ಕನ್ನಡ ವಾರ್ತೆಗಳು

ಇತಿಹಾಸದಲ್ಲೇ ಕಂಡರಿಯದ ಪ್ರತಿಭಟನೆಗೆ ಸಾಕ್ಷಿಯಾಯಿತು ಉಳ್ಳಾಲ ಪೊಲೀಸ್ ಠಾಣೆ…

Pinterest LinkedIn Tumblr

Protest_ullal_murder_1

ಠಾಣೆಯಲ್ಲಿ ಮೃತ ದೇಹವಿಟ್ಟು ಪ್ರತಿಭಟನೆ

ಮಂಗಳೂರು / ಉಳ್ಳಾಲ, ಎಪ್ರಿಲ್.13 :ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಇತಿಹಾಸದಲ್ಲೇ ನಡೆಯದ ಘಟನೆಯೊಂದು ಬುಧವಾರ ನಡೆದುಹೋಗಿದೆ.ಉಳ್ಳಾಲ ಕೋಡಿ ರಸ್ತೆ ಬದಿಯಲ್ಲಿ ಮಂಗಳವಾರ ಮುಂಜಾನೆ ದುಷ್ಕರ್ಮಿಗಳಿಂದ ಕೊಲೆಯಾಗಿ ಶವವಾಗಿ ಬಿದ್ದಿದ್ದ ಮೀನುಗಾರ ರಾಜೇಶ್ ಕೋಟ್ಯಾನ್(46)ರವರ ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರು ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿ ಉಳ್ಳಾಲ ಪೊಲೀಸ್ ಠಾಣೆಯ ಅಂಗಳದಲ್ಲಿಟ್ಟು ಅಮಾಯಕನ ಸಾವಿಗೆ ನ್ಯಾಯ ಕೊಡುವಂತೆ ಕೋರಿ ಪ್ರತಿಭಟನೆ ನಡೆಸಿದ್ದಾರೆ.

ಮಂಗಳವಾರದಂದು ಮುಂಜಾನೆ ಮೀನುಗಾರಿಕೆ ಕೆಲಸಕ್ಕೆಂದು ತೆರಳಿದ್ದ ಮೊಗವೀರ ಪಟ್ಣದ ನಿವಾಸಿ ರಾಜೇಶ್ ಕೋಟ್ಯಾನ್ ಅವರು ಅತ್ತ ಕೆಲಸಕ್ಕೂ ಹೋಗದೆ ಕೋಡಿಯಲ್ಲಿರುವ ಬರಕ ಫಿಶ್ ಮಿಲ್ ಬಲಿಯ ರಸ್ತೆ ಬದಿಯಲ್ಲಿ ಮಧ್ಯಾಹ್ನದ ವೇಳೆಗೆ ಕೊಲೆಯಾದ ಸ್ಥಿತಿಯಲ್ಲಿ ಅವರ ಮೃತದೇಹ ದೊರೆತಿತ್ತು.ರಾಜೇಶ್ ತಲೆಗೆ ಬ್ಯಾಟರಿಯಿಂದ ಬಲವಾಗಿ ಹೊಡೆದು ಕೊಲ್ಲಲಾಗಿದೆ ಎಂದು ಹೇಳಲಾಗುತ್ತಿದ್ದು,ಕಣ್ಣುಗಳು ಹೊರಗೆ ಬಂದು ರಾಸಾಯನಿಕದಿಂದ ಮುಖ ಸಂಪೂರ್ಣ ಸುಟ್ಟು ಕರಕಲಾಗಿದಂತಿತ್ತು.ನಂತರದ ಬೆಳವಣಿಗೆಯಲ್ಲಿ ರಾತ್ರಿ ಹಿಂದೂ ಮಹಾಸಭಾದ ನೇತೃತ್ವದಲ್ಲಿ ಮೊಗವೀರ ಮಹಿಳೆಯರು ಉಳ್ಳಾಲ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಗಳನ್ನು 24 ಗಂಟೆ ಒಳಗೆ ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದರು.

Protest_ullal_murder_3

ಪ್ರತಿಭಟನಾಕಾರರನ್ನು ಸಮಾಧಾನಿಸುತ್ತಿರುವ ಭರತ್ ಕುಮಾರ್

ಅಂತಿಮ ಶವ ಯಾತ್ರೆ:

ಪ್ರದೇಶದಲ್ಲಿ ಯಾರದೇ ತಂಟೆಗೆ ಹೋಗದೆ ಅವರಷ್ಟಕ್ಕೆ ಇರುತ್ತಿದ್ದ ರಾಜೇಶ್ ಕೊಲೆಯಾದುದರ ವಿರುದ್ಧ ಸಹಜವಾಗಿಯೇ ಕೆರಳಿದ್ದ ಮೊಗವೀರ ಜನಾಂಗದವರು ಬುಧವಾರ ಬೆಳಿಗ್ಗೆ ರಾಜೇಶ್ ಪಾರ್ಥಿವ ಶರೀರದ ಶವ ಯಾತ್ರೆಯನ್ನು ಬಿಗಿ ಪೊಲೀಸ್ ಭಧ್ರತೆಯಲ್ಲೇ ಕೋಡಿ,ಕೋಟೆಪುರ,ಉಳ್ಳಾಲ ಮುಖ್ಯ ಪೇಟೆ ಮಾರ್ಗವಾಗಿ ಅಬ್ಬಕ್ಕ ಸರ್ಕಲ್‌ಗೆ ತರುವಾಗ ಧಿಡೀರನೆ ಶವವನ್ನು ಉಳ್ಳಾಲ ಪೊಲೀಸ್ ಠಾಣೆಗೆ ತಿರುಗಿಸಿ ಶವವನ್ನು ಅಂಗಳದಲ್ಲಿಟ್ಟು ಅಮಾಯಕನ ಸಾವಿಗೆ ನ್ಯಾಯ ಕೊಡುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ನಿರಂತರವಾಗಿ ಮೊಗವೀರ ಜನಾಂಗದವರ ವಿರುದ್ಧ ದೌರ್ಜನ್ಯವೆಸಗಿ ಒಂದು ವರ್ಗದವರಿಗೆ ಸುಣ್ಣ ಇನ್ನೊಂದು ವರ್ಗದವರಿಗೆ ಬೆಣ್ಣೆ ಸವರುವ ಕಾರ್ಯ ನಿರ್ವಹಿಸುತ್ತಿರುವ ಎಸ್‌ಐ ಭಾರತಿಯನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರು.

ಉಳ್ಳಾಲದ ಕೋಟೆಪುರದ ಮರಳು ಮಾಫಿಯಾದವರೊಂದಿಗೆ ಶಾಮೀಲಾಗಿರುವ ಭಾರತಿಯವರು ಯಾವುದೇ ಜನಪರ ಕರ್ತವ್ಯ ಪಾಲಿಸದೆ ಸ್ಥಳೀಯ ಪ್ರಬಾವಿ ರಾಜಕಾರಣಿಯ ಕೃಪಟಾಕ್ಷದಿಂದ ಮುಖ್ಯಮಂತ್ರಿ ಪದಕ ಗಳಿಸಿ ಊರೆಲ್ಲಾ ಫ್ಲೆಕ್ಸ್ ಹಾಕಿರುವ ಭಾರತಿಯವರು ಪೊಲೀಸ್ ಕೆಲಸಕ್ಕೆ ಅಯೋಗ್ಯರು ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಡಿಸಿಪಿ ಶಾಂತಾರಾಜು ಅವರಲ್ಲಿ ಪಟ್ಟುಹಿಡಿದರು.

ನಂತರ ಶಾಂತರಾಜು ಅವರು ಮೊಗವೀರ ಮುಖಂಡ ಭರತ್ ಕುಮಾರ್ ಮತ್ತು ಹಿಂದೂ ಸಂಘಟನಾ ಮುಖಂಡರಲ್ಲಿ ಶಂಕಿತ ಆರೋಪಿಗಳನ್ನು ಈಗಾಗಲೇ ವಶಕ್ಕೆ ತೆಗೆದಿದ್ದು ಆದಷ್ಟು ಬೇಗನೆ ನೈಜ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದಾಗ.ಮುಖಂಡರ ಮಾತಿಗೆ ಮನಿದ ಪ್ರತಿಭಟನಾಕಾರರು ಶವವನ್ನು ಪಟ್ಣದ ಹಿಂದೂರುದ್ರಭೂಮಿಗೆ ಕೊಂಡೊಯ್ದು ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

Protest_ullal_murder_5

ಸಾರ್ವಜನಿಕರು ಜಪ್ತಿ ಮಾಡಿದ ಅಕ್ರಮ ಮರಳು ಸಾಗಾಟ ಲಾರಿ

ಸಾರ್ವಜನಿಕರಿಂದ ಮರಳು ಲಾರಿ ವಶ:

ಪ್ರತಿಭಟನಾಕಾರರು ಪ್ರತಿಭಟನೆ ಹಿಂತೆಗೆದು ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಕೊಂಡೊಯ್ಯುವಾಗ ಪೊಲೀಸ್ ಠಾಣೆಯ ಎದುರಿಂದಲೇ ಸಿಬ್ಬಂದಿಗಳ ಸಮ್ಮುಖದಲ್ಲೇ ನಂಬರ್ ಪ್ಲೇಟ್ ಇಲ್ಲದ ಮರಳು ಹೊತ್ತ ಟಿಪ್ಪರ್ ಒಂದು ಹಾದುಹೋಗುತ್ತಿದ್ದಾಗ ಸಾರ್ವಜನಿಕರೇ ಅದನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Protest_ullal_murder_4

ಪೊಲೀಸ್ ಸಿಬ್ಬಂದಿಗಳಿಂದ ಎಸ್‌.ಐ ಭಾರತಿಯವರಿಗೆ ಶುಭಕೋರಿದ ಫ್ಲೆಕ್ಸ್ ತೆರವು ಕಾರ್ಯ

ಎಸ್‌.ಐ ಭಾರತಿಯವರಿಗೆ ಶುಭಕೋರಿದ ಫ್ಲೆಕ್ಸ್‌ಗಳ ತೆರವು:

ಈ ಮಧ್ಯೆ ದಕ್ಷ ಅಧಿಕಾರಿ ಎಂದು ಹೇಳಿಕೊಂಡು ಮುಖ್ಯಮಂತ್ರಿ ಪದಕ ಪಡೆದಿರುವ ಎಸ್‌ಐ ಭಾರತಿಯವರಿಗೆ ಶುಭಕೋರಿ ವಹಿವಾಟುಷಾಹಿಗಳು ಉಳ್ಳಾಲ ಪೇಟೆಯಲ್ಲೆಲ್ಲಾ ಹಾಕಿದ್ದ ಫ್ಲೆಕ್ಸ್‌ಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪೇದೆಗಳಿಂದ ತೆರವುಗೊಳಿಸಿದರು.

Write A Comment