ಕನ್ನಡ ವಾರ್ತೆಗಳು

ಶಾಲೆ ಕಡೆ ನನ್ನ ನಡೆ ಶಿಕ್ಷಣ ನನ್ನ ಮೂಲಭೂತ ಹಕ್ಕು – ಕೃಪಾ ಆಳ್ವ

Pinterest LinkedIn Tumblr

kripa_alva_pic

ಮ೦ಗಳೂರು, ಮೇ. 07:  ಸರ್ವೋಚ್ಛ ನ್ಯಾಯಾಲಯವು 1992 ರಲ್ಲಿ ಎಲ್ಲಾ ಮಕ್ಕಳು ಉಚಿತ ಕಡ್ಡಾಯ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಪಡೆಯುವುದನ್ನು ಮೂಲಭೂತ ಹಕ್ಕಾಗಿ ಐತಿಹಾಸಿಕ ತೀರ್ಪು ನೀಡಿರುತ್ತದೆ. ಇದಕ್ಕಾಗಿ ಕೇಂದ್ರ ಸರ್ಕಾರವು 2009ರಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ 2009 ನ್ನು ಜಾರಿಗೆ ತಂದಿದೆ. ಈ ಕಾಯ್ದೆಯು ಕಲಂ 03 ರಂತೆ 6ರಿಂದ 14 ವರ್ಷದೊಳಗಿನ ಪ್ರತಿ ಮಗು ತನ್ನ ಸಮೀಪದ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರ್ತಿ ಮಾಡುವವರೆಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುವ ಹಕ್ಕನ್ನು ಹೊಂದಿದೆ ಎಂದು ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷೆ ಕೃಪಾ ಆಳ್ವ ಹೇಳಿದ್ದಾರೆ.

ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಇದರ ಮೇಲು ಉಸ್ತುವಾರಿಯನ್ನು ವಹಿಸಿರುವುದರಿಂದ ಶಾಲೆಗೆ ಹೋಗದ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಶಾಲೆ ಕಡೆ ನನ್ನ ನಡೆ ಶಿಕ್ಷಣ ನನ್ನ ಮೂಲಭೂತ ಹಕ್ಕು ಎಂಬ ವಿನೂತನ ಆಂದೋಲನವನ್ನು ರೂಪಿಸಿದೆ.

ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಟ್ಟದ ಜನಾಂದೋಲನ ಸಮಿತಿ, ತಾಲೂಕು ಮಟ್ಟದಲ್ಲಿ ತಾಲೂಕು ಜನಾಂದೋಲನ ಸಮಿತಿ, ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ/ ಪಟ್ಟಣ ಜನಾಂದೋಲನ ಸಮಿತಿ ಹಾಗೂ ಗ್ರಾಮ ವಾರ್ಡ್‌ಗಳಲ್ಲಿ ಗ್ರಾಮ ವಾರ್ಡ್ ಜನಾಂದೋಲ ಸಮಿತಿಯನ್ನು ರಚಿಸಿದ್ದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.

ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯಬಾರದು. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ ಕರೆತರುವ ಕುರಿತು ಏಕ ಕಾಲಕ್ಕೆ ರಾಜ್ಯದ 30 ಜಿಲ್ಲೆಗಳಲ್ಲಿ ಬೃಹತ್ ಜಾಗೃತಿ ಜನಾಂದೋಲನ ನಡೆಸಬೇಕಾಗಿದೆ. ಕನಿಷ್ಟ ಪಿ.ಯು.ಸಿ ವರೆಗಾದರೂ ವಿದ್ಯಾಭ್ಯಾಸ ಕಡ್ಡಾಯವಾಗಿರಬೇಕು ಎಂದು ಕೃಪಾ ಆಳ್ವ ಹೇಳಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಉಸ್ಮಾನ್ ಮುಂತಾದವರು ಉಪಸ್ಥಿತರಿದ್ದರು.

Write A Comment