ಕನ್ನಡ ವಾರ್ತೆಗಳು

ಮಾಹಿತಿ ಹಕ್ಕು ಕಾರ್ಯಕರ್ತ ಬಾಳಿಗ ಹತ್ಯೆ ಪ್ರಕರಣ : ಮೂರನೇ ಆರೋಪಿ ಪೊಲೀಸ್ ವಶ..?

Pinterest LinkedIn Tumblr

Baliga_murder_shiva

ಮಂಗಳೂರು : ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ್ ಪಾಂಡುರಂಗ ಬಾಳಿಗ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಬಂಧಿತ ಆರೋಪಿಯನ್ನು ಶಿವಪ್ರಸಾದ್ ಯಾನೆ ಶಿವು ಎನ್ನಲಾಗಿದ್ದು, ಈತನ ಬಂಧನದೊಂದಿಗೆ ಬಾಳಿಗಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರ ಬಂಧನವಾದಂತಾಗಿದೆ. ಶಿವು ಘಟನೆಯ ಬಳಿಕ ತಲೆ ಮರೆಸಿಕೊಂಡಿದ್ದ.

ಆದರೆ ಈ ಬಗ್ಗೆ ಪೊಲೀಸ್ ಇಲಾಖೆ ದೃಢಪಡಿಸಿಲ್ಲ. ಪೊಲೀಸರಿಗೆ ಬೇಕಾಗಿರುವ ಇಬ್ಬರು ಆರೋಪಿಗಳಾದ ಶ್ರಿಕಾಂತ್ ಮತ್ತು ಶಿವಪ್ರಸಾದ್ ಪೈಕಿ ಯಾರನ್ನು ವಶಕ್ಕೆ ಪಡೆಯಲಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಇಲ್ಲ. ಆದರೂ ಬಹುತೇಕವಾಗಿ ಶಿವಪ್ರಸಾದ್ ಬಂಧನವಾಗಿದೆ ಎಂದು ತಿಳಿದುಬಂದಿದೆ. ಆದರೆ ತನಿಖಾ ದೃಷ್ಟಿಯಿಂದ ಪೊಲೀಸ್ ಇಲಾಖೆ ಮಾತ್ರ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಿಲ್ಲ ಎನ್ನಲಾಗಿದೆ.

ಮಾರ್ಚ್ 21ರಂದು ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಅವರ ಮನೆಯಿಂದ ಕೆಲವೇ ದೂರದಲ್ಲಿ ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಈ ಸಂಬಂಧ ವಿನೀತ್ ಹಾಗೂ ನಿಶಿತ್ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು.

Baliga_murder_accused

ಪ್ರಕರಣದಲ್ಲಿ ನಮೋ ಬ್ರಿಗೇಡ್ ನಾಯಕ ನರೇಶ್ ಶೆಣೈ ಕೈವಾಡ ಇರುವ ಬಗ್ಗೆ ಪೊಲೀಸರು ಬಲವಾದ ಶಂಕೆಯನ್ನು ಹೊಂದಿದ್ದು, ಜಾಮೀನು ರಹಿತ ವಾರೆಂಟ್ ಹೊರಡಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವು ಹಾಗೂ ಶ್ರೀಕಾಂತ್ ಎಂಬ ಇಬ್ಬರು ಆರೋಪಿಗಳ ಚಿತ್ರ ಸಮೇತಾ ಪೊಲೀಸ್ ಬ್ಲಾಗ್‌ನಲ್ಲಿ ಪ್ರಕಟಣೆ ನೀಡುವ ಮೂಲಕ ಆರೋಪಿಗಳಿಬ್ಬರ ಪತ್ತೆಗಾಗಿ ಸಾರ್ವಜನಿಕರ ಸಹಕಾರ ಕೇಳಿದ್ದರು. ಇದೀಗ ಆರೋಪಿ ಶಿವುನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದ್ದು, ಇನ್ನುಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ.

Write A Comment