ಕನ್ನಡ ವಾರ್ತೆಗಳು

ಡ್ಯಾಂಗಳಲ್ಲಿ ನೀರಿಲ್ಲ : ಮಂಗಳೂರಿಗೆ ತಟ್ಟಲಿದೆ ಕುಡಿಯುವ ನೀರಿನ ಸಮಸ್ಯೆ -ಇನ್ನು ನಗರಕ್ಕೆ ಎರಡು ದಿನಗಳಿಗೊಮ್ಮೆ ನೀರು ಪೂರೈಕೆ

Pinterest LinkedIn Tumblr

lobo_rai_meet_1

ಮಂಗಳೂರು: ನೇತ್ರಾವತಿ ನದಿ ನೀರಿನ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದ್ದು, ತುಂಬೆ ಮತ್ತು ಎಎಂಆರ್‌ ಡ್ಯಾಂನಲ್ಲಿ ಮಂಗಳೂರು ವ್ಯಾಪ್ತಿಗೆ ಇನ್ನು 12 ದಿನಗಳವರೆಗೆ ಉಪಯೋಗಿಸಬಹುದಾದಷ್ಟು ಮಾತ್ರ ನೀರು ಲಭ್ಯವಿದ್ದು, ಈ ಹಿನ್ನೆಲೆಯಲ್ಲಿ ಎ. 20ರಿಂದ ಮಂಗಳೂರು ನಗರಕ್ಕೆ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ತಿಳಿಸಿದ್ದಾರೆ.

ಜಿಲ್ಲೆ ಹಾಗೂ ಮಂಗಳೂರು ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆ ಕುರಿತು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ತುಂಬೆ ಡ್ಯಾಂನಲ್ಲಿ ಕಳೆದ ಬಾರಿ ಇದೇ ಸಮಯದಲ್ಲಿ 12 ಅಡಿ 7 ಇಂಚಿನಷ್ಟು ನೀರಿದ್ದು, ಪ್ರಸ್ತುತ, 9 ಅಡಿ 6 ಇಂಚಿನಷ್ಟು ಮಾತ್ರ ನೀರು ಲಭ್ಯವಿದೆ. ಅಲ್ಲದೆ, ಎಎಂಆರ್‌ನಲ್ಲಿ ಕಳೆದ ಬಾರಿ ಈ ತಿಂಗಳವರೆಗೆ 17.8 ಮೀಟರ್‌ನಷ್ಟು ನೀರಿತ್ತು. ಆದರೆ, ಈ ಈಗ 13. 9 ಮೀಟರ್‌ನಷ್ಟು ಮಾತ್ರ ನೀರಿದೆ. ಇಷ್ಟು ನೀರು ಒಟ್ಟು, 12 ದಿನಗಳಿಗೆ ಮಾತ್ರ ಸಾಕಾಗುತ್ತದೆ ಎಂದರು.

lobo_rai_meet_2 lobo_rai_meet_3 lobo_rai_meet_4 lobo_rai_meet_5

ಕಳೆದ ವರ್ಷ ವಾಡಿಕೆಗಿಂತ ಶೇ.20ರಷ್ಟು ಕಡಿಮೆ ಮಳೆಯಾಗಿರುವುದು ಈ ಬಾರಿ ಇಷ್ಟು ಬೇಗ ನೀರಿನ ಸಮಸ್ಯೆ ತಲೆದೋರಲು ಪ್ರಮುಖ ಕಾರಣ.ಕಳೆದ ಮಳೆಗಾಲದ ಅವಧಿಯಲ್ಲಿ ಬಿದ್ದ ಮಳೆ ಪ್ರಮಾಣವೂ ಕಡಿಮೆಯಾಗಿದ್ದು,ಒಳಹರಿವು ಕೂಡ ಬೇಗ ನಿಂತಿದೆ. ಜನವರಿಯಿಂದ ಈಚೆಗೆ ಸರಿಯಾಗಿ ಮಳೆ ಕೂಡ ಬಂದಿಲ್ಲ ಎಂದರು.

ಪ್ರಸಕ್ತ ತುಂಬೆ ಕಿಂಡಿ ಅಣೆಕಟ್ಟು ಹಾಗೂ ಶಂಭೂರಿನ ಎ.ಎಂ.ಆರ್. ಅಣೆಕಟ್ಟಿನ ನೀರು ಸೇರಿದರೂ ಒಟ್ಟು 12 ದಿನಗಳಿಗೆ ಮಾತ್ರ ಸಾಕಾದೀತು. ಈ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈ ಗೊಳ್ಳಲು ತೀರ್ಮಾನಿಸಲಾಗಿದೆ. ಎರಡು ದಿನಗಳಿಗೊಮ್ಮೆ ಬಳಕೆ ಹಾಗೂ ಕೈಗಾರಿಕೆಗಳಿಗೆ ಪೂರೈಕೆಯಲ್ಲಿ ಕಡಿತ ಮಾಡುವುದರಿಂದ ಸಂಗ್ರಹವಿರುವ ನೀರು ಮುಂದಿನ 24 ದಿನಗಳಿಗೆ ಬಳಸಬಹುದು. ಇದರ ಜೊತೆಗೆ ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಸಹಕರಿಸುವಂತೆ ಮನವಿ ಮಾಡಿದ ಸಚಿವರು, ಕೆಲವೆಡೆಗಳಲ್ಲಿರುವ ತೆರೆದಬಾವಿಗಳನ್ನು ಶುಚಿಗೊಳಿಸಿ ಬಳಕೆಗೆ ಯೋಗ್ಯವನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.

ಎಂಆರ್‌ಪಿಎಲ್‌, ಎಂಸಿಎಫ್‌, ಎಂಎಸ್‌ಇಝಡ್‌, ಎನ್‌ಎಂಪಿಟಿ ನೀರನ್ನು ಹೆಚ್ಚು ಬಳಸುವ ಸಂಸ್ಥೆಗಳಾಗಿದ್ದು, ಮಳೆ ಬರುವವರೆಗೆ ಅವರಿಗೆ ಶೇ. 50ರಷ್ಟು ಕಡಿಮೆ ನೀರು ಪೂರೈಸುವ ತೀರ್ಮಾನಕ್ಕೆ ಬರಲಾಗಿದೆ. ಒಂದು ದಿನ ಬಿಟ್ಟು ಮತ್ತೂಂದು ದಿನದಂತೆ ನೀರು ಒದಗಿಸುವುದರಿಂದ ಅವರಿಗೆ ಅರ್ಧದಷ್ಟು ನೀರು ಕಡಿಮೆ ನೀಡಿದಂತಾಗುತ್ತಿದ್ದು, ಅವರು ನೀರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು. ಪಾಲಿಕೆಯ ಕುಡಿಯುವ ನೀರನ್ನು ಕೃಷಿಗೆ ಹಾಗೂ ಕಟ್ಟಡ ನಿರ್ಮಾಣಕ್ಕೂ ಬಳಸದಂತೆ ನಿರ್ಬಂಧ ವಿಧಿಸಲಾಗುವುದು. ಇದರಿಂದ 12 ದಿನಗಳವರೆಗಿರುವ ನೀರನ್ನು 24 ದಿನಗಳವರೆಗೆ ಬಳಸಬಹುದಾಗಿದೆ ಎಂದರು.

ಸಚಿವ ಅಭಯಚಂದ್ರ ಜೈನ್‌, ಶಾಸಕರಾದ ಜೆ.ಆರ್‌. ಲೋಬೊ, ಮೊಯ್ದಿನ್‌ ಬಾವಾ, ಮೇಯರ್‌ ಹರಿನಾಥ್‌, ಪೊಲೀಸ್‌ ಆಯುಕ್ತ ಚಂದ್ರಶೇಖರ್‌, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್‌, ಎಸ್ಪಿ ಡಾ | ಶರಣಪ್ಪ ಎಸ್‌.ಡಿ., ಪೊಲೀಸ್ ಕಮಿಷನರ್ ಚಂದ್ರಶೇಖರ್, ಪಾಲಿಕೆ ಆಯುಕ್ತ ಡಾ | ಎಚ್‌.ಎನ್‌. ಗೋಪಾಲಕೃಷ್ಣ, ಪಾಲಿಕೆ ಸಚೇತಕ ಶಶಿಧರ ಹೆಗ್ಡೆ, ಕಾಂಗ್ರೆಸ್‌ ಮುಖಂಡ ತುಂಬೆ ಪ್ರಕಾಶ್‌ ಶೆಟ್ಟಿ, ಕಾರ್ಪೋರೇಟರ್‌ ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.

Write A Comment