ಕನ್ನಡ ವಾರ್ತೆಗಳು

ಸ್ವಾಮೀಜಿ ಆದೇಶ ಹಿನ್ನೆಲೆ..? : ಬಾಳಿಗಾ ಮರ್ಡರ್ ಕೇಸ್ ತನಿಖೆ ವಿಳಂಬಕ್ಕೆ ಗೃಹ ಸಚಿವರಿಂದ ಸೂಚನೆ..?

Pinterest LinkedIn Tumblr

narendra_nayak_Press

ಮಂಗಳೂರು, ಎ. 9: ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಅವರ ಹತ್ಯೆ ಪ್ರಕರಣದ ಬಗ್ಗೆ ಬ್ರಾಹ್ಮಣ ಸ್ವಾಮೀಜಿಯೊಬ್ಬರ ಆದೇಶದ ಮೇರೆಗೆ ತನಿಖೆಯನ್ನು ನಿಧಾನಗೊಳಿಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಇದರಿಂದಲೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ನರೇಶ್ ಶೆಣೈ ಅವರನ್ನು ಎರಡು ವಾರಗಳ ಬಳಿಕವೂ ಬಂಧಿಸಿಲ್ಲ ಎಂದು ರಾಷ್ಟ್ರೀಯ ವಿಚಾರವಾದಿ ಸಂಘಟನೆಯ ಅಧ್ಯಕ್ಷ ನರೇಂದ್ರ ನಾಯಕ್ ಆರೋಪಿಸಿದ್ದಾರೆ.

ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಬಾಳಿಗಾರ ಹತ್ಯೆಯಾಗಿ ಎರಡು ವಾರ ಕಳೆದರೂ ತನಿಖೆ ನಿಧಾನಗತಿಯಲ್ಲಿ ಸಾಗುತ್ತಿದೆ. ಇದು ಕಾಂಗ್ರೆಸ್ ನೇತೃತ್ವದ ಸರಕಾರ ಇತರ ಕೋಮುವಾದಿ ಪಕ್ಷಗಳಿಗಿಂತ ಭಿನ್ನವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಅಲ್ಲದೆ, ಇದು ರಾಜಕೀಯ ಮತ್ತು ಧರ್ಮದ ನಡುವಿನ ಅಪವಿತ್ರ ಮೈತ್ರಿಯನ್ನು ತೋರಿಸುತ್ತದೆ. ಈ ವರ್ತನೆಯನ್ನು ರಾಷ್ಟ್ರೀಯ ವಿಚಾರವಾದಿ ಸಂಘಗಳ ಒಕ್ಕೂಟ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

Besent_murder_photo_2

ಬಾಳಿಗಾ ಹತ್ಯೆ ಕೈವಾಡ ಇರುವ ಬಗ್ಗೆ ಆರೋಪ ಕೇಳಿ ಬಂದಿರುವ ನರೇಶ್ ಶೆಣೈ ಅವರ ಪರವಾಗಿ ನಿಯೋಗವೊಂದು ದೇವಮಾನವ ಬ್ರಾಹ್ಮಣ ಸ್ವಾಮೀಜಿಯೊಬ್ಬರ ಬಳಿ ತೆರಳಿ ಮನವಿ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿರುವುದಾಗಿ ತಿಳಿಸಿದ ಅವರು, ಈ ಮನವಿಯ ಹಿನ್ನೆಲೆಯಲ್ಲಿ ಸ್ವಾಮೀಜಿಯವರು ತನಗೆ ನಿಕಟವರ್ತಿ ಎನ್ನಲಾದ ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರನ್ನು ಸಂಪರ್ಕಿಸಿ ತನಿಖೆಯನ್ನು ನಿಧಾನಗೊಳಿಸುವಂತೆ ತಿಳಿಸಿದ್ದಾರೆಂದು ಹೇಳಲಾಗಿದ್ದು, ಅದರಂತೆ ಗೃಹ ಸಚಿವರು ನಗರ ಪೊಲೀಸ್ ಆಯುಕ್ತರಿಗೆ ತನಿಖೆಯನ್ನು ನಿಧಾನಗೊಳಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿರುವುದಾಗಿ ನರೇಂದ್ರ ನಾಯಕ್ ಹೇಳಿದ್ದಾರೆ.

ಎಪ್ರಿಲ್ 15ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ

ಈ ಹಿನ್ನೆಲೆಯಲ್ಲಿ ಎಪ್ರಿಲ್ 15ರಂದು ಬೆಳಗ್ಗೆ 10 ಗಂಟೆಗೆ ದೇಶಪ್ರೇಮಿ ಸಂಘಟನೆಗಳ ವೇದಿಕೆಯ ವತಿಯಿಂದ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ನರೇಂದ್ರ ನಾಯಕ್ ತಿಳಿಸಿದ್ದಾರೆ.

ಬಾಳಿಗಾ ಅವರನ್ನು ಮಾರ್ಚ್ 21ರಂದು ಪಿವಿಎಸ್ ಬಳಿಯ ಅವರ ನಿವಾಸದ ಬಳಿ ಕೊಚ್ಚಿ ಕೊಲೆ ಮಾಡಲಾಗಿತ್ತು. ನಗರದಲ್ಲಿರುವ ಕೆಲವು ಅಕ್ರಮ ಕಟ್ಟಡಗಳ ಬಗ್ಗೆ ಹಾಗೂ ನಗರದ ಕಾರ್‌ಸ್ಟ್ರೀಟ್‌ನ ದೇವಸ್ಥಾನವೊಂದರ ಅವ್ಯಹಾರವನ್ನು ಬಾಳಿಗಾ ಅವರು ಮಾಹಿತಿ ಹಕ್ಕಿನಡಿ ಮಾಹಿತಿಯನ್ನು ಕಲೆ ಹಾಕಿದ್ದರು. ಇದೇ ಅವರ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.

ಘಟನೆಯ ಕೆಲವೇ ದಿನಗಳಲ್ಲಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಬಾಳಿಗಾ ಹತ್ಯೆಯ ಬಳಿಕ ನಮೋ ಬ್ರಿಗೇಡ್‌ನ ಸಂಸ್ಥಾಪ ನರೇಶ್ ಶೆಣೈ ತಲೆಮರೆಸಿಕೊಂಡಿದ್ದರು.

ಕೊಲೆಯಲ್ಲಿ ನರೇಶ್ ಶೆಣೈ ಕೈವಾಡ ಇರುವ ಬಗ್ಗೆ ಗುಮಾನಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ನರೇಶ್ ಶೆಣೈಯನ್ನು ನೋಟಿಸ್ ಜಾರಿಗೊಳಿಸಿ ವಿಚಾರಣೆಗೆ ಹಾಜಲಾಗುವಂತೆ ಸೂಚಿಸಿದ್ದರು. ಆದರೆ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಮಾರ್ಚ್ 31ರಂದು ಪೊಲೀಸ್ ತನಿಖಾ ತಂಡವು ನರೇಶ್ ಶೆಣೈ ಅವರ ಮನೆಗೆ ದಾಳಿ ನಡೆಸಿ ಶೋಧ ನಡೆಸಿದಾಗಲೂ ಅವರು ಮನೆಯಲ್ಲಿ ಪತ್ತೆಯಾಗಿರಲಿಲ್ಲ.

Write A Comment