ಕನ್ನಡ ವಾರ್ತೆಗಳು

ಪಲ್ಟಿಯಾಗಿ ಅನಿಲ ಸೋರಿಕೆಯಿಂದ ಆತಂಕ ಸೃಷ್ಟಿಸಿದ ಗ್ಯಾಸ್ ಟ್ಯಾಂಕರ್ ತೆರವು : ಮನೆಗೆ ಮರಳಿ ನಿಟ್ಟುಸಿರು ಬಿಟ್ಟ ಸ್ಥಳೀಯರು

Pinterest LinkedIn Tumblr

Gas_Tanker_Palty_7

ಮಂಗಳೂರು : ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಮಾಣಿ ಸೂರಿಕುಮೇರು ರಾಷ್ಟ್ರೀಯ ಹೆದ್ದಾರಿ (75) ಯಲ್ಲಿ ಅನಿಲ ತುಂಬಿದ ಟ್ಯಾಂಕರೊಂದು ಪಲ್ಟಿಯಾದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು,ಈ ಸಂದರ್ಭ ಟ್ಯಾಂಕರ್ ನಿಂದ ಅನಿಲ ಸೋರಿಕೆಯಾಗಿ ಪರಿಸರದಲ್ಲಿ ಭಯಭೀತ ವಾತಾವರಣ ನಿರ್ಮಾಣವಾಗಿತ್ತು.

ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್‌ನಿಂದ ಆಗುತ್ತಿದ್ದ ಗ್ಯಾಸ್ ಸೋರಿಕೆಯನ್ನು ಎಚ್.ಪಿ. ಅಧಿಕಾರಿಗಳ ತಂಡ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹತೋಟಿಗೆ ತಂದಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗಳ ಸತತ ಕಾರ್ಯಚರಣೆಯಿಂದ ಮಗುಚಿ ಬಿದ್ದ ಟ್ಯಾಂಕರ್‌ನಲ್ಲಿದ್ದ ಅನಿಲವನ್ನು ಖಾಲಿ ಮಾಡಿ, ಟ್ಯಾಂಕರ್ ಅನ್ನು ಸ್ಥಳದಿಂದ ತೆರವುಗೊಳಿಸಲಾಗಿದೆ.

ಈ ಮೂಲಕ ಸೋರಿಕೆಯಾಗುತ್ತಿದ್ದ ಟ್ಯಾಂಕರ್‌ನಿಂದ ಗ್ಯಾಸನ್ನು ಇನ್ನೊಂದು ಟ್ಯಾಂಕರ್‌ಗೆ ವರ್ಗಾಯಿಸಿ ಪರಿಸರದಲ್ಲಿ ಮೂಡಿದ್ದ ಆತಂಕವನ್ನು ಅಧಿಕಾರಿಗಳು ದೂರ ಮಾಡಿದ್ದಾರೆ. ಇದರಿಂದ ಪರಿಸರದಲ್ಲಿ ಮೂಡಿದ್ದ ಆತಂಕದ ವಾತಾವರಣ ತಿಳಿಗೊಂದಿದ್ದು,ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ

ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿರುವುದನ್ನು ಹತೋಟಿಗೆ ತರಲು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಎಡೆಬಿಡದೆ 9 ಗಂಟೆಗಳ ಕಾರ್ಯಾಚರಣೆ ನಡೆಸಿದ್ದಾರೆ. ಇದಕ್ಕಾಗಿ ಒಟ್ಟು ಬಂಟ್ವಾಳ, ಪುತ್ತೂರು, ಮಂಗಳೂರು ಸೇರಿದಂತೆ 9 ಅಗ್ನಿ ಶಾಮಕ ದಳದ ವಾಹನಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

16,000 ಲೀಟರ್ ನೀರಿನ ಸಾಮರ್ಥ್ಯದ 2 ವಾಹನ, 9 ಸಾವಿರ ಲೀಟರ್ ನೀರಿನ ಸಾಮರ್ಥ್ಯದ 2 ವಾಹನ ಹಾಗೂ 4,500 ಲೀಟರ್ ನೀರಿನ ಸಾಮರ್ಥ್ಯದ 4 ವಾಹನಗಳು ಸುಮಾರು ಹತ್ತಕ್ಕೂ ಹೆಚ್ಚು ಬಾರಿ ನೀರನ್ನು ತುಂಬಿಸಿಕೊಂಡು ಬಂದು ಟ್ಯಾಂಕರ್ ಸುತ್ತ ಸಿಂಪಡಿಸಿ ಅನಾಹುತ ಸಂಭವಿಸದಂತೆ ಮುಂಜಾಗೃತೆ ವಹಿಸುವ ಕಾರ್ಯಾಚರಣೆ ನಡೆಸಲಾಯಿತು.

Gas_Tanker_Palty_2 Gas_Tanker_Palty_1 Gas_Tanker_Palty_3 Gas_Tanker_Palty_4 Gas_Tanker_Palty_5 Gas_Tanker_Palty_6

ಮಂಗಳೂರು ಅಗ್ನಿ ಶಾಮಕ ದಳದ ಮುಖ್ಯಸ್ಥ ಶಶಿಧರ್, ಜಿಲ್ಲಾ ಅಗ್ನಿ ಶಾಮಕ ದಳದ ಮುಖ್ಯಸ್ಥ ಬಿ.ಶೇಕರ್, ಪ್ರದೇಶಿಕ ಅಗ್ನಿ ಶಾಮಕ ದಳದ ಅಧಿಕಾರಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ 40 ಮಂದಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. . ಎಚ್‌ಪಿಸಿಎಲ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿ ಅನಿಲವನ್ನು ಬದಲಿ ಟ್ಯಾಂಕರ್‌ಗೆ ತುಂಬಿಸುವ ಮೂಲಕ ಮಂಗಳವಾರ ಬೆಳಗ್ಗೆ 8:30ರ ವೇಳೆಗೆ ಅನಿಲ ಸೋರಿಕೆಯನ್ನು ಹತೋಟಿಗೆ ತಂದರು. ತದ ನಂತರವೇ ಪರಿಸರವಾಸಿಗಳು ನಿಟ್ಟುಸಿರು ಬಿಟ್ಟರು. ನಂತರ ಟ್ಯಾಂಕರನ್ನು ಸ್ಥಳದಿಂದ ತೆರವುಗೊಳಿಸಲಾಗಿದ್ದು ಪರಿಸ್ಥಿತಿ ಯಥಾಸ್ಥಿತಿಗೆ ಮರಳಿದೆ

ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಸಂದರ್ಭ ಉಂಟಾದ ಜೋರಾದ ಶಬ್ದದಿಂದ ಭಯಭೀತರಾದ ಜನ, ಪೆರ್ನೆ ಘಟನೆ ರೀತಿ ಮರುಕಳಿಸಬಹುದು ಎಂದು ಹೆದರಿ ಸುತ್ತಮುತ್ತಲ 80 ಕುಟುಂಬಗಳು ತಮ್ಮ ಮನೆಗಳನ್ನು ಬಿಟ್ಟು ಹೋಗಿದ್ದು, ಇದೀಗ ಜನರು ವಾಪಾಸ್ಸಾಗಿದ್ದಾರೆ.ಘಟನೆಯಿಂದ ಭಯಭೀತರಾಗಿ ಮನೆ ಬಿಟ್ಟು ಹೋಗಿದ್ದ ಸ್ಥಳೀಯ ನಿವಾಸಿಗಳಿಗೆ ತಂಗುವ ವ್ಯವಸ್ಥೆಯನ್ನು ಇಂಡಿಯನ್ ಆಡಿಟೋರಿಯಂ ಹಾಲ್ ನಲ್ಲಿ ಸುಲ್ತಾನ್ ಹಾಜಿ ಮಾಡಿದ್ದರು

ಘಟನೆಯಿಂದಾಗಿ ಬೆಂಗಳೂರು-ಮಂಗಳೂರು ರಾಷ್ಟ್ರಿಯ ಹೆದ್ದಾರಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ವಿಟ್ಲ ಮಾರ್ಗವಾಗಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ವಿಟ್ಲ ಪೇಟೆಯಲ್ಲಿ ವಾಹನಗಳ ಸಂಚಾರ ಅಧಿಕಗೊಂಡಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ರಸ್ತೆಯಾಗಿ ಸಾಗುವ ವಾಹನಗಳನ್ನು ಕಲ್ಲಡ್ಕ- ವಿಟ್ಲದ ಮೂಲಕ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವಂತೆ ಪೊಲೀಸರು ನಿರ್ದೇಶನ ನೀಡಿದ್ದರು.

ಅನಿಲ ಸೋರಿಕೆಯಿಂದ ಹೋಟೆಲ್‍ ಭಸ್ಮ : ಪರಿಸರದಲ್ಲಿ ಬೆಂಕಿ ಉರಿಸದಂತೆ ಸೂಚನೆ

ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮಾಣಿ ಸಮೀಪದ ಸೂರಿಕುಮೇರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್‍ ರಸ್ತೆಗೆ ಉರುಳಿ ಬಿದ್ದ ಪರಿಣಾಮ ಅನಿಲ ಸೋರಿಕೆ ಉಂಟಾಗಿ ಪಕ್ಕದಲ್ಲಿದ್ದ ಹೋಟೆಲ್‍ ಭಸ್ಮಗೊಂಡ ಘಟನೆ ನಡೆದಿದೆ.

ಮಗುಚಿ ಬಿದ್ದ ಟ್ಯಾಂಕರ್ ಎರಡು ಭಾಗವಾಗಿ ಬೇರ್ಪಟ್ಟಿದ್ದರಿಂದ ಅನಿಲ ತುಂಬಿದ ಟ್ಯಾಂಕರ್‌ನ ಎರಡು ಮುಚ್ಚಳ ತೆರೆದ ಪರಿಣಾಮ ಅನಿಲ ಸೋರಿಯಾಗಲು ಪ್ರಾರಂಭಿಸಿದೆ.ಅದರ ತೀವ್ರತೆಗೆ ಸೂರಿಕುಮೇರು ಜಂಕ್ಷನ್‍ ನಲ್ಲಿರುವ ಲಕ್ಷ್ಮೀನಾರಾಯಣ ಎಂಬವರಿಗೆ ಸೇರಿದ ಅಮ್ಮ ಹೆಸರಿನ ಹೋಟೆಲ್‍‌ನ್ ಒಳಗೆ ಬೆಂಕಿ ಹತ್ತಿಕೊಂಡಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದವರು ಅಂಗಡಿಯೊಳಗಿನ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟರಲ್ಲೇ ಅಂಗಡಿಯೊಳಗಿನ ಸ್ವತ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಅನಿಲ ಸೋರಿಕೆಯಾಗಿರುವ ವಿಷಯ ತಿಳಿಯುತ್ತಿದ್ದ ಸೂರಿಕುಮೇರು ಸುತ್ತಮುತ್ತನಲ್ಲಿದ್ದ ಸುಮಾರು ಅಂದಾಜು 80ಕ್ಕಿಂತಲೂ ಅಧಿಕ ಮನೆಯ ಜನರನ್ನು ಬೇರೆ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಕೆಲವು ವ್ಯಕ್ತಿಗಳು ದೇವಸ್ಥಾನ, ಮಸೀದಿ, ಗುಡ್ಡ ಪ್ರದೇಶದಲ್ಲಿ ಬೆಳಗ್ಗಿನ ವರೆಗೂ ವಾಸ್ತವ್ಯ ಹೂಡಿದ್ದಾರೆ. ಕಲ್ಲಡ್ಕ, ಕಬಕ ಹಾಗೂ ಮಾಣಿಯಲ್ಲಿ ನಾಕಬಂಧಿ ಹಾಕಿ ಜನರು ಹಾಗೂ ವಾಹನಗಳು ತೆರಳದಂತೆ ಸೂಚಿಸಲಾಗಿದೆ

ಸ್ಥಳಕ್ಕೆ ಹೆಚ್ಚುವರಿಯಾಗಿ ಪುತ್ತೂರು-2, ಪಾಂಡೇಶ್ವರ-2, ಕದ್ರಿ-2, ಬಂಟ್ವಾಳ-2, ಬೆಳ್ತಂಗಡಿ-2 ಸೇರಿದಂತೆ ಒಟ್ಟು 10 ಅಗ್ನಿಶಾಮಕ ದಳದ ವಾಹನಗಳು ಸ್ಥಳದಲ್ಲಿ ಮೊಕ್ಕಂ ಹೂಡಿ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಸ್ಥಳದಲ್ಲಿ ಮೊಬೈಲ್ ಬಳಕೆ, ಸುತ್ತಮುತ್ತಲಿನ ಎಲ್ಲಿಯೂ ಬೆಂಕಿ ಉರಿಸದಂತೆ ಸೂಚಿಸಲಾಗಿತ್ತು. ಸೋರಿಕೆಯನ್ನು ತಡೆಗಟ್ಟಲು ಎಚ್‍ಪಿಸಿಎಲ್ ವಾಹನವನ್ನು ಸ್ಥಳಕ್ಕೆ ತರಿಸಲಾಗಿದೆ. ಅನಿಲವನ್ನು ವರ್ಗಾಯಿಸುವ ಉದ್ದೇಶದಿಂದ ವಿವಿಧ ಟ್ಯಾಂಕರ್‍ ಗಳನ್ನು ಕರೆಸಲು ಸಿದ್ಧತೆ ಮಾಡಲಾಗಿತ್ತು.

ವಿಟ್ಲ ಎಸೈ ಪ್ರಕಾಶ್ ದೇವಾಡಿಗ, ಬಂಟ್ವಾಳ ಗ್ರಾಮಾಂತರ ಎಸೈ ರಕ್ಷಿತ್ ಎ.ಕೆ, ನಗರ ಎಸೈ ನಂದಾಕುಮಾರ್ ಸೇರಿದಂತೆ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ಮುಗಿಯುವವರೆಗೂ ಸ್ಥಳದಲ್ಲಿ ನಿಂತು ಮುಂಜಾಗ್ರತಾ ಕ್ರಮ ಜರುಗಿಸಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

CLICKಕಲ್ಲಡ್ಕ ಬಳಿ ಗ್ಯಾಸ್ ಟ್ಯಾಂಕರ್ ಪಲ್ಟಿ – ಅನಿಲ ಸೋರಿಕೆ ಹಿನ್ನೆಲೆ ಭಯಭೀತರಾದ ಸ್ಥಳೀಯರು – ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

Write A Comment