ್ರಮಗೊಳಿಸಿ ನೀಡಲಾಗಿದೆ.ಶೀಘ್ರದಲ್ಲಿ 14,000 ಐಪಿ ಸೆಟ್‌ಗಳನ್ನು ಅಳವಡಿಸಲು ಕ್ರಮ ಕೈ ಗೊಳ್ಳಲಾಗುವುದು.ಸುಳ್ಯದ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ 1.10 ಕೆ.ವಿ ಸೆಟ್ ಸಬ್ ಸ್ಟೇಷನ್ ಆಗಿ ಮಾರ್ಪಾಡು ಮಾಡಲು ಅರಣ್ಯ ಭೂಮಿ ಹಾಗೂ ಇತರ ಕಂದಾಯ ಭೂಮಿ ನೀಡುವ ಸಮಸ್ಯೆ ಪರಿಹಾರಗೊಂಡರೆ ಆ ಭಾಗದ ವಿದ್ಯುತ್ ಸಮಸ್ಯೆಗೆ ಪರಿಹಾರ ದೊರೆಯಲಿದೆ ಎಂದು ಚಕ್ಕ ನಂಜಪ್ಪ ಅವರು ಸಭೆಯಲ್ಲಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೆಸ್ಕಾಂ ತಾಂತ್ರಿಕ ನಿರ್ದೇಶಕ ಕೆ.ರಾಮಕೃಷ್ಣ, ಮುಖ್ಯ ಆರ್ಥಿಕ ಅಧಿಕಾರಿ ಡಿ.ಆರ್.ಶ್ರೀನಿವಾಸ್, ಮುಖ್ಯ ಇಂಜಿನಿಯರ್ ಆನಂದ್ ನಾಯಕ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ಮನಪಾ ಮೇಯರ್ ಹರಿನಾಥ್, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಮನಪಾ ಸದಸ್ಯ ಲ್ಯಾನ್ಸ್‌ಲಾಟ್ ಪಿಂಟೋ, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಕ.ವಿ.ಪ್ರ.ನಿ.ನಿ. ವ್ಯವಸ್ಥಾಪಕ ನಿರ್ದೇಶಕ ಜಾವೇದ್ ಅಖ್ತರ್, ದ.ಕ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಕ.ವಿ.ಪ್ರ.ನಿ.ನಿ. ನಿರ್ದೇಶಕ ಎಸ್.ಸುಮಂತ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷೆ ಕೃಪಾ ಅಮರ್ ಆಳ್ವ, ಮೂಡ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷೆ ದಿವ್ಯಪ್ರಭಾ ಗೌಡ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಜಯರಾಮಗೌಡ, ಪುಟ್ಟಸ್ವಾಮಿಗೌಡ, ಎಚ್.ನಾಗೇಶ್, ಶಶಿಧರ್ ಹೆಗ್ಡೆ, ಶ್ರೀಧರ್, ಮೆಸ್ಕಾಂ ನಿರ್ದೇಶಕರಾದ ಎ.ಎನ್ ಜಯರಾಜ್, ಎಂ.ಡಿ.ರವಿ, ಎಸ್.ಸಂಜೀವ ಶೆಟ್ಟಿ, ಸುರೇಂದ್ರ ಬಿ. ಕಂಬಳಿ, ಬಿ.ವಿ.ಜಯರಾಂ, ರಿಯಾಜ್ ಅಹ್ಮದ್, ಮಲ್ಲಿಕಾ ಪಿ. ಪಕ್ಕಳ, ಸುಧೀರ್ ಕುಮಾರ್, ಸದಾಶಿವ ಅಮೀನ್, ಕೆ.ಎಂ.ಕೃಷ್ಣಪ್ಪ ಮುಂತಾದವರು ಉಪಸ್ಥಿತರಿದ್ದರು.

Comments are closed.