ಕನ್ನಡ ವಾರ್ತೆಗಳು

ಎಸ್ಸೆಸ್ಸೆಲ್ಸಿ ಫಲಿತಾಂಶ: 8ನೇ ಸ್ಥಾನದಲ್ಲಿದ್ದ ದ.ಕ ಜಿಲ್ಲೆ ಈ ಬಾರಿ 3ನೇ ಸ್ಥಾನಕ್ಕೆ

Pinterest LinkedIn Tumblr

sslc_reslut_toper

ಮಂಗಳೂರು, ಮೇ 17:  ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳೆದ ವರ್ಷ ರಾಜ್ಯದಲ್ಲಿ 8ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ 3ನೇ ಸ್ಥಾನ ಪಡೆದುಕೊಂಡಿದೆ. 2015-16ನೇ ಸಾಲಿನಲ್ಲಿ ದ.ಕ. ಜಿಲ್ಲೆಯಿಂದ ಒಟ್ಟು 15,291 ಹುಡುಗರು ಮತ್ತು 15,375 ಹುಡುಗಿಯರು ಸೇರಿ ಒಟ್ಟು 30,666 ಮಂದಿ ಹಾಜರಾಗಿದ್ದು, ಈ ಪೈಕಿ 12,836 ಮಂದಿ ಹುಡುಗರು ಮತ್ತು 14,152 ಮಂದಿ ಹುಡುಗಿಯರು ಸೇರಿ ಒಟ್ಟು 26,988 ಮಂದಿ ಉತ್ತೀರ್ಣರಾಗಿದ್ದಾರೆ. ಜಿಲ್ಲೆಗೆ ಈ ಬಾರಿ ಶೇ. 88.01 ಫಲಿತಾಂಶ ಬಂದಿದೆ.

ಜಿಲ್ಲೆಯ ವಿದ್ಯಾರ್ಥಿ ರಾಜ್ಯಕ್ಕೆ ದ್ವಿತೀಯ

ಬೆಳ್ತಂಗಡಿಯ ಲಾಲ ಸೈಂಟ್ ಮೇರೀಸ್ ಆಂಗ್ಲ ಶಾಲೆಯ ವಿದ್ಯಾರ್ಥಿ ಸುಶ್ರುತ್ ಯು.ಕೆ. 624 ಅಂಕ ಗಳಿಸುವ ಮೂಲಕ ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿ ಆದಿತ್ಯ ಕಾಮತ್, ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ರಮ್ಯಾಶ್ರೀ ಅವರಿಗೆ 623ಅಂಕ ಲಭಿಸಿದೆ.

ಸುರತ್ಕಲ್: ರಮ್ಯಶ್ರೀಗೆ 623 ಅಂಕ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್ ವಿದ್ಯಾದಾಯಿನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ರಮ್ಯಶ್ರೀಗೆ ನಿರೀಕ್ಷೆ ಇದ್ದದ್ದು ಶೇ. 95 ಅಂಕ. ಆದರೆ ದೊರೆತಿದ್ದು, ಶೇ. 99.68 ಅಂಕ. ಈಕೆ ದಿನಕ್ಕೆ 3-4 ಗಂಟೆ ಹಾಗೂ ಪರೀಕ್ಷೆ ಸಮಯದಲ್ಲಿ 7-8 ಗಂಟೆ ಅಧ್ಯಯನ ಮಾಡುತ್ತಿದ್ದು, ಶಿಕ್ಷಕ ವರ್ಗದ ಪ್ರೋತ್ಸಾಹ ಹೆತ್ತವರ ಸಹೋದರನ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ ಅಂತಾರೆ ರಮ್ಯಶ್ರೀ. ಈಕೆ ಹೊಸಬೆಟ್ಟು ತಾವರೆಕೊಳ ನಿವಾಸಿ ಎಲ್‌ಐಸಿ ಉದ್ಯೋಗಿ ರಮೇಶ್-ಮೀರಾ ದಂಪತಿಯ ಪುತ್ರಿ. ಈಕೆ ಇಂಗ್ಲಿಷ್ ಮತ್ತು ಮೂರನೇ ಭಾಷೆ ಕನ್ನಡದಲ್ಲಿ ಮಾತ್ರ 99 ಅಂಕ ಪಡೆದಿದ್ದು, ಉಳಿದ ಎಲ್ಲ ವಿಷಯಗಳಲ್ಲಿ ಶೇಕಡ 100 ಅಂಕ ಪಡೆದಿದ್ದಾರೆ.

ಸುರತ್ಕಲ್ ಮಹಾಲಿಂಗೇಶ್ವರ ಶಾಲೆಯ ಬಿಂದು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 99ರಷ್ಟು ಅಂಕ ಗಳಿಸಿದ್ದಾರೆ.

Write A Comment