
ಮಂಗಳೂರು, ಮಾ.25: ಕ್ರೈಸ್ತ ಬಾಂಧವರ ಪವಿತ್ರ ದಿನವಾದ ‘ಶುಭ ಶುಕ್ರವಾರ’ವನ್ನು ಇಂದು ಮಂಗಳೂರು ಧರ್ಮಪ್ರಾಂತದಲ್ಲಿ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಮನುಕುಲಕ್ಕೆ ಪ್ರೀತಿ ಹಾಗೂ ಶಾಂತಿಯ ಸಂದೇಶ ಸಾರಿದ ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಸ್ಮರಣಾರ್ಥ ಆಚರಿಸಲಾಗುವ ಶುಭ ಶುಕ್ರವಾರದ ದಿನವಾದ ಇಂದು ನಗರದ ಪ್ರಮುಖ ಚರ್ಚ್‌ಗಳಲ್ಲಿ ಸಾಮೂಹಿಕ ಪೂಜೆ, ಪ್ರಾರ್ಥನೆ ಸಲ್ಲಿಸಿದ ಕ್ರೈಸ್ತರು ಲೋಕ ಕಲ್ಯಾಣಕ್ಕಾಗಿ ಯೇಸು ಅನುಭವಿಸಿದ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.
ನಗರದ ಎಲ್ಲಾ ಚರ್ಚ್‌ಗಳಲ್ಲಿ ಇಂದು ವಿಶೇಷ ಪ್ರಾರ್ಥನೆ ಹಾಗೂ ಆರಾಧನೆಯೊಂದಿಗೆ ಕ್ರೈಸ್ತರು ಯೇಸು ಕ್ರಿಸ್ತನನ್ನು ಆರಾಧಿಸಿದರು. ಮಂಗಳೂರು ಕೆಥೊಲಿಕ್ ಧರ್ಮಪ್ರಾಂತದ ಬಿಷಪ್ ರೆ.ಫಾ.ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ರವರು ರೊಜಾರಿಯೊ ಕೆಥೆಡ್ರಲ್‌ನಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ಮತ್ತು ವಿಶೇಷ ಪ್ರಾರ್ಥನಾ ವಿಧಿಗಳಿಗೆ ನೇತೃತ್ವ ನೀಡಿದರು.

ನಗರದ ಪ್ರಮುಖ ಕ್ರೈಸ್ತ ಪ್ರಾರ್ಥನಾಲಯಗಳಲ್ಲಿ ಒಂದಾದ ಮಿಲಾಗ್ರಿಸ್ ಚರ್ಚ್‌ನಲ್ಲಿ ಬೆಳಗ್ಗಿನಿಂದಲೇ ಭಕ್ತರು ಉಪವಾಸದೊಂದಿಗೆ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ನೆರವೇರಿಸಿ ಯೇಸು ಕ್ರಿಸ್ತ ಶಿಲುಬೆಗೇರಿದ ಸ್ಮರಣಾರ್ಥ ಶಿಲುಬೆಯನ್ನು ಹೊತ್ತ ಯೇಸುವಿನ ಪ್ರತಿಕೃತಿಯ ಮೆರವಣಿಗೆ ನಡೆಸಿದರು. ಅಪಾರ ಕ್ರೈಸ್ತರು ಭಾಗವಹಿಸುವ ಮೂಲಕ ಶುಭ ಶುಕ್ರವಾರ ಆಚರಣೆಗೆ ಸಾಕ್ಷಿಯಾದರು.‘ಶುಭ ಶುಕ್ರವಾರ’ದ ಅಂಗವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯೇಸುಕ್ರಿಸ್ತನ ಜೀವನದ ಅಂತಿಮ ಕ್ಷಣಗಳ ಜ್ಞಾಪಕಾರ್ಥವಾಗಿ ಮೆರವಣಿಗೆಗಳನ್ನು ನಡೆಸಲಾಯಿತು. ಇದೇ ಬರುವ ಬಾನುವಾರ ಭಾನುವಾರ ಈಸ್ಟರ್ ಹಬ್ಬವನ್ನು ಆಚರಿಸಲಾಗುತ್ತದೆ.
2000 ವರ್ಷಗಳ ಹಿಂದೆ…
ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಸ್ಮರಣಾರ್ಥ ಕ್ರೈಸರು ಇಂದು ದಿನಪೂರ್ತಿ ಉಪವಾಸ ವ್ರತ ಕೈಗೊಂಡು, ಚರ್ಚ್‌ಗಳಲ್ಲಿ ಒಟ್ಟು ಸೇರಿ ಪ್ರಾರ್ಥನೆ ಮಾಡಿ, ವಿಷಾದ ಗೀತೆಗಳನ್ನು ಹಾಡುತ್ತಾರೆ.2000 ವರ್ಷಗಳ ಹಿಂದೆ ಕಾಲ್ವರಿ ಬೆಟ್ಟದಲ್ಲಿ ಯೇಸುವನ್ನು ಶಿಲುಬೆಗೆ ಏರಿಸಿದ ಬಳಿಕ ಸಮಾಧಿ ಮಾಡಿರುವುದರ ಸಾಂಕೇತಿಕವಾಗಿ ವಿವಿಧ ಕಡೆಗಳಲ್ಲಿ ನೂರಾರು ಭಕ್ತರು ಮರದ ಶಿಲುಬೆಗಳನ್ನು ಮತ್ತು ಜಪಮಾಲೆಗಳನ್ನು ಹಿಡಿದು ಮೆರವಣಿಗೆ ನಡೆಸಿದರು.