ಮಂಗಳೂರು, ಎ.18: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರವಾಸಿ ಸೌಲಭ್ಯದ ವಿವಿಧ ಕಾಮಗಾರಿಗಳ ಹಾಗೂ ಕೆಎಸ್ಟಿಡಿಸಿಯ ನಗರ ಪ್ರವಾಸಿ ಬಸ್ ಸೇವೆಗೆ ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಅವರು ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರದಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಪ್ರವಾಸಿಗರನ್ನು ಆಕರ್ಷಿಸುವುದಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ ವಿವಿಧ ಯೋಜ ನೆಗಳ ಕಾಮಗಾರಿಗೆ 5 ಕೋ.ರೂ. ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.
ಪ್ರವಾಸೋ ದ್ಯಮಕ್ಕೆ ಸಂಬಂಧಿಸಿ ಶುಚಿತ್ವ, ಭದ್ರತೆ ಮತ್ತು ಕೆಲವು ಮೂಲಭೂತ ಸೌಲಭ್ಯಗಳ ಸಮಸ್ಯೆಗಳು ಎದುರಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆಯ ವತಿಯಿಂದ 175 ಹೋಂಗಾರ್ಡ್ಗಳಿಗೆ ತರಬೇತಿ ಸಹಿತ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರುತಿಳಿಸಿದರು.
ಪ್ರವಾಸೋದ್ಯಮದ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ. ಇದಕ್ಕೆ ಜನರ ಸಹಕಾರ ಬೇಕು. ಪಿಲಿಕುಳ ನಿಸರ್ಗಧಾಮವು ರಾಜ್ಯಕ್ಕೆ ಮಾತ್ರವಲ್ಲ, ಇಡೀ ವಿಶ್ವವನ್ನು ಆಕರ್ಷಿಸುವಂತೆ ಆಗ ಬೇಕು ಎಂದು ದೇಶಪಾಂಡೆ ಹೇಳಿದರು.
ಕಾರ್ಯಕ್ರಮದಲ್ಲಿ ಯುವಜನಸೇವೆ, ಕ್ರೀಡೆ ಮತ್ತು ಸಚಿವ ಕೆ.ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಐವನ್ ಡಿಸೋಜ, ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎ.ಹುಸೈನ್, ಅರಣ್ಯ, ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ಅಧ್ಯಕ್ಷ ಅಸಗೋಡು ಜಯಸಿಂಹ ಮೊದಲಾದವರು ಉಪಸ್ಥಿರಿದ್ದರು.
ಪ್ರವಾಸಿ ಬಸ್ ಸಂಚಾರಿಸುವ ಸ್ಥಳಗಳು:
ಪ್ರವಾಸಿಗರ ಈ ಕೆಎಸ್ಟಿಡಿಸಿ ಬಸ್ ಬೆಳಗ್ಗೆ 8ರಿಂದ ಲಾಲ್ಬಾಗ್ನಿಂದ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ, 9:15ಕ್ಕೆ ಕದ್ರಿಯ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ, 10:15ಕ್ಕೆ ಮಂಗಳಾದೇವಿ ದೇವಸ್ಥಾನ, 11:15ಕ್ಕೆ ಸೈಂಟ್ ಅಲೋಶಿಯಸ್ ಚಾಪೆಲ್ಗೆ ತಲುಪಲಿದೆ. ಅಲ್ಲಿ ಮಧ್ಯಾಹ್ನ 12:30ರಿಂದ 1:30ರವರೆಗೆ ಊಟೋಪಚಾರಕ್ಕೆ ವಿರಾಮ ನೀಡಲಿದೆ. ಬಳಿಕ 2 ಗಂಟೆಗೆ ಹೊರಟು ಪಿಲಿಕುಳ ನಿಸರ್ಗಧಾಮದ ಬಯಾಲಾಜಿಕಲ್ ಪಾರ್ಕ್, ಝೂ, ಸ್ನೇಕ್ ಪಾರ್ಕ್ಗೆ ಸಂಜೆ 5ರಿಂದ 6:30ರವರೆಗೆ ತಣ್ಣೀರುಬಾವಿ ಟ್ರೀ ಪಾರ್ಕ್ಗೆ ಭೇಟಿ ನೀಡಿ 7 ಗಂಟೆಗೆ ವಾಪಸ್ ಲಾಲ್ಬಾಗ್ ತಲುಪಲಿದೆ.
ಈ ಹವಾನಿಯಂತ್ರಿತ ಬಸ್ ನಿತ್ಯ ಲಭ್ಯವಿದೆಯಾದರೂ ಕನಿಷ್ಠ 10 ಪ್ರವಾಸಿಗರು ಇಲ್ಲದಿದ್ದರೆ ಹೊರಡುವಂತಿಲ್ಲ. ಪ್ರತಿಯೋರ್ವ ಸದಸ್ಯನಿಗೆ 190 ರೂ. ಪ್ರಯಾಣ ದರ ವಿಧಿಸಲಾಗಿದೆ. ಉಟೋಪಚಾರ ಸಹಿತ ಇತರ ಖರ್ಚು ಗಳು ಪ್ರವಾಸಿಗರೇ ಭರಿಸಬೇಕು. ಶಾಲಾ ಮಕ್ಕಳಿಗೆ ಶೇ.10 ರಿಯಾಯತಿ ಸೌಲಭ್ಯವಿರಲಿದೆ.