ಕನ್ನಡ ವಾರ್ತೆಗಳು

ಕುಂದಾಪುರದ ಯಡಮೊಗೆಯಲ್ಲಿ ನೀರಿಗೆ ಸಿಕ್ಕಾಪಟ್ಟೆ ಬರ: ಕುಡಿಯುವ ನೀರಿಗೂ ಇಲ್ಲಿ ತತ್ವಾರ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಇದು ಪಶ್ಚಿಮ ಘಟ್ಟದ ತಪಲು ಪ್ರದೇಶ. ಒಂದು ಭಾಗದ ಎಲ್ಲೆಡೆ ಹಚ್ಚಹಸಿರು ಕಂಗೊಳಿಸಿದರೂ ಕೂಡ ಊರಲ್ಲಿ ಮಾತ್ರ ಬರದ ಛಾಯೆ. ಒಣಗಿದ ನೆಲ. ಬಿಸಿಲ ಬೇಗೆಗೆ ಬಸವಳಿದ ಗಿಡಮರಗಳು. ಬತ್ತಿದ ಬಾವಿಗಳು, ಕೊಳವೆ ಬಾವಿಯಲ್ಲೂ ನೀರಿಗೆ ಬರ. ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಕೂಡ ಸ್ಥಳೀಯ ಪಂಚಾಯತ್ ಮಾತ್ರ ಜಾಣಕುರುಡು ಪ್ರದರ್ಶಿಸ್ತಾ ಇದೆ. ಯಡಮೊಗೆ ಜನರ ಬವಣೆಯ ಕುರಿತ ಸ್ಟೋರಿಯಿದು.

ಕುಂದಾಪುರ ತಾಲೂಕಿನಿಂದ ಮೂವತ್ತೆಂಟು ಕಿಲೋಮೀಟರ್ ಸಾಗಿದರೇ ಸಿಗುವ ಪ್ರದೇಶವೇ ಯಡಮೊಗೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಯಡಮೊಗೆ ನಕ್ಸಲ್ ಪೀಡಿತ ಪ್ರದೇಶವೂ ಹೌದು. ಈ ಭಾಗದ ಹಲವೆಡೆ ಈ ಬೇಸಿಗೆಯಲ್ಲಿ ನೀರಿಗೆ ಸಂಚಕಾರ ಬಂದಿದೆ. ಅದರಲ್ಲೂ ಜಂಬೆಹಾಡಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮತ್ತು ಜನತ ಕಾಲೋನಿಯ ಜನರಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ತಲೆದೋರಿದೆ. ಈಗಾಗಲೆ ಇಲ್ಲಿನ ಕುಬ್ಜಾ ನದಿ ಬತ್ತಿದ್ದು ಮಾತ್ರವಲ್ಲದೇ ಈ ಪರಿಸರದ ಎಲ್ಲಾ ತೆರೆದ ಬಾವಿಗಳಲ್ಲಿ ಹುಡುಕಿದರೂ ನಿರೂ ಸಿಗದ ಪರಿಸ್ಥಿತಿಯುಂಟಾಗಿದೆ.

Kundapura_Yadamoge_Water Problem (18) Kundapura_Yadamoge_Water Problem (17) Kundapura_Yadamoge_Water Problem (13) Kundapura_Yadamoge_Water Problem (20) Kundapura_Yadamoge_Water Problem (16) Kundapura_Yadamoge_Water Problem (5) Kundapura_Yadamoge_Water Problem (6) Kundapura_Yadamoge_Water Problem (7) Kundapura_Yadamoge_Water Problem (11) Kundapura_Yadamoge_Water Problem (10) Kundapura_Yadamoge_Water Problem (9) Kundapura_Yadamoge_Water Problem (3) Kundapura_Yadamoge_Water Problem (8) Kundapura_Yadamoge_Water Problem (1) Kundapura_Yadamoge_Water Problem (2) Kundapura_Yadamoge_Water Problem (4) Kundapura_Yadamoge_Water Problem (12) Kundapura_Yadamoge_Water Problem (14) Kundapura_Yadamoge_Water Problem (15) Kundapura_Yadamoge_Water Problem (19)

ಪ್ರತಿವರ್ಷ ಬೇಸಿಗೆ ಬಂತೆಂದರೇ ಇಲ್ಲಿನ ತೆರೆದ ಬಾವಿಗಳು ಬತ್ತುತ್ತದೆ. ಕಿಂಚಿತ್ತೂ ನೀರು ಸಿಗದ ಜನರು ಆಶ್ರಯಿಸಬೇಕಿರುವುದು ಸರಕಾರಿ ಕೊಳವೆ ಬಾವಿಯನ್ನು. ಇರುವ ಎರಡು ಸರಕಾರಿ ಕೊಳವೆ ಬಾವಿಯ ಪೈಕಿ ಒಂದರಲ್ಲಿ ಮಾತ್ರ ನೀರಿದೆ. ಜಂಬೆಹಾಡಿ ನಾಗ-ಬ್ರಹ್ಮ-ಯಕ್ಷಿ ದೈವಸ್ಥಾನದ ಸಮೀಪ ಇರುವ ಈ ಕೊಳವೆ ಬಾವಿಯಿಂದ ನೀರು ಸಮೀಪದ ಜನತಾ ಕಾಲೋನಿಯಲ್ಲಿರುವ ಬೃಹತ್ ಟ್ಯಾಂಕಿಗೆ ಹೋಗುತ್ತದೆ. ಅಲ್ಲಿನಿಂದ ಸಣ್ಣ ಟ್ಯಾಂಕ್‌ಗಳು ಮತ್ತು ನಳ್ಳಿಗಳಿಗೆ ನೀರು ಸರಬರಾಜು ಆಗಲು ವ್ಯವಸ್ಥೆ ಮಾಡಲಾಗಿದೆಯಾದರೂ ಈ ಕೊಳವೆ ಬಾವಿ ಮೋಟಾರು ಕೆಟ್ಟರೇ ವಾರಗಟ್ಟಲೇ ಕುಡಿಯಲು ಹಾಗೂ ಇತರೇ ಅನುಕೂಲಗಳಿಗೆ ನೀರಿಲ್ಲದೇ ವ್ಯಥೆ ಪಡುವಂತಾಗುತ್ತದೆ. ಈ ನಡುವೆಯೇ ಮುಖ್ಯ ಟ್ಯಾಂಕಿಯನ್ನು ಶುಚಿಗೊಳಿಸದೇ ಹಲವು ವರ್ಷಗಳೇ ಆಗಿರುವ ಕಾರಣ ಕೊಳವೆ ಬಾವಿಯಿಂದ ದೊಡ್ಡ ಟ್ಯಾಂಕಿಗೆ ಸರಬರಾಜಾಗುವ ನೀರು ಅಷ್ಟು ಶುದ್ಧವೂ ಆಗಿರುವುದಿಲ್ಲ. ಆದರೇ ಬೇಸಿಗೆ ನಾಲ್ಕೈದು ತಿಂಗಳು ಜನರು ಇದೇ ನೀರನ್ನೇ ಅವಲಂಭಿಸಬೇಕಿದೆ. ಓಟು ಕೇಳಲು ಬರುವ ಜನಪ್ರತಿನಿಧಿಗಳು ನಮ್ಮ ಸಮಸ್ಯೆಗೆ ಸ್ಪಂಧನೆ ನೀಡುತ್ತಿಲ್ಲ, ಇತ್ತ ಮುಖಹಾಕಿಯೂ ಮಲಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ ಇಲ್ಲಿನ ಜನರು.

ಇಲ್ಲಿನ ಜನರು ಹೇಳುವ ಹಾಗೇ ಮೊದಲೆಲ್ಲಾ ವರ್ಷವಿಡೀ ನೀರಿಗೆ ಯಾವುದೇ ಸಮಸ್ಯೆಗಳಿರಲಿಲ್ಲ. ಆದರೇ ಕಳೆದ ನಾಲ್ಕೈದು ವರ್ಷಗಳಿಂದ ಖಾಸಗಿಯವರು ಕೃಷಿ ಹಾಗೂ ತೋಟದ ಸಲುವಾಗಿ ತೋಡಿಸುತ್ತಿರುವ ಕೊಳವೆ ಬಾವಿಯಿಂದಾಗಿ ತೆರೆದ ಬಾವಿಗಳಲ್ಲಿ ನೀರು ಇಲ್ಲದಂತಾಗಿದೆ. ಮನೆಮನೆಗಳಲ್ಲಿ ಹಲವು ಕೊಳವೆ ಬಾವಿಗಳನ್ನು ತೋಡಿಸಿಕೊಂಡಿದ್ದು ಇದಕ್ಕೆಲ್ಲಾ ಸ್ಥಳೀಯ ಯಡಮೊಗೆ ಗ್ರಾಮಪಂಚಾಯತ್ ಯಾವ ರೀತಿಯಾಗಿ ಪರವಾನಿಗೆ ನೀಡಿದೆ ಎಂಬುದು ತಿಳಿದಿಲ್ಲ. ಖಾಸಗಿಯವರು ಬೇಕಾಬಿಟ್ಟಿಯಾಗಿ ಕೊಳವೆ ಬಾವಿ ನಿರ್ಮಿಸಿಕೊಂಡಿರುವ ಕಾರಣ ತೆರೆದ ಬಾವಿ ಕೆರೆಗಳಲ್ಲಿ ನೀರು ಬತ್ತಿದೆ. ಮುಂದಿನ ದಿನಗಳಲ್ಲಿ ಕೊಳವೆ ಬಾವಿಗಳಿಗೆ ಸಂಬಂದಪಟ್ಟವರು ಪರವಾನಿಗೆ ನೀಡಬಾರದು ಎಂದು ಸ್ಥಳಿಯರು ಆಕ್ರೋಷಭರಿತರಾಗಿ ಆಗ್ರಹಿಸಿದ್ದಾರೆ.

ಇನ್ನು ಬತ್ತುವ ಸ್ಥಿತಿಯಲ್ಲಿರುವ ಕೆಲವು ಕೆರೆಗಳ ಅಶುದ್ಧ ನೀರು, ಟ್ಯಾಂಕುಗಳಲ್ಲಿ ಪೋಲಾಗುತ್ತಿರುವ ಅಶುದ್ಧ ನೀರನ್ನೂ ಕೂಡ ಜನರು ಕೊಡಪಾನಗಳಲ್ಲಿ ತುಂಬಿಸಿಕೊಂಡು ಹೋಗಿ ಉಪಯೋಗಿಸುವ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಎಷ್ಟು ಕೊಳವೆ ಬಾವಿಯನ್ನು ಬೇಕಾದರೂ ಕೊರೆಸುತ್ತಾರೆ ಆದರೇ ಬಡವರು ಏನು ಮಾಡುವುದು ಸ್ವಾಮೀ? ಇಲ್ಲಿ ನೀರು ರಸ್ತೆಗೂ ಜಾತಿಯನ್ನು ಎಳೆದು ತರುತ್ತಾರೆ. ಇಲ್ಲಿನ ಸಮಸ್ಯೆ ಪರಿಹಾರ ಮಾಡಲು ಪಂಚಾಯತ್ ಇಚ್ಚಾಶಕ್ತಿ ತೋರಿಸುತ್ತಿಲ್ಲ ಎನ್ನುತ್ತಾರೆ ಈ ಭಾಗದ ಹಿರಿಯ ವ್ಯಕ್ತಿ ನಾರಾಯಣ ಶೆಟ್ಟಿ.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕೂಡ ಯಡಮೊಗೆ ಗ್ರಾಮಪಂಚಾಯತ್ ಮಾತ್ರ ಯಾವುದೇ ಸ್ಪಂದನೆ ನೀಡುತ್ತಿಲ್ಲ. ಇಲ್ಲಿನ ಹೊಸಂಗಡಿ ಭಾಗಿಮನೆ ಎಂಬಲ್ಲಿ ಹರಿಯುವ ವಾರಾಹಿ ನದಿ ನೀರನ್ನು ಯಡಮೊಗೆ ಕುಬ್ಜಾ ನದಿಗೆ ಹಾಯಿಸಿದರೇ ವರ್ಷವಿಡೀ ಇಲ್ಲಿಗೆ ನೀರಿನ ಸಮಸ್ಯೆ ಇಲ್ಲ ಎಂದು ಜನರು ಅಭಿಪ್ರಾಯಪಡ್ತಾರೆ. ಮೊನ್ನೆ ದಿನ ಜನರು ಒಟ್ಟಾಗಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಲು ಗ್ರಾಮಪಂಚಾಯತ್ ಅಧ್ಯಕ್ಷರಿಗೆ ಬರುವಂತೆ ಕೋರಿದರೇ ಅವರ ಬದಲಾಗಿ ಅವರ ಪತಿ ಬಂದು ಸಮಾಜಾಯಿಷಿ ನೀಡಿದ ಘಟನೆಯೂ ಮಾಧ್ಯಮದ ಮುಂದೆಯೇ ನಡೆದಿತ್ತು. ಇತ್ತ ಮಾಧ್ಯಮಕ್ಕೆ ವಿಚಾರಗಳನ್ನು ತಿಳಿಸಿದ ಬಗ್ಗೆ ಕೆಲವರು ಗರಂಗೊಂಡಿದ್ದು ಸ್ಥಳೀಯರಿಗೆ ಬೆದರಿಕೆಯನ್ನು ಹಾಕಿದ್ದಾರೆನ್ನಲಾಗಿದೆ.

ಒಟ್ಟಿನಲ್ಲಿ ಓಟು ಪಡೆದು ಜನರಿಂದ ಆರಿಸಿಬಂದ ಜನಪ್ರತಿನಿಧಿಗಳು ಹಾಗೂ ಸರಕಾರದ ಸಂಬಳವನ್ನು ಪಡೆಯುವ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆ ಹಾಗೂ ಬೇಜವಬ್ದಾರಿ ಪರಿಣಾಮ ಇಲ್ಲಿನ ಜನರಿಗೆ ನೀರಿಗೆ ತತ್ವಾರ ಬಂದಿರುವುದಂತೂ ಸುಳ್ಳಲ್ಲ. ಇನ್ನಾದರೂ ಇವರು ಮುಗ್ಧ ಜನರತ್ತ ಕಣ್ಣು ಹಾಯಿಸುವರೇ ಕಾದು ನೋಡಬೇಕಿದೆ.

Write A Comment