ಕನ್ನಡ ವಾರ್ತೆಗಳು

ಮಿದುಳು ನಿಷ್ರೀಯಗೊಂಡ ಯುವಕನ ಅಂಗಾಗ ದಾನ | ಮಣಿಪಾಲ-ಮಂಗಳೂರು ಝಿರೋ ಟ್ರಾಫಿಕ್ ಮೂಲಕ ಅಂಗಾಗ ರವಾನೆ

Pinterest LinkedIn Tumblr

ಉಡುಪಿ: ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ ಯುವಕನೋರ್ವನ ಲಿವರ್‌ ಮತ್ತು ಹೃದಯದ ಕವಾಟಗಳನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಿಂದ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ಮಾ. 22ರಂದು ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನ ಮೂಲಕ ಸಾಗಿಸಲಾಯಿತು.

Manipal_Organ_Transfer (6)

(ಪುರುಷೋತ್ತಮ ಲಚ್ಚಯ್ಯ ನಾೖಕ್‌ )

ಅಪಘಾತದಲ್ಲಿ ಮಿದುಳು ನಿಷ್ರೀಯ
ಮೀನುಗಾರರಾಗಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲ್ಗೋಡು ನಿವಾಸಿ, ಪುರುಷೋತ್ತಮ ಲಚ್ಚಯ್ಯ ನಾೖಕ್‌ (30) ಮಾ. 14ರಂದು ಭಟ್ಕಳದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅನಂತರ ಅವರನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯರ ಸತತ ಪ್ರಯತ್ನದ ಅನಂತರವೂ ಪುರುಷೋತ್ತಮ ಅವರಿಗೆ ಪ್ರಜ್ಞೆ ಮರಳಿ ಬಂದಿರಲಿಲ್ಲ. ವೆಂಟಿಲೇಟರ್‌ನ ಸಹಾಯದಿಂದ ಉಸಿರಾಟ ನಡೆಸುತ್ತಿದ್ದರು. ಮಾ. 21ರಂದು ಅವರ ಮಿದುಳು ನಿಷ್ಕ್ರಿಯಗೊಂಡ ಬಗ್ಗೆ ಮತ್ತು ಮಿದುಳು ಸಕ್ರಿಯಗೊಳಿಸುವುದು ಅಸಾಧ್ಯವೆಂಬುದನ್ನು ವೈದ್ಯರು ಕುಟುಂಬಿಕರಿಗೆ ತಿಳಿಸಿದರು. ಅನಂತರ ಅವರ ಕಿಡ್ನಿ, ಲಿವರ್‌ ಮತ್ತು ಹೃದಯದ ಎರಡು ಕವಾಟಗಳನ್ನು ದಾನ ಮಾಡಲು ಕುಟುಂಬಿಕರು ನಿರ್ಧರಿಸಿದ್ದರು.

Manipal_Organ_Transfer (5) Manipal_Organ_Transfer (1) Manipal_Organ_Transfer (7) Manipal_Organ_Transfer (3) Manipal_Organ_Transfer (4) Manipal_Organ_Transfer (2)

ಕಿಡ್ನಿ ಕೆಎಂಸಿ, ಯೇನಪೊಯಕ್ಕೆ- ಹಾರ್ಟ್ ವಾಲ್ವ್, ಲಿವರ್ ಕೊಲಂಬಿಯಾಗೆ
ಪುರುಷೋತ್ತಮ ಅವರ ಒಂದು ಕಿಡ್ನಿಯನ್ನು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಓರ್ವ ರೋಗಿಗೆ, ಇನ್ನೊಂದು ಕಿಡ್ನಿಯನ್ನು ಮಂಗಳೂರಿನ ಯೇನಪೊಯ ಆಸ್ಪತ್ರೆಯಲ್ಲಿರುವ ಓರ್ವ ರೋಗಿಗೆ ಜೋಡಿಸಲಾಗುವುದು. ಲಿವರ್‌ ಮತ್ತು ಎರಡು ಹಾರ್ಟ್‌ ವಾಲ್ವಗಳನ್ನು ಬೆಂಗಳೂರು ಕೊಲಂಬಿಯಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಳವಡಿಸಲು ತೀರ್ಮಾನಿಸಿದ ಬಗ್ಗೆ ಕೆಎಂಸಿಯ ವೈದ್ಯಕೀಯ ಅಧೀಕ್ಷಕ ಡಾ| ಕರ್ನಲ್‌ ಎಂ. ದಯಾನಂದ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಪ್ರಥಮ ಬಾರಿ
ಈ ರೀತಿಯಾಗಿ ಆಸ್ಪತ್ರೆಯಿಂದ ದೇಹದ ಜೀವಂತ ಅಂಗಾಂಗಗಳನ್ನು ಇನ್ನೊಂದು ಆಸ್ಪತ್ರೆಗೆ ರವಾನಿಸುವ ಸಾಧನೆ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದಿದೆ. ಹೃದಯವನ್ನು ದೇಹದಿಂದ ತೆಗೆದ ಅನಂತರದ 3 ತಾಸುಗಳ ಒಳಗೆ ಇನ್ನೋರ್ವರಿಗೆ ಜೋಡಿಸಬೇಕು. ಪ್ರಸ್ತುತ ಮಣಿಪಾಲದಿಂದ ಬೆಂಗಳೂರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ರವಾನಿಸುವುದು ಅಸಾಧ್ಯ. ಹಾಗಾಗಿ ಹೃದಯ ರವಾನಿಸುವ ಪ್ರಯತ್ನ ನಡೆಸಿಲ್ಲ ಎಂದು ಜಿಲ್ಲಾಧಿಕಾರಿ ಡಾ| ವಿಶಾಲ್‌ ಅವರು ಕೆಎಂಸಿ ಆಸ್ಪತ್ರೆಯಲ್ಲಿ ತಿಳಿಸಿದರು. ಇನ್ನು ಹೆಲಿಕಾಪ್ಟರ್ ವ್ಯವಸ್ಥೆ ದುಬಾರಿಯಾಗುವ ಕಾರಣ ಮತ್ತು ಅಗತ್ಯ ಸಮಯಕ್ಕೆ ಸಿಗದ ಕಾರಣಕ್ಕಾಗಿ ಬಳಸಿಕೊಂಡಿಲ್ಲ ಎಂದು ಅವರು ಮಾಹಿತಿ ನೀಡಿದರು.

ಕುಟುಂಬಿಕರು ಏನು ಹೇಳ್ತಾರೆ?
ಪುರುಷೋತ್ತಮ ಅವರ ಸ್ನೇಹಿತ ಹಾಗೂ ಶಿಕ್ಷಕರಾದ ಪಾಂಡು ನಾೖಕ್‌ ಅವರು ಪುರುಷೋತ್ತಮ ಕುಟುಂಬಿಕರಿಗೆ ಅಂಗಾಂಗ ದಾನದ ಮಹತ್ವ ತಿಳಿಸಿ ಇದಕ್ಕೆ ಪ್ರೇರೇಪಿಸಿದ್ದಾರೆ. ದೇಹ ಸುಟ್ಟು ಬೂದಿಯಾಗುವ ಬದಲು ಇನ್ನೋರ್ವರ ಬದುಕಿಗಾದರೂ ಆಗಲಿ ಎಂಬ ನಿರ್ಧಾರ ಮಾಡಿದ್ದಾಗಿ ಪುರುಷೋತ್ತಮ ಸಹೋದರ ರಾಮದಾಸ್‌ ನುಡಿದರು. ಅಂಗಾಂಗ ದಾನ ಪ್ರಕ್ರಿಯೆ ಆರಂಭಕ್ಕೂ ಮುನ್ನ ನಿಯಮದಂತೆ ಬೆಂಗಳೂರಿನಿಂದ ಆಗಮಿಸಿದ್ದ ತಿಪ್ಪೇಸ್ವಾಮಿ ಮತ್ತು ನೌಷದ್‌ ಅವರನ್ನೊಳಗೊಂಡ ಕರ್ನಾಟಕ ಝೋನಲ್‌ ಕೋ-ಆರ್ಡಿನೇಶನ್‌ ಕಮಿಟಿ (ಝಡ್‌ಸಿಸಿಕೆ) ಪುರುಷೋತ್ತಮ ಕುಟುಂಬ ಸದಸ್ಯರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಪಡೆದುಕೊಂಡರು.

ಪೊಲೀಸ್-ಜಿಲ್ಲಾಡಳಿತದ ಸಹಕಾರ ಝೀರೋ ಟ್ರಾಫಿಕ್ನಲ್ಲಿ ಸಂಚಾರ
ಅಂಗಾಂಗ ದಾನದ ಬಗ್ಗೆ ತಿಳಿದ ತಕ್ಷಣವೇ ಜಿಲ್ಲಾಧಿಕಾರಿ ಡಾ| ವಿಶಾಲ್‌ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಅವರು ಕೆಎಂಸಿಯ ವೈದ್ಯಾಧಿಕಾರಿಗಳು, ಆಡಳಿತ ವರ್ಗದೊಂದಿಗೆ ಸಮಾಲೋಚನೆ ನಡೆಸಿದರು. ಅಂಗಾಗಳನ್ನು ಹೊತ್ತ ಆಂಬುಲೆನ್ಸ್ ತೆರಳುವ ಸಂದರ್ಭದಲ್ಲಿ ಝೀರೋ ಟ್ರಾಫಿಕ್‌ (ಗ್ರೀನ್‌ ಕಾರಿಡಾರ್‌) ಸಂಚಾರ ವ್ಯವಸ್ಥೆಯನ್ನು ಮಂಗಳವಾರ ಮಾಡಲಾಗಿತ್ತು. ಮಣಿಪಾಲದಿಂದ ಕರಾವಳಿ ಬೈಪಾಸ್‌ ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದ ಲಿವರ್‌ ಮತ್ತು ಹೃದಯದ ಕವಾಟುಗಳನ್ನು ಹೊತ್ತ ಆ್ಯಂಬುಲೆನ್ಸ್‌ ಮಂಗಳೂರು ವಿಮಾನ ನಿಲ್ದಾಣವನ್ನು ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ತಲುಪಿತು. ಒಂದು ಕಿಡ್ನಿಯನ್ನು ಯೇನಪೊಯ ಆಸ್ಪತ್ರೆಗೆ ಸಾಗಿಸಲಾಯಿತು. ಮಣಿಪಾಲದಿಂದ ಬಜಪೆ ವಿಮಾನ ನಿಲ್ದಾಣವರೆಗೆ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಲ್ಲಿ ಪೊಲೀಸರನ್ನು ನಿಯೋಜಿಸಿ ವಾಹನಗಳನ್ನು ನಿರ್ಬಂಧಿಸಲಾಗಿತ್ತು. ಸಂಜೆ 7.30ಕ್ಕೆ ಹೊರಟ ಆ್ಯಂಬುಲೆನ್ಸ್‌ 8.30ರ ವೇಳೆಗೆ ಮಂಗಳೂರು ವಿಮಾನ ನಿಲ್ದಾಣ ತಲುಪಿ 8.30ಕ್ಕೆ ಬೆಂಗಳೂರಿಗೆ ತೆರಳುವ ವಿಮಾನದಲ್ಲಿ ರವಾನಿಸಲ್ಪಟ್ಟಿತು.

ಡಾ| ಎಂ. ದಯಾನಂದ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಡಾ| ಸುಮನಾ, ಕೆಎಂಸಿಯ ಡಾ| ಪದ್ಮರಾಜ್‌ ಹೆಗ್ಡೆ, ಡಾ| ಜಯಪ್ರಕಾಶ್‌, ಡಾ| ಶಂಕರ್‌, ಡಾ| ಗಿರೀಶ್‌, ಡಾ| ಲೆನಾ ಅಶೋಕ್‌, ಡಾ| ಟೆಡ್ಡಿ ಅವರನ್ನೊಳಗೊಂಡ ತಂಡ ಅಂಗಾಂಗ ದಾನ, ರವಾನೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತು. ಪುರುಷೋತ್ತಮ ಅವರ ಸಹೋದರರಾದ ರಾಜೇಶ್‌, ನಾರಾಯಣ, ರಾಮದಾಸ್‌ ನಾೖಕ್‌, ದೇವ ನಾೖಕ್‌ ಮತ್ತು ಲಕ್ಷ್ಮಣ ನಾೖಕ್‌ ಅವರು ಈ ಸಂದರ್ಭ ಇದ್ದರು.

Write A Comment