ಕನ್ನಡ ವಾರ್ತೆಗಳು

ಮೂಡುಬಿದಿರೆ : ನವಜಾತ ಶಿಶು ಪತ್ತೆ.

Pinterest LinkedIn Tumblr

child_bntwl_photo

ಮೂಡುಬಿದಿರೆ,ಏ.22: ಇಲ್ಲಿಗೆ ಸಮೀಪದ ಕಲ್ಲಮುಂಡ್ಕೂರು ಮತ್ತು ಪುತ್ತಿಗೆ ಗ್ರಾ.ಪಂ. ಗಡಿಭಾಗದಲ್ಲಿರುವ ಕೈರ್ದಬೆಟ್ಟು ಹಳೆನೀರು ಸೇತುವೆಯಡಿಯಲ್ಲಿ ಅನಾಥವಾಗಿ ನವಜಾತ ಹೆಣ್ಣು ಶಿಶುವೊಂದು ನಿನ್ನೆ ಬೆಳಿಗ್ಗೆ ಪತ್ತೆಯಾಗಿದ್ದು, ಮಗುವಿನ ಹೆತ್ತವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಕಲ್ಲಮುಂಡ್ಕೂರು ಗ್ರಾ.ಪಂ ಬಳಿಯ ಕೈಕುಡೆ ಬಳಿಯ ಮಾಳಿಗೆ ಮನೆಯ ಸಂತೋಷ್ ಭಟ್ ಎಂಬವರು ತಮ್ಮ ಮನೆಯ ನಾಯಿಯ ಜತೆಗೆ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದ ಸಂದರ್ಭದಲ್ಲಿ ಸೇತುವೆಯ ಬಳಿ ನಾಯಿ ಯಜಮಾನನ ಕೈಯಿಂದ ತಪ್ಪಿಸಿಕೊಂಡು ಓಡಿ ಸೇತುವೆಯ ಕೆಳಗಡೆ ಅಳುತ್ತಿದ್ದ ಮಗುವಿನ ಬಳಿ ನಿಂತಿತ್ತು. ಮಗುವಿನ ಮುಖ ಮತ್ತು ಮೈಮೇಲೆ ಇರುವೆಗಳು ಮುತ್ತಿಕೊಂಡಿದ್ದವು. ಇದನ್ನು ಗಮನಿಸಿದ ಅವರು ಅಕ್ಕಪಕ್ಕದ ಮನೆಯವರಿಗೆ ತಿಳಿಸಿದರು. ನಂತರ ಮನೆ ಸಮೀಪದವರೆಲ್ಲಾ ಸೇರಿದರು. ಆದರೆ ಮಗುವನ್ನು ಯಾರೂ ಎತ್ತಿಕೊಳ್ಳಲು ತಯಾರಾಗದೇ ಇದ್ದಾಗ ಕಲ್ಲಮುಂಡ್ಕೂರು ಗ್ರಾ.ಪಂ. ಸದಸ್ಯ ಸತೀಶ್ ಕಲ್ಲಮುಂಡ್ಕೂರು ಅವರು ಮೋರಿಯಿಂದ ಮಗುವನ್ನು ಎತ್ತಿಕೊಂಡು ಬಂದು ಮಗುವಿಗೆ ಆಹಾರವನ್ನು ನೀಡಿ ನಂತರ ಮೂಡುಬಿದಿರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಪುತ್ತಿಗೆ ವ್ಯಾಪ್ತಿಯ ಮೇಲ್ವಿಚಾರಕಿ ಭಾರತಿ ಮತ್ತು ಮೂಡುಬಿದಿರೆ ವ್ಯಾಪ್ತಿಯ ಮೇಲ್ವಿಚಾರಕಿ ನಾಗರತ್ನ, ಸ್ಥಳಕ್ಕೆ ಭೇಟಿ ನೀಡಿ ಮಗುವನ್ನು ಪ್ರಥಮ ಚಿಕಿತ್ಸೆಗಾಗಿ ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದಾಗ ಹೊಕ್ಕುಳ ಬಳ್ಳಿ ಕತ್ತರಿಸದೆ ಇರುವುದರಿಂದ ಹೆರಿಗೆಯಾಗಿ 5 ದಿನದ ಮಗುವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮಗುವನ್ನು ಮೂಡುಬಿದಿರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ನಂತರ ಅಲ್ಲಿಂದ ಪುತ್ತೂರಿನ ದತ್ತು ಸೇವಾ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ.

ಮಗುವಿನ ಹೊಕ್ಕುಳ ಬಳ್ಳಿಯನ್ನು ಕತ್ತರಿಸದೆ ಇರುವುದರಿಂದ ಅನೈತಿಕ ಸಂಬಂಧದಿಂದ ಹುಟ್ಟಿದ ಮಗುವನ್ನು ಯಾರೋ ಸೇತುವೆಯ ಬಳಿ ಬಿಟ್ಟು ಹೋಗಿರಬಹುದು, ಮಗುವಿನ ಸ್ಥಿತಿಯಲ್ಲಿ ಕೊಂಚ ಬದಲಾವಣೆ ಕಂಡಿರುವುದರಿಂದ ಅಥವಾ ಹೆಣ್ಣು ಮಗುವಾಗಿರುವುದರಿಂದ ಕಟು ಹೃದಯದ ಹೆತ್ತಬ್ಬೆ ಬಿಟ್ಟು ಹೋಗಿರಬಹುದೆಂದು ಸಂಶಯಿಸಲಾಗಿದೆ. ಸೇತುವೆಯಡಿಯಲ್ಲಿ ಅನಾಥವಾಗಿ ಇದ್ದ ಈ ಹಸುಳೆ ಯಾರದೆಂದು ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಾಗಿದೆ.

Write A Comment