ಕನ್ನಡ ವಾರ್ತೆಗಳು

ಬಿ.ಜೆ.ಪಿ ಮುಖಂಡ ಭರತ್‌ರಾಜ್‌ ಕೊಲೆಗೆ ಯತ್ನಿಸಿದ ಆರೋಪಿಗಳ ಶೀಘ್ರ ಬಂಧನಕ್ಕೆ ಪಾಲೆಮಾರ್ ಆಗ್ರಹ

Pinterest LinkedIn Tumblr

bjp_manavi_comsiner_1

ಮಂಗಳೂರು: ಕೃಷ್ಣಾಪುರದಲ್ಲಿ ಎ. 13 ರಂದು ಸಂಭವಿಸಿದ ಬಿಜೆಪಿ ಯುವ ಮುಖಂಡ ಭರತ್‌ರಾಜ್‌ ಅವರ ಕೊಲೆ ಯತ್ನ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಬಿಜೆಪಿ ಮಂಗಳೂರು ನಗರ ಉತ್ತರ ವಲಯದ ಅಧ್ಯಕ್ಷ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ನೇತೃತ್ವದ ನಿಯೋಗ ಪೊಲೀಸ್‌ ಆಯುಕ್ತ ಎಂ. ಚಂದ್ರಶೇಖರ್‌ ಅವರನ್ನು ಒತ್ತಾಯಿಸಿದೆ.

ಈ ಪ್ರಕರಣದಲ್ಲಿ 4- 5 ಮಂದಿ ಆರೋಪಿಗಳು ಭಾಗಿಯಾಗಿದ್ದು, ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ. ಆದರೆ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನ, ಮಾರಕಾಯುಧ ಮತ್ತು ಮೊಬೈಲ್‌ ಫೋನ್‌ ಸ್ಥಳದಲ್ಲಿ ಸಿಕ್ಕಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ನಡೆದು 5 ದಿನಗಳಾದರೂ ಆರೋಪಿಗಳ ಬಂಧನವಾಗದಿರುವುದು ಬೇಸರದ ಸಂಗತಿ ಎಂದು ನಿಯೋಗವು ಸೋಮವಾರ ಆಯುಕ್ತರನ್ನು ಭೇಟಿಯಾಗಿ ಸಲ್ಲಿಸಿದ ಮನವಿಯಲ್ಲಿ ವಿವರಿಸಿದೆ.

bjp_manavi_comsiner_2 bjp_manavi_comsiner_3

ಸಂತ್ರಸ್ತ ಭರತ್‌ರಾಜ್ ಇವರು ರಾಜಕೀಯ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲ ಕಾರ್ಯಕರ್ತರಾಗಿದ್ದು, ಅವರ ಏಳಿಗೆಯನ್ನು ಸಹಿಸದೇ ಕೊಲೆಗೆ ವಿಫಲ ಯತ್ನ ನಡೆದಿರುವುದು ನಿಸ್ಸಂದೇಹವಾಗಿ ಕಂಡು ಬರುತ್ತದೆ. ಘಟನೆಯಲ್ಲಿ ವಾಹನದಲ್ಲಿದ್ದ ಆರೋಪಿಗಳಲ್ಲದೆ ಬಾಹ್ಯ ಬೆಂಬಲ ನೀಡಿ ಸ್ಥಳೀಯ ಕಿಡಿಗೇಡಿಗಳೂ ಭಾಗಿಯಾಗಿರುವ ಶಂಕೆ ಇದೆ. ಎಲ್ಲದಕ್ಕೂ ಮಿಗಿಲಾಗಿ ಪರಿಸರದಲ್ಲಿ ಕೋಮು ದ್ವೇಷದ ಜ್ವಾಲೆ ಎಬ್ಬಿಸುವ ಕುತ್ಸಿತ ಪ್ರಯತ್ನ ಇದಾಗಿದೆ.ತನಿಖಾ ಪ್ರಕ್ರಿಯೆಯನ್ನು ವಿಳಂಬಿಸಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದೆ.

ಪ್ರಕರಣ ಇಷ್ಟು ಗಂಭೀರ ಸ್ವರೂಪದ್ದಾಗಿದ್ದರೂ ಘಟನೆ ನಡೆದು ಇಂದಿಗೆ 5 ದಿನಗಳಾದರೂ ನೈಜ ಆರೋಪಿಗಳ ಬಂಧನಕ್ಕೆ ಇಲಾಖೆಯಿಂದ ಪ್ರಾಮಾಣಿಕವಾದ ಮತ್ತು ಆಗ್ರಹಪೂರ್ವಕ ಪ್ರಯತ್ನವಾಗದಿರುವುದು ತೀರಾ ಬೇಸರದ ಸಂಗತಿಯಾಗಿದೆ.

ಹಿಂದೂಗಳು ಅಲ್ಪಸಂಖ್ಯೆಯಲ್ಲಿರುವ ಕೃಷ್ಣಾಪುರ, ಚೊಕ್ಕಬೆಟ್ಟು ಪರಿಸರದಲ್ಲಿ ಜನಸಾಮಾನ್ಯರು ಸಾರ್ವಜನಿಕವಾಗಿ ನಡೆದುಕೊಂಡು ಹೋಗುವುದೇ ಆತಂಕಕಾರಿಯಾಗಿದೆ. ಹಿಂದೂ ಧಾರ್ಮಿಕ ಕಾರ್ಯಕ್ರಮದ ಬ್ಯಾನರ್/ ಪತಾಕೆಗಳನ್ನು ವಿರೂಪಗೊಳಿಸುವುದು, ಹಾಡುಹಗಲೇ ಗೋ ಕಳ್ಳತನ, ದಾರಿಹೋಕರಿಗೆ ಹಲ್ಲೆ ನಡೆಸುವುದು, ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಪಡಿಸುವುದು ಇತ್ಯಾದಿಗಳಿಂದ ಕಿಡಿಗೇಡಿಗಳು ಸ್ವೇಚ್ಛೆಯಿಂದ ವರ್ತಿಸಿ ಅಶಾಂತಿಗೆ ಪ್ರೇರಣೆ ನೀಡುತ್ತಿರುವುದು ಪೊಲೀಸರ ಮೂಗಿನ ನೇರಕ್ಕೆ ನಡೆಯುತ್ತಿದೆ. ಇಂತಹ ಕೃತ್ಯಗಳನ್ನು ಆಗಿಂದಾಗ ಚಿವುಟಿ ಹಾಕಲು ಯತ್ನಿಸಿದರೆ ದೊಡ್ಡ ಮಟ್ಟದ ಘಟನೆಗಳು ಸಂಭವಿಸುವುದನ್ನು ತಡೆಯ ಬಹುದು.

ಸುರತ್ಕಲ್ ಹೋಬಳಿಯ ಜೋಕಟ್ಟೆಯಲ್ಲಿ ಪ್ರಕಾಶ್ ಪೂಜಾರಿ ಎಂಬವರ ಮೇಲೆ ಕಳೆದ ಫೆಬ್ರವರಿ 21ರಂದು ನಡೆದ ಕೊಲೆ ಯತ್ನ ಪ್ರಕರಣವು ಆರೋಪಿಗಳನ್ನು ಪತ್ತೆ ಮಾಡದೆ ಪೊಲೀಸ್ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿರುವುದನ್ನು ಈ ಮೂಲಕ ಬೊಟ್ಟು ಮಾಡುತ್ತೇವೆ. ಸುರತ್ಕಲ್ ಪರಿಸರದ ಅನೇಕ ಪ್ರಕರಣಗಳು ರಾಜಕೀಯ ಪ್ರಭಾವಕ್ಕೆ ಒಳಗಾಗಿ ತನಿಖೆಯ ತೀವ್ರತೆಯು ದುರ್ಬಲಗೊಂಡಿದೆ. ಇದರಿಂದಾಗಿ ವಿದ್ರೋಹಿ ಮನಸ್ಸಿನ ಶಕ್ತಿಗಳು ಬಲಗೊಳ್ಳುವುದು ಮಾತ್ರವಲ್ಲ ಜಿಲ್ಲೆಯಲ್ಲಿ ಕೋಮು ದ್ವೇಷಕ್ಕೆ ಭದ್ರ ಬುನಾದಿ ಒದಗಿಸಿದಂತಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿ ತನಿಖೆಯನ್ನು ತೀವ್ರಗೊಳಿಸಬೇಕೆಂದೂ, ಪ್ರಕರಣದಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡ ಎಲ್ಲಾ ವ್ಯಕ್ತಿಗಳನ್ನು ತಕ್ಷಣ ಬಂಧಿಸಿ ಕಾನೂನು ರೀತಿಯ ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದೂ, ಸದರಿ ಪರಿಸರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಆದ್ಯ ಗಮನಹರಿಸಬೇಕೆಂದೂ ಮನವಿ ಮೂಲಕ ಆಗ್ರಹಿಸಲಾಗಿದೆ.

ತನಿಖಾ ಪ್ರಕ್ರಿಯೆಯು ಇನ್ನಷ್ಟು ವಿಳಂಬಗೊಂಡಲ್ಲಿ ಬಿಜೆಪಿ ಉಗ್ರ ಪ್ರತಿಭಟನೆಯ ಹಾದಿ ತುಳಿಯಲಿದ್ದು, ಮುಂದಿನ ಪರಿಣಾಮಗಳಿಗೆ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆ ನೇರೆ ಹೊಣೆಯಾಗಲಿದೆ ಎಂದು ಪಾಲೆಮಾರ್ ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್, ಮಾಜಿ ಶಾಸಕ ಕೆ. ಮೋನಪ್ಪ ಭಂಡಾರಿ, ಬಿಜೆಪಿ ಮಂಗಳೂರು ನಗರ ಉತ್ತರ ಮಂಡಲ ಪ್ರಧಾನ ಕಾರ್ಯದರ್ಶಿ ಅಶೋಕ್ ಕೃಷ್ಣಾಪುರ, ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಮೇಯರ್ ಎಂ. ಶಂಕರ ಭಟ್ ಪ್ರಮುಖರಾದ ನಿತಿನ್ ಕುಮಾರ್, ಚಸಂತ ಹೊಸಬೆಟ್ಟು, ಪುಷ್ಪರಾಜ್ ಕುಳಾಯಿ, ಸುಜಿತ್ ಮುಂತಾದವರಿದ್ದರು.

Write A Comment