ಕನ್ನಡ ವಾರ್ತೆಗಳು

ಪುತ್ತೂರು: ಆಮಂತ್ರಣ ಪತ್ರಿಕೆ ವಿವಾದ :ಶಿಷ್ಟಾಚಾರಕ್ಕೆ ಹೆಸರು ಹಾಕಲಾಗಿದೆ : ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ಪಷ್ಟನೆ

Pinterest LinkedIn Tumblr

Putturu_Invitation_Prob_11

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅತಿಥಿಯರ ಸಾಲಿನಲ್ಲಿ ತನ್ನ ಹೆಸರನ್ನು ಶಿಷ್ಟಾಚಾರಕ್ಕೆ ಮಾತ್ರ ಮುದ್ರಿಸಲಾಗಿದೆ. ದೇವಾಲಯದ ಆಡಳಿತಕ್ಕೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಅಪರ ಜಿಲ್ಲಾಧಿಕಾರಿ ಅವರೇ ನಿರ್ವಹಿಸುತ್ತಿದ್ದಾರೆ. ತಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 7ರಂತೆ ಅಪರ ಜಿಲ್ಲಾಧಿಕಾರಿಗೆ ಅಧಿಕಾರ ಪ್ರತ್ಯಾಯೋಜಿಸಿ ಅವರನ್ನು ಉಪ ಆಯುಕ್ತರನ್ನಾಗಿ ನೇಮಿಸಿ ಅದೇಶ ಹೊರಡಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 4ರಂತೆ ಜಿಲ್ಲಾಧಿಕಾರಿ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನೆಲೆಯಲ್ಲಿ ಶಿಷ್ಟಾಚಾರ ದೃಷ್ಟಿಕೋನದಿಂದ ಜಿಲ್ಲಾಧಿಕಾರಿ ಅವರ ಹೆಸರನ್ನು ಮುದ್ರಿಸಲಾಗಿದೆಯೇ ವಿನಾ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಧಿರ್ಮಾದಾಯ ದತ್ತಿಗಳ ಅಧಿನಿಯಮ 1997 ಕಲಂ 7 ಉಲ್ಲಂಘನೆಯಾಗುವಂತೆ ಮುದ್ರಿಸಿಲ್ಲ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಲಂ 4ರಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿದ್ದಾರೆ. ತಾನು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997ರ ಕಲಂ 7ರಂತೆ ಅಪರ ಜಿಲ್ಲಾಧಿಕಾರಿಗಳಿಗೆ ಅಧಿಕಾರ ವಹಿಸಿ ಅವರನ್ನು ಉಪ ಆಯುಕ್ತರನ್ನಾಗಿ ನೇಮಿಸಿ ಅದೇಶ ಹೊರಡಿಸಿದ್ದೇನೆ ಎಂದು ತಿಳಿಸಿದ್ದಾರೆ.

ಅಂದಿನಿಂದ ಅವರು ಜಿಲ್ಲಾ ಧಾರ್ಮಿಕ ಪರಿಷತ್‌ನ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು, ವಿವಿಧ ದೇವಾಲಯಗಳಿಗೆ ವ್ಯವಸ್ಥಾಪನಾ ಸಮಿತಿ ರಚಿಸುವುದು, ಅಗತ್ಯ ಸಂದರ್ಭದಲ್ಲಿ ದೇವಾಲಯಗಳಿಗೆ ಆಡಳಿತಾಧಿಕಾರಿ ನೇಮಕ ಮಾಡುವುದು, ನ್ಯಾಯಾಲಯದ ಕಲಾಪ ನಿರ್ವಹಿಸುವುದು, ಆನುವಂಶಿಕ ಹಕ್ಕು ನಿರ್ಧರಿಸುವುದು, ದೇವಾಲಯಗಳ ಯಾವುದೇ ವಿವಾದ ಬಗೆಹರಿಸುವುದು, ದೇವಾಲಯಗಳ ಮುಂಗಡಪತ್ರ ಪರಿಶೀಲನೆ, ನ್ಯೂನತೆ ಸರಿಪಡಿಸಲು ಕ್ರಮ ಕೈಗೊಳ್ಳುವುದು ಇವೇ ಮುಂತಾದ ಕೆಲಸಗಳನ್ನು ಅವರೇ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಧಾರ್ಮಿಕ ಸಂಸ್ಥೆಗಳ ಆಡಳಿತಕ್ಕೆ ಸಂಬಂಧಿಸಿ ಯಾವುದೇ ಗೊಂದಲ ಇಲ್ಲ ಎಂದು ಹೇಳಿದ್ದಾರೆ

ಪ್ರಸ್ತುತ ಆಮಂತ್ರಣ ಪತ್ರಿಕೆ ವಿಚಾರಕ್ಕೆ ಸಂಬಂಧಿಸಿ ನವೀನ್ ಕುಲಾಲ್ ಎಂಬವರು ಹೈಕೋರ್ಟ್‌ಲ್ಲಿ ರಿಟ್ ಸಲ್ಲಿಸಿದ್ದು, ಮಾ. 21ರಂದು ವಿಚಾರಣೆ ನಡೆದಿದೆ. ಅರ್ಜಿದಾರರ ಪರ ವಕೀಲರು ಸಮಯಾವಕಾಶ ಕೋರಿದ ಕಾರಣ ಮಾ.24ಕ್ಕೆ ಮುಂದೂಡಲ್ಪಟ್ಟಿತ್ತು. 24ರಂದು ಕೂಡ ಅರ್ಜಿದಾರರ ಪರ ವಕೀಲರೇ ಮತ್ತೆ ಸಮಯಾವಕಾಶ ಕೇಳಿದ ಕಾರಣ ಮತ್ತೆ ಮುಂದೂಡಲ್ಪಟ್ಟಿದೆ ಎಂದರು.

ಏ.10ರಿಂದ 20ರವರೆಗೆ ನಡೆಯುವ ವಾರ್ಷಿಕ ಜಾತ್ರೋತ್ಸವ ಸುಗಮವಾಗಿ, ಶಾಂತಿಯುತವಾಗಿ ಮತ್ತು ಸಂಪ್ರದಾಯ ಬದ್ಧವಾಗಿ ನಡೆಯುವಂತಾಗಲು ದೇವಾಲಯದ ಆಡಳಿತಾಧಿಕಾರಿ ಮತ್ತು ಕಾರ್ಯ ನಿರ್ವಹಣಾ ಅಧಿಕಾರಿ ಕ್ರಮ ಕೈಗೊಳ್ಳುತ್ತಿದ್ದಾರೆ. ಅಪರ ಜಿಲ್ಲಾಧಿಕಾರಿ ಅವರು ಕೂಡಾ ದೇವಸ್ಥಾನದಲ್ಲಿ ಖುದ್ದು ಹಾಜರಿದ್ದು ಸೂಕ್ತ ಮಾರ್ಗದರ್ಶನ ನೀಡಲಿದ್ದಾರೆ. ಹೀಗಾಗಿ ಭಕ್ತಾದಿಗಳು ಹಾಗೂ ಸಾರ್ವಜನಿಕರು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಜಾತ್ರೋತ್ಸವ ಶಾಂತಿಯುತವಾಗಿ ಮತ್ತು ವಿಜೃಂಭಣೆಯಿಂದ ನಡೆಯುವಂತಾಗಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.

Write A Comment