ಕನ್ನಡ ವಾರ್ತೆಗಳು

ಬೃಹತ್‌ ಗಾತ್ರದ ನೀರಿನ ಟ್ಯಾಂಕ್‌ ಮೇಲೆ ವಿದ್ಯಾರ್ಥಿ ಜೋಡಿ ಪತ್ತೆ : ಪೊಲೀಸರಿಂದ ಕೇಸು ದಾಖಲು

Pinterest LinkedIn Tumblr

water_tank_student

ಮಂಗಳೂರು: ಎಂಜಿನಿಯರಿಂಗ್‌ ವಿದ್ಯಾರ್ಥಿ ಜೋಡಿಯೊಂದು ಬೃಹತ್‌ ಗಾತ್ರದ ನೀರಿನ ಟ್ಯಾಂಕ್‌ ಮೇಲೇರಿ ಸಾರ್ವಜನಿಕರಲ್ಲಿ ಬೀತಿ ಹುಟ್ಟಿಸಿದ ಘಟನೆ ಸೋಮವಾರ ಸಂಜೆ ಮಂಗಳೂರಿನಲ್ಲಿ ನಡೆದಿದೆ.

ಸುರತ್ಕಲ್‌ ಎನ್‌ಐಟಿಕೆಯಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್‌ ಓದುತ್ತಿರುವ ಹರ್ಷೆಶ್‌ (21) ಮತ್ತು ಸುಪ್ರಿಯಾ (21) ಸೋಮವಾರ ಸಂಜೆ ನಗರದ ಬಾವುಟಗುಡ್ಡೆಯ ಟಾಗೋರ್‌ ಪಾರ್ಕ್‌ ಬಳಿ ಇರುವ ಅಂದಾಜು 35 ಅಡಿ ಎತ್ತರದ ಬೃಹತ್‌ ಗಾತ್ರದ ನೀರಿನ ಟ್ಯಾಂಕ್‌ ಮೇಲೇರಿ ಆತಂಕ ಸೃಷ್ಟಿಸಿದ ವಿದ್ಯಾರ್ಥಿ ಜೋಡಿ.

ಸೋಮವಾರ ಸಂಜೆ 7.15 ರ ವೇಳೆಗೆ ನೀರಿನ ಟ್ಯಾಂಕ್‌ ಮೇಲೆ ಇಬ್ಬರು ವ್ಯಕ್ತಿಗಳಿರುವುದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಬಂದರು ಪೊಲೀಸ್‌ ಇನ್ಸ್‌ಪೆಕ್ಟರ್‌ ಶಾಂತಾರಾಂ, ಪಿಎಸ್‌ಐ ಮದನ್‌ ಹಾಗೂ ಸಿಬಂದಿ ಸ್ಥಳಕ್ಕೆ ಧಾವಿಸಿ ಟ್ಯಾಂಕ್‌ ಮೇಲಿದ್ದವರ ರಕ್ಷಣೆಗೆ ಕ್ರಮ ಆರಂಭಿಸಿದರು. ಪಿಎಸ್‌ಐ ಮದನ್‌ ಅವರು ಟ್ಯಾಂಕ್‌ನ ಏಣಿಯ ಮೂಲಕ ಮೇಲಕ್ಕೆ ಹತ್ತಿ ಇಬ್ಬರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದರು.

ಬಳಿಕ ಈ ಜೋಡಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಟಾಗೋರ್‌ ಪಾರ್ಕಿಗೆ ಬಂದಿದ್ದ ತಾವು ನಗರದ ಸುತ್ತಮುತ್ತಲಿನ ಪರಿಸರ ವೀಕ್ಷಣೆಗಾಗಿ ಟ್ಯಾಂಕಿಗೆ ಜೋಡಿಸಿರುವ ಏಣಿಯ ಮೂಲಕ ಮೇಲಕ್ಕೆ ಹತ್ತಿದ್ದೆವು. ಬಳಿಕ ಟ್ಯಾಂಕ್‌ನ ಮೇಲೆ ಸುತ್ತ ಹೋಗಿ ಸುಂದರವಾದ ಪ್ರಕೃತಿ ವೀಕ್ಷಣೆ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ.

ಆದರೆ ನೀರಿನ ಟ್ಯಾಂಕ್‌ ಮೇಲೆ ಜನ ಸಂಚಾರವಿಲ್ಲದೇ ನಿರ್ಜನ ಪ್ರದೇಶವಾಗಿರುವುದರಿಂದ ಜೊತೆಗೆ ಕತ್ತಲು ಆವರಿಸಿರುವುದರಿಂದ ಕಾಮಕೇಳಿ ನಡೆಸಲು ಈ ಜೋಡಿ ಮೇಲೆ ಹತ್ತಿರಬೇಕು ಎಂದು ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರೆ.

ಈ ರೀತಿ ಯಾರಿಗೂ ಯಾವೂದೇ ಮಾಹಿತಿ ನೀಡದೇ ಬೃಹತ್‌ ಗಾತ್ರದ ನೀರಿನ ಟ್ಯಾಂಕ್‌ ಮೇಲಕ್ಕೆ ಹತ್ತಿ ಸಾರ್ವಜನಿಕರಲ್ಲಿ ಬೀತಿ ಹುಟ್ಟಿಸಿದ ಕಾರಣ ವಿದ್ಯಾರ್ಥಿ ಜೋಡಿಯ ವಿರುದ್ಧ ಕರ್ನಾಟಕ ಪೊಲೀಸ್‌ ಕಾಯ್ದೆಯನ್ವಯ ಪ್ರಕರಣ ದಾಖಲಿಸಿರುವ ಪೊಲೀಸರು ಬಳಿಕ ವಿದ್ಯಾರ್ಥಿ ಜೋಡಿಗೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

Write A Comment