ಕನ್ನಡ ವಾರ್ತೆಗಳು

27ರಿಂದ 29 :ಮಂಗಳೂರಿನಲ್ಲಿ ಸರ್ಫಿಂಗ್ ಸ್ಪರ್ಧೆ — ಇದು ಕರ್ನಾಟಕದಲ್ಲೇ ಪ್ರಥಮ / ಸಸಿಹಿತ್ಲು ಬೀಚ್‌‌ಗೆ ಆಗಮಿಸಲಿರುವ ದೇಶ ವಿದೇಶಗಳ ಸರ್ಫರ್‌ಗಳು

Pinterest LinkedIn Tumblr

Surfing_Press_Meet_1

ಮಂಗಳೂರು, ಮೇ.13 : ಮಂಗಳೂರಿನ ಸುರತ್ಕಲ್ ಸಮೀಪದ ಸಸಿಹಿತ್ಲು ಬೀಚ್‌ನಲ್ಲಿ ಮೇ 27ರಿಂದ 29ರವರೆಗೆ ‘ಆಲ್ ಕಾರ್ಗೊ ಇಂಡಿಯನ್ ಓಪನ್ ಆಫ್ ಸರ್ಫಿಂಗ್’ ಸ್ಪರ್ಧೆಯನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಆಯೋಜಿಸಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾಹಿತಿ ನೀಡಿದ್ದಾರೆ.

ಶುಕ್ರವಾರ ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು, ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಈ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದ್ದು, ಇಲ್ಲಿ ನಡೆಯುವ ಮೂರು ದಿನಗಳ ರಾಷ್ಟ್ರೀಯ ಸರ್ಫಿಂಗ್ ಸ್ಪರ್ಧೆಯಲ್ಲಿ ದೇಶಾದ್ಯಂತದ ಖ್ಯಾತ ಸರ್ಫರ್‌ಗಳು ಮಂಗಳೂರಿಗೆ ಆಗಮಿಸಲಿದ್ದಾರೆ.ಈ ಮೂಲಕ ಕರ್ನಾಟಕದ ಬೀಚ್‌ಗಳಲ್ಲಿ ಸರ್ಫಿಂಗ್ ಮತ್ತು ಸಾಹಸಮಯ ಜಲ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಲಾಗಿದೆ. ಜೊತೆಗೆ ದೇಶ ವಿದೇಶಗಳ ಸರ್ಫರ್ ಸಾಹಸಿಗಳು ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸರ್ಫಿಂಗ್ ಉತ್ಸವದ ವಾತಾವರಣವನ್ನು ಒದಗಿಸಲಿದ್ದಾರೆ ಎಂದರು.

Surfing_Press_Meet_2

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾದ ಕಿಶೋರ್ ಕುಮಾರ್ ಅವರು ಮಾತನಾಡಿ,ರಾಷ್ಟ್ರೀಯ ಸರ್ಫಿಂಗ್ ಚಾಂಪಿಯನ್‌ಶಿಪ್ ಸ್ಪರ್ಧೆ ಇದಾಗಿದ್ದು, 16 ವರ್ಷದೊಳಗಿನ, ಜೂನಿಯರ್ ಯುವಕರು- 17ರಿಂದ 22, ಹಿರಿಯ ಪುರುಷರು 22ರಿಂದ 28, ಮಾಸ್ಟರ್ಸ್ ಪುರುಷರು 28 ಮತುತ ಮೇಲ್ಪಟ್ಟವರು ಹಾಗೂ ಮಹಿಳಾ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. ಅಂತಾರಾಷ್ಟ್ರೀಯ ಸರ್ಫರ್‌ಗಳಿಗಾಗಿ ಮುಕ್ತ ಪುರುಷರ ವಿಭಾಗದಲ್ಲಿಯೂ ಸ್ಪರ್ಧೆ ನಡೆಯಲಿದೆ.

ಸ್ಪರ್ಧೆಯಲ್ಲಿ ಆಸ್ಟ್ರೇಲಿಯಾ, ಫ್ರಾನ್ಸ್ ಹಾಗೂ ಇಂಡೋನೇಶ್ಯದ ಸರ್ಫಿಂಗ್ ಕ್ಷೇತ್ರದ ಅಂತಾರಾಷ್ಟ್ರೀಯ ಚಾಂಪಿಯನ್‌ಗಳು ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ. ವಿವಿಧ ವಿಭಾಗಗಳಿಗೆ ಒಟ್ಟು 6 ಲಕ್ಷ ರೂ. ವೌಲ್ಯದ ನಗದು ಬಹುಮಾನವನ್ನು ವಿತರಿಸಲಾಗುವುದು. ಈಗಾಗಲೇ 50 ಸರ್ಫರ್‌ಗಳು ಹೆಸರು ನೋಂದಾಯಿಸಿಕೊಂಡಿದ್ದು, ಮೇ 24ರವರೆಗೆ 100ಕ್ಕೂ ಅಧಿಕ ಮಂದಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

Surfing_Press_Meet_7 Surfing_Press_Meet_8 Surfing_Press_Meet_9 Surfing_Press_Meet_10 Surfing_Press_Meet_11 Surfing_Press_Meet_12 Surfing_Press_Meet_13

Surfing_Press_Meet_3 Surfing_Press_Meet_4 Surfing_Press_Meet_5 Surfing_Press_Meet_6

ಕರಾವಳಿಯ ಸಮುದ್ರದಲ್ಲಿ ಐದರಿಂದ ಎಂಟು ಅಡಿಗಳವರೆಗೆ ಪುಟಿದೇಳುವ ಸಮುದ್ರದ ಅಲೆಗಳನ್ನು ಎದುರಿಸುತ್ತಾ ಸಾಗುವುದೇ ಸರ್ಫರ್‌ಗಳಿಗೆ ಸವಾಲಿನ ವಿಷಯವಾಗಿದೆ. ದೇಶದ ಕಿರಿಯ ಹಾಗೂ ಖ್ಯಾತ ಸರ್ಫರ್‌ಗಳಾಗಿ ಗುರುತಿಸಿಕೊಂಡಿರುವ ಮಂಗಳೂರಿನ ಅನೀಶಾ ನಾಯಕ್ ಹಾಗೂ ಸಿಂಚನಾ ಗೌಡ ಮಹಿಳಾ ವಿಭಾಗದಲ್ಲಿ ತಮ್ಮ ಸಾಹಸವನ್ನು ಪ್ರದರ್ಶಿಸಲಿದ್ದಾರೆ. ಇದರ ಜತೆಯಲ್ಲೇ ಪುರುಷರ ವಿಭಾಗದಲ್ಲಿ ಮುಲ್ಕಿಯ ದೀಕ್ಷಿತ್ ಸುವರ್ಣ ಹಾಗೂ ಕಿರಣ್ ಕುಮಾರ್ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ ಸಮಿತಿಯ ಯತೀಶ್ ಬೈಕಂಪಾಡಿ, ಸರ್ಫರ್ ರಾಮ್ ಮೋಹನ್ ಪರಂಪಜೆ, ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಕೆಸಿಸಿಐ ಅಧ್ಯಕ, ರಾಮ್‌ಮೋಹನ್ ಪೈ ಮಾರೂರು ಮುಂತಾದವರು ಉಪಸ್ಥಿತರಿದ್ದರು.

Write A Comment