ಕನ್ನಡ ವಾರ್ತೆಗಳು

ಗಾರ್ಬೆಜ್ ಪಾರ್ಕ್ : ಸರ್ಕಾರದ ಚಿಂತನೆ ಅಶೋಕ್ ವ್ಯಂಗ್ಯ ನುಡಿ

Pinterest LinkedIn Tumblr

ashok_0

ಬೆಂಗಳೂರು, ಏ. 16: ದಕ್ಷಿಣ ಕೊರಿಯಾದ ಮಾದರಿಯಲ್ಲಿಯೇ ನಗರದಲ್ಲೂ ಗಾರ್ಬೆಜ್ ಪಾರ್ಕ್ ಮಾಡುವುದಾಗಿಯೂ ಹೇಳಿರುವ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿರುವ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರು ಈ ಉದ್ದೇಶಕ್ಕೆ ಅಗತ್ಯವಾಗಿ ಬೇಕಾಗಿರುವ 2 ಸಾವಿರ ಎಕರೆ ಜಾಗ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ನಗರದ ಕರಿಸಂದ್ರ ವಾರ್ಡ್‌ನ ಅಂಬೇಡ್ಕರ್ ಕಾಲೊನಿ ಸೇರಿದಂತೆ ಮತ್ತಿತರ ಸ್ಥಳಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಕಸದ ಸಮಸ್ಯೆಗೆ ಮುಕ್ತಿ ದೊರಕಿಸಿಕೊಡುವ ಇಚ್ಛಾಶಕ್ತಿ ಇದ್ದಂತಿಲ್ಲ ಎಂದು ಟೀಕಿಸಿದರು.

ನಗರದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಮೂರೇ ತಿಂಗಳಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರು, ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಇದು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.

ನಗರದಲ್ಲಿ ಲಾರಿಗಳಲ್ಲೇ ಕಸ ಉಳಿದುಕೊಂಡು ನಗರ ಕಸದ ತೊಟ್ಟಿಯಂತಾಗಿದೆ ಎಂದು ಆಪಾದಿಸಿದರು.

ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕರಿಸಂದ್ರ ವಾರ್ಡಿನಲ್ಲಿ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ತೊಂದರೆ ಎದುರಾಗುತ್ತಿತ್ತು. ಈಗ ಚರಂಡಿಯಲ್ಲಿನ ಊಳು ತೆಗೆದು ನೀರು ಸರಾಗವಾಗಿ ಹರಿಯಲು ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯೆ ಯಶೋಧ ಲಕ್ಷ್ಮಿಕಾಂತ ಅವರು, ವಾರ್ಡಿನಲ್ಲಿ ಕಳೆದ ಹಲವು ವರ್ಷಗಳಿಂದ ಚರಂಡಿ ಮತ್ತು ರಸ್ತೆಗಳಿಗೆ ಡಾಂಬರೀಕರಣ ಕಂಡಿರಲಿಲ್ಲ. ಇದೀಗ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದರು.

ಎ.ಕೆ.ಕಾಲೋನಿಯ ಮೂರನೇ ಅಡ್ಡರಸ್ತೆ, ಕೆ.ಆರ್.ರಸ್ತೆಯಿಂದ 5ನೇ ಮುಖ್ಯರಸ್ತೆವರೆಗೆ, 8ನೇ ಮುಖ್ಯರಸ್ತೆ, 27ನೇ ಅಡ್ಡರಸ್ತೆಯ ಬಿಎ‌ಸ್‌ಕೆ, ಎರಡನೇ ಹಂತದ ಕಾವೇರಿ ನಗರ, ಎಂಟನೇ ಮುಖ್ಯರಸ್ತೆ, ಇಂ‌ಡಸ್ಟ್ರಿಯಲ್ ಲೇಔಟ್ ಹಾಗೂ ಮತ್ತಿತರ ಅಡ್ಡರಸ್ತೆಗಳಲ್ಲಿ ಚರಂಡಿ ಮತ್ತು ಕಾಂಕ್ರಿಟ್ ರಸ್ತೆಗಳ ನಿರ್ಮಾಣ ಶೀಘ್ರವೇ ಮುಗಿಯಲಿದೆ ಎಂದರು.

ಈ ಸಂದರ್ಭದಲ್ಲಿ ಬೆಂಗಳೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ಲಕ್ಷ್ಮಿಕಾಂತ್ ಹಾಗೂ ವಾರ್ಡಿನ ಅಧಿಕಾರಿಗಳು ಉಪಸ್ಥಿತರಿದ್ದರು.

Write A Comment