ಕನ್ನಡ ವಾರ್ತೆಗಳು

60 ಲಕ್ಷ ರೂ. ವೆಚ್ಚದ ಮೊಟ್ಟ ಮೊದಲ ಚರ್ಮ ಬ್ಯಾಂಕ್ ಸ್ಥಾಪನೆ

Pinterest LinkedIn Tumblr

shin_bank_bnglore

ಬೆಂಗಳೂರು, ಮಾ.30 : ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಅವರಣದಲ್ಲಿ ಸುಮಾರು 60 ಲಕ್ಷ ರೂ.ಗಳ ವೆಚ್ಚದಲ್ಲಿ ಚರ್ಮ ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ ಇದು ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿ ಸ್ಥಾಪನೆ ಗೊಂಡ ಬ್ಯಾಂಕ್ ಇದಾಗಿದೆ. ಬುಧವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು, ಚರ್ಮ ಬ್ಯಾಂಕ್ ಉದ್ಘಾಟನೆ ಮಾಡಿದರು.

ಬೆಂಗಳೂರು ವೈದ್ಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಯು ರೋಟರಿ ಕ್ಲಬ್ ಮತ್ತು ಆರ್ಶೀವಾದ್ ಸ್ಪೈಸ್ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಚರ್ಮ ಬ್ಯಾಂಕ್ ಆರಂಭಿಸಿದೆ.

ಇದು ರಾಜ್ಯದ ಮೊದಲ ಮತ್ತು ದೇಶದ ಮೂರನೇ ಚರ್ಮ ಬ್ಯಾಂಕ್ ಆಗಿದೆ. ಶೇ 25 ರಿಂದ 30ರಷ್ಟು ಸುಟ್ಟ ಗಾಯಗಳಾದಾಗ ರೋಗಿಯ ದೇಹದ ಇತರ ಭಾಗದಿಂದ ಚರ್ಮವನ್ನು ತೆಗೆದು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಆದರೆ, ಶೇ 30ಕ್ಕಿಂತ ಹೆಚ್ಚು ಸುಟ್ಟಗಾಯಗಳಾಗಿದ್ದರೆ ಚರ್ಮ ಬ್ಯಾಂಕ್‌ಗಳಲ್ಲಿ ಸಂಗ್ರಹಿಸಿದ ಚರ್ಮವನ್ನು ಬಳಸಬಹುದಾಗಿದೆ.

ಏನಿದು ಚರ್ಮ ಬ್ಯಾಂಕ್? : ಮೃತಪಟ್ಟ ವ್ಯಕ್ತಿಯ ಚರ್ಮವನ್ನು 6 ಗಂಟೆಗಳಲ್ಲಿ ಪಡೆದು ಬ್ಯಾಂಕ್‌ಗಳಲ್ಲಿ ಸಂರಕ್ಷಿಸಿ ಇಡಬೇಕು. ಚರ್ಮವನ್ನು ದಾನ ಪಡೆಯುವ ಮೊದಲು ಎಚ್‌ಐವಿ, ಅಲರ್ಜಿ ಸೇರಿದಂತೆ ಹಲವು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಚರ್ಮ ರೋಗ ಕಂಡುಬಂದರೆ ಅವರ ಚರ್ಮವನ್ನು ದಾನ ಪಡೆಯಲಾಗುವುದಿಲ್ಲ.

ದಾನವಾಗಿ ಪಡೆದ ಚರ್ಮವನ್ನು ರಕ್ತ ಸಂಗ್ರಹಣೆ ಮಾಡುವಂತೆ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಸಂಗ್ರಹಣೆ ಮಾಡಲಾಗುತ್ತದೆ. ನಾನಾ ಅವಘಡಗಳಿಂದ ದೇಹವನ್ನು ಸುಟ್ಟುಕೊಂಡ ರೋಗಿಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡುವಾಗ ಇವುಗಳನ್ನು ಬಳಸಿಕೊಳ್ಳಲಾಗುತ್ತದೆ.

ಯಾರು ಚರ್ಮದಾನ ಮಾಡಬಹುದು? : ಬೆಂಗಳೂರು ನಗರದಲ್ಲಿ ಈಗಾಗಲೇ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಗಳ ಅಂಗಾಂಗಗಳನ್ನು ದಾನ ಮಾಡಲಾಗುತ್ತಿದೆ. ಹೀಗೆ ಅಂಗಾಂಗ ದಾನ ಮಾಡುವಂತೆ ಚರ್ಮ ದಾನಕ್ಕೂ ಮೊದಲು ಹೆಸರು ನೋಂದಣಿ ಮಾಡಬೇಕು.ಕುಟುಂಬದವರು ಒಪ್ಪಿಗೆ ಕೊಟ್ಟರೆ ಮೆದುಳು ನಿಷ್ಕ್ರೀಯಗೊಂಡ ವ್ಯಕ್ತಿಯಿಂದ ಚರ್ಮವನ್ನು ದಾನವಾಗಿ ಪಡೆಯಲಾಗುತ್ತದೆ. ಜೀವಂತ ಇರುವ ವ್ಯಕ್ತಿಯು ತಮ್ಮ ಸಂಬಂಧಿಗಳಿಗೆ ತೊಡೆ ಭಾಗದ ಚರ್ಮವನ್ನು ದಾನ ಮಾಡಬಹುದು.

ಆ ಜಾಗದಲ್ಲಿ 3 ರಿಂದ 4ವಾರಗಳಲ್ಲಿ ಚರ್ಮ ಪುನಃ ಬೆಳೆಯುತ್ತದೆ. ಚರ್ಮದ ಕಸಿ ಮಾಡಲು ರಕ್ತ ಸೇರಿದಂತೆ ಯಾವುದೇ ಹೊಂದಾಣಿಕೆಯ ಅಗತ್ಯವಿಲ್ಲ. ದೇಶದ 3ನೇ ಬ್ಯಾಂಕ್ : ಮುಂಬೈನ ರಾಷ್ಟ್ರೀಯ ಸುಟ್ಟಗಾಯಗಳ ಕೇಂದ್ರ ಮತ್ತು ಚೆನ್ನೈನ ರೈಟ್ಸ್ ಆಸ್ಪತ್ರೆಯಲ್ಲಿ ದೇಶದ ಎರಡು ಚರ್ಮ ಬ್ಯಾಂಕ್‌ಗಳಿವೆ. ಬೆಂಗಳೂರಿನಲ್ಲಿ ಸ್ಥಾಪನೆಯಾದ ಬ್ಯಾಂಕ್ ರಾಜ್ಯಕ್ಕೆ ಪ್ರಥಮ ಮತ್ತು ದೇಶದಲ್ಲಿ 3ನೇಯದಾಗಿದೆ. ಈ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಲು ಇಬ್ಬರು ವೈದ್ಯರು ಮುಂಬೈನಲ್ಲಿ ತರಬೇತಿ ಪಡೆದು ಬಂದಿದ್ದಾರೆ.

Write A Comment