ಕನ್ನಡ ವಾರ್ತೆಗಳು

ಬಂಟ್ವಾಳ ತಾ.ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಚಂದ್ರಹಾಸ ಕರ್ಕೇರಾ- ಉಪಾಧ್ಯಕ್ಷರಾಗಿ ಅಬ್ಬಾಸ್ ಅಲಿ ಬಿ.ಎಂ ಆಯ್ಕೆ

Pinterest LinkedIn Tumblr

bntwl_Tp_eltion_selct

ಬಂಟ್ವಾಳ, ಮೇ .11:  ಇಲ್ಲಿನ ತಾಲೂಕು ಪಂಚಾಯತ್ ನ  ನೂತನ ಸಾಲಿನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಚಂದ್ರಹಾಸ ಕರ್ಕೇರಾ ಹಾಗೂ ಉಪಾಧ್ಯಕ್ಷರಾಗಿ ಅದೇ ಪಕ್ಷದ ಅಬ್ಬಾಸ್ ಅಲಿ ಬಿ.ಎಂ.ಅವಿರೋಧವಾಗಿ ಆಯ್ಕೆಯಾದರು.

ಬಿ.ಸಿ.ರೋಡಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಚುನಾವಣಾಧಿಕಾರಿ ಹಾಗೂ ಮಂಗಳೂರು ಆಯುಕ್ತ ಡಾ. ಅಶೋಕ್ ಡಿ.ಆರ್ ಈ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ನಾಮಪತ್ರ ಸಲ್ಲಿಕೆ:

ತಾ.ಪಂ.ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿಯನ್ನು ಸರ್ಕಾರ ಹೊರಡಿಸಿತ್ತು. ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಹಾಗೂ ಭೂ ಅಭಿವೃದ್ದಿ ಬ್ಯಾಂಕ್ ಉಪಾಧ್ಯಕ್ಷ ಸಂಜೀವ ಪೂಜಾರಿ ನಡುವೆ ಪೈಪೋಟಿ ಇತ್ತು. ಪಕ್ಷದ ವರಿಷ್ಠರ ತೀರ್ಮಾನದಂತೆ ಕಾಂಗ್ರೆಸ್‌ನ ಹಿರಿಯ ಸದಸ್ಯ ಹಾಗೂ ತಾ.ಪಂ.ನ ಮಾಜಿ ಉಪಾಧ್ಯಕ್ಷ ಚಂದ್ರಹಾಸ ಕರ್ಕೆರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಅಬ್ಬಾಸ್ ಅಲಿ ಅವರ ಹೆಸರು ಅಂತಿಮಗೊಳಿಸಲಾಯಿತು.

ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಇಬ್ಬರು ಸದಸ್ಯರು ಚುನಾವಣಾಧಿಕಾರಿಗೆ ನಾಮಪತ್ರವನ್ನು ಸಲ್ಲಿಸಿದರು. ಬಿಜೆಪಿಯಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಸಂಜೆ 3 ಗಂಟೆಗೆ ನಡೆದ ಆಯ್ಕೆ ಪ್ರಕ್ರಿಯೆ ಸಭೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಗೊಳಿಸಲಾಯಿತು. ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ ಉಪಸ್ಥಿತರಿದ್ದರು.

ತಾ.ಪಂ. ಸದಸ್ಯ ಬಲ:

ಬಂಟ್ವಾಳ ತಾಲೂಕು ಪಂಚಾಯಿತಿ ೩೪ ಸದಸ್ಯ ಬಲವನ್ನು ಹೊಂದಿದೆ. ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಹಿಂದಿಗಿಂತ ಒಂದು ಸ್ಥಾನ ಹೆಚ್ಚಳಗೊಂಡಿದೆ. ಈ ಪೈಕಿ ಕಾಂಗ್ರೆಸ್ 22 ಸ್ಥಾನಗಳನ್ನು ಗೆದ್ದುಕೊಂಡು ಪೂರ್ಣ ಬಹುಮತವನ್ನು ಪಡೆದಕೊಂಡಿದ್ದರೆ, ಬಿಜೆಪಿ 12 ಸ್ಥಾನಗಳನ್ನು ಪಡೆದುಕೊಂಡಿತ್ತು. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರು ಅನಾಯಾಸವಾಗಿ ಅಧಿಕಾರದ ಗದ್ದುಗೆ ಏರಿದರು.

ಅಭಿನಂದನೆಯ ಮಹಾಪೂರ:

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ, ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಮಂಜುಳಾ ಮಾಧವ ಮಾವೆ, ಮಮತಾಗಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹಾರ ಹಾಕಿ ಅಭಿನಂದಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು.

Write A Comment