ಉಡುಪಿ: ಜಿಲ್ಲೆಯಲ್ಲಿನ ಪ.ಜಾತಿ ಮತ್ತು ಪಂಗಡದವರ ಹಾಗೂ ಕೊರಗರ ಸಮಸ್ಯೆಗಳನ್ನು ಅರಿಯಲು ಮುಂದಿನ ತಿಂಗಳು ಉಡುಪಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.
ಅವರು ಶನಿವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿನ ಪರಿಶಿಷ್ಟರು ಮತ್ತು ದಲಿತರ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭಿವೃದ್ದಿಗೆ ಈ ವರ್ಷ 19500 ಕೋಟಿ ರೂ ಮೀಸಲಿಡಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ.
ಈ ಬಾರಿಯ ಬಜೆಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 16000 ಕೋಟಿ ರೂ ನೀಡಿದ್ದು, ಹಿಂದಿನ ವರ್ಷದಲ್ಲಿ ವೆಚ್ಚ ಮಾಡದೇ ಇರುವ ಅನುದಾನವನ್ನು ಈ ವರ್ಷದಲ್ಲಿ ವೆಚ್ಚ ಮಾಡಲು ನಿರ್ಧರಿಸಿದ್ದು, 33 ವಿವಿಧ ಇಲಾಖೆಗಳ , ವಿವಿಧ ಯೋಜನೆಗಳ ಮೂಲಕ ಒಟ್ಟು 19500 ಕೋಟಿ ರೂ ವೆಚ್ಚ ಮಾಡಲಾಗುವುದು, ದಲಿತರಿಗೆ ಮೀಸಲಿಟ್ಟ ಅನುದಾನವನ್ನು ಉದ್ದೇಶಪೂರ್ವಕವಾಗಿ ವೆಚ್ಚ ಮಾಡದೆ, ನಿರ್ಲಕ್ಷತೆ ತೋರುವ ಅಧಿಕಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು, ಹಿಂದುಳಿದವರ ಮತ್ತು ದಲಿತ ವರ್ಗದ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿದೆ ಎಂದು ಸಚಿವರು ಹೇಳಿದರು.
ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಸಮಸ್ಯೆಗಳನ್ನು ಅರಿಯಲು ಮಂಗಳೂರಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದು, ಅವರ ಸಮುದಾಯದ ಮುಖಂಡರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ 10 ಕೋಟಿ ರೂ ಗಳ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ, ಕೊರಗರಲ್ಲಿ ಜೀವಿತದ ಅವಧಿಯ ಪ್ರಮಾಣ ಕಡಿಮೆ ಇದ್ದು, ಅವರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಸರಬರಾಜು ಮಾಡಲಾಗುವುದು, ಎಂದು ಸಚಿವರು ತಿಳಿಸಿದರು.
ದಲಿತರಿಗೆ ಮತ್ತು ಹಿಂದುಳಿದವರಿಗೆ ಪೇಜಾವರ ಶ್ರೀಗಳು ನೈತಿಕ ಸ್ಥೈರ್ಯ ಮ್ತು ಆತ್ಮ ವಿಶ್ವಾಸ ತುಂಬುತ್ತಿದ್ದು ಇದು ಉತ್ತಮ ಕೆಲಸವಾಗಿದೆ, ರಾಜ್ಯದಲ್ಲಿ ಭೀಕರ ಬರಗಾಲ ಕಂಡು ಬಂದಿದ್ದು, ಜನ ಮತ್ತು ಜಾನುವಾರುಗಳಿಗೆ ತೊಂದರೆ ಆಗಿದೆ, ಅಗತ್ಯವಿರುವೆಡೆ ಈಗಾಗಲೇ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಹಾಗೂ ಗೋಶಾಲೆಗಳನ್ನು ತೆರೆಯಲಾಗಿದೆ ಎಂದರು.
ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪ್ರೇಮನಾಥ್, ಜಿಲ್ಲಾ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಹರೀಶ್ ಗಾಂವಕರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.