ಕನ್ನಡ ವಾರ್ತೆಗಳು

ಭೀಕರ ರಸ್ತೆ ಅಪಘಾತಕ್ಕೆ ಇಬ್ಬರು ಬಲಿ – 19 ಮಂದಿಗೆ ಗಾಯ

Pinterest LinkedIn Tumblr

Axident_two_died_1

ಕಾಸರಗೋಡು, ಏ.04 : ಟೆಂಪೋ ಟ್ರಾವೆಲರ್ ಮತ್ತು ಮಿನಿ ಲಾರಿ ಡಿಕ್ಕಿ ಹೊಡೆದು ಯುವಕರಿಬ್ಬರು ದಾರುಣವಾಗಿ ಮೃತಪಟ್ಟು,  ಕೌನ್ಸಿಲರ್ ಸಹಿತ 19 ಮಂದಿ ಗಾಯಗೊಂ‌ಡ ಘಟನೆ ಪೊಯಿನಾಚಿ ಪೆಟ್ರೋಲ್ ಬಂಕ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.

ಮಿನಿಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಬೇಕಲ ಪಳ್ಳಿಕೆರೆ ಬೀಚ್ ಪಾರ್ಕ್ ಪರಿಸರದ ಮಠತ್ತಿಲ್ ಎಸ್. ಸಿ. ಕಾಲನಿ ನಿವಾಸಿ ಸುಂದರಿ ಅವರ ಪುತ್ರ ಶರತ್ ಕುಮಾರ್ (21) ಮತ್ತು ಟೆಂಪೋ ಟ್ರಾವಲರ್ ನಲ್ಲಿ ಪ್ರಯಾಣಿಸುತ್ತಿದ್ದ ಹೊಸದುರ್ಗ ತಾಲೂಕಿನ ಪಿಲಿಕೋಡ್ ಮಡಿಬೈಲಿನ ಪಿ.ವಿ. ಪದ್ಮನಾಭನ್ ಅವರ ಪುತ್ರ ಕೆ. ಅಜಿತ್ (23) ಸಾವಿಗೀಡಾದವರು.

Axident_two_died_2 Axident_two_died_3

ಶರತ್ ಕುಮಾರ್ ಕೂಲಿ ಕಾರ್ಮಿಕನಾಗಿದ್ದು, ತಾಯಿ, ಸಹೋದರನನ್ನು ಅಗಲಿದ್ದಾರೆ. ಅಜಿತ್ ಚೆರ್ವತ್ತೂರಿನ ಬೈಕ್ ಶೋರೂಂವೊಂದರ ಸಿಬಂದಿಯಾಗಿದ್ದು, ಮಡಕಾಯಿ ಡಿಫೆನ್ಸ್ ಕ್ಲಬ್ ನ ಸದಸ್ಯ ಮತ್ತು ಫುಟ್ಬಾಲ್ ಆಟಗಾರ. ಮೃತರು ತಂದೆ, ತಾಯಿ, ಸಹೋದರರನ್ನು ಅಗಲಿದ್ದಾರೆ.

ಶನಿವಾರ ರಾತ್ರಿ 11.30ಕ್ಕೆ ಅಪಘಾತ ಸಂಭವಿಸಿದೆ. ಮಿನಿ ಲಾರಿಯಲ್ಲಿ 10 ಮಂದಿ ಮತ್ತು ಟೆಂಪೋ ಟ್ರಾವಲರ್ ನಲ್ಲಿ 9 ಮಂದಿ ಪ್ರಯಾಣಿಸುತ್ತಿದ್ದರು. ಮಿನಿ ಲಾರಿಯಲ್ಲಿ ಪ್ರಯಾಣಿಸುತ್ತಿದ್ದ ಪಳ್ಳಿಕೆರೆ ಬೀಚ್ ಪಾರ್ಕ್ ಮಠತ್ತಿಲ್ ಎಸ್.ಸಿ. ಕಾಲನಿ ನಿವಾಸಿಗಳಾದ ಸುದೇಶ್ ಕುಮಾರ್ (21), ನಾಗೇಶ್ (21), ಸತೀಶನ್ (25), ಪ್ರಮೋದ್ (22), ಜ್ಯೋತಿಷ್ (22), ವಾಹನ ಚಾಲಕ ಮೈಲಾಟಿಯ ಸುನಿಲ್ (35), ಮಾಂಙಾಂಡ್ ನಿವಾಸಿಗಳಾದ ಸುಜಿತ್ (29), ಮೋಹನನ್ (22), ಪಳ್ಳಿಕೆರೆಯ ಜೋಳಿಕೆರೆಯ ಶೈಜು (29), ಕಾಸರಗೋಡು ನಗರಸಭೆಯ 22ನೇ ವಾರ್ಡ್ ಕೌನ್ಸಿಲರ್ ವಿಶ್ವನಾಥ್ (25) ಮೊದಲಾದವರು ಗಾಯಗೊಂಡಿದ್ದಾರೆ.

ಈ ಪೈಕಿ ಕೌನ್ಸಿಲರ್ ವಿಶ್ವನಾಥ್, ಜ್ಯೋತಿಷ್ ಮತ್ತು ಪ್ರಮೋದ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಚೆಂಗಳ ಮತ್ತು ನಗರದ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬೋವಿಕ್ಕಾನ ಬಳಿ ನಡೆಯುತ್ತಿರುವ ನೇಮಕ್ಕೆ ಮಿನಿ ಲಾರಿಯಲ್ಲಿ ಹೋಗುತ್ತಿದ್ದಾಗ ಎದುರು ಭಾಗದಿಂದ ಬಂದ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಟೆಂಪೋ ಟ್ರಾವೆಲರ್ ನಲ್ಲಿದ್ದವರು ಚೆರ್ವತ್ತೂರು ಮತ್ತು ತೃಕ್ಕರಿಪುರದ ಬೈಕ್ ಶೋರೂಂವೊಂದರ ಸಿಬ್ಬಂದಿ. ಅವರೆಲ್ಲ ವಾರ್ಷಿಕ ಪ್ರವಾಸದಂಗವಾಗಿ ಮಂಗಳೂರಿಗೆ ಹೋಗಿ ಹಿಂದಿರುಗುತ್ತಿದ್ದರು. ಅದರಲ್ಲಿದ್ದ ಮೊಹಮ್ಮದ್, ಸುನಿತಾ, ರಮ್ಯಾ, ರೇಶ್ಮಾ, ಶಾಜಿ, ಅಖಿಲ್, ಚಾಲಕ ಮುಹಮ್ಮದ್ ರಾಫಿ, ಶರತ್ ಗಾಯಗೊಂಡಿದ್ದಾರೆ.

ಗಂಭೀರ ಗಾಯಗೊಂಡಿರುವ ಸುನಿತಾ, ರಮ್ಯಾ, ಮಹಮ್ಮದ್ ರಾಫಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಕಾಸರಗೋಡಿನ ವಿವಿಧ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment