ಕನ್ನಡ ವಾರ್ತೆಗಳು

ಬೋರ್‌ವೆಲ್‌ನಲ್ಲಿ ನೀರು ಕಮ್ಮಿ ಇದೆಯಾ ಹಾಗಾದರೇ ಬೋರ್‌ವೆಲ್ ರೀಚಾರ್ಜ್ ಮಾಡಿ

Pinterest LinkedIn Tumblr

(ವರದಿ,ಚಿತ್ರ- ಯೋಗೀಶ್ ಕುಂಭಾಸಿ)
ಕುಂದಾಪುರ: ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಇತ್ತೀಚೆಗೆ ಎಲ್ಲೆಡೆ ಬೋರ್‌ವೆಲ್ ಅಥವಾ ಕೊಳವೆ ಬಾವಿ ತೋಡಿಸುವುದು ಮಾಮೂಲಿಯಾಗಿದೆ. ಆದರೇ ಕೊಳವೆ ಬಾವಿಯಲ್ಲೂ ನೀರು ಕಮ್ಮಿ ಇದ್ದು ಕುಡಿಯಲು ನೀರು ಯೋಗ್ಯವಾಗಿಲ್ಲದಿದ್ದರೇ ಚಿಂತೆ ಬೇಡ. ಪಕ್ಕಾ ದೇಸಿ ಮಾದರಿಯ ಕೊಳವೆ ಬಾವಿ ಜಲಮರುಪೂರ್ಣ ಅಥವಾ ಬೋರ್‌ವೆಲ್ ರೀಚಾರ್ಜ್ ಎನ್ನುವ ಪ್ರಕ್ರಿಯೆ ಇದೆಲ್ಲದಕ್ಕೂ ಪರಿಹಾರ. ಇದೇನು ಅಂತಿರಾ, ಈ ಸ್ಟೋರಿ ನೋಡಿ.

ಕರಾವಳಿಯಲ್ಲಿ ವರ್ಷವಿಡೀ ನೀರಿಗೆ ಬರವಿಲ್ಲದಿದ್ದರೂ ಕೂಡ ಬೇಸಿಗೆಯ ಮೂರು ತಿಂಗಳು ಮಾತ್ರ ಕೊಂಚ ನೀರಿನ ತಾಪತ್ರಯ ಎಲ್ಲೆಡೆ ಮಾಮೂಲಿ. ಕುಡಿಯುವ ನೀರಿಗಾದರೂ ಏನಾದರೂ ಪೂರಕ ವ್ಯವಸ್ಥೆ ಮಾಡಿಕೊಳ್ಳಬಹುದು ಆದರೇ ತೋಟ-ಗದ್ದೆ ಇದ್ರೇ ದೇವರಗತಿ. ಅದಕ್ಕಂತಲೇ ಕೆಲವರು ಕೊಳವೆಬಾವಿ ತೋಡಿಸ್ತಾರೆ. ಆದರೇ ಅದರಲ್ಲೂ ನೀರಿಗೆ ಸಮಸ್ಯೆ ಬರುತ್ತೆ. ಅಲ್ಲದೇ ಕೆಲವು ಕೊಳವೆ ಬಾವಿ ನೀರು ಕುಡಿಯಲು ಅಷ್ಟೇನೂ ಯೋಗ್ಯವೂ ಆಗಿರಲ್ಲ. ಅದಕ್ಕಾಗಿಯೇ ಸ್ವದೇಶಿ ಟೆಕ್ನಾಲಜಿ ಉಪಯೋಗಿಸಿಕೊಂಡು ಸರಳ ವೈಜ್ಞಾನಿಕ ಪ್ರಕ್ರಿಯೆ ಮೂಲಕ ಕೊಳವೆ ಬಾವಿ ಜಲಮರುಪೂರ್ಣ ಅಥವಾ ಬೋರ್‌ವೆಲ್ ರೀಚಾರ್ಜ್ ಮಾಡಿಸಿದ್ರೇ ಆಯ್ತು ವರ್ಷಂಪ್ರತಿ ನೀರಿಗೆ ಬರವೇ ಇಲ್ಲ.

Kndpr_Borewell_Recharge (8) Kndpr_Borewell_Recharge (2) Kndpr_Borewell_Recharge (3) Kndpr_Borewell_Recharge (1) Kndpr_Borewell_Recharge (4) Kndpr_Borewell_Recharge (6) Kndpr_Borewell_Recharge (7) Kndpr_Borewell_Recharge (5) Kndpr_Borewell_Recharge (10)

ಏನಿದು ಬೋರ್ ವೆಲ್ ರೀಚಾರ್ಜ್
ಇದೊಂದು ಸರಳ ವೈಜ್ಞಾನಿಕ ಪ್ರಕ್ರಿಯೆ. ಮಳೆಗಾಲದಲ್ಲಿ ಹರಿದು ಚರಂಡಿ ಸೇರುವ ಮಳೆ ನೀರನ್ನು ಹಿಡಿದಿಟ್ಟುಕೊಂಡು ಅದನ್ನು ವ್ಯವಸ್ಥಿತವಾಗಿ ಇಂಗಿಸಿ ಕೊಳವೆ ಬಾವಿಯಲ್ಲಿ ವರ್ಷಾವಧಿ ನೀರನ್ನು ಪಡೆಯುವ ಸುಲಭ ಕೆಲಸ. ಇದಕ್ಕೆ ಮಾಡಬೇಕಾದದ್ದು ಇಷ್ಟೆ… ಮೊದಲು ಕೊಳವೆ ಬಾವಿ ಇರುವ ಸ್ಥಳದಲ್ಲಿ 10 ಅಡಿ ಅಗಲ 10 ಅಡಿ ಆಳಕ್ಕೆ ಚೌಕಾಕಾರದ ಗುಂಡಿ ನಿರ್ಮಿಸಿ ಬಳಿಕ ಕೊಳವೆಯ 4 ಅಡಿಗೆ ರಂಧ್ರವನ್ನು ಮಾಡುವುದು, ಅದರ ಮೇಲ್ಭಾಗಕ್ಕೆ ಅಕ್ವಾ ಮೆಸ್ ಹಾಗೂ ನೈಲಾನ್ ಮೆಸ್ ಅಳವಡಿಸಿ ಸ್ಯಾಂಡ್ ಪಿಲ್ಟರ್ ಮಾಡುವುದು. ಗುಂಡಿಯ ಶೇಖಡಾ 50 ರಷ್ಟು ಭಾಗಕ್ಕೆ ಶಿಲೆಗಲ್ಲನ್ನು ಅದರ ಮೇಲ್ಭಾಗ 40 ಮಿಲೀಮೀಟರ್ ಸೈಜಿನ ಜಲ್ಲಿಕಲ್ಲು, 20 ಮಿಲಿಮೀಟರ್ ಜಲ್ಲಿಕಲ್ಲು, ಅದರ ಮೇಲಿಗೆ 1 ಇಂಚು ದಪ್ಪಕ್ಕೆ ಇದ್ದಿಲು ಬಳಿಕ ಎಚ್.ಡಿ.ಪಿ.ಇ. ನೆಟ್ ಮ್ಯಾಟ್, ಹಾಗೂ 2 ಅಡಿ ಎತ್ತರಕ್ಕೆ ಮರಳು ಹಾಸುವುದು. ಬಳಿಕ ಭೂಮಿ ಮಟ್ಟಕ್ಕಿಂತ 1 ಅಡಿ ಮೇಲಕ್ಕೆ ಕಾಂಕ್ರಿಟ್ ಗೋಡೆ ಅಥವಾ ಪ್ಯಾರಾಪೀಟ್ ವಾಲ್ ನಿರ್ಮಾಣ ಮಾಡುವುದು. ಈ ಇಂಗು ಗುಂಡಿಯ ಪಕ್ಕದಲ್ಲಿ ಅಗತ್ಯಕ್ಕನುಸಾರವಾಗಿ ಸೋಸು ಗುಂಡಿ ನಿರ್ಮಿಸುವುದು ಮತ್ತು ಇಡೀ ಪ್ರದೇಶದ ನೀರು ಹರಿದು ಬರಲು ಕಾಲುವೆ ನಿರ್ಮಿಸುವುದು. ಹೀಗೆ ಕಾಲುವೆ ಮೂಲಕ ಸೋಸು ಗುಂಡಿಗೆ ಬಂದ ನೀರು ಸಮೀಪದ ಇಂಗುಗುಂಡಿಗೆ ಹೋಗುತ್ತೆ. ಈ ನೀರು ಗೊಂಡಿಯಲ್ಲಿ ಫಿಲ್ಟರ್ ಆಗುವ ಕಾರಣ ಕುಡಿಯಲು ಯೋಗ್ಯವಾಗುವುದಲ್ಲದೇ ವರ್ಷದುದ್ದಕ್ಕೂ ಕುಡಿಯಲು ಮಾತ್ರವಲ್ಲದೇ ತೋಟಕ್ಕೂ, ನಿತ್ಯ ಬಳಕೆಗೂ ನೀರಿಗೆ ತತ್ವಾರ ಇರಲ್ಲ ಅನ್ನುತ್ತಾರೆ ಅಂತರ್ಜಲ ಹಾಗೂ ಮಳೆ ಕೊಯ್ಲು ತಜ್ಙರಾದ ಎ.ಜೆ. ದೇವರಾಜ್ ರೆಡ್ಡಿ.

Kndpr_Borewell_Recharge (9)
ಎ.ಜೆ. ದೇವರಾಜ್ ರೆಡ್ಡಿ

ಉಡುಪಿಯಲ್ಲೇ ವಕ್ವಾಡಿ ಫಸ್ಟ್..!
ಬೋರ್‌ವೆಲ್ ರೀಚಾರ್ಜ್ ಪ್ರಕ್ರಿಯೆ ಮೂಲಕ ಯಶಸ್ಸು ಪಡೆದ ಹಲವು ಜಿಲ್ಲೆಗಳ ಪೈಕಿ ಚಿತ್ರದುರ್ಗ ಅಗ್ರಗಣ್ಯ ಸ್ಥಾನದಲ್ಲಿದೆ. ಆದರೇ ಈ ಪ್ರಕ್ರಿಯೆ ಉಡುಪಿ ಜಿಲ್ಲೆಯಲ್ಲಿ ಪ್ರಥಮವಾಗಿ ಪರಿಚಯಿಸಲ್ಪಟ್ಟಿದ್ದು ಕುಂದಾಪುರ ತಾಲೂಕಿನ ಕುಂಭಾಸಿ ಸಮೀಪದ ವಕ್ವಾಡಿ ರಸ್ತೆಯಲ್ಲಿರುವ ಅಶೋಕ್ ಶೆಟ್ಟಿಗಾರ್ ಅವರ ನಿವಾಸದಲ್ಲಿ. ಕಳೆದ ೬ ವರ್ಷಗಳಿಂದ ತಮ್ಮ ಮನೆಯ ಒಂದುಮುಕ್ಕಾಲು ಎಕ್ರೆ ತೋಟದ ನಿರ್ವಹಣೆಗೆ ಬೋರ್ ಕೊರೆಸಿದರೂ ಕೂಡ ಅದರಲ್ಲಿ ಅಂತಹ ತ್ರಪ್ತಿ ಅಶೋಕ್ ಅವರಿಗೆ ಸಿಕ್ಕಿಲ್ಲ. ಮುಂದೆ ತೋಟಕ್ಕೆ ನೀರಿನ ವ್ಯವಸ್ಥೆ ಹೇಗೆ ಎಂಬ ಬಗ್ಗೆ ಎಲ್ಲೋ ಒಂದು ರೀತಿಯ ಆತಂಕ ಇವರಲ್ಲಿ ಇದ್ದೇ ಇತ್ತು. ಆವಾಗಲೇ ಇವರಿಗೆ ಸಿಕ್ಕಿದ್ದು ಅಂತರ್ಜಲ ಹಾಗೂ ಮಳೆ ಕೊಯ್ಲು ತಜ್ಞರಾದ ಎ.ಜೆ. ದೇವರಾಜ್ ರೆಡ್ಡಿ ಬರೆದಿದ್ದ ‘ಕೊಳವೆ ಬಾವಿಗೆ ಜಲ ಮರುಪೂರ್ಣ’ ಎನ್ನುವ ಪುಸ್ತಕ. ಅದನ್ನು ಓದಿ ದೇವರಾಜ್ ರೆಡ್ಡಿಯವರನ್ನು ಸಂಪರ್ಕಿಸಿ ತಮ್ಮ ಮನೆಯ ಕೊಳವೆ ಬಾವಿಗೂ ಈ ಪ್ರಕ್ರಿಯೆ ಮಾಡಿಸಿಯೇ ಬಿಟ್ಟರು.

Kndpr_Borewell_Recharge (11)
ಅಶೋಕ್ ಶೆಟ್ಟಿಗಾರ್

ಇನ್ನು ಜಿ.ಇ.ಓ. ವಾಟರ್ ಬೋರ್ಡ್ ಎನ್ನುವ ಮಳೆ ನೀರು ಕೊಯ್ಲು ವ್ಯವಸ್ಥೆ ಬಗೆಗಿನ ಸಂಸ್ಥೆ ನಡೆಸುತ್ತಿರುವ ತಜ್ಞರಾದ ಎ.ಜೆ. ದೇವರಾಜ್ ರೆಡ್ಡಿ ಅವರ ನೇತೃತ್ವದಲ್ಲಿ ಎಲ್ಲೆಡೆ ಈಗಾಗಲೇ ೨೦ ಸಾವಿರಕ್ಕೂ ಅಧಿಕ ಬೋರ್‌ವೆಲ್ ರೀಚಾರ್ಜ್ ಪ್ರಕ್ರಿಯೆ ನಡೆದಿದ್ದು ಚಿತ್ರದುರ್ಗ ಜಿಲ್ಲೆಗೆ ಈ ವಿಚಾರದಲ್ಲಿ ರಾಷ್ಟ್ರೀಯ ಪುರಸ್ಕಾರವೂ ಲಭಿಸಿದೆ. ಉಡುಪಿಯಲ್ಲಿ ಬೋರ್‌ವೆಲ್ ರೀಚಾರ್ಜ್ ಮೊದಲ ಪ್ರಯೋಗ. ಈ ಭಾಗದ ಜನರಿಗೆ ಈ ವ್ಯವಸ್ಥೆ ಹೊಸತಾಗಿದ್ದು ಇದರ ಅನುಕೂಲತೆಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಪೋಲಾಗುವ ನೀರನ್ನು ಸದುಪಯೋಗ ಪಡಿಸಿಕೊಂಡರೇ ನೀರಿಗಾಗಿ ಕಷ್ಟಪಡುವ ಪ್ರಮೇಯವೇ ಇಲ್ಲ ಎನ್ನುತ್ತಾರೆ ರೆಡ್ಡಿ ಅವರು.

ಒಟ್ಟಿನಲ್ಲಿ ಮೂಲಭೂತ ವ್ಯವಸ್ಥೆಗಳಲ್ಲೊಂದಾದ ನೀರಿಗೆ ಎಲ್ಲೆಡೆ ಪರಿಪಾಡಲು ಪಡುತ್ತಿರುವ ಈ ವೇಳೆ ಬೋರ್‌ವೆಲ್ ತೋಡಿಸಿಯೂ ನೀರಿಗೆ ಸಮಸ್ಯೆ ಅನುಭವಿಸುತ್ತಿದ್ದರೇ ಅದಕ್ಕೆ ಬೋರ್‌ವೆಲ್ ರೀಚಾರ್ಜ್ ವ್ಯವಸ್ಥೆ ಪರಿಹಾರವಾಗಬಹುದುದೆಂಬ ಆಶಯ ಈ ವರದಿಯದ್ದು.

1 Comment

Write A Comment