ಕನ್ನಡ ವಾರ್ತೆಗಳು

ದುಂಡು ಮಲ್ಲಿಗೆಯ ಸವಿಯಾದ ಅಕ್ಕಿ ಇಡ್ಲಿ

Pinterest LinkedIn Tumblr

Idliweb

ಇಡ್ಲಿ ಹಿಟ್ಟು ರೆಡಿ ಇದ್ದರೆ, ಇಡ್ಲಿ ಮಾಡೋದು ಬಹಳ ಸುಲಭ. ಈಗಂತೂ ಇನ್‌ಸ್ಟೆಂಟ್ ದೋಸೆ ಹಿಟ್ಟು, ಇಡ್ಲಿ ಹಿಟ್ಟು ಸಿಗತ್ತೆ. ಆದರೂ, ಮನೆಯಲ್ಲಿ ಉದ್ದಿನ ಬೇಳೆ ನೆನೆಸಿ, ರುಬ್ಬಿ ತಯಾರಿಸುವ ಇಡ್ಲಿಯ ರುಚಿಯೇ ಬೇರೆ. ಜೊತೆಗಿದು ಎಕಾನಾಮಿಕಲ್ ಕೂಡ.

ಇಡ್ಲಿ ತಯಾರಿಸಲು ಬೇಕಾಗುವ ಪದಾರ್ಥ : 1 ಲೋಟದಷ್ಟು ಅಕ್ಕಿ, ಎರಡು ಲೋಟದಷ್ಟು ಉದ್ದಿನಬೇಳೆ, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅಡಿಗೆ ಸೋಡಾ, ಕಾಲು ಲೋಟದಷ್ಟು ಗಟ್ಟಿ ಅವಲಕ್ಕಿ ಹಾಗೂ ನಾಲ್ಕಾರು ಕಾಳು ಮೆಣಸು.

ತಯಾರಿಸುವ ವಿಧಾನ : ಮೊದಲು ಉದ್ದಿನಬೇಳೆ ಹಾಗೂ ಅಕ್ಕಿಯನ್ನು -ಅವಲಕ್ಕಿಯನ್ನು ಪ್ರತ್ಯೇಕವಾಗಿ ತೊಳೆದು, ಬೇರೆ ಬೇರೆ ಪಾತ್ರೆಗಳಲ್ಲಿ ಸುಮಾರು ನಾಲ್ಕೈದು ಗಂಟೆ ಕಾಲ ನೆನೆಸಿಡಿ.

ಆನಂತರ ನೀರನ್ನು ಬಸಿದು ಗ್ರೈಂಡರ್ ಅಥವಾ ಮಿಕ್ಸರ್‌ನಲ್ಲಿ ಅಕ್ಕಿಯನ್ನೂ, ಉದ್ದಿನಬೇಳೆಯನ್ನೂ ಪ್ರತ್ಯೇಕವಾಗಿ ನುಣುಪಾಗಿ ರುಬ್ಬಿ. ಬಳಿಕ ಅಕ್ಕಿಹಿಟ್ಟು ಹಾಗೂ ಉದ್ದಿನಬೇಳೆ ಹಿಟ್ಟನ್ನು ಸೇರಿಸಿ ಕಲೆಸಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸಿನ ಕಾಳು, ಚಿಟಿಕೆ ಸೋಡ ಸೇರಿಸಿ ದೊಡ್ಡಪಾತ್ರೆಯಲ್ಲಿ ಮುಕ್ಕಾಲು ಭಾಗದಷ್ಟು ಹಾಕಿ ತಟ್ಟೆ ಮುಚ್ಚಿಡಿ. (ಪಾತ್ರೆಯಲ್ಲಿ ಕಂಠಭರ್ತಿ ಇದ್ದರೆ ಹುದುಗು ಹೆಚ್ಚಾದಾಗ ಹಿಟ್ಟು ನೆಲಕ್ಕೆ ಚೆಲ್ಲುತ್ತದೆ) ಇಷ್ಟು ಕೆಲಸವನ್ನು ರಾತ್ರಿಯೇ ಮಾಡಿಟ್ಟರೆ ಬೆಳಗ್ಗೆ ಹೊತ್ತಿಗೆ ಇಡ್ಲಿಹಿಟ್ಟು ಚೆನ್ನಾಗಿ ಹುದುಗು ಬಂದಿದ್ದು ಇಡ್ಲಿ ಸೊಗಸಾಗಿರುತ್ತದೆ.

ಬೆಳಗ್ಗೆ ಇಡ್ಲಿ ಸ್ಟಾಂಡ್‌ನಲ್ಲಿರುವ ಪ್ಲೇಟ್‌ಗಳಿಗೆ ಎಣ್ಣೆ ಅಥವಾ ತುಪ್ಪ ಸವರಿ ಒಂದು ಸೌಟಿನಲ್ಲಿ ಇಡ್ಲಿ ಹಿಟ್ಟು ಹಾಕಿ, ಕುಕ್ಕರಿನಲ್ಲಿ ಬೇಯಿಸಲು ಇಡಿ. ಕುಕ್ಕರ್‌ಗೆ ವೈಟ್ ಹಾಕುವ ಅಗತ್ಯವೇನಿಲ್ಲ. ಬೇಕಿದ್ದರೆ ಪುಟ್ಟದೊಂದು ಲೋಟ ಮುಚ್ಚಿದರೆ ಸಾಕು. ಐದು ಹತ್ತು ನಿಮಿಷದಲ್ಲೇ ಇಡ್ಲಿ ಸೊಗಸಾಗಿ ಬೆಂದಿರುತ್ತದೆ. ಗಮಗಮಿಸುವ ತುಪ್ಪದೊಂದಿಗೆ ಇಡ್ಲಿಗೆ ಸಾಂಬರ್, ಕಾಯಿಚೆಟ್ನಿ ಹಾಕಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು…

Write A Comment